ಸಿನಿಮಾದಲ್ಲಿ ನಟಿಸಿ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಳ್ಳುವ ನಟ, ನಟಿಯರೂ ಕೂಡಾ ತೆರೆ ಹಿಂದೆ ಸಾಕಷ್ಟು ಕಷ್ಟ ಅನುಭವಿಸುತ್ತಾರೆ. ಕೆಲವರು ಯಾರೋ ಮಾಡಿದ ತಪ್ಪಿಗೆ ತಾವು ಶಿಕ್ಷೆ ಅನುಭವಿಸುತ್ತಾರೆ. ತಿಳಿದೋ, ತಿಳಿಯದೆಯೋ ಮಾಡಿದ ಒಂದು ತಪ್ಪಿನಿಂದ ಇಡೀ ವೃತ್ತಿ ಜೀವನವೇ ಹಾಳಾಗುವಂಥ ಪರಿಸ್ಥಿತಿ ತಂದುಕೊಂಡಿರುವ ಎಷ್ಟೋ ಉದಾಹರಣೆಗಳಿವೆ. ಅವರಲ್ಲಿ ನಟ ಸುಮನ್ ತಲ್ವಾರ್ ಕೂಡಾ ಒಬ್ಬರು. ವೃತ್ತಿಜೀವನದಲ್ಲಿ ಉತ್ತುಂಗದಲ್ಲಿರುವಾಗ ಅವರ ಜೀವನದಲ್ಲಿ ನಡೆದ ಒಂದೇ ಒಂದು ಘಟನೆ ಜೀವನದ ದಿಕ್ಕನ್ನೇ ಬದಲಿಸಿತು.
ಒಂದು ಕಾಲದಲ್ಲಿ ನಾಯಕ ನಟನಾಗಿ ಮಿಂಚುತ್ತಿದ್ದ ಸುಮನ್ 1985ರಲ್ಲಿ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು. ಒಂದು ವರ್ಷದ ಕಾಲ ಸೆರೆವಾಸ ಅನುಭವಿಸಿದ್ದರು. ಸುಮನ್, ಬಿಲ್ಲವ ಸಮುದಾಯಕ್ಕೆ ಸೇರಿದವರು. ಅವರ ಮಾತೃಭಾಷೆ ತುಳು. ಚೆನ್ನೈನಲ್ಲಿ ಹುಟ್ಟಿ ಬೆಳೆದ ಸುಮನ್ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಜೊತೆಗೆ ಸಂಗೀತ ಕೂಡಾ ಕಲಿತರು. 1978ರಲ್ಲಿ ಸುಮನ್ ಕರುಣೈ ಉಳ್ಳಂ ಎಂಬ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ತಮಿಳು, ತೆಲುಗು ಮಾತ್ರವಲ್ಲ ಕನ್ನಡದ ಬಹಳಷ್ಟು ಸಿನಿಮಾಗಳಲ್ಲಿ ಸುಮನ್ ನಟಿಸಿದ್ದಾರೆ. ಕನ್ನಡದಲ್ಲಿ ಮಿಸ್ಟರ್ ಪುಟ್ಸಾಮಿ, ಒನ್ ಮ್ಯಾನ್ ಆರ್ಮಿ, ನೀಲಾಂಬರಿ, ಬಿಂದಾಸ್, ಅರ್ಜುನ್, ಮಿಂಚಿನ ಓಟ, ಹೋಂ ಮಿನಿಸ್ಟರ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಸುಮನ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ನಾಯಕನಾಗಿ ನಟಿಸುತ್ತಿದ್ದ ಹ್ಯಾಂಡ್ಸಮ್ ಸುಮನ್ಗೆ ಭಾರೀ ಸಂಖ್ಯೆಯ ಅಭಿಮಾನಿಗಳಿದ್ದರು. ಆದರೆ ಒಮ್ಮೆ ಸುಮನ್ ನೀಲಿಚಿತ್ರ ಪ್ರಕರಣವೊಂದರಲ್ಲಿ ಅರೆಸ್ಟ್ ಆದರು. ಆ ಘಟನೆಯನ್ನು ಸುಮನ್ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಬಹುತೇಕ ಸಂದರ್ಶನಗಳಲ್ಲಿ ಸುಮನ್ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. 1985ರಲ್ಲಿ ಒಂದು ದಿನ ಪೊಲೀಸರು ರಾತ್ರೋ ರಾತ್ರಿ ಸುಮನ್ ಮನೆಗೆ ನುಗ್ಗಿ ಅವರನ್ನು ಅರೆಸ್ಟ್ ಮಾಡಿದ್ದರು. ಆ ಸಮಯದಲ್ಲಿ ಸುಮನ್ ಅವರ ಮನೆಯಲ್ಲಿ ಕೆಲವು ನೀಲಿಚಿತ್ರಗಳ ಕ್ಯಾಸೆಟ್ಗಳು ದೊರೆತಿದ್ದಾಗಿ ಸುದ್ದಿ ವರದಿಯಾಗಿತ್ತು. ಅಷ್ಟೇ ಅಲ್ಲದೆ ನಮ್ಮನ್ನು ಅಂಥಹ ಚಿತ್ರಗಳಲ್ಲಿ ನಟಿಸುವಂತೆ ಒತ್ತಾಯಿಸಿದ್ದಾಗಿ ಮೂವರು ಯುವತಿಯರು ಆರೋಪಿಸಿದ್ದರು.
ನಾನು ಯಾವ ತಪ್ಪೂ ಮಾಡಿರಲಿಲ್ಲ, ಯಾರೋ ನನ್ನನ್ನು ಬೇಕಂತಲೇ ಈ ರೀತಿಯ ಪ್ರಕರಣದಲ್ಲಿ ಸಿಲುಕಿಸಿದ್ದರು. ರಾತ್ರಿ ಸಮಯದಲ್ಲಿ ಮನೆಗೆ ನುಗ್ಗಿ ಮಾತನಾಡಲೂ ಅವಕಾಶ ಕೊಡದೆ ಪೊಲೀಸರು ಅರೆಸ್ಟ್ ಮಾಡಿದ್ದರು. ಗೂಂಡಾ ಕಾಯ್ದೆ ಅಡಿ ಕೇಸ್ ದಾಖಲಾಗಿತ್ತು. ಎಷ್ಟು ಪ್ರಯತ್ನಿಸಿದರೂ ನನಗೆ ಬೇಲ್ ಕೂಡಾ ದೊರೆಯಲಿಲ್ಲ. ಸಾಮಾನ್ಯ ಕೈದಿಯಂತೆ ನನ್ನನ್ನು ಚೆನ್ನೈ ಜೈಲಿನಲ್ಲಿ ಇಟ್ಟಿದ್ದರು. ಆ ಸಮಯದಲ್ಲಿ ನಾನು ಸಾಕಷ್ಟು ಮಾನಸಿಕ ಯಾತನೆಗೆ ಒಳಗಾಗಿದ್ದೆ. ನರಕ ಅನುಭವಿಸಿದ್ದೆ. ಕೊನೆಗೆ ಸುಪ್ರೀಂ ಕೋರ್ಟ್ನಲ್ಲಿ ಹೋರಾಡಿ ಜೈಲಿನಿಂದ ಹೊರಬಂದೆ ಎಂದು ಸುಮನ್ ಇಂಟರ್ವ್ಯೂಗಳಲ್ಲಿ ಹೇಳುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ನಾನು ಯಾರಿಂದ ಜೈಲಿಗೆ ಹೋಗಬೇಕಾಯ್ತು ಎಂಬುದನ್ನೂ ಹೇಳಿದ್ದಾರೆ. ಸುಮನ್ ಅವರಿಗೆ ಆಪ್ತರಾಗಿದ್ದ ದಿವಾಕರ್ ಎಂಬಾತ ಕ್ಯಾಸೆಟ್ ಅಂಗಡಿ ನಡೆಸುತ್ತಿದ್ದರು. ಸುಮನ್ ಅದೇ ಅಂಗಡಿಯಲ್ಲಿ ಸಿನಿಮಾ ಕ್ಯಾಸೆಟ್ಗಳನ್ನು ಖರೀದಿಸಿದ್ದರು. ಒಮ್ಮೆ ಆತ ನನ್ನ ಕಾರು ಕೇಳಿದ್ದ, ಸ್ನೇಹಿತ ಎಂಬ ಕಾರಣಕ್ಕೆ ಕೊಟ್ಟಿದ್ದೆ. ಆದರೆ ಆತ ನೀ*ಲಿಚಿತ್ರಗಳ ವ್ಯವಹಾರಕ್ಕೆ ನನ್ನ ಕಾರ್ ಬಳಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ನಾನು ಅವನಿಗೆ ಆಪ್ತನಾಗಿದ್ದರಿಂದ ಅದರಲ್ಲಿ ನಾನೂ ಶಾಮೀಲಾಗಿದ್ದೆ ಎಂದು ನನ್ನನ್ನೂ ಅರೆಸ್ಟ್ ಮಾಡಲಾಗಿತ್ತು ಎಂದು ಸುಮನ್ ಆ ವ್ಯಕ್ತಿಯ ಬಗ್ಗೆ ಹೇಳಿದ್ದಾರೆ.

ಸುಮನ್ ನಾಯಕನಾಗಿ ಜನ ಮನ್ನಣೆ ಗಳಿಸುತ್ತಿದ್ದ ಸಮಯದಲ್ಲಿ ಅವರ ಏಳಿಗೆ ಸಹಿಸಲಾಗದೆ ಚಿತ್ರರಂಗದಲ್ಲಿರುವವರೇ ಇದನ್ನೆಲ್ಲಾ ಮಾಡಿಸಿದ್ದು ಎಂಬ ಮಾತೂ ಕೇಳಿಬಂದಿತ್ತು. ಸುಮನ್ ಜೈಲಿನಿಂದ ಬಿಡುಗಡೆ ಆದ ನಂತರ ಅವರ ಹೀರೋ ಇಮೇಜ್ ಹಾಳಾಗಿತ್ತು. ಪೋಷಕ ಪಾತ್ರಗಳಿಗೆ ಮಾತ್ರ ಸೀಮಿತರಾದರು. ಇದು ನಿಜಕ್ಕೂ ಸಿನಿಮಾರಂಗದವರು ಮಾಡಿಸಿದ್ದಾ? ಅವರ ಸ್ನೇಹಿತ ದಿವಾಕರ್ ಮಾಡಿದ ತಪ್ಪಿನಿಂದ ಆದದ್ದಾ? ಅಥವಾ ಬೇರೆ ಏನು ಕಾರಣ ಇರಬಹುದು ಎಂಬ ಸತ್ಯ ಮಾತ್ರ ಇಂದಿಗೂ ಯಾರಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ನಾಯಕನಾಗಿ ಮಿಂಚಬೇಕಿದ್ದ ಸುಮನ್, ಆ ಒಂದು ಘಟನೆಯಿಂದಾಗಿ ವೃತ್ತಿ ಜೀವನ, ವೈಯಕ್ತಿಕ ಜೀವನ ಎರಡರಲ್ಲೂ ತೊಂದರೆ ಅನುಭವಿಸಿದ್ದಂತೂ ನಿಜ.
ಸುಮನ್ ಈಗ ಪತ್ನಿ ಶಿರಿಶ ತಲ್ವಾರ್ ಹಾಗೂ ಪುತ್ರಿ ಜೊತೆ ಚೆನ್ನೈನಲ್ಲಿ ನೆಲೆಸಿದ್ದಾರೆ. ರಾಜಕೀಯದಲ್ಲೂ ಸುಮನ್ ಸಕ್ರಿಯರಾಗಿದ್ದು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ರಿದಮ್ ಎಂಬ ಕನ್ನಡ ಚಿತ್ರದಲ್ಲಿ ಸುಮನ್ ನಾಯಕಿ ತಂದೆ ಪಾತ್ರದಲ್ಲಿ ನಟಿಸುತ್ತಿದ್ದಾರೆ.