ಐಟಿಬಿಟಿ ಸಿಟಿ, ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರು ಕೋಟ್ಯಾಂತರ ಮಂದಿಯನ್ನ ತನ್ನಲ್ಲಿ ಅಡಗಿಸಿಕೊಂಡಿದೆ. ಆ ಮಂದಿಯೆಲ್ಲಾ ಸಂಚರಿಸಲು ರಸ್ತೆಗಿಳಿದ್ರೆ ರಸ್ತೆ ದಟ್ಟಣೆಯಾಗೋದು ಸಹಜವಲ್ಲವಾ. ನೂರಾರು ಗಾಡಿಗಳನ್ನು ಬೆಂಗಳೂರಿನ ರಸ್ತೆಗಳ ಮೇಲೆ ನೋಡಬಹುದು. ಕ್ಷಣಕ್ಷಣಕ್ಕೂ ಸಿಗ್ನಲ್ಗಳು ಬಿದ್ದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವಷ್ಟರಲ್ಲಿ ಉಸ್ಸಪ್ಪಾ ಎನ್ನಿಸುತ್ತದೆ. ಇದೀಗ ಬೆಂಗಳೂರು ಟ್ರಾಫಿಕ್ ಪೊಲೀಸರು ಸಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇ ಬೇಕೆಂದು ನಿರ್ಧರಿಸಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನ ಮೊರೆ ಹೋಗಿದ್ದಾರೆ. AI ಚಾಲಿತ ಸಿಗ್ನಲ್ ಸಿಸ್ಟಮ್ಗಳನ್ನು ಅಳವಡಿಸಿಕೊಂಡಿದ್ದು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶುಭಂ ಹೇಳಲು ಮುಂದಾಗಿದ್ದಾರೆ.
ಈ AI ಚಾಲಿತ ಸ್ಮಾರ್ಟ್ ಸಿಗ್ನಲ್ಗಳು ಜನರಿಗೆ ದೀರ್ಘಕಾಲ ಜನದಟ್ಟಣೆಯ ರಸ್ತೆಯಲ್ಲಿ ನಿಲ್ಲುವ ತೊಂದರೆಯಿಂದ ಮುಕ್ತಿ ನೀಡುತ್ತದೆ. ವೆಹಿಕಲ್ ಆಕ್ಟಿವಿಟಿ ಕಂಟ್ರೋಲ್(VAC) ಮಾಡ್ಯೂಲ್ಸ್ಗಳನ್ನು ಅಳವಡಿಸುವ ಮೂಲಕ ನೈಜ-ಸಮಯದ ಸಂಚಾರ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಹಿಂದಿನಂತೆ ಪೂರ್ವ ನಿಗದಿಗೊಳಿಸಿದ ಟೈಮ್ರ್ಗಳ ಬದಲಿಗೆ ಈಗ ವಾಹನ ಚಟುವಟಿಕೆ ಮೇಲೆ ನಿಗಾ ಇರಿಸಲು ಪ್ರತಿ ಸಿಗ್ನಲ್ಗಳಲ್ಲಿಯೂ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
VAC ಹೇಗೆ ಕೆಲಸ ಮಾಡುತ್ತದೆ?
ಒಂದು ರಸ್ತೆಯಲ್ಲಿ ಇತರ ರಸ್ತೆಗಳಿಗಿಂತ ಹೆಚ್ಚು ವಾಹನ ದಟ್ಟಣೆಯಿದ್ದರೆ, ಅಲ್ಲಿನ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಿಗ್ನಲ್ ಸ್ವಯಂಚಾಲಿತವಾಗಿ ಹಸಿರು ಸಿಗ್ನಲ್ಗೆ ತಿರುಗಿ ಆ ಪಥದ ವಾಹನ ಸಂಚಾರರು ಮುಂದೆ ಸಾಗಲು ಅನುವು ಮಾಡಿಕೊಡುತ್ತದೆ. ಹಾಗೆಯೇ, ಅವಶ್ಯಕತೆ ಬಂದರೆ ಪೊಲೀಸರು ಸಿಗ್ನಲನ್ನು ನಿಯಂತ್ರಿಸಲು ಸಹ ಅವಕಾಶವಿದೆ. ಇದರಿಂದ ದೀರ್ಘ ಸಮಯದ ರಸ್ತೆದಟ್ಟಣೆಯಲ್ಲಿ ಬಂಧಿಯಾಗಿರುವ ವಾಹನ ಸವಾರರು ಬಹುಬೇಗ ಸಿಗ್ನಲನ್ನು ದಾಟಬಹುದಾಗಿದೆ. ಇನ್ನು ಬೆಂಗಳೂರು ಸಂಚಾರ ಪೊಲೀಸರು ೨೦೨೨ರಲ್ಲಿ ೫೦ ಸ್ಥಳಗಳಲ್ಲಿ ಅಡಾಪ್ಟಿವ್ ಸಿಗ್ನಲ್ಗಳನ್ನು ಅಳವಡಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ವರದಿಯ ಪ್ರಕಾರ ಈ ಯೋಜನೆಗೆ ಜಪಾನ್ ಸರ್ಕಾರದಿಂದ ಅನುದಾನ ದೊರೆತಿದ್ದು, ೨೦೨೧ ಜೂನ್ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

MNL ಎಂದರೆ….
ಮ್ಯಾನುವಲ್ ಮೋಡ್ ಎಂದರ್ಥ. ಈ ಮೋಡ್ನಲ್ಲಿ ಪೊಲೀಸರೇ ಸಿಗ್ನಲ್ ಕಂಟ್ರೋಲ್ ಮಾಡುತ್ತಿರುತ್ತಾರೆ. ಯಾಕೆ ಎಂದು ಯೋಚಿಸುತ್ತಿದ್ದರೆ, ಒಮ್ಮೊಮ್ಮೆ ಆಂಬುಲೆನ್ಸ್, ಗಣ್ಯವ್ಯಕ್ತಿಗಳ ವಾಹನಗಳು ಯಾವುದೇ ಮಾರ್ಗದಲ್ಲಿ ಸಂಚರಿಸುತ್ತಿದ್ದರೆ ಆ ಮಾರ್ಗದ ವಾಹನ ದಟ್ಟಣೆಯನ್ನು ಶೀಘ್ರವಾಗಿ ತೆರವುಗೊಳಿಸಲು ಅನುಕೂಲವಾಗುವಂತೆ ಈ ಮೋಡನ್ನು ಸಿದ್ಧಗೊಳಿಸಲಾಗಿದೆ.
ಕಳೆದ ವರ್ಷ ಅಳವಡಿಸಿದ್ದ ಈ ಸುಧಾರಿತ ಟ್ರಾಫಿಕ್ ಕಂಟ್ರೋಲ್ ಸಿಗ್ನಲ್ ಸಿಸ್ಟಮ್ಗಳಲ್ಲಿ ಟೈಮರ್ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಸಿಗ್ನಲ್ನಲ್ಲಿ ನಿಂತಿರುತ್ತಿದ್ದ ವಾಹನ ಸವಾರರು ಯಾವಾಗ ಹಸಿರು ಬಣ್ಣಕ್ಕೆ ತಿರುಗುತ್ತದೆ ಎಂದು ಕಾಯಬೇಕಿತ್ತು. ಆದರೆ ಇತ್ತೀಚೆಗೆ ಅಳವಡಿಸುತ್ತಿರುವ ಸಿಗ್ನಲ್ ಸಿಸ್ಟಮ್ಗಳಲ್ಲಿ ಟೈಮರ್ ವ್ಯವಸ್ಥೆ ಇರುವುದರಿಂದ ಯಾವಾಗ ಹಸಿರು ಸಿಗ್ನಲ್ ಬರುತ್ತದೆ ಎಂದು ತಿಳಿಯಲಿದ್ದು ಇಂಧನ ಉಳಿಸಬಹುದಾಗಿದೆ.