ಮನುಷ್ಯರ ಮೇಲೆ ಆನೆ ದಾಳಿ ಯಾಕೆ ಮಾಡುತ್ತವೆ..? ಹಠಾತ್ತಾಗಿ ಮನುಷ್ಯರ ಮೇಲೆ ಆನೆ ದಾಳಿ ಆಗಿದರೆ ನಾವು ಏನು ಮಾಡಬೇಕು..? ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ..? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳೋಣ ಬನ್ನಿ.
ಆನೆ ಹಠಾತ್ತಾಗಿ ನಮಗೆ ಕಾಣಿಸಿಕೊಂಡರೆ ಅಥವಾ ನಮ್ಮ ಎದರು ಬಂದು ಬಿಟ್ಟರೆ ಏನು ಮಾಡಬೇಕು..?. ಆನೆ ನಾವಿರುವ ಸ್ಥಳದಿಂದ 30 ಮೀಟರ್ ಹತ್ತಿರದಲ್ಲೇ ಕಾಣಿಸಿದರೆ ಕೂಡಲೇ ನಾವು ಎಚ್ಚೆತ್ತುಕೊಳ್ಳಬೇಕು.. ಆದಷ್ಟು ಇಳಿಜಾರಿನ ಪ್ರದೇಶದ ಕಡೆಗೆ ಓಡಿಹೋಗಬೇಕು.. ಯಾಕಂದ್ರೆ, ಆನೆ ಎತ್ತರದ ಪ್ರದೇಶಕ್ಕೆ ಹೋಗುವಷ್ಟು ವೇಗವಾಗಿ ಇಳಿ ಜಾರಿನಲ್ಲಿ ಇಳಿಯುವುದಿಲ್ಲ. ಇಳಿಜಾರಿನಲ್ಲಿ ಅದು ನಿಧಾನವಾಗಿ ನಡೆಯುತ್ತದೆ.. ಹೀಗಾಗಿ, ಇಳಿಜಾರು ಪ್ರದೇಶದಲ್ಲಿ ಓಡಿದರೆ ಆನೆಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳುವುದು ಸುಲಭವಾಗುತ್ತದೆ..
ಆನೆ ದಾಳಿ ಮಾಡುವ ಸಾಧ್ಯತೆ ಇದೆ ಎಂಬುದನ್ನು ಅರಿವುದು ಹೇಗೆ..? ಆನೆಯ ಪ್ರವರ್ತನೆಯ ಆಧಾರದ ಮೇಲೆ ಅದು ದಾಳಿ ಮಾಡುತ್ತದೋ ಇಲ್ಲವೋ ಎಂಬುದನ್ನು ಗುರುತಿಸಬಹುದು ಎಂದು ಅರಣ್ಯ ಸಿಬ್ಬಂದಿ ಹೇಳುತ್ತಾರೆ.. ಆನೆ ತನ್ನ ಕಿವಿಗಳನ್ನು ಹಿಂದಕ್ಕೆ ಮಡಚಿಕೊಂಡು, ಎಡಕಾಲನ್ನು ನೆಲಕ್ಕೆ ಉಜ್ಜುತ್ತಿದ್ದರೆ ಅದು ಅಟ್ಯಾಕ್ ಮಾಡೋದಕ್ಕೆ ಸಿದ್ಧವಾಗಿದೆ ಎಂದರ್ಥ. ಇಂತಹ ಸಂದರ್ಭದಲ್ಲಿ ಅದರಿಂದ ತಪ್ಪಿಸಿಕೊಳ್ಳಲು ನೇರವಾಗಿ ಓಡುವ ಬದಲು ಜಿಗ್ಜಾಗ್ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಬೇಕು. ಯಾಕಂದ್ರೆ ಆನೆಗಳು ನೇರವಾಗಿ ಮಾತ್ರವೇ ಓಡುತ್ತವೆ. ಹೀಗಾಗಿ ನಾವು ಜಿಗ್ಜಾಗ್ ಮಾದರಿಯಲ್ಲಿ ಓಡಿದರೆ ಆನೆಗಳಿಂದ ನಾವು ತಪ್ಪಿಸಿಕೊಳ್ಳಲು ಸುಲಭವಾಗುತ್ತದೆ..

ಇನ್ನು ಬಿಳಿ ಬಣ್ಣದ ಬಟ್ಟೆಗಳನ್ನು ನಾವು ಧರಿಸಿದ್ದರೆ ಅವುಗಳನ್ನು ಕಳಚುವುದು ಒಳ್ಳೆಯದು. ಯಾಕಂದ್ರೆ ಆನೆ ಬಿಳಿ ಬಣ್ಣವನ್ನು ಬೇಗ ಗುರುತಿಸುತ್ತದೆ.. ಅದು ಅಟ್ಯಾಕ್ ಮಾಡೋದಕ್ಕೆ ಬಿಳಿ ಬಟ್ಟೆ ಸಹಕಾರಿಯಾಗಬಹುದು. ಹೀಗಾಗಿ ಬಿಳಿ ಬಟ್ಟೆ ಧರಿಸಿದ್ದರೆ ಅದನ್ನು ಕಳಚಿ ಓಡುವುದು ಒಳ್ಳೆಯದು. ಇಲ್ಲವೇ ನಮ್ಮ ಖಾರದ ಪುಡಿಯಂತಹ ಘಾಟು ಪದಾರ್ಥಗಳೇನಾದರೂ ಇದ್ದರೆ ಅದನ್ನು ಗಾಳಿಯಲ್ಲಿ ಚೆಲ್ಲಬೇಕು. ಆಗ ಆನೆ ಅದರ ಘಾಟಿಗೆ ತಲೆ ತಗ್ಗಿಸುತ್ತದೆ. ಅಷ್ಟರಲ್ಲಿ ನಾವು ಅದರಿಂದ ತಪ್ಪಿಸಿಕೊಂಡು ಬಚಾವಾಗಬಹುದು.
ಆನೆಯ ಸೊಂಡಿಲಿಗೆ ಎಟುಕದಷ್ಟು ಆಳವಾದ ಗುಂಡಿ ಇದ್ದರೆ ಅದರಲ್ಲಿ ಇಳಿದು, ಶಬ್ದ ಮಾಡದಂತೆ ಇದ್ದುಬಿಟ್ಟರೆ ಆನೆ ಸ್ವಲ್ಪ ಹೊತ್ತು ನೋಡಿ ಅಲ್ಲಿಂದ ಹೊರಟುಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಆನೆಗಳಿಗೆ ಜೇನು ನೊಣಗಳ ಶಬ್ದವೆಂದರೆ ವಿಪರೀತ ಭಯ. ಜೇನು ನೊಣಗಳು ಆನೆಯ ಮೂಗಿನೊಳಗೆ, ಬಾಯಿಯೊಳಗೆ ಹೋಗಿ ಕಿರಿಕಿರಿ ಉಂಟು ಮಾಡುತ್ತವೆ. ಹೀಗಾಗಿ ಜೇನು ನೊಣಗಳ ಶಬ್ದ ಕೇಳಿದರೆ ಆನೆಗಳು ಭಯ ಬೀಳುತ್ತವೆ.. ಹೀಗಾಗಿ ಆನೆ ನಮ್ಮನ್ನು ಓಡಿಸಿಕೊಂಡು ಬರುವ ಸಂದರ್ಭದಲ್ಲಿ, ಅಲ್ಲೇನಾದರೂ ಜೇನುಗೂಡು ಕಾಣಿಸಿದರೆ, ಅದಕ್ಕೆ ಒಂದು ಕಲ್ಲು ಎಸೆದರೆ ಸಾಕು.. ಜೇನು ನೊಣಗಳ ಶಬ್ದಕ್ಕೆ ಆನೆ ಅಲ್ಲಿಂದ ಎಸ್ಕೇಪ್ ಆಗುತ್ತದೆ. ಆದ್ರೆ ಹೆಜ್ಜೇನಿಗೆ ಕಲ್ಲು ಹೊಡೆಯುವುದು ಸೂಕ್ತವಲ್ಲ.

ಆನೆ ಒಂಟಿಯಾಗಿದೆಯಾ ಅಥವಾ ಗುಂಪಿನಲ್ಲಿದೆಯಾ ಅನ್ನೋದು ಕೂಡಾ ಇಂಪಾರ್ಟೆಂಟ್ ಆಗುತ್ತದೆ.. ಇತರ ಪ್ರಾಣಿಗಳ ರೀತಿಯಲ್ಲೇ ಆನೆಗಳು ಕೂಡಾ ಮರಿ ಆನೆಗಳ ಜೊತೆ ಇರುವಾಗ ತುಂಬಾ ಪ್ರಮಾದಕರವಾಗಿರುತ್ತವೆ.. ಆ ಸಮಯದಲ್ಲಿ ಅವುಗಳ ವರ್ತನೆ ಭಯ ಹುಟ್ಟಿಸುತ್ತದೆ.. ಪಟಾಕಿಗಳನ್ನು ಸಿಡಿಸಿದರೆ ಆನೆಗಳು ಬೆದರುತ್ತವೆ ನಿಜ.. ಆದ್ರೆ ಮರಿ ಆನೆಗಳ ಜೊತೆ ಇರುವಾಗ ಪಟಾಕಿಗಳನ್ನು ಸಿಡಿಸಿದರೆ ಅವು ತುಂಬಾನೇ ಇರಿಟೇಟ್ ಆಗುತ್ತವೆ.. ಆಗ ಪಟಾಕಿಗಳಿಗೂ ಹೆದರದೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ..
ಮನುಷ್ಯರ ಮೇಲೆ ಆನೆ ದಾಳಿ ಕೆಲವೊಂದು ಕಾರಣಗಳಿಂದ ಸಂಭವಿಸುತ್ತದೆ. ಆನೆಗಳ ಕಣ್ಣಿಗೆ ಕಣ್ಣಿಟ್ಟು ನೇರವಾಗಿ ನೋಡುವುದು ಕೂಡಾ ತಪ್ಪು. ಇನ್ನು ಮದ್ಯ ಸೇವನೆ ಮಾಡಿದ್ದರೆ ಅದರ ಸ್ಮೆಲ್ಗೆ ಆನೆಗಳು ಅಟ್ರ್ಯಾಕ್ಟ್ ಆಗಿ ಮನುಷ್ಯರ ಮೇಲೆ ಆನೆ ದಾಳಿ ಮಾಡುತ್ತವೆ. ಹೀಗಾಗಿ, ಕುಡುಕರು ಆನೆಗಳಿಂದ ದೂರ ಇರುವುದು ಒಳ್ಳೆಯದು. ಸಾಕು ಆನೆಗಳ ಬಳಿಗೆ ಕುಡಿದು ಹೋಗುವುದು ಕೂಡಾ ಸಮಸ್ಯೆಗೆ ದಾರಿ ಮಾಡಿಕೊಡಬಹುದು.
ಆನೆಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಅವು ನಮಗಿಂತ ವೇಗವಾಗಿ ಓಡುವುದಿಲ್ಲ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಅದು ತಪ್ಪು.. ಆನೆಗಳು ನಮಗಿಂತ ವೇಗವಾಗಿ ಓಡುತ್ತವೆ.. ಆನೆಗಳು ನೂರು ಮೀಟರ್ ದೂರದಲ್ಲಿವೆ ಬಿಡು.. ಏನು ಮಾಡುತ್ತವೆ ಎಂದು ಅಜಾಗರೂಕತೆ ಪ್ರದರ್ಶಿಸಿದರೆ ಅಪಾಯ ಹೆಚ್ಚು. ಯಾಕಂದ್ರೆ ಅವುಗಳಿಗೆ ನಮಗಿಂತ ವೇಗಬಾಗಿ ಓಡಿ ನಮ್ಮ ಮೇಲೆ ಅಟ್ಯಾಕ್ ಮಾಡುವ ಶಕ್ತಿ ಇದೆ.. ಹೀಗಾಗಿ ಆದಷ್ಟು ಕಾಡಾನೆಗಳಿಗೆ ದೂರವಾಗಿ ಇರುವುದು ಒಳ್ಳೆಯದು.

ಎಂತಹ ಆನೆಗಳು ಹೆಚ್ಚು ಅಪಾಯಕರ.?
ಕೆಲವು ಸಂದರ್ಭಗಳಲ್ಲಿ ಒಂಟಿ ಆನೆ ಅತ್ಯಂತ ಅಪಾಯಕಾರಿಯಾಗಿರುತ್ತವೆ.. ಅವುಗಳನ್ನು ಟಸ್ಕರ್ ಅಂತ ಕರೆಯುತ್ತಾರೆ.. ಗುಂಪಿನಿಂದ ಬೇರ್ಪಟ್ಟು ಆಚೆ ಬರುವ ಒಂಟಿ ತುಂಬಾನೇ ಡೇಂಜರ್. ಗುಂಪಿನಲ್ಲಿದ್ದ ಆನೆಗಳಿಗಿಂತ ಏಕಾಂಗಿಯಾಗಿರುವ ಆನೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ರಾತ್ರಿ ಸಮಯದಲ್ಲಿ ಗೊತ್ತಿಲ್ಲದೆ ಆನೆಗಳ ಬಳಿ ಹೋದರೂ, ಟಾರ್ಚ್ನಂತಹ ಬೆಳಕು ಬರುವ ವಸ್ತುಗಳನ್ನು ಬಳಸಬಾರದು. ಹಠಾತ್ತಾಗಿ ಅವು ಬೆಳಕು ನೋಡಿದರೂ ಆನೆಗಳು ನಮ್ಮ ಮೇಲೆ ಅಟ್ಯಾಕ್ ಮಾಡುತ್ತವೆ. ಹೀಗಾಗಿ ನಾವು ಆದಷ್ಟು ಆನೆಗಳಿಗೆ ದೂರವಾಗಿಯೇ ಇರಬೇಕು. ಅವುಗಳನ್ನು ರೇಗಿಸುವುದಕ್ಕೆ ಹೋಗಬಾರದು.
ಆನೆಗಳನ್ನು ನಮ್ಮನ್ನು ಗುರುತು ಹಿಡಿದು ದಾಳಿ ಮಾಡುತ್ತವಾ..?
ಯಾರಾದರೂ ತೊಂದರೆ ಕೊಟ್ಟರೆ ಮಾತ್ರ ಆನೆಗಳು ಅವರನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತವೆ. ಅಂತಹವರು ಎಷ್ಟು ಜನರ ಮಧ್ಯೆ ಇದ್ದರೂ ಕೂಡಾ ಅವರನ್ನು ಗುರುತಿಸಿ ದಾಳಿ ಮಾಡುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳತ್ತಾರೆ.. ನಾವು ಸಮತಟ್ಟಾದ ನೆಲದ ಮೇಲೆ ಮಾತ್ರ ಸುಲಭವಾಗಿ ನಡೆಯುತ್ತೇವೆ. ಆದ್ರೆ ಆನೆಗಳು ಎಂತಹ ಪ್ರಾಂತ್ಯದಲ್ಲಿ ಕೂಡಾ ಒಂದೇ ವೇಗದಲ್ಲಿ ನಡೆಬಲ್ಲವು.

2025 ಜನವರಿ ಕೊನೆಯಲ್ಲಿ ತಿರುಪತಿ ಜಿಲ್ಲೆ ಚಂದ್ರ
ಅರಣ್ಯ ಇಲಾಖೆಗೆ ಸೇರಿದ ವ್ಯಕ್ತಿಯೊಬ್ಬನನ್ನು ಆನೆ ತುಳಿದು ಸಾಯಿಸಿತ್ತು.. ತನಿಖೆ ಮಾಡಿದಾಗ ಆತ ಆನೆಗಳ ಜೊತೆ ಹಲವಾರು ಬಾರಿ ಮಿಸ್ ಬಿಹೇವ್ ಮಾಡಿದ್ದ ಎಂದು ಗೊತ್ತಾಗಿದೆ. ಹೀಗಾಗಿಯೇ ಅಲ್ಲಿ 20 ಮಂದಿ ಇದ್ದರೂ ಕೂಡಾ ಆತನೊಬ್ಬನನ್ನೇ ಆನೆ ಸಾಯಿಸಿತ್ತು. ಇದರಿಂದ ಆನೆಗಳ ಜ್ಞಾಪಕಶಕ್ತಿ ಹೇಗಿರುತ್ತೆ ಅನ್ನೋದು ಗೊತ್ತಾಗಲಿದೆ..
ಸಾಮಾನ್ಯವಾಗಿ ಆನೆ ಗಂಟೆಗೆ ಹತ್ತು ಕಿಲೋ ಮೀಟರ್ ವೇಗದಲ್ಲಿ ನಡೆಯುತ್ತದೆ.. ಆದ್ರೆ ಅದು ಓಡಲು ಶುರು ಮಾಡಿದರೆ ಗಂಟೆಗೆ 40 ಕಿಲೋ ಮೀಟರ್ ವೇಗದಲ್ಲಿ ಓಡಬಲ್ಲದು.

ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳೇನು..?
ಆನೆಗಳ ಓಡಾಟವಿರುವ ಪ್ರಾಂತ್ಯಗಳಲ್ಲಿ ಎಷ್ಟೇ ಕೆಲಸಗಳಿದ್ದರೂ ಸಂಜೆ 5ರ ನಂತರ ಹೊರಗೆ ಕಾಲಿಡುವುದು ಒಳ್ಳೆಯದಲ್ಲ. ಒಂದು ವೇಳೆ ಹೋಗಲೇಬೇಕಾದ ಅನಿವಾರ್ಯತೆ ಎದುರಾದರೆ ಫ್ಲಾಶ್ ಲೈಟ್ ತೆಗೆದುಕೊಂಡು ಹೋದರೆ ಉತ್ತಮ. ಯಾಕಂದ್ರೆ ಆನೆಗಳು ಕತ್ತಲೆಯಲ್ಲಿ ಕಾಣಿಸುವುದಿಲ್ಲ. ಅದರ ಬಣ್ಣ ಹಾಗಿರುತ್ತದೆ.. ಹೀಗಾಗಿ ಹತ್ತಿರಕ್ಕೆ ಹೋಗುವ ತನಕ ಅವು ಕಾಣಿಸುವುದಿಲ್ಲ. ಹೀಗಾಗಿ, ಫ್ಲಾಶ್ ಲೈಟ್ ಮೂಲಕ 100 ಮೀಟರ್ವರೆಗೂ ಗಮನಿಸುತ್ತಾ ಹೋಗಬೇಕು. ಇನ್ನು ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದರೆ, ಒಣಮೆಣಸಿನ ಕಾಯಿಗಳನ್ನು ಬಳಸಿ ಬೆಂಕಿ ಹಾಕಿದರೆ ಅದರ ಘಾಟಿಗೆ ಅವು ಆ ಕಡೆ ಬರೋದಿಲ್ಲ..