ಕಮ್ಯೂನಿಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯೂಟ್ಯೂಬ್ ಬರೋಬರಿ 9.5 ಮಿಲಿಯನ್ ವೀಡಿಯೋಗಳನ್ನು ತೆಗೆದುಹಾಕಿದೆ. 2024ರ ಅಕ್ಟೋಬರ್ ಹಾಗೂ ಡಿಸೆಂಬರ್ ನಡುವೆ ಯೂಟ್ಯೂಬ್ ಅಳಿಸಿ ಹಾಕಿರುವ ವೀಡಿಯೋಗಳ ಸಂಖ್ಯೆ ಇದಾಗಿದ್ದು, ಗಮನಾರ್ಹವಾಗಿ ಭಾರತದ ವೀಡಿಯೋಗಳು ಈ ಪಟ್ಟಿಯಲ್ಲಿ ಅಧಿಕವಾಗಿವೆ. ಸುಮಾರು 2.9 ಮಿಲಿಯನ್ ಭಾರತೀಯ ಮೂಲದ ಯೂಟ್ಯೂಬ್ ಚಾನೆಲ್ಗಳಿಂದ ವೀಡಿಯೋಗಳು ಡಿಲಿಟ್ ಆಗಿವೆ.
ನಮಗೆಲ್ಲರಿಗೂ ತಿಳಿದಿರುವಂತೆ ಯೂಟ್ಯೂಬ್ ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿದೆ. ಹಾಗಾಗಿ, ದ್ವೇಷಪೂರಿತ ಮಾತು, ಹಿಂಸೆ, ಕಿರುಕುಳ ಅಥವಾ ನಕಲಿ ಮಾಹಿತಿಯುಳ್ಳ ವೀಡಿಯೋಗಳನ್ನು ಇಲ್ಲಿ ಅಪ್ಲೋಡ್ ಮಾಡಲಾಗುವುದಿಲ್ಲ. ಒಂದು ವೇಳೆ, ಹಾನಿಕಾರಕ ವಿಷಯ ಅಪ್ಲೋಡ್ ಆಗಿದ್ದರು ಸಹ ಅಂತಹ ವೀಡಿಯೋಗಳನ್ನು ಕಲೆ ಹಾಕಿ ಅಳಿಸಿ ಹಾಕಲು ಎಐ ತಂತ್ರಜ್ಞಾನ ಹಾಗೂ ವಿಮರ್ಶಕರನ್ನು ಬಳಸಿಕೊಳ್ಳಲಾಗುತ್ತದೆ. ಹೆಚ್ಚು ಸಮಯ, ಯೂಟ್ಯೂಬ್ ಸಂಸ್ಥೆ ಯಾವುದೇ ಅಹಿತಕರ ವೀಡಿಯೋ ಹೆಚ್ಚು ವೀಕ್ಷಣೆಗೊಂಡು ಪ್ರಚಾರಗೊಳ್ಳುವ ಮೊದಲೇ ತೆಗೆದು ಹಾಕುತ್ತದೆ.

ಮಕ್ಕಳ ಸುರಕ್ಷತೆಯೇ ಮೊದಲ ಆಧ್ಯತೆ:
ಯೂಟ್ಯೂಬ್ ಮಕ್ಕಳ ಸುರಕ್ಷತೆಗೆ ಮೊದಲ ಆಧ್ಯತೆ ನೀಡಲಿದ್ದು, ಮಕ್ಕಳನ್ನು ಅಪಾಯಕ್ಕೆ ಸಿಲುಕಿಸಬಹುದಾದಂತಹ ಅಥವಾ ತಪ್ಪು ದಾರಿಗೆ ತಳ್ಳುವಂತಹ ಯಾವುದೇ ವೀಡಿಯೋಗಳನ್ನು ಪ್ರೋತ್ಸಾಹಿಸುವುದಿಲ್ಲ. ಈ ನಿಟ್ಟಿನಲ್ಲಿಯೇ ಇದೀಗ ಯೂಟ್ಯೂಬ್ 9.5 ಮಿಲಿಯನ್ ಅಂದರೆ 95 ಲಕ್ಷ ವೀಡಿಯೋಗಳಿಗೆ ಕತ್ತರಿ ಹಾಕಿದೆ.
ಡಿಲಿಟ್ ಮಾಡಿದ ವೀಡಿಯೋಗಳ ಪೈಕಿ ಭಾರತದ್ದೇ ಹೆಚ್ಚು ಪಾಲು:
ಇನ್ನು ಯೂಟ್ಯೂಬ್ ವೇದಿಕೆಯಿಂದ ತೆಗೆದು ಹಾಕಲಾಗಿರುವ ವೀಡಿಯೋಗಳ ಪೈಕಿ ಭಾರತದ ವೀಡಿಯೋಗಳು ಅಧಿಕವಾಗಿವೆ. 2.9 ಮಿಲಿಯನ್ ಅಂದರೆ 29 ಲಕ್ಷ ಭಾರತದಿಂದ ಅಪ್ಲೋಡ್ ಆಗಿರುವ ವೀಡಿಯೋಗಳನ್ನು ಯೂಟ್ಯೂಬ್ ಪ್ಲಾಟ್ಫಾರ್ಮ್ನಿಂದ ಅಳಿಸಿ ಹಾಕಲಾಗಿದೆ. 2020ರಿಂದ ಭಾರತವು ನಿರಂತರವಾಗಿ ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದೆ. ಅದರಲ್ಲಿಯೂ ಇತರ ದೇಶಗಳಿಗಿಂತ ಹೆಚ್ಚು ಭಾರತೀಯ ವೀಡಿಯೋಗಳು ಡಿಲಿಟ್ ಆಗುವ ಮೂಲಕ ಪ್ರತಿಬಾರಿಯೂ ಅಗ್ರಸ್ಥಾನದಲ್ಲಿ ನಿಲ್ಲುತ್ತಿದೆ. ಭಾರತದ ನಂತರ ಸ್ಥಾನದಲ್ಲಿ ಬ್ರೆಜಿಲ್ ಇದ್ದು, 1 ಮಿಲಿಯನ್ಗಿಂತಲೂ ಹೆಚ್ಚು ವೀಡಿಯೋಗಳು ಡಿಲಿಟ್ಗೊಂಡಿವೆ ಎಂದು ವರದಿಯಿಂದ ತಿಳಿದು ಬಂದಿದೆ.
ವೀಡಿಯೋ ಡಿಲಿಟ್ ಮಾಡುವ ಕಂಟೆಂಟ್ ಮಾಡರೇಶನ್:
ಮಾರ್ಗಸೂಚಿ ಉಲ್ಲಂಘನೆಯಾಗಿರುವ ವೀಡಿಯೋಗಳನ್ನು ಸ್ವಯಂಚಾಲಿತ ಕಂಟೆಂಟ್ ಮಾಡರೇಶನ್ ಪರಿಕರ ಗುರುತಿಸುತ್ತದೆ. ಇದೊಂದು ಎಐ ಆಧಾರಿತ ಅಪ್ಲಿಕೇಶನ್ ಆಗಿದ್ದು, ಕೇವಲ 1%ನಷ್ಟು ಮಾತ್ರ ವಿಮರ್ಶಕರಿಂದ ತೆಗೆದು ಹಾಕಲ್ಪಟ್ಟಿದೆ ಎಂದು ಯೂಟ್ಯೂಬ್ ಸಂಸ್ಥೆ ತಿಳಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಯೂಟ್ಯೂಬ್ ಸಂಸ್ಥೆ “ಹೆಚ್ಚಿನ ಡಿಲಿಟಿಂಗ್ ಪ್ರಕ್ರಿಯೆಯನ್ನು ನಮ್ಮ ಸ್ವಯಂಚಾಲಿತ ಫ್ಲ್ಯಾಗ್ ಮಾಡುವ ವ್ಯವಸ್ಥೆಗಳು ಪತ್ತೆ ಹಚ್ಚುತ್ತವೆ. ಕೆಲವನ್ನು ಮಾನವ ಫ್ಲ್ಯಾಗರ್ಗಳು ಸಹ ಫ್ಲ್ಯಾಗ್ ಮಾಡಬಹುದಾಗಿದೆ. ಇನ್ನು ಫ್ಲ್ಯಾಗ್ ಮಾಡಿದ ಕಾಮೆಂಟ್ಗಳನ್ನು ಪರಿಶೀಲಿಸಲು, ಸೇವಾ ನಿಯಮಗಳನ್ನು ಉಲ್ಲಂಘಿಸುವ ವಿಷಯವನ್ನು ತೆಗೆದು ಹಾಕಲು ಹಾಗೂ ಮಾರ್ಗಸೂಚಿಗಳು ಉಲ್ಲಂಘನೆಯಾಗದಿರುವ ವೀಡಿಯೋಗಳನ್ನು ಪ್ರಪಂಚದಾದ್ಯಂತ ಹರಿ ಬಿಡಲು ತಂಡಗಳನ್ನು ಅವಲಂಬಿಸಾಲಗಿದೆ” ಎಂದು ಹೇಳಿದೆ.

ಯೂಟ್ಯೂಬ್ನಿಂದ ವೀಡಿಯೋ ತೆಗೆದು ಹಾಕಲು ಕಾರಣ:
ಜಾಗತಿಕವಾಗಿ ವೀಡಿಯೋ ತೆಗೆದು ಹಾಕುವಿಕೆಗೆ ಪ್ರಾಥಮಿಕ ಕಾರಣಗಳು ಇಲ್ಲಿವೆ. ಸ್ಪ್ಯಾಮ್, ದಾರಿ ತಪ್ಪಿಸುವ ವಿಷಯಗಳು ಹಾಗೂ ವಂಚನೆಯ ಅಂಶವುಳ್ಳ 81.7% ವೀಡಿಯೋಗಳು, ಕಿರುಕುಳದ 6.6% ವೀಡಿಯೋಗಳು, ಮಕ್ಕಳ ಸುರಕ್ಷತೆಗೆ ದಕ್ಕೆ ತರುವ 59% ಹಾಗೂ ಹಿಂಸಾತ್ಮಕ ವಿಷಯ ಅಥವಾ ಗ್ರಾಫಿಕ್ನ 3.7% ಹಾಗೂ ಇನ್ನಿತರ ಮಾರ್ಗಸೂಚಿ ಉಲ್ಲಂಘಿತ ವಿಷಯಗಳನ್ನು ಯೂಟ್ಯೂಬ್ ತನ್ನ ವೇದಿಕೆಯಿಂದ ಕಿತ್ತೊಗೆದಿದೆ.
ಡಿಲಿಟ್ ಮಾತ್ರವಲ್ಲ ಚಾನೆಲ್ಗಳಿಗೂ ನೀಡಿದೆ ಗೇಟ್ಪಾಸ್:
ಯೂಟ್ಯೂಬ್ ಕೇವಲ ಮಾರ್ಗಸೂಚಿ ಉಲ್ಲಂಘಿತ ವೀಡಿಯೋಗಳನ್ನು ಮಾತ್ರ ಡಿಲಿಟ್ ಮಾಡಿಲ್ಲ. ಬದಲಾಗಿ 4.8 ಮಿಲಿಯನ್ ಅಂದರೆ 45 ಲಕ್ಷ ಚಾನೆಲ್ಗಳನ್ನು ಸಹ ಕೊನೆಗೊಳಿಸಿದೆ. 2024ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ಸ್ಪ್ಯಾಮ್ ನೀತಿಗಳನ್ನು ಉಲ್ಲಂಘಿಸಿರುವ ಈ ಚಾನೆಲ್ಗಳನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ, 1.3 ಬಿಲಿಯನ್ ಕಾಮೆಂಟ್ಸ್ಗಳನ್ನು ಸಹ ಕಮ್ಯೂನಿಟಿ ಗೈಡಲೈನ್ಸ್ ಉಲ್ಲಂಘಿಸಿದ್ದಕ್ಕಾಗಿ ತೆಗೆದು ಹಾಕಲಾಗಿದೆ ಎಂದು ಯೂಟ್ಯೂಬ್ ಸ್ಪಷ್ಟ ಪಡಿಸಿದೆ.
ಒಟ್ಟಾರೆ, ಅತಿ ಸುಲಭವೆಂದು ಇತ್ತೀಚೆಗೆ ಬಹುಪಾಲು ಮಂದಿ ಯೂಟ್ಯೂಬ್ನಲ್ಲಿ ಚಾನೆಲ್ಗಳನ್ನು ತೆಗೆದು ಕಂಡಕಂಡಿದ್ದನ್ನೆಲ್ಲಾ ವೀಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದರು. ಹಾಗೆಯೇ, ನಾವು ಅಪ್ಲೋಡ್ ಮಾಡುತ್ತಿರುವ ವೀಡಿಯೋದಲ್ಲಿ ಏನಾದರು ಸಂದೇಶ ಇದೆಯೇ? ಎಂದು ಸಹ ಯೋಚಿಸುತ್ತಿರಲಿಲ್ಲ. ಯೂಟ್ಯೂಬ್ ಚಾನೆಲ್ನನ್ನೇ ಬಂಡವಾಳವನ್ನಾಗಿಸಿಕೊಂಡು ದುಡಿಯುತ್ತಿರುವವರು ಎಷ್ಟೋ ಮಂದಿ ಇದ್ದಾರೆ. ಆದರೀಗ ಮಾರ್ಗಸೂಚಿ ನಿಯಮಗಳ ಅರಿವಿಲ್ಲದೆಯೇ ಯೂಟ್ಯೂಬ್ ಚಾನೆಲ್ ತೆಗೆದು ದುರುಪಯೋಗ ಪಡೆಸಿಕೊಳ್ಳುತ್ತಿದ್ದವರ ಹಾವಳಿಗೆ ಬ್ರೇಕ್ ಬಿದ್ದಂತಾಗಿದೆ.