ರಾಜ್ಯ ಕಾಂಗ್ರೆಸ್ ನಲ್ಲಿ ಬಣ ಬಡಿದಾಟ ಎಷ್ಟು ಇದ್ಯೋ ಅಷ್ಟೇ ಬಿಜೆಪಿಯಲ್ಲೂ ಬಣ ಬಡಿದಾಟ ಜೋರಾಗಿದೆ. ಬಿಜೆಪಿಯ ಭಿನ್ನರ ತಂಡ ಎಂದೆನಿಸಿಕೊಂಡಿರೋ ಯತ್ನಾಳ್ ತಂಡ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನ ಬದಲಾಯಿಸಬೇಕು ಅನ್ನೋ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದಕ್ಕಾಗಿ ತಮ್ಮ ತಂಡದ ಗಾತ್ರ ದೊಡ್ಡದು ಮಾಡಿಕೊಳ್ಳುತ್ತಲೇ ಇದ್ದಾರೆ. ಯಾರ್ಯಾರು ವಿಜಯೇಂದ್ರ ವಿರುದ್ಧ ಮಾತನಾಡುತ್ತಿದ್ದಾರೋ ಅವರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ತಿದ್ದಾರೆ.
ಸಾಕಷ್ಟು ಸಭೆಗಳು, ಬಹಿರಂಗ ಹೇಳಿಕೆಗಳು, ಹೈ ಕಮಾಂಡ್ ಭೇಟಿ ಯಾವುದೂ ಕೂಡ ಫಲಪ್ರದವಾಗ್ತಾ ಇಲ್ಲ ಅಂತ ಅನ್ನೋದು ಭಿನ್ನರ ಗಮನಕ್ಕೆ ಬಂದಗಿದೆ. ಹೀಗಾಗಿ ತಮ್ಮ ಪ್ಲ್ಯಾನ್ ಬದಲಾಯಿಸಲು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಸದಾಶಿವನಗರದಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ ನಿವಾಸದಲ್ಲಿ ಸೇರಿದ್ದ ಭಿನ್ನರ ತಂಡ ಈ ವಿಚಾರದ ಬಗ್ಗೆ ಚರ್ಚೆ ಮಾಡಿದ್ದಾರಂತೆ.
ಹೌದು, ರಾಜ್ಯಾಧ್ಯಕ್ಷ ಬದಲಾವಣೆ ಹೋರಾಟದ ಬಳಿಕ ಬಿಜೆಪಿ ಭಿನ್ನರ ಬಳಗ ತನ್ನ ಅಜೆಂಡಾವನ್ನ ಕೊಂಚ ಬದಲಾಯಿಸಿಕೊಂಡಿದೆ. ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವೀಗ ತಮ್ಮ ಕೈ ತಪ್ಪುತ್ತೆ ಅನ್ನೋ ಸೂಚನೆ ಸಿಗುತ್ತಿದ್ದಂತೆಯೇ ತಮ್ಮ ವರಸೆಯನ್ನ ಬದಲಿಸಿರೋ ಭಿನ್ನರ ತಂಡ ತಮ್ಮ ಉದ್ದೇಶ ಈಡೇರಿಕೆಗೆ ಹೊಸ ಬೇಡಿಕೆ ಮುಂದಿಟ್ಟು ಹೋರಾಡಲು ಅಣಿಯಾಗ್ತಿದ್ದಾರೆ.

ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದಲ್ಲಿ ತಾವಂದುಕೊಂಡ ಲೆಕ್ಕಾಚಾರಗಳು ಎಲ್ಲಾ ಉಲ್ಟಾ ಆಗುತ್ತಿದೆ. ಅನ್ನೋ ಸುಳಿವು ಸಿಗ್ತಿದ್ದಂತೆ ತಮ್ಮ ಹೋರಾಟದ ಪಥವನ್ನೇ ಬದಲಾಯಿಸಿಕೊಳ್ಳಲು ಯತ್ನಾಳ್ ತಂಡ ನಿರ್ಧರಿಸಿದೆ. ಅದರಂತೆ ರಾಜ್ಯಾಧ್ಯಕ್ಷರಗೆ ಸರಿಸಮನಾದ ಶಕ್ತಿ ಸಾಮರ್ಥ್ಯ ಪಡೆಯಲು ಹೊಸ ತಂತ್ರ ರೂಪಿಸಿ ಅದನ್ನ ಕಾರ್ಯರೂಪಕ್ಕೆ ತರಲು ರೆಡಿಯಾಗ್ತಿದೆ ಭಿನ್ನರ ಪಡೆ. ಹೊಸ ತಂತ್ರದ ಜೊತೆ ಹೋರಾಟದ ಅಖಾಡದಲ್ಲಿ ಕಾದಾಡಲು ಸಿದ್ದವಾಗ್ತಿದ್ದಾರೆ ಈ ತಂಡ. ರಾಜ್ಯಾಧ್ಯಕ್ಷರು ಬದಲಾಗದಿದ್ದರೆ ಏನಂತೆ, ರಾಜ್ಯ ಉಸ್ತುವಾರಿಯನ್ನೇ ಬದಲಾಯಿಸಿ ಬಿಡಿ ಅನ್ನೋ ಹೊಸ ಬೇಡಿಕೆಯನ್ನ ವರಿಷ್ಠರ ಮುಂದಿಟ್ಟು ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ತಯಾರಿ ನಡೆಸ್ತಿದೆ. ಈ ಹಿನ್ನೆಲೆಯಲ್ಲೇ ಮೊನ್ನೆ ಸಭೆ ಸೇರಿದ್ದರು ಈ ತಂಡ ಅಂತ ಹೇಳಲಾಗುತ್ತಿದೆ. ಉಸ್ತುವಾರಿ ನಾವು ಅಂದುಕೊಂಡವರು ಬಂದರೆ ನಮಗೇ ಅಧಿಕಾರ ಸಿಕ್ಕಂತೆ. ಆಗ ನಾವಂದುಕೊಂಡಂತೆ ಎಲ್ಲವನ್ನೂ ಮಾಡಬಹುದು. ಅದಕ್ಕೆ ಬೇಕಾದ ತಂತ್ರ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿದೆಯಂತೆ. ಹಾಗಾಗಿ ಈಗ ಇವರು ಅಂದರೆ ಹಾಲಿ ಉಸ್ತುವಾರಿ ರಾಧಾಮೋಹನ್ ದಾಸ್ ರನ್ನ ಬದಲಾಯಿಸಲು ವರಿಷ್ಠರಿ ಮೇಲೆ ಒತ್ತಡ ಹೇರಲು ಈ ತಂಡ ನಿರ್ಧರಿಸಿದೆ.
ರಾಧಾ ಮೋಹನ್ ದಾಸ್ ರಾಜ್ಯಾಧ್ಯಕ್ಷ ರಿಗೆ ಬೇಕಾದ ರೀತಿಯಲ್ಲಿ ನಡೆದುಕೊಳ್ತಿದ್ದಾರೆ. ಪಕ್ಷದ ಇತರರ ಸಮಸ್ಯೆಯನ್ನ ಅವರು ಕೇಳುತ್ತಿಲ್ಲ. ಯಾರು ಏನೇ ಹೇಳಿದರೂ ಅವರ ತಲೆ ಕೆಡಿಸಿಕೊಳ್ತಿಲ್ಲ. ಇದರಿಂದ ಪಕ್ಷ ಬಲಪಡಿಸಲು ಸಾಧ್ಯವಾಗಲ್ಲ. ಈ ಕಾರಣದಿಂದ ಅವರನ್ನೇ ಬದಲಾಯಿಸಿ ಪಕ್ಷಕ್ಕೆ ನಿಷ್ಠರಿಗೆ ಮನ್ನಣೆ ನೀಡುವಂತಹ ನಾಯಕತ್ವಕ್ಕೆ ಜವಾಬ್ದಾರಿ ಹೊರಿಸಬೇಕು ಅನ್ನೋ ಮನವಿಯನ್ನ ವರಿಷ್ಠರೆದುರು ಇಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ರಾಜ್ಯಾಧ್ಯಕ್ಷರ ಆಯ್ಕೆ ವಿಚಾರವಾಗಿ ಹೈ ಕಮಾಂಡ್ ಭಿನ್ನರ ಮನವಿಗೆ ಸೊಪ್ಪಾಗ್ತಾ ಇಲ್ಲ. ಹೀಗಾಗಿಯೇ ಇಷ್ಟು ದಿನ ಆರ್ಭಟಿಸಿದ್ದ ಭಿನ್ನರು ಇದೀಗ ಪುಲ್ ಸೈಲೆಂಟ್ ಆಗಿದ್ದಾರೆ. ಇತ್ತ ಭೇಟಿಗೂ ಸಮಯ ಕೊಡ್ತಾ ಇಲ್ಲ. ಇದಕ್ಕೆ ಕಾರಣ ಉಸ್ತುವಾರಿ ನೀಡ್ತಾ ಇರೋ ವರದಿಗಳು. ಹೀಗಾಗಿ ಅವರ ಬದಲಾವಣೆ ಆದರೆ ಎಲ್ಲವೂ ಸಲೀಸಾಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ಇದ್ದಂಗಿದೆ. ಸದ್ಯಕ್ಕೆ ಭಿನ್ನಮತೀಯ ನಾಯಕರಿಗೆ ಸೈಲೆಂಟ್ ಇರೋದು, ಹೈಕಮಾಂಡ್ ಸೂಚನೆ ಫಾಲೋ ಮಾಡೋದು ಅಷ್ಟೇ ಇವರ ಕೆಲಸವಾಗಿದೆ.
ಪದೇ ಪದೇ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವನ್ನ ಹೈ ಕಮಾಂಡ್ ಬಳಿ ತೆಗೆದುಕೊಂಡು ಹೋದರೆ ಪ್ರಯೋಜನವಿಲ್ಲ. ಅದರ ಬದಲು ಬೇರೆ ದಾರಿ ಹುಡುಕಿಕೊಂಡು ಹೋದರೆ ಪ್ರಯೋಜನವಾಗಬಹುದು. ಜೊತೆಗೆ ಯತ್ನಾಳ್ ರಂತೆ ನಮಗೂ ನೊಟೀಸ್ ಕೊಡುವುದನ್ನ ತಪ್ಪಿಸಿಕೊಳ್ಳಬೇಕು ಎಂದಾದರೆ ಉಸ್ತುವಾರಿ ಬದಲಾವಣೆ ಬಗ್ಗೆ ವರಿಷ್ಠರ ಮುಂದೆ ಒತ್ತಡ ಇಡುವುದೇ ಉತ್ತಮ ಆಯ್ಕೆ ಅನ್ನೋದನ್ನ ಅರಿತಿರೋ ಭಿನ್ನರ ತಂಡ ಈಗ ಈ ನಿರ್ಧಾರ ಮಾಡಿದಂತಿದೆ.
ಯಾವುದಾದರೂ ದಾರಿ ಹುಡುಕಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಬೇಕು ಅನ್ನೋ ನಿಟ್ಟಿನಲ್ಲಿ ದಿನಕ್ಕೊಂದು ಪ್ಲ್ಯಾನ್ ಮಾಡ್ತಾ ಇದ್ದಾರೆ ರೆಬಲ್ಸ್. ಈಗ ಈ ದಾರಿ ಹುಡುಕಿದ್ದಾರೆ. ವರಿಷ್ಠರನ್ನ ಭೇಟಿ ಮಾಡಲು ಮುಂದಾಗ್ತಾ ಇದ್ದಾರೆ. ಆದರೆ ವರಿಷ್ಠರು ಸಮಯ ಕೊಡ್ತಾರಾ ಅಥವಾ ಮತ್ತೆ ಭಿನ್ನರಿಗೆ ಭೇಟಿಗೆ ಅವಕಾಶ ಕೊಡದೇ ನಿರಾಸೆ ಮಾಡ್ತಾರಾ ಕಾದು ನೋಡಬೇಕು.