ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 728ರ ಎಪಿಸೋಡ್ ಕಥೆ ಇಲ್ಲಿದೆ. ಈ ಬಾರಿಯೂ ಭಾಗ್ಯಾ ನಮ್ಮ ಮದುವೆ ನಿಲ್ಲಿಸುತ್ತಾಳೆ ಎಂದು ಹೆದರಿದ್ದ ಶ್ರೇಷ್ಠಾ ಹಾಗೂ ತಾಂಡವ್ಗೆ ಭಾಗ್ಯಾ ಶಾಕ್ ನೀಡುತ್ತಾಳೆ. ಬಲವಂತದ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ, ಆತನಿಗೆ ಬೇಡದ ಸಂಬಂಧ ನನಗೂ ಬೇಡ, ಆತ ಕಟ್ಟಿರುವ ತಾಳಿಯೂ ಬೇಡ ಎಂದು ಭಾಗ್ಯಾ, ಗಂಡ ಕಟ್ಟಿದ್ದ ತಾಳಿಯನ್ನು ತೆಗೆದು ಅದನ್ನು ತಾಂಡವ್ ಕೈಗೆ ಕೊಟ್ಟು ಅಲ್ಲಿಂದ ಹೊರಡುತ್ತಾಳೆ. ಅದನ್ನು ನೋಡಿ ತಾಂಡವ್ ಶಾಕ್ ಆಗುತ್ತಾನೆ. ಶ್ರೇಷ್ಠಾ, ಬಲವಂತದಿಂದ ತಾಂಡವ್ನನ್ನು ಮದುವೆ ಮಂಟಪಕ್ಕೆ ಕರೆದೊಯ್ದು ತಾಳಿ ಕಟ್ಟಿಸಿಕೊಳ್ಳುತ್ತಾಳೆ.
ಶ್ರೇಷ್ಠಾ ಗೆಳೆಯ ಶೌರ್ಯ, ಇಬ್ಬರನ್ನೂ ಮನೆವರೆಗೂ ಬಿಟ್ಟು ಅವರಿಬ್ಬರಿಗೂ ಶುಭ ಹಾರೈಸಿ ಅಲ್ಲಿಂದ ಹೊರಡುತ್ತಾನೆ. ಒಂದೆಡೆ ಭಾಗ್ಯಾ, ತನಗೆ ಆದ ಅನ್ಯಾಯಕ್ಕೆ ಕಣ್ಣೀರಿಡುತ್ತಿದ್ದರೆ, ಮಗ ಮಾಡಿದ ದ್ರೋಹಕ್ಕೆ ಕುಸುಮಾ, ಧರ್ಮರಾಜ್ ನೋವು ಅನುಭವಿಸುತ್ತಿದ್ದರೆ ಇತ್ತ ಶ್ರೇಷ್ಠಾ ಮಾತ್ರ ತನಗೆ ಮದುವೆ ಆಗಿದ್ದಕ್ಕೆ ಖುಷಿ ಪಡುತ್ತಾಳೆ. ಆದರೆ ತಾಂಡವ್ ಸಪ್ಪೆ ಮೋರೆ ಹಾಕಿರುವುದನ್ನು ಕಂಡು ನೀನು ಇನ್ನೂ ಆ ಭಾಗ್ಯಾ ಬಗ್ಗೆ ಯೋಚಿಸುತ್ತಿದ್ದೀಯ? ಅವಳು ನಮ್ಮ ಪಾಲಿಗೆ ಪೀಡೆ ಇದ್ದಂತೆ ಇದ್ದಳು, ಅದು ಈಗ ನಮ್ಮಿಂದ ದೂರ ಆಗಿದೆ, ನಾವು ಖುಷಿ ಪಡಬೇಕು ಎಂದು ಶ್ರೇಷ್ಠಾ ಹೇಳುತ್ತಾಳೆ. ಅಷ್ಟರಲ್ಲಿ ತಾಂಡವ್ನನ್ನು ಹುಡುಕಿಕೊಂಡು ಭಾಗ್ಯಾ ತಂಗಿ ಲಕ್ಷ್ಮೀ ಬರುತ್ತಾಳೆ. ಅವಳನ್ನು ನೋಡಿ ಶ್ರೇಷ್ಠಾ-ತಾಂಡವ್ ಇಬ್ಬರೂ ಶಾಕ್ ಆಗುತ್ತಾರೆ.
ನೀನು ಇಲ್ಲಿಗೆ ಏಕೆ ಬಂದೆ ಎಂದು ಶ್ರೇಷ್ಠಾ ಕೇಳುತ್ತಾಳೆ. ಮತ್ತೇಕೆ ಬರುತ್ತಾಳೆ. ಇವಳ ಅಕ್ಕ ದೊಡ್ಡದಾಗಿ ತಾಳಿ ತೆಗೆದುಕೊಟ್ಟಳು, ಬಹುಶ: ಗಂಡ ಇಲ್ಲದೆ ಬದುಕಲು ಆಗುವುದಿಲ್ಲ ಎಂದು ಈಗ ಅವಳಿಗೆ ಗೊತ್ತಾಗಿರಬೇಕು, ಆದ್ದರಿಂದ ರಾಜಿ ಮಾಡಿಕೊಳ್ಳಲು ತಂಗಿಯನ್ನು ಕಳಿಸಿರಬೇಕು ಎಂದು ತಾಂಡವ್ ಅಪಹಾಸ್ಯ ಮಾಡುತ್ತಾನೆ. ನೀವು ಚೆನ್ನಾಗಿ ಜೋಕ್ ಮಾಡುತ್ತೀರ. ಅದೆಲ್ಲಾ ಇರಲಿ ನೀವಿಬ್ಬರೂ ಕುಳಿತುಕೊಳ್ಳಿ ಎಂದು ಲಕ್ಷ್ಮೀ, ಅವರಿಬ್ಬರನ್ನೂ ಕೂರಿಸಿ ದೇವರ ಮನೆಯಿಂದ ಅರಿಶಿನ, ಕುಂಕುಮ ತರುತ್ತಾಳೆ. ಹೊಸದಾಗಿ ಮದುವೆ ಆದವರಿಗೆ ಆರತಿ ಮಾಡಲಿಲ್ಲ ಎಂದರೆ ಅವರ ಜೀವನ ಚೆನ್ನಾಗಿರುವುದಿಲ್ಲವಂತೆ ಎಂದು ಇಬ್ಬರಿಗೂ ಆರತಿ ಮಾಡುತ್ತಾಳೆ. ನಮ್ಮ ಸಂಸಾರ ಚೆನ್ನಾಗಿರಲಿ ಎಂದು ಹಾರೈಸುವ ಮನಸ್ಸು ನಿನಗೆ ಯಾವಾಗ ಬಂತು ಎಂದು ತಾಂಡವ್ ಕೇಳುತ್ತಾನೆ. ಇವತ್ತೇ ಬಂತು ಅಂದುಕೊಳ್ಳಿ, ನನಗಂತೂ ಹಾಲು ಕುಡಿದಷ್ಟು ಸಂತೋಷವಾಯ್ತು. ಕೊನೆಗೂ ನನ್ನ ಅಕ್ಕ ಟಾಕ್ಸಿಕ್ ಸಂಬಂಧದಿಂದ ಹೊರಬಂದು ಫ್ರೀ ಆದಳು, ನನಗಂತೂ ಅವಳ ಬಗ್ಗೆ ಹೆಮ್ಮೆಯಾಗುತ್ತಿದೆ ಎನ್ನುತ್ತಾಳೆ.
ಲಕ್ಷ್ಮೀ ಮಾತು ಕೇಳಿ ತಾಂಡವ್ ಕೋಪಗೊಳ್ಳುತ್ತಾನೆ. ಫ್ರೀ ಆಗಿದ್ದೇನೆ ಎಂದು ಅವಳು ಅಂದುಕೊಂಡಿರಬಹುದು, ಗಂಡ ಇಲ್ಲದೆ ಬದುಕಲು ಆಗುವುದಿಲ್ಲ ಎಂದು ಅವಳಿಗೆ ಅಂದಾಜು ಕೂಡಾ ಮಾಡಲಾಗುವುದಿಲ್ಲ, ಇಷ್ಟರಲ್ಲೇ ಅವಳು ಅನುಭವಿಸುತ್ತಾಳೆ ಎಂದು ತಾಂಡವ್ ಹೇಳುತ್ತಾನೆ. ಅನುಭವಿಸುವುದು ಅವಳಲ್ಲ, ನೀವು. ನನ್ನ ಅಕ್ಕ ಆಗಿದ್ದಕ್ಕೆ ಇಷ್ಟು ದಿನ ನಿಮ್ಮನ್ನು ಸಹಿಸಿಕೊಂಡಳು. ನೀವು ಬದಲಾಗುವುದಿಲ್ಲ ಎಂದು ತಿಳಿದೇ ಅವಳು ಈ ನಿರ್ಧಾರಕ್ಕೆ ಬಂದಿರುವುದು. ಶ್ರೇಷ್ಠಾ ಜೊತೆ ನಿಮ್ಮ ಬದುಕು ಸುಲಭ ಎಂದುಕೊಂಡಿದ್ದೀರ? ಭಾಗ್ಯಾಳನ್ನು ಕಳೆದುಕೊಂಡು ಎಂಥ ತಪ್ಪು ಮಾಡಿದೆ ಎಂದು ಮರುಗುವ ದಿನ ದೂರ ಇಲ್ಲ, ಇನ್ಮುಂದೆ ಪೆಟ್ಟು ತಿನ್ನೋದೇ ನಿಮ್ಮ ಜೀವನ ಆಗುತ್ತೆ, ಆದರೆ ದಯಮಾಡಿ ಮತ್ತೆ ನನ್ನ ಅಕ್ಕನ ಜೀವನದಲ್ಲಿ ಬರಲು ಹೋಗಬೇಡಿ ಎಂದು ಹೇಳಿ ಲಕ್ಷ್ಮೀ ಅಲ್ಲಿಂದ ಹೋಗುತ್ತಾಳೆ.
ಇತ್ತ ಕುಸುಮಾ ಹಾಗೂ ಧರ್ಮರಾಜ್ ಮನೆಯಿಂದ ಹೊರ ಬಂದು ನಿಲ್ಲುತ್ತಾರೆ. ಅತ್ತೆ ಮಾವ ಏನು ಮಾಡುತ್ತಿರಬಹುದು ಎಂದು ಭಾಗ್ಯಾ ಗಾಬರಿಯಿಂದಲೇ ಅವರ ಹಿಂದೆ ಬರುತ್ತಾಳೆ. ಕುಸುಮಾ, 2 ತುಂಬಿದ ಕೊಡಗಳನ್ನು ತಂದು ಇಡುತ್ತಾಳೆ. ಭಾಗ್ಯಾಗೆ ಬೇಡದ ಸಂಬಂಧ ನಮಗೂ ಬೇಡ, ಅವನು ಇನ್ಮುಂದೆ ನಮ್ಮ ಮಗ ಅಲ್ಲ, ಇನ್ಮುಂದೆ ನಮಗೆ ಭಾಗ್ಯಾಳೇ ಎಲ್ಲಾ ಎಂದು ಹೇಳಿ ತಲೆ ಮೇಲೆ ನೀರು ಸುರಿದುಕೊಳ್ಳುತ್ತಾರೆ. ಅದನ್ನು ಕಂಡು ಮನೆಯವರೆಲ್ಲಾ ಬೇಸರಗೊಳ್ಳುತ್ತಾರೆ. ಅತ್ತೆ, ಮಾವ, ಅಮ್ಮ ಎಲ್ಲರಿಗೂ ಭಾಗ್ಯಾ ಧೈರ್ಯ ಹೇಳುತ್ತಾಳೆ. ಅಂಗಡಿಯಲ್ಲಿ ಸಾಮಗ್ರಿಗಳನ್ನು ತೆಗೆದುಕೊಂಡು ಭಾಗ್ಯಾ, ವಾಪಸ್ ಮನೆಗೆ ಬರುವಾಗ ಎದುರಿಗೆ ಲಕ್ಷ್ಮೀ ಬಂದು ನಿಲ್ಲುತ್ತಾಳೆ. ತಂಗಿಯನ್ನು ನೋಡಿ ಭಾಗ್ಯಾ ಖುಷಿಯಾಗುತ್ತಾಳೆ.
ಭಾಗ್ಯಾ , ಕುಟುಂಬದ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾಳೆ? ತಾಂಡವ್-ಶ್ರೇಷ್ಠಾ ಇಬ್ಬರೂ ಮತ್ತೆ ಭಾಗ್ಯಾ ವಿರುದ್ಧ ಯಾವ ಪಿತೂರಿ ಮಾಡುತ್ತಾರೆ? ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.



