ನವೆಂಬರ್ ಆರಂಭವಾದ ಕೂಡಲೇ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ‘ನೋ ಶೇವ್ ನವೆಂಬರ್’ ಟ್ರೆಂಡಿಂಗ್ ಶುರುವಾಗಿದೆ. ಈ ಅಭಿಯಾನಕ್ಕೂ ಪುರುಷರ ಗಡ್ಡಕ್ಕೂ ನಂಟಿದೆ. ನೋ ಶೇವ್ ನವೆಂಬರ್ ಆಚರಿಸೋದೆಕೆ ಎಂಬುದಕ್ಕೆ ಇಲ್ಲಿದೆ ಉತ್ತರ. ನವೆಂಬರ್ ತಿಂಗಳಲ್ಲಿ ಶೇವ್ ಮಾಡಬಾರದು ಎನ್ನುವ ಆಂದೋಲನದ ಹಿಂದೆ ಒಂದೊಳ್ಳೆಯ ಸಂದೇಶವಿದೆ.
ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ಪುರುಷರು ಗಡ್ಡ ಶೇವ್ ಮಾಡಬಾರದು ಅನ್ನೋದು ಈ ಕ್ಯಾಂಪೇನ್ನ ಸಾರಾಂಶ.ನೋ ಶೇವ್ ನವೆಂಬರ್’ ನಲ್ಲಿ, ಪುರುಷರು 30 ದಿನಗಳವರೆಗೆ ಗಡ್ಡ ತೆಗೆಯುವುದಿಲ್ಲ. ಮುಖದ ಕೂದಲು, ಗಡ್ಡ, ಮೀಸೆ ಹೀಗೆ ಏನೇ ಇದ್ದರೂ ಅದನ್ನು ಶೇವ್ ಮಾಡುವುದಿಲ್ಲ. ಪುರುಷರನ್ನು ಕಾಡುವ ಅನೇಕ ಕಾಯಿಲೆಗಳು ಹಾಗೂ ಪುರುಷರ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಆರಂಭಿಸಲಾಗಿದೆ. ಪುರುಷರಿಗೆ ಮಾರಕವಾಗಿರುವ ಪ್ರಾಸ್ಟೇಟ್ ಕ್ಯಾನ್ಸರ್, ವೃಷಣ ಕ್ಯಾನ್ಸರ್, ಕಳಪೆ ಮಾನಸಿಕ ಆರೋಗ್ಯ ಅಥವಾ ಖಿನ್ನತೆ ಮತ್ತು ದೈಹಿಕ ನಿಷ್ಕ್ರಿಯತೆ ಕುರಿತು ಜಾಗೃತಿ ಮೂಡಿಸಲು ನೋ ಶೇವ್ ನವೆಂಬರ್ ಅನ್ನು ಆಚರಿಸಲಾಗುತ್ತದೆ.
ಈ ಅಭಿಯಾನವು ಪುರುಷರು ತಮ್ಮ ಕೂದಲನ್ನು ಬೆಳೆಸುವಂತೆ ಪ್ರೋತ್ಸಾಹಿಸುತ್ತದೆ. ನವೆಂಬರ್ ತಿಂಗಳ ಪೂರ್ತಿ ಕ್ಷೌರ ಮಾಡಬೇಡಿ ಎಂಬ ಸಂದೇಶ ಇದರಲ್ಲಿದೆ. ಆದಾಗ್ಯೂ ವೃತ್ತಿಪರ ಡ್ರೆಸ್ ಕೋಡ್ ಅನ್ನು ಅನುಸರಿಸುವುದನ್ನು ಹೊರತುಪಡಿಸಿ ಕನಿಷ್ಠ ಟ್ರಿಮ್ಮಿಂಗ್ನೊಂದಿಗೆ, ನೀವು ಈ ಅಭಿಯಾನದಲ್ಲಿ ಭಾಗವಹಿಸಬಹುದು. ಇದು ವಿಶೇಷವಾಗಿ ಪುರುಷರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನು ಹೆಚ್ಚಿಸುತ್ತದೆ. ಈ ಅಭಿಯಾನದ ಮೂಲಕ ಕ್ಯಾನ್ಸರ್ ಸಂಶೋಧನೆಗಳಿಗೆ ಪ್ರಯೋಜನವನ್ನು ನೀಡುವ ಪ್ರಯತ್ನವಾಗಿದೆ.
ಕ್ಯಾನ್ಸರ್ ಬಂದ ವೇಳೆ ಜನರು ಕೂದಲನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ, ನವೆಂಬರ್ನಲ್ಲಿ ಶೇವ್ ಮಾಡಲು ಬಳಕೆ ಮಾಡುವ ಹಣವನ್ನು ಕ್ಯಾನ್ಸರ್ ತಡೆಗಟ್ಟುವಿಕೆಯ ಬಗ್ಗೆ ಶಿಕ್ಷಣ ನೀಡಲು, ಜೀವಗಳನ್ನು ಉಳಿಸಲು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವವರಿಗೆ ನೀಡುವ ಮೂಲಕ ಸಹಾಯ ಮಾಡುವುದು ನೋ ಶೇವ್ ನವೆಂಬರ್ನ ಉದ್ದೇಶ.