‘ದೇಶ ಓದು ಕೋಶ ನೋಡು’ ಇದೊಂದು ಜನಪ್ರಿಯ ಗಾದೆ. ಆದರೆ ಸರಿಯಾಗಿ ನೋಡಿ,ಆಳವಾಗಿ ಓದಿದಾಗ ಮಾತ್ರ!
ನಾನು ಓದುವ ಮತ್ತು ನೋಡುವ ಪರಿಗೆ ಹೆಮ್ಮೆ ಇದೆ ಆದರೆ ಇನ್ನೂ ಆಳ-ಅಗಲ ಇರಬೇಕು ಎಂದು ನಂಬಿದ್ದೇನೆ ಕೂಡ.
ಎರಡು ಮಹತ್ವದ ಕೆಲಸಗಳಿದ್ದಾಗ ಯಾವುದು ಮುಖ್ಯ ಎಂಬ ಗೊಂದಲ ಎದುರಾಗುತ್ತದೆ. ಅಂತಹ ತೀವ್ರ ಗೊಂದಲ ಎದುರಾದದ್ದು ಈ ಬಾಲಿ ಪ್ರವಾಸದಲ್ಲಿ. ಇದೇ ತಿಂಗಳಲ್ಲಿ ಬಹುದಿನಗಳ ಕನಸು ವಚನ ಟಿವಿಯ ಲೋಕಾರ್ಪಣೆ, ಅದಕ್ಕೆ ಪೂರಕವಾಗಿರುವ ಕೆಲಸಗಳು ಮುಗಿದಿರಲಿಲ್ಲ, ಹಾಗಾಗಿ ಬಾಲಿ ಪ್ರವಾಸ ಅಸಾಧ್ಯ ಅಂದುಕೊಂಡು ಸುಮ್ಮನಾಗಿದ್ದೆ.
ಇದು ಮೋಜಿನ ಪ್ರವಾಸವಾಗಿದ್ದರೆ ಖಂಡಿತ ಹೋಗುತ್ತಿರಲಿಲ್ಲ.
ಇದೊಂದು ಪೂರ್ಣ ಪ್ರಮಾಣದ ಸೈದ್ಧಾಂತಿಕ ಕಾರ್ಯಕ್ರಮ, ಮುಖ್ಯವಾಗಿ ವಚನಗಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಮ್ಮೇಳನ. ಇಂತಹ ಕಾರ್ಯಕ್ರಮಕ್ಕೆ ‘ವಚನ ವಾಹಿನಿ’ಯ ವ್ಯಕ್ತಿ ಇರದಿದ್ದರೆ ಹೇಗೆ? ಎಂಬ ಪ್ರಶ್ನೆ ಹಾಕಿದವರು ಬೆಂಗಳೂರು ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ. ಸುರೇಶ್ ಅವರು. ಈ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿದ್ದ ಸಾಣೇಹಳ್ಳಿ ಪೂಜ್ಯರಾದ ಡಾ. ಪಂಡಿತಾರಾಧ್ಯ ಶ್ರೀಗಳ ಆದೇಶವಿತ್ತು, ಎಲ್ಲಕ್ಕಿಂತ ಮುಖ್ಯ ಈ ಸಮ್ಮೇಳನದ ಉದ್ಘಾಟನೆಗೆ, ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಹಿಂದಿನ ಚೇರ್ಮನ್ ಎ.ಎಸ್. ಕಿರಣ್ಕುಮಾರ್ ಸರ್ ಬರುತ್ತಾರೆ ಎಂಬ ವಿಷಯ ಕೇಳಿ ಕರಗಿ ಹೋದೆ. ಎರಡೂ ಕಾರ್ಯಕ್ರಮಗಳ ಸೆಳೆತ ಗೊಂದಲ ಉಂಟು ಮಾಡಿದರೂ, ಮಲೇಷಿಯಾ, ಥೈಲ್ಯಾಂಡ್ ಪ್ರವಾಸ ರದ್ದು ಮಾಡಿ, ಕೇವಲ ಬಾಲಿ ಸಮ್ಮೇಳನದ ಪ್ರಧಾನ ಭಾಷಣ ಒಪ್ಪಿಕೊಂಡೆ.
ಪ್ರವಾಸಕ್ಕೆ ಮೊದಲು ವಿಐಪಿ ಖೋಟಾದ ಪಟ್ಟಿಯಲ್ಲಿ ಡಾ. ಕಿರಣ್ಕುಮಾರ್ ಹೆಸರು ನೋಡಿ ಹೆಮ್ಮೆಯಾಯಿತು.
ಈಗ ಬಾಲಿ ಸಮ್ಮೇಳನ ಮುಗಿಸಿ ವಚನ ಸಮೂಹ ಸಂಸ್ಥೆಯ ಅಭೂತಪೂರ್ವ ಅನುಭವ ಮೆಗಾಸಿಟಿ ಅಡಿಗಲ್ಲು ಹಾಗೂ ವಚನ ವಾಹಿನಿ ಉದ್ಘಾಟನೆಗೆ ಸಾಗಿದ್ದೇನೆ.
ಈಗ ಹಂಚಿಕೊಳ್ಳಬಹುದಾದ ಮಹತ್ವದ ವಿಷಯವೆಂದರೆ, ಇಸ್ರೋದ ಮುಖ್ಯಸ್ಥರಾಗಿದ್ದ ಡಾ. ಕಿರಣ್ಕುಮಾರ್ ಅವರ ಸರಳತೆ ಮತ್ತು ಅಪಾರ ಜ್ಞಾನ ಸಂಪತ್ತು.
ವಿಮಾನದಲ್ಲಿ ಒಟ್ಟಾಗಿ ಪಯಣಿಸುವಾಗ, ಪ್ರವಾಸದ ಸಮಯದಲ್ಲಿ ಹಾಗೂ ನೀಡಿದ ವಿಶೇಷ ಸಂದರ್ಶನದಲ್ಲಿ ನಾನು ಕೇಳಿದ ನೂರಾರು ಪ್ರಶ್ನೆ ಮತ್ತು ಅನುಮಾನಗಳಿಗೆ ಅವರು ನೀಡಿದ ಉತ್ತರದಲ್ಲಿ ಆಳ ವಿಜ್ಞಾನಿಯ ದರ್ಶನವಾಯಿತು. ಅವರ ಮಾತುಗಳ ಆಧರಿಸಿ ಲೇಖನ ಅಲ್ಲ, ಪುಸ್ತಕ ಬರೆಯಬಹುದು. ಸಂಘಟಿಕರಾದ ಸುರೇಶ ಅವರು ಪ್ರಯಾಣ ಮೊಟಕುಗೊಳಿಸಿ ಹೈದ್ರಾಬಾದ್ ತಲುಪಲು ನೆರವಾದರು.
ನಮ್ಮ ಮುಂದೆ ಇರುವ ಬಹುದೊಡ್ಡ ಗೊಂದಲಗಳ ನಿರ್ವಹಣೆಗೆ ಈ ಪಯಣ ಮಾದರಿಯಾಯಿತು.
ಮುಂದೆ ಉಳಿದಿರುವ ಬದುಕಿನ ಸವಾಲುಗಳನ್ನು ಸಶಕ್ತವಾಗಿ ಎದುರಿಸುವ ಮಾರ್ಗ ತೋರಿದ ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳಾದ ಡಾ. ಕಿರಣ್ಕುಮಾರ್ ಸರ್ ಅವರಿಗೆ ಸಾವಿರದ ಶರಣುಗಳು.
–ಸಿದ್ದು ಯಾಪಲಪರವಿ