ವಿಮಾನದಲ್ಲಿ ಪ್ರಯಾಣಿಸಬೇಕೆಂದರೆ ಕೆಲವು ವಸ್ತುಗಳನ್ನು ಮಾತ್ರ ಜೊತೆಯಲ್ಲಿ ಕೊಂಡೊಯ್ಯಲು ಅವಕಾಶವಿರುತ್ತದೆ. ಹಾಗೆಯೇ, ಇಂತಿಷ್ಟೇ ಪ್ರಮಾಣದಲ್ಲಿ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕಿರುತ್ತೆ. ಒಂದು ವೇಳೆ, ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋದರು ಸಹ ವಿಮಾನ ನಿಲ್ದಾಣದಲ್ಲಿನ ತಪಾಸಣೆ ವೇಳೆ ಮುಲಾಜಿಲ್ಲದೆ ಸೀಜ್ ಮಾಡುತ್ತಾರೆ.

ಇನ್ನೂ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ಸಹ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡಿ, ಅಲ್ಲಿಂದ ಬೇರೆ-ಬೇರೆ ಕಡೆಗೆ ತಮ್ಮ ಪ್ರಯಾಣ ಬೆಳೆಸುತ್ತಾರೆ.
ಈ ವೇಳೆ ಕೊಂಡೊಯ್ಯಲು ಸಾಧ್ಯವಿಲ್ಲದ್ದ ಕೆಲವು ಸಾಮಾನುಗಳನ್ನು ಏರ್ಪೋರ್ಟ್ ಸಿಬ್ಬಂದಿ ಜಪ್ತಿ ಮಾಡಿಕೊಳ್ಳುತ್ತಾರೆ. ಕಳೆದ ವರ್ಷದ ಅವಧಿಯಲ್ಲಿ
ಯಾವೆಲ್ಲಾ ವಸ್ತುಗಳು ಅತಿ ಹೆಚ್ಚು ಜಪ್ತಿಯಾಗಿವೆ…? ಎನ್ನುವ ಕುತೂಹಲ ಇದೆಯಾ….ಆ ಕುರಿತ ಮಾಹಿತಿ ಇಲ್ಲಿದೆ ನೋಡಿ…..

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಅತಿ ಹೆಚ್ಚು ಸೀಜ್ ಮಾಡಲಾದ ವಸ್ತು ಯಾವುದು ಎಂದರೆ ಅದು ಪವರ್ ಬ್ಯಾಂಕ್. ಹೌದು ವಿಮಾಣ ನಿಲ್ದಾಣದ ಸುರಕ್ಷತಾ ನಿಯಮಗಳ ಪ್ರಕಾರ, ಪವರ್ ಬ್ಯಾಂಕ್ಗಳನ್ನು ಲಗೇಜ್ನಲ್ಲಿಡುವಂತಿಲ್ಲ. ಪವರ್ ಬ್ಯಾಂಕ್ಗಳು ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಹೊಂದಿರುತ್ತವೆ. ಇದರಿಂದ ಕೆಲವೊಮ್ಮ ಅಗ್ನಿ ಅವಘಡ ಸಂಭವಿಸಬಹುದು. ಆದ್ದರಿಂದ ಇವುಗಳನ್ನು ಬ್ಯಾಗ್ನಲ್ಲಿಡುವುದು ಸುರಕ್ಷಿತವಲ್ಲ ಎಂದು ತಪಾಸಣಾ ಸಿಬ್ಬಂದಿ ಚೆಕ್-ಇನ್ ಬ್ಯಾಗ್ನಿಂದ ತೆಗೆದು ವಶಪಡೆಸಿಕೊಳ್ಳುತ್ತಾರೆ.
ಹಾಗಾದರೆ, ವಿಮಾನದಲ್ಲಿ ಪ್ರಮಾಣಿಸುವಾಗ ಪವರ್ ಬ್ಯಾಂಕ್ ಕೊಂಡೊಯ್ಯುವ ಹಾಗಿಲ್ಲವಾ…?ಎಂದು ಯೋಚಿಸುತ್ತಿದ್ದೀರಾ. ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪವರ್ ಬ್ಯಾಂಕ್ಗಳನ್ನು ಕ್ಯಾರಿ-ಆನ್ ಬ್ಯಾಗ್ಗಳಲ್ಲಿ ಮಾತ್ರ ತೆಗೆದುಕೊಂಡು ಹೋಗಲು ಅವಕಾಶವಿದೆ. ಆದರೆ, ಅನೇಕ ಪ್ರಯಾಣಿಕರು ಈ ನಿಯಮ ತಿಳಿಯದೇ ಚೆಕ್-ಇನ್ ಬ್ಯಾಗ್ನಲ್ಲಿ ಪವರ್ ಬ್ಯಾಂಕ್ಗಳನ್ನು ಇರಿಸಿರುತ್ತಾರೆ. ಆಗ ಇವುಗಳು ಸೀಜ್ ಆಗುತ್ತವೆ. ಹೀಗೆ ಸೀಜ್ ಆಗುವ ಪವರ್ ಬ್ಯಾಂಕ್ಗಳ ಲೆಕ್ಕ ಬೇರೆಲ್ಲಾ ವಸ್ತುಗಳಿಗಿಂತ ಹೆಚ್ಚಿದೆ ಎಂಬುದೇ ಇಂಟ್ರೆಸ್ಟಿಂಗ್ ವಿಷಯ.

ಸೀಜ್ ಆಗುವ ವಸ್ತುಗಳು ಯಾವುವು…?
ಏರ್ಪೋರ್ಟ್ನಲ್ಲಿ ಪವರ್ ಬ್ಯಾಂಕ್ ಮಾತ್ರವಲ್ಲ, ಇನ್ನಿತರ ವಸ್ತುಗಳನ್ನು ಸಹ ಸೀಜ್ ಮಾಡಲಾಗುತ್ತದೆ. ಲೈಟರ್ ಅಂದರೆ ತಂಬಾಕು ಲೈಟರ್, ಇ-ಸಿಗರೇಟ್ಗಳು ಸಹ ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರು ತಮ್ಮೊಟ್ಟಿಗೆ ಕೊಂಡೊಯ್ಯುವಂತಿಲ್ಲ. ಹಾಗಾಗಿ, ಇವುಗಳನ್ನು ಜೊತೆಯಲ್ಲಿರಿಸಿ ತೆರಳುವುದು ಕಾನೂನುಬಾಹಿರ. ಯಾರಾದರೂ, ಏರ್ಪೋರ್ಟ್ನೊಳಗೆ ಇದನ್ನು ತೆಗೆದುಕೊಂಡು ಹೋಗಿದ್ದರೆ, ಸಿಬ್ಬಂದಿಗಳು ಜಪ್ತಿ ಮಾಡಿಕೊಳ್ಳುತ್ತಾರೆ. ಹಾಗೆಯೇ, ಚಾಕು ಹಾಗೂ ಮತ್ತಿತರ ಚೂಪಾದ ವಸ್ತುಗಳಿಗೂ ಇಲ್ಲಿ ನೋ ಎಂಟ್ರಿ ವಿಧಿಸಲಾಗಿದೆ.
ಕೆ.ಜಿ. ಲೆಕ್ಕದಲ್ಲಿ ಸೀಜಾಯ್ತು ಈ ವಸ್ತುಗಳು:
ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ ಭದ್ರತಾ ಮಾಹಿತಿಯ ಪ್ರಕಾರ, 2024ರ ಜನವರಿಯಿಂದ 2025ರ ಫೆಬ್ರವರಿ ನಡುವೆ ಕೆ.ಜಿ. ಲೆಕ್ಕದಲ್ಲಿ ಪವರ್ ಬ್ಯಾಂಕ್, ಲೈಟರ್ ಸೇರಿದಂತೆ ಹಲವು ವಸ್ತುಗಳು ಸೀಜ್ ಆಗಿವೆ. ಅವುಗಳಲ್ಲಿ ಚೆಕ್-ಇನ್ ವೇಳೆ ಬಹಳಷ್ಟು ಪ್ರಯಾಣಿಕರ ಬ್ಯಾಗ್ಗಳಿಂದ 1412 ಕೆ.ಜಿ. ಪವರ್ ಬ್ಯಾಂಕ್, 655 ಕೆ.ಜಿ. ಲೈಟರ್ ಹಾಗೂ 675 ಕೆ.ಜಿ. ಇ-ಸಿಗರೇಟ್ಗಳನ್ನು ಭದ್ರತಾ ಸಿಬ್ಬಂದಿಗಳು ವಶ ಪಡಿಸಿಕೊಂಡಿದ್ದಾರೆ.

ಇನ್ನು ಮುಂದೆ ನೀವೇನಾದರೂ ವಿಮಾನ ಪ್ರಯಾಣಕ್ಕೆ ಮುಂದಾದರೆ ಯಾವೆಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು, ಯಾವೆಲ್ಲಾ ವಸ್ತುಗಳನ್ನು ಕ್ಯಾಬಿನ್ ಬ್ಯಾಗೇಜ್ನಲ್ಲಿರಿಸಬೇಕು, ಯಾವುದನ್ನು ಚೆಕ್-ಇನ್ನಲ್ಲಿ ಮಾತ್ರ ಇರಿಸಬೇಕು ಎಂಬುದರ ಕಡೆಗೆ ಗಮನಹರಿಸಿ, ನಿಮ್ಮ ಲಗೇಜ್ಗಳನ್ನು ಪ್ಯಾಕ್ ಮಾಡಿ. ಸುಖಾಸುಮ್ಮನೆ ಹಣಕೊಟ್ಟು ಕೊಂಡಂತಹ ವಸ್ತುಗಳನ್ನು ಏರ್ಪೋರ್ಟ್ನ ತಪಾಸಣೆ ವೇಳೆ ಕೈಬಿಟ್ಟು ಹೋಗುವಂತೆ ಮಾಡಿಕೊಳ್ಳಬೇಡಿ.