ದಿನದಿಂದ ದಿನಕ್ಕೆ ಒಂದಲ್ಲಾ ಒಂದರ ದರ ಏರಿಕೆಯಾಗುತ್ತಿರೋದು ಸದ್ಯದ ಪರಿಸ್ಥಿತಿಯಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. 2025 ಪ್ರಾರಂಭವಾಗಿದ್ದೇ ಆಗಿದ್ದು, ಬಸ್ ಟಿಕೆಟ್ ದರ, ಮೆಟ್ರೋ ಟಿಕೆಟ್ ದರ ಜಾಸ್ತಿಯಾಗಿ ಜನರು ಪರದಾಡುವಂತಾಯಿತು. ಅದರ ಬೆನ್ನಲ್ಲೇ ಆಟೋ ಕಿ.ಮೀ ದರ ಕೂಡ ಜಾಸ್ತಿಯಾಗುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಹಾಲಿನ ದರ ಏರಿಕೆಗೂ ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಒಟ್ಟಾರೆ, ಜನಸಾಮಾನ್ಯರ ಪ್ರತಿನಿತ್ಯದ ಅವಶ್ಯಕತೆಯ ವಸ್ತು ಹಾಗೂ ಸೇವೆಗಳಿಗೆ ವ್ಯಯಿಸಬೇಕಾಗಿರುವ ಖರ್ಚು ಆಕಾಶಕ್ಕೇರುತ್ತಿದ್ರೆ, ಶಾಸಕರಿಗೆ ಮಾತ್ರ ಬಂಪರ್ ಲಾಟರಿ ಹೊಡೆದಿದೆ.
ಹೌದು. ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದ್ರೆ ಶಾಸಕರಿಗೆ ಸಂಬಳದಲ್ಲಿ ಹೈಕಾಗಿದ್ದು ಶಾಸಕ ಮಹಾಶಯರನ್ನು ತಣ್ಣಗೆ ಮಾಡಿದೆ. ರಾಜ್ಯ ಸರ್ಕಾರ ಶಾಸಕರ ಸಂಬಳವನ್ನು ಹೆಚ್ಚಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಹ ಸಂಸದರ ಸಂಬಳವನ್ನು ಹೆಚ್ಚಿಸಿದೆ. ಕೇವಲ ಹಾಲಿ ಸಂಸದರಿಗೆ ಮಾತ್ರವಲ್ಲ, ಮಾಜಿ ಸಂಸದರ ಪಿಂಚಣಿ ಮೊತ್ತವನ್ನು ಏರಿಸಿದೆ.

ಶೇಕಡ 24ರಷ್ಟು ವೇತನ ಹೆಚ್ಚಳ:
ಕೇಂದ್ರ ಸರ್ಕಾರ ಸಂಸತ್ತು ಸದಸ್ಯರ ವೇತನ ಹಾಗೂ ಮಾಜಿ ಸಂಸತ್ತು ಸದಸ್ಯರ ಪಿಂಚಣಿಯನ್ನು ಪರಿಷ್ಕರಿಸುವಂತೆ ಘೋಷಿಸಿದೆ. ಹಾಲಿ ಸಂಸದರ ವೇತನದಲ್ಲಿ ಶೇ.24ರಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತಂತೆ ಸಂಸದೀಯ ವ್ಯವಹಾರಗಳ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಹಾಲಿ ಸದಸ್ಯರಿಗೆ ದಿನಭತ್ಯೆ ಹಾಗೂ ಮಾಜಿ ಸಂಸದರ ಸೇವಾ ಅವಧಿಗೆ ಅನುಗುಣವಾಗಿ ಪಿಂಚಣಿ ಹಾಗೂ ಹೆಚ್ಚುವರಿ ಪಿಂಚಣಿಯನ್ನು ಹೆಚ್ಚಿಸಿರುವುದಾಗಿ ತಿಳಿಸಿದೆ. 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿದ ಹಣದುಬ್ಬರ ಸೂಚ್ಯಂಕದ ಆಧಾರದ ಮೇಲೆ ಸಂಸತ್ತಿನ ಸದಸ್ಯರ ವೇತನ, ಭತ್ಯೆ ಹಾಗೂ ಪಿಂಚಣಿಯನ್ನು ಹೆಚ್ಚಿಸಲಾಗಿದೆ.

ಏರಿಕೆಗೊಂಡಿರುವ ವೇತನ, ಭತ್ಯೆ ವಿವರ:
ಸಂಸದರ ಮಾಸಿಕ ವೇತನವನ್ನು 1 ಲಕ್ಷದಿಂದ 1,24,೦೦೦ಕ್ಕೆ ಹೆಚ್ಚಿಸಲಾಗಿದೆ. ದಿನಭತ್ಯೆಯನ್ನು 2,೦೦೦ದಿಂದ 2,5೦೦ಕ್ಕೆ ಹೆಚ್ಚಿಸಲಾಗಿದೆ. ಇನ್ನು ಮಾಜಿ ಸಂಸದರ ಪಿಂಚಣಿಯನ್ನು ತಿಂಗಳಿಗೆ ನೀಡಲಾಗುತ್ತಿದ್ದ 25,೦೦೦ ರೂಪಾಯಿಯಿಂದ 31,೦೦೦ ರೂಪಾಯಿಗೆ ಹೆಚ್ಚಿಸಲಾಗಿದೆ. ಮಾಜಿ ಸಂಸದರ 5 ವರ್ಷಗಳ ಅವಧಿಗೆ ಅನುಗುಣವಾಗಿ ಪ್ರತಿ ವರ್ಷದ ಸೇವೆಗೆ ನೀಡಲಾಗುವ ಹೆಚ್ಚುವರಿ ಪಿಂಚಣಿಯನ್ನು 2,000ದಿಂದ 2,500ಕ್ಕೆ ಹೆಚ್ಚಿಸಲಾಗಿದೆ.

2023 ಏಪ್ರಿಲ್ 1ರಿಂದಲೇ ಅನ್ವಯ:
ಈ ಹೊಸ ಸಂಬಳ ಹಾಗೂ ಭತ್ಯೆಗಳು 2023ರ ಏಪ್ರಿಲ್ 1ಕ್ಕೆ ಅನ್ವಯವಾಗುವುದರಿಂದ, ಸಂಸದರು ಈ ಹಿಂದಿನ ತಿಂಗಳುಗಳ ಬಾಕಿ ಮೊತ್ತವನ್ನು ಸಹ ಪಡೆಯಲಿದ್ದಾರೆ. ಇದರರ್ಥ ಸಂಸದರು ಹಾಗೂ ಮಾಜಿ ಸಂಸತ್ ಸದಸ್ಯರು ಏಪ್ರಿಲ್ 2023ರಿಂದ ಹೆಚ್ಚಿದ ಸಂಬಳ, ದೈನಂದಿನ ಭತ್ಯೆ, ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿಯನ್ನು ಪಡೆದುಕೊಳ್ಳಲಿದ್ದಾರೆ. ಈ ಮೂಲಕ ಅವರಿಗೆ ಎರಡು ಬಾಕಿ ಮೊತ್ತ ಸಂದಾಯವಾಗಲಿದೆ.
ಇದಿಷ್ಟು ಕೇಂದ್ರದ ಹೈಕ್ ಡಿಟೈಲ್ಸ್ ಆದ್ರೆ, ರಾಜ್ಯ ಸರ್ಕಾರವು ಸಹ ತನ್ನ ಸಚಿವರು ಹಾಗೂ ಶಾಸಕರ ವೇತನವನ್ನು ಶೇ.100ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದೆ. 2025ರ ಬಜೆಟ್ ಅಧಿವೇಶನದಲ್ಲಿಯೇ ರಾಜ್ಯದ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ಶೇ.100ರಷ್ಟು ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿತ್ತು. ಅದರಂತೆ ಜನಪ್ರತಿನಿಧಿಗಳ ಸಂಬಳ ಏರಿಕೆ ಕಂಡಿದೆ. ಪ್ರಸ್ತುತ ಮುಖ್ಯಮಂತ್ರಿಗಳ ಮಾಸಿಕ ವೇತನ 75,000 ರೂಪಾಯಿಯಿಂದ 1.5 ಲಕ್ಷಕ್ಕೆ ಏರಿಕೆಯಾಗಿದ್ದರೆ, ಸಚಿವರ ವೇತನ 60 ಸಾವಿರದಿಂದ 1.25 ಲಕ್ಷಕ್ಕೆ ದ್ವಿಗುಣಗೊಂಡಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ವೇತನ ಏರಿಕೆ ಪ್ರಕ್ರಿಯೆಯು ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ(ತಿದ್ದುಪಡಿ) ಮಸೂದೆ ಹಾಗೂ ಕರ್ನಾಟಕ ಶಾಸಕಾಂಗ ವೇತನ, ಪಿಂಚಣಿ ಮತ್ತು ಭತ್ಯೆ(ತಿದ್ದುಪಡಿ) ಮಸೂದೆ 2025ರ ಅಡಿಯಲ್ಲಿ, ಯಾವುದೇ ಚರ್ಚೆಯಿಲ್ಲದೆ ಅಂಗೀಕಾರಗೊಂಡಿತ್ತು.
ಜನಪ್ರತಿನಿಧಿಗಳಿಗೂ ಸಹ ಹಣದುಬ್ಬರದ ಬಿಸಿ ತಟ್ಟುತ್ತದೆ. ಅವರು ಸಹ ಕ್ಷೇತ್ರಗಳಲ್ಲಿಯೇ ನೆಲೆಸಬೇಕಗಿರುತ್ತದೆ. ಆದ್ದರಿಂದ ವೇತನ ಹೆಚ್ಚಿಸಿರುವುದರಲ್ಲಿ ತಪ್ಪಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ನೀವೇನು ಹೇಳ್ತೀರಾ…..?