ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಮಹಾಕುಂಭ ಚರ್ಚೆಯಲ್ಲಿದೆ. ಪವಿತ್ರ ಸಂಗಮದಲ್ಲಿ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದಾರೆ. ಕೊನೆಯ ಸ್ನಾನವು ಫೆಬ್ರವರಿ 26 ರಂದು ಶಿವರಾತ್ರಿಯ ದಿನದಂದು ನಡೆಯುತ್ತದೆ. ಮಹಾಕುಂಭದಲ್ಲಿ ಸ್ನಾನ ಮಾಡುವ ಉತ್ಸಾಹ ಬಾಲಿವುಡ್ ತಾರೆಯರಲ್ಲೂ ಕಂಡು ಬರುತ್ತಿದೆ. ಒಬ್ಬರ ನಂತರ ಒಬ್ಬರು ಜನಪ್ರಿಯ ತಾರೆಯರು ಮಹಾಕುಂಭ ತಲುಪುತ್ತಿದ್ದಾರೆ. ಇದೀಗ ಬಾಲಿವುಡ್ನಲ್ಲಿ ಬೋಲ್ಡ್ ದೃಶ್ಯಗಳಿಗೆ ಫೇಮಸ್ ಆಗಿರುವ ನಟಿ ಪೂನಂ ಪಾಂಡೆ ಕೂಡ ಮಹಾಕುಂಭದಲ್ಲಿ ಭಾಗವಹಿಸಿದ್ದಾರೆ.
ಪೂನಂ ಪಾಂಡೆ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಮಹಾಕುಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 144 ವರ್ಷಗಳ ನಂತರ ಬಂದ ಪೂರ್ಣ ಮಹಾಕುಂಭದಲ್ಲಿ ಪೂನಂ ಪಾಂಡೆ ಸ್ನಾನ ಮಾಡಿರುವುದು ಕಂಡುಬಂದಿದೆ. ಮೌನಿ ಅಮವಾಸ್ಯೆಯ ದಿನದಂದು ಅವರು ಮಹಾಕುಂಭದಲ್ಲಿ ಸ್ನಾನ ಮಾಡಿದರು. ಆ ನಂತರ ಪ್ರಯಾಗ್ರಾಜ್ಗೆ ಹೋದ ಅನುಭವವನ್ನು ಸಹ ಹಂಚಿಕೊಂಡಿದ್ದಾರೆ.
ಪವಿತ್ರ ಅಮೃತ ಸ್ನಾನದಲ್ಲಿ ಭಾಗವಹಿಸಿದ ಪೂನಂ
ವಿವಾದಾತ್ಮಕ ಹೇಳಿಕೆಗಳು ಮತ್ತು ಖತ್ರೋನ್ ಕೆ ಕಿಲಾಡಿಯಂತಹ ರಿಯಾಲಿಟಿ ಶೋಗಳಿಗೆ ಹೆಸರುವಾಸಿಯಾಗಿರುವ ಪೂನಂ ಪಾಂಡೆ ಇತ್ತೀಚೆಗೆ ಮಹಾಕುಂಭ ಮೇಳಕ್ಕೆ ಭೇಟಿ ನೀಡಿ ಮೌನಿ ಅಮವಾಸ್ಯೆಯಂದು ಪವಿತ್ರ ಸ್ನಾನ ಮಾಡಿದರು. ಪೂನಂ ಪಾಂಡೆ ಜನವರಿ 29 ರಂದು ಪ್ರಯಾಗರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಪವಿತ್ರ ಅಮೃತ ಸ್ನಾನದಲ್ಲಿ ಭಾಗವಹಿಸಿದರು. ಈ ಸಮಯದಲ್ಲಿ ಪೂನಂ ಪಾಂಡೆ ಕಪ್ಪು ಪ್ರಿಂಟ್ ಶರ್ಟ್ ಧರಿಸಿದ್ದು, ಅದರ ಮೇಲೆ ‘ಮಹಾಕಾಲ್’ ಎಂದು ಬರೆಯಲಾಗಿದೆ, ಜೊತೆಗೆ ‘ಜೈ ಮಹಾಕಾಲ್’ ಮತ್ತು ‘ಓಂ’ ಚಿಹ್ನೆಗಳೂ ಇವೆ. ಮಹಾಕಾಲ ಶಿವನ ರೂಪಗಳಲ್ಲಿ ಒಂದಾಗಿದೆ. ಸ್ನಾನದ ನಂತರ ಅವರು ಸೂರ್ಯ ನಮಸ್ಕಾರವನ್ನೂ ಮಾಡಿದರು. ಆಕೆಯ ಹಣೆಯ ಮೇಲೆ ಅರಿಶಿನ ಮತ್ತು ಶ್ರೀಗಂಧ ಹಚ್ಚುವ ಫೋಟೋ ಸೇರಿದಂತೆ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇನ್ಸ್ಟಾದಲ್ಲಿ ಫೋಟೋ ಶೇರ್ ಮಾಡಿದ ನಟಿ
ತಾನು ಸತ್ತಿದ್ದೇನೆಂದು ಹೇಳಿ ವಿವಾದ ಸೃಷ್ಟಿಸಿದ ನಟಿ, ಇದೀಗ ಲಕ್ಷಾಂತರ ಭಕ್ತರ ಜೊತೆ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರು. ಸಾಮಾಜಿಕ ಮಾಧ್ಯಮದಲ್ಲಿ ತನ್ನ ಅನುಭವಗಳನ್ನು ಸಕ್ರಿಯವಾಗಿ ಹಂಚಿಕೊಳ್ಳುವ ಪಾಂಡೆ, ಈ ಬಾರಿ ಮಹಾಕುಂಭ ಮೇಳದ ಕುರಿತು ಶೇರ್ ಮಾಡಿದ್ದಾರೆ. ಮಹಾಕುಂಭದ ಪ್ರಾಮುಖ್ಯತೆ ಮತ್ತು ಅನುಭವವನ್ನು ವಿವರಿಸುತ್ತಾ ಇಲ್ಲಿನ ಭಕ್ತಿಯನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ” ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, “ಶಕ್ತಿ ಕಡಿಮೆಯಾದರೂ ಭಕ್ತಿ ಕಡಿಮೆಯಾಗಬಾರದು. ಓಂ ನಮಃ ಶಿವಾಯ” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಸತ್ತು ಬದುಕಿದ ಪೂನಂ!
2024 ರಲ್ಲಿ, ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪೂನಂ ಪಾಂಡೆ ಹಬ್ಬಿಸಿದ ಸಾವಿನ ಸುದ್ದಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತು. ಆರಂಭಿಕ ವರದಿಗಳು ಅವರು ಸತ್ತಿದ್ದಾರೆ ಎಂದು ಅನೇಕರು ನಂಬುವಂತೆ ಮಾಡಿತು, ಆದರೆ ಇದು ನಂತರ ಪ್ರಚಾರದ ಸ್ಟಂಟ್ ಎಂದು ತಿಳಿದುಬಂದಿದೆ. ಸ್ಟಂಟ್ ಗಣನೀಯವಾಗಿ ಮಾಧ್ಯಮದ ಗಮನವನ್ನು ಸೆಳೆಯಿತು ಮತ್ತು ಗರ್ಭಕಂಠದ ಕ್ಯಾನ್ಸರ್ ಕುರಿತು ಆನ್ಲೈನ್ ನಲ್ಲಿ ಹುಡುಕಾಟಗಳು ಹೆಚ್ಚಾದವು, ಜಾಗೃತಿ ಮೂಡಿಸುವ ಅವರ ವಿವಾದಾತ್ಮಕ ಮಾರ್ಗಕ್ಕಾಗಿ ಟೀಕಿಸಲಾಯಿತು. ಕಳೆದ ವರ್ಷ ಫೆಬ್ರವರಿ 2 ರಂದು ಆಕೆಯ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಗರ್ಭಕಂಠದ ಕ್ಯಾನ್ಸರ್ನಿಂದದ ಸಾವನ್ನಪ್ಪಿದ್ದಾರೆ ಎಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಯಿತು. ಆ ನಂತರ ಪೂನಂ ಕ್ಷಮೆಯಾಚಿಸಿ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡರು.

ಚಿತ್ರಗಳನ್ನು ಹಂಚಿಕೊಂಡ ನಟ ಮಿಲಿಂದ್ ಸೋಮನ್
ಬಾಲಿವುಡ್ ನಟ ಮಿಲಿಂದ್ ಸೋಮನ್ ಕೂಡ ಮಹಾಕುಂಭದಲ್ಲಿ ಸ್ನಾನ ಮಾಡಿದರು. ಈ ಅವಧಿಯಲ್ಲಿನ ಚಿತ್ರಗಳನ್ನು ಹಂಚಿಕೊಳ್ಳುವಾಗ, ಅವರು ಪೋಸ್ಟ್ನ ಶೀರ್ಷಿಕೆಯಲ್ಲಿ ವಿಶೇಷ ಸಂದೇಶವನ್ನು ಸಹ ಬರೆದಿದ್ದಾರೆ. ಮೌನಿ ಅಮಾವಾಸ್ಯೆಯ ವಿಶೇಷ ದಿನದಂದು ಮಹಾಕುಂಭಕ್ಕೆ ಆಗಮಿಸಿದ್ದು ನನ್ನ ಪುಣ್ಯ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಅದ್ಭುತ ಆಧ್ಯಾತ್ಮಿಕ ಸ್ಥಳವಾಗಿದೆ. ಇಲ್ಲಿ ನಮ್ಮ ಪ್ರತಿ ಕ್ಷಣವೂ ತುಂಬಾ ವಿಶೇಷವಾಗಿದೆ. ನನ್ನ ಹೃದಯ ತುಂಬಿದ್ದರೂ, ಕಳೆದ ರಾತ್ರಿಯ ಘಟನೆಗಳಿಂದ ನಾನು ದುಃಖಿತನಾಗಿದ್ದೇನೆ ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನನ್ನ ಪ್ರಾರ್ಥನೆ ಸಲ್ಲಿಸುತ್ತೇನೆ. ಹರ್ ಹರ್ ಗಂಗೆ! ಎಲ್ಲೆಲ್ಲೂ ಶಿವ!! ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಮಹಾಕುಂಭದಲ್ಲಿ ಬಾಲಿವುಡ್ ತಾರೆಯರು
ಅನೇಕ ಜನಪ್ರಿಯ ಬಾಲಿವುಡ್ ತಾರೆಯರು ಮಹಾಕುಂಭದಲ್ಲಿ ಸ್ನಾನ ಮಾಡಲು ಪ್ರಯಾಗರಾಜ್ ತಲುಪಿದ್ದಾರೆ. ಜನಪ್ರಿಯ ನೃತ್ಯ ನಿರ್ದೇಶಕ ರೆಮೊ ಡಿಸೋಜಾ ಅವರ ಹೆಸರೂ ಇದರಲ್ಲಿ ಸೇರಿದೆ. ಇತ್ತೀಚೆಗೆ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ಕೂಡ ಮಹಾಕುಂಭ ಸ್ನಾನ ಮಾಡಿದ್ದರು. ಇದಲ್ಲದೇ ಅನುಪಮ್ ಖೇರ್, ರವಿ ಕಿಶನ್, ಗುರು ರಾಂಧವ, ಸಪ್ನಾ ಚೌಧರಿ ಮುಂತಾದ ತಾರೆಯರೂ ಸಂಗಮ ಸ್ನಾನ ಮಾಡಿದ್ದಾರೆ.
ಪವಿತ್ರ ಸ್ನಾನ ಮಾಡಿದವರೆಷ್ಟು?
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಮಹಾಕುಂಭ ಸ್ನಾನ ಮುಂದುವರಿದಿದೆ. ಏತನ್ಮಧ್ಯೆ, ಇದುವರೆಗೆ 27.58 ಕೋಟಿ ಜನರು ಸ್ನಾನ ಮಾಡಿದ್ದಾರೆ. ಜನವರಿ 30 ರ ಬೆಳಗಿನ ವರೆಗೆ ಸುಮಾರು 92.90 ಲಕ್ಷ ಜನರು ಸ್ನಾನ ಮಾಡಿದ್ದಾರೆ ಮತ್ತು 82.90 ಲಕ್ಷ ಜನರು ಪ್ರಯಾಗರಾಜ್ನ ಮಹಾಕುಂಭ ಪ್ರದೇಶವನ್ನು ತಲುಪಿದ್ದಾರೆ. ಜನವರಿ 29 ರಂದು ಮೌನಿ ಅಮವಾಸ್ಯೆಯ ದಿನದಂದು ಹೆಚ್ಚಿನ ಸಂಖ್ಯೆಯ ಜನರು ಸ್ನಾನ ಮಾಡಿದ್ದಾರೆ. ಆದರೆ, ಮೊನ್ನೆ ಮೌನಿ ಅಮಾವಾಸ್ಯೆಯಂದು ನಡೆದ ಕಾಲ್ತುಳಿತದಲ್ಲಿ 30 ಭಕ್ತರು ಸಾವನ್ನಪ್ಪಿ 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಅಪಘಾತದ ನಂತರ ಸಿಎಂ ಯೋಗಿ ಆದಿತ್ಯನಾಥ್ ನ್ಯಾಯಾಂಗ ಆಯೋಗದಿಂದ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ, ಪೊಲೀಸರು ಕೂಡ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಯುಪಿ ಸರ್ಕಾರ ಘೋಷಿಸಿದೆ. ಮಾಹಿತಿ ಪ್ರಕಾರ ಮೌನಿ ಅಮವಾಸ್ಯೆಯ ದಿನದಂದು 5 ಕೋಟಿಗೂ ಹೆಚ್ಚು ಜನರು ಸ್ನಾನ ಮಾಡಿದ್ದಾರೆ.