ನಟಿ ಸಾಯಿಪಲ್ಲವಿ ಹಾಗು ನಟ ಶಿವಕಾರ್ತಿಕೇಯನ್ ಇವರಿಬ್ಬರು ಜೊತೆಯಾಗಿ ನಟಿಸಿರುವ ಅದ್ಭುತವಾದ ಸಿನಿಮಾ ಅಮರನ್. ಈ ಸಿನಿಮಾ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ 5 ಭಾಷೆಗಳಲ್ಲಿ ಸಹ ತೆರೆಕೊಂಡಿದೆ. ಸಿನಿಮಾಗೆ ಅದ್ಭುತವಾದ ಓಪನಿಂಗ್ ಸಹ ಸಿಕ್ಕಿ, ಈಗಾಗಲೇ 300 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿ, ದಾಖಲೆಯತ್ತ ದಾಪುಗಾಲು ಹಾಕುತ್ತಿದೆ. ಎಲ್ಲೆಡೆ ಅಮರನ್ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಆದರೆ ಈ ಒಬ್ಬ ವಿದ್ಯಾರ್ಥಿ ಅಮರನ್ ಚಿತ್ರತಂಡದ ನಿರ್ಮಾಪಕರಿಗೆ ಲಾಯರ್ ನೋಟಿಸ್ ಕಳಿಸಿ, 1.1ಕೋಟಿ ಪರಿಹಾರವನ್ನು ತನಗೆ ಕೊಡಲೇಬೇಕು ಎಂದು ಆಗ್ರಹಿಸಿದ್ದಾನೆ. ಅದು ಯಾಕೆ ಗೊತ್ತಾ?

ಅಮರನ್ ನಿರ್ಮಾಪಕರಿಗೆ ನೋಟಿಸ್ ಕಳಿಸಿರುವುದು ಚೆನ್ನೈನ ಒಬ್ಬ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ. ಈತನ ಹೆಸರು ವಿವಿ ವಾಗೇಶನ್. ಈ ವ್ಯಕ್ತಿಯ ಫೋನ್ ನಂಬರ್ ಅನ್ನು ಸಿನಿಮಾದಲ್ಲಿ ತೋರಿಸಲಾಗಿದೆ, ಇದರಿಂದ ಸಾಯಿಪಲ್ಲವಿ ಅವರ ಅಭಿಮಾನಿಗಳು ಒಂಚೂರು ಬಿಡುವು ಕೊಡದೇ ಪದೇ ಪದೇ ಕರೆ ಮಾಡುತ್ತಲೇ ಇದ್ದಾರೆ. ಕರೆಗಳು ಬರುವುದು ನಿಲ್ಲುತ್ತಿಲ್ಲ, ಈ ಕಾರಣಕ್ಕೆ ತನಗೆ ತುಂಬಾ ಡಿಸ್ಟರ್ಬ್ ಆಗಿದೆ, ಓದುವುದಕ್ಕೆ ಅಥವಾ ಇನ್ಯಾವುದೇ ಕೆಲಸ ಮಾಡುವುದಕ್ಕೂ ಸಾಧ್ಯ ಆಗುತ್ತಿಲ್ಲ ಎಂದು ಲಾಯರ್ ನೋಟಿಸ್ ಕಳಿಸಿದ್ದಾನೆ. ನನಗೆ ಪರಿಹಾರವಾಗಿ ಅಮರನ್ ನಿರ್ಮಾಪಕರು 1.1 ಕೋಟಿ ಕೊಡಬೇಕು, ತಾನು ಯಾವುದೇ ಕಾರಣಕ್ಕೂ ಮೊಬೈಲ್ ನಂಬರ್ ಬದಲಾಯಿಸುವುದಿಲ್ಲ ಎಂದಿದ್ದಾನೆ.

ಹೌದು, ಈ ರೀತಿ ವಾಗೇಶನ್ ಎನ್ನುವ ವಿದ್ಯಾರ್ಥಿ ಲಾಯರ್ ನೋಟಿಸ್ ಕಳಿಸಿ, ಪರಿಹಾರ ಕೇಳಿರುವುದು ನಿಜ. ಅಮರನ್ ಸಿನಿಮಾದಲ್ಲಿ ಒಂದು ದೃಶ್ಯವಿದೆ, ಇಂದು ಮುಕುಂದ್ ನಡುವೆ ಪ್ರೀತಿ ಶುರುವಾದಾಗ, ಹಾಸ್ಟೆಲ್ ಗೆ ಹೋಗುವ ಇಂದು ಹೊರಗಡೆ ನಿಂತಿರುವ ಮುಕುಂದ್ ಗೆ ಒಂದು ಪೇಪರ್ ಎಸೆಯುತ್ತಾಳೆ, ಆ ಪೇಪರ್ ಒಳಗೆ ಆಕೆಯ ಫೋನ್ ನಂಬರ್ ಇರುತ್ತದೆ. ಅದರೊಳಗೆ ಕಾಣಿಸುವ ಫೋನ್ ನಂಬರ್ ಹಾಗೂ ಈ ವಾಗೇಶನ್ ಎನ್ನುವ ವಿದ್ಯಾರ್ಥಿಯ ಫೋನ್ ನಂಬರ್ ಒಂದೇ ಆಗಿರುವುದು ಈ ಸಮಸ್ಯೆಗೆ ಕಾರಣವಾಗಿದ್ದು, ಚಿತ್ರತಂಡ ಈ ಸಮಸ್ಯೆಗೆ ಯಾವ ರೀತಿಯ ಪರಿಹಾರ ಹುಡುಕುತ್ತದೆ ಎಂದು ಕಾದು ನೋಡಬೇಕಿದೆ.
ಇನ್ನು ಅಮರನ್ ಸಿನಿಮಾ ಬಗ್ಗೆ ಹೇಳುವುದಾದರೆ, ಇದು 2015 ರಲ್ಲಿ ಪ್ರಾಣ ತ್ಯಾಗ ಮಾಡಿದ ತಮಿಳುನಾಡಿನ ವೀರ ಯೋಧ ಮೇಜರ್ ಮುಕುಂದ್ ವರದರಾಜನ್ ಅವರ ಬಯೋಪಿಕ್ ಆಗಿದ್ದು, ಮುಕುಂದ್ ಅವರು ಹಾಗೂ ಅವರ ಪತ್ನಿ ಇಂದು ಮುಕುಂದ್ ಅವರ ಲವ್ ಸ್ಟೋರಿ, ಮುಕುಂದ್ ಅವರ ತಂದೆ ತಾಯಿಯ ಕಥೆ, ಮುಕುಂದ್ ಅವರು ಆರ್ಮಿಯಲ್ಲಿ ಕಳೆದ ಸಮಯ ಈ ಎಲ್ಲಾ ಅಂಶಗಳನ್ನು ಅಮರನ್ ಒಳಗೊಂಡಿದೆ. ಮನಸ್ಸಿಗೆ ಮುಟ್ಟುವ ನೈಜ ಕಥೆ ಇದಾಗಿರುವ ಕಾರಣ, ಜನರಿಗೆ ತುಂಬಾ ಇಷ್ಟವಾಗಿದೆ. ತಮಿಳುನಾಡು ಮಾತ್ರವಲ್ಲ ದೇಶದ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ನಟ ಶಿವಕಾರ್ತಿಕೇಯನ್ ಅವರು ಮುಕುಂದ್ ಪಾತ್ರದಲ್ಲಿ, ನಟಿ ಸಾಯಿಪಲ್ಲವಿ ಇಂದು ರೆಬೇಕಾ ವರ್ಗಿಸ್ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಬ್ಬರ ಜೋಡಿ ಹಾಗೂ ಕೆಮಿಸ್ಟ್ರಿ ಜನರಿಗೆ ತುಂಬಾ ಇಷ್ಟವಾಗಿದೆ. 2 ವರ್ಷಗಳ ನಂತರ ಸಾಯಿಪಲ್ಲವಿ ಅವರ ಸಿನಿಮಾ ಬಿಡುಗಡೆ ಆಗಿದ್ದು, ಅವರ ಅಭಿಮಾನಿಗಳು ಸಂತೋಷದಿಂದ ನೋಡುತ್ತಿದ್ದಾರೆ. ಸಾಯಿಪಲ್ಲವಿ ಅಂದರೆ ಕ್ರೇಜ್ ಜಾಸ್ತಿ, ಹಾಗಾಗಿ ಈ ಸಿನಿಮಾದಲ್ಲಿ ಕಾಣುವ ಒಂದು ಫೋನ್ ನಂಬರ್ ಇಂದ ಇಷ್ಟೆಲ್ಲಾ ಸಂಭವಿಸಿದೆ. ಒಟ್ಟಿನಲ್ಲಿ ಒಂದು ಸಿನಿಮಾ ಚೆನ್ನಾಗಿ ಹೋಗೋವಾಗ ಒಂದಲ್ಲಾ ಒಂದು ಅಡೆತಡೆಗಳು ಆಗೋದು ಸಹಜ. ನಿರ್ಮಾಪಕರು ಈ ಸಮಸ್ಯೆಯನ್ನು ಹೇಗೆ ಪರಿಹಾರ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.



