ಒಂದೇ ಶೀರ್ಷಿಕೆಯಲ್ಲಿ ಬಾಲಿವುಡ್ ಅನೇಕ ಚಿತ್ರಗಳನ್ನು ಮಾಡಿದೆ. ಅದು ಸುಹಾಗ್ (Suhaag) ಅಥವಾ ಉಮ್ರಾವ್ ಜಾನ್ (Umrao Jaan) ಆಗಿರಬಹುದು. ಪಟ್ಟಿ ದೊಡ್ಡದಾಗಿದೆ. ಈ ಚಿತ್ರಗಳು ಬಿಡುಗಡೆಯಾದಾಗ ಅವು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಗಳಿಕೆ ಮಾಡಿದವು. ಈಗ ನಾವು ಹೇಳುತ್ತಿರುವ ಮೂರು ಸಿನಿಮಾಗಳು ಒಂದೇ ಟೈಟಲ್ ಹೊಂದಿವೆ. ವಿಶೇಷವೆಂದರೆ ಈ ಮೂರು ಚಿತ್ರಗಳಲ್ಲಿ ಎರಡರಲ್ಲಿ ಒಬ್ಬರೇ ನಾಯಕ. ಒಂದೇ ಹೆಸರಿನಲ್ಲಿ ಮೂರು ಬಾರಿ ತಯಾರಾದ ಮತ್ತು ಮೂರು ಬಾರಿ ಬ್ಲಾಕ್ಬಸ್ಟರ್ ಆದ ಈ ಚಲನಚಿತ್ರಗಳು 56 ವರ್ಷಗಳ ಅಂತರದಲ್ಲಿ ತಯಾರಾದವು ಮತ್ತು ಪ್ರತಿ ಬಾರಿಯೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿವೆ.
ಇದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಬಾಲಿವುಡ್ನಲ್ಲಿ ಮಾತ್ರವಲ್ಲ, ನಮ್ಮ ಸೌತ್ ಇಂಡಸ್ಟ್ರಿಯಲ್ಲೂ ಒಂದೇ ಶೀರ್ಷಿಕೆಯಲ್ಲಿ ಎರಡು ಅಥವಾ ಹೆಚ್ಚು ಚಿತ್ರಗಳನ್ನು ನಿರ್ಮಿಸಲಾಗಿದೆ. ಆದರೆ ಅವೆಲ್ಲವೂ ಯಶಸ್ವಿಯಾಗಿರುವುದು ಅಪರೂಪ. ಆದರೆ ಚಿತ್ರ ನಿರ್ಮಾಣವಾದಾಗಲೆಲ್ಲ ಗಲ್ಲಾಪೆಟ್ಟಿಗೆಯಲ್ಲಿ ಮೇಲುಗೈ ಸಾಧಿಸಿದ, ಮೂರು ಬಾರಿಯೂ ಹಿಟ್ ಆದ, ನಾವು ಇಂದು ಹೇಳಲು ಹೊರಟಿರುವ ಆ ಚಿತ್ರದ ಹೆಸರು ‘ಬರ್ಸಾತ್’. ಈ ಶೀರ್ಷಿಕೆಯಿಂದ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳು ತಯಾರಾಗಿವೆ.

ಮೊದಲು ಬಂದ ಸಿನಿಮಾ
ಬರ್ಸಾತ್ (Barsaat ) ಹೆಸರಿನಲ್ಲಿ ಮೊದಲು ಬಂದ ಚಿತ್ರ 1949 ರಲ್ಲಿ ಬಿಡುಗಡೆಯಾಯಿತು ಮತ್ತು ಈ ಚಿತ್ರದಲ್ಲಿ ಬಾಲಿವುಡ್ ಶೋಮ್ಯಾನ್ ರಾಜ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನರ್ಗೀಸ್ ಕೂಡ ಇದ್ದರು. ಇಬ್ಬರ ಜೋಡಿಯು ದೊಡ್ಡ ಹಿಟ್ ಆಗಿತ್ತು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿದ್ದಲ್ಲದೆ, ಅದರ ಹಾಡುಗಳು ಸಾಕಷ್ಟು ಹವಾ ಸೃಷ್ಟಿಸಿದವು. ‘ಹವಾ ಮೇ ಉಡ್ತಾ ಜಾಯೆ ಮೇರಾ ಲಾಲ್ ದುಪಟ್ಟಾ’ ಮತ್ತು ‘ಜಿಯಾ ಬೇಕರರ್ ಹೈ’ ನಂತಹ ಹಾಡುಗಳು ಇನ್ನೂ ಹಿಟ್ ಲಿಸ್ಟ್ನಲ್ಲಿವೆ. ರಾಜ್ ಕಪೂರ್ ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿದ್ದರು. ಇದರೊಂದಿಗೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವು 1949 ರಲ್ಲಿ ಬಿಡುಗಡೆಯಾದಾಗ, ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯಿತು. ರಾಜ್ ಕಪೂರ್ ಚಿತ್ರವನ್ನು ಕಾಶ್ಮೀರ ಕಣಿವೆಯಲ್ಲಿ ಚಿತ್ರೀಕರಿಸಿದ್ದಾರೆ.
1995ರಲ್ಲಿ ಇದೇ ಹೆಸರಿನ ಚಿತ್ರ ಬಿಡುಗಡೆ
46 ವರ್ಷಗಳ ನಂತರ ಮತ್ತೆ 1995ರಲ್ಲಿ ಬರ್ಸಾತ್ ಎಂಬ ಚಿತ್ರ ಬಂತು. ಈ ಬಾರಿ ಬಾಬಿ ಡಿಯೋಲ್ ಮತ್ತು ಟ್ವಿಂಕಲ್ ಖನ್ನಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಇಬ್ಬರು ಸ್ಟಾರ್ ಮಕ್ಕಳ ಚೊಚ್ಚಲ ಚಿತ್ರವಾಗಿದ್ದು, ಇಬ್ಬರೂ ಮೊದಲ ಚಿತ್ರದಿಂದ ರಾತ್ರೋರಾತ್ರಿ ಸ್ಟಾರ್ ಆದರು. ಈ ಚಿತ್ರದ ಹಾಡುಗಳು ಸೂಪರ್ಹಿಟ್ ಆಗಿದ್ದವು ಮತ್ತು ಬಾಬಿ ಡಿಯೋಲ್ ಮತ್ತು ಟ್ವಿಂಕಲ್ ಖನ್ನಾ ಅವರ ಜೋಡಿಯು ವೀಕ್ಷಕರಿಗೆ ತುಂಬಾ ಇಷ್ಟವಾಯಿತು. 8 ಕೋಟಿ ರೂಪಾಯಿಗಳ ಬಜೆಟ್ನಲ್ಲಿ ನಿರ್ಮಿಸಲಾದ ಬರ್ಸಾತ್ 35 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು ಮತ್ತು ವರ್ಷದ ಐದನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು. ಈ ಚಿತ್ರದ ‘ಹಮ್ಕೋ ತುಮ್ಸೆ ಪ್ಯಾರ್ ಹೈ’ ಹಾಡು ದೊಡ್ಡ ಹಿಟ್ ಆಗಿತ್ತು.

ಮೂರನೇ ಬಾರಿಯೂ ಇದೇ ಹೆಸರಿನಲ್ಲಿ ರಿಲೀಸ್
2005 ರಲ್ಲಿ ಬರ್ಸಾತ್ ಎಂಬ ಇನ್ನೊಂದು ಚಿತ್ರ ಬಿಡುಗಡೆಯಾಯಿತು. ಈ ಬಾರಿಯೂ ಬಾಬಿ ಡಿಯೋಲ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ ಪ್ರಿಯಾಂಕಾ ಚೋಪ್ರಾ ಮತ್ತು ಬಿಪಾಶಾ ಬಸು ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಸನ್ಸೇಶನ್ ಸೃಷ್ಟಿಸಿತ್ತು. 10 ಕೋಟಿ ಬಜೆಟ್ನಲ್ಲಿ ತಯಾರಾದ ಚಿತ್ರ ಬಾಕ್ಸ್ ಆಫೀಸ್ನಲ್ಲಿ 20 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರದ ಹಾಡುಗಳು ಕೂಡ ಸಿನಿಪ್ರಿಯರಿಗೆ ಬಹಳ ಇಷ್ಟವಾದವು.