ಹಿರಿಯ ರಂಗಕರ್ಮಿ ಹಾಗೂ ಸಿನಿಮಾ ನಟ ರಾಜು ತಾಳಿಕೋಟೆ ಉಡುಪಿಯಲ್ಲಿ ಶೂಟಿಂಗ್ ಮುಗಿಸಿ ರೂಮುನಲ್ಲಿದ್ದಾಗ ಹಾರ್ಟ್ ಅಟ್ಯಾಕ್ ಆಗಿ ವಿಧಿವಶರಾಗಿದ್ದಾರೆ. ಉಡುಪಿಯ ಮಣಿಪಾಲ್ ಆಸ್ಪತ್ರೆಯ ವೈದ್ಯರು ರಾಜು ತಾಳಿಕೋಟೆ ಸಾವನ್ನಪ್ಪಿದ್ದಾರೆ ಎಂಬುದನ್ನು ದೃಢಪಡಿಸಿದ್ದಾರೆ.
ರಾಜು ತಾಳಿಕೋಟೆ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ಸಿನಿಮಾವೊಂದರ ಶೂಟಿಂಗ್ ಮುಗಿಸಿ ರೂಮುನಲ್ಲಿ ಮಲಗಿದ್ದಾಗ ಹಾರ್ಟ್ ಅಟ್ಯಾಕ್ ಆಗಿದೆ. ವೃತ್ತಿ ರಂಗಭೂಮಿ ಮೂಲಕ ಸಿನಿಮಾ ರಂಗಕ್ಕೆ ರಾಜು ತಾಳಿಕೋಟೆ ಎಂಟ್ರಿಯಾಗಿದ್ದರು.

ರಾಜು ತಾಳಿಕೋಟೆ ಅವರು ಮನಸಾರೆ, ಪಂಚರಂಗಿ, ಮತ್ತೊಂದು ಮದುವೆನಾ, ಮೈನಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ತಮ್ಮದೇ ನಾಟಕ ಕಂಪನಿಯನ್ನು ರಾಜು ತಾಳಿಕೋಟೆ ಹೊಂದಿದ್ದರು. ರಾಜು ತಾಳಿಕೋಟೆ ಅವರು ಧಾರವಾಡದ ರಂಗಾಯಣದ ನಿರ್ದೇಶಕರಾಗಿದ್ದರು. ಬಿಗ್ ಬಾಸ್-7 ರ ಸ್ಪರ್ಧಿ ಕೂಡ ಆಗಿದ್ದರು.
ಹಲವು ದಶಕಗಳಿಂದ ನಾಟಕ ಮತ್ತು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದ ರಾಜು ತಾಳಿಕೋಟಿ ಅವರು, ತಮ್ಮ ನಟನೆಯಿಂದ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ಹಾಸ್ಯದ ಟೈಮಿಂಗ್ ಮತ್ತು ಸಂಭಾಷಣೆ ಹೇಳುವ ಶೈಲಿಗೆ ಮನಸೋಲದವರೇ ಇರಲಿಲ್ಲ. ಇತ್ತೀಚೆಗಷ್ಟೇ ಧಾರವಾಡ ರಂಗಾಯಣದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು, ರಂಗಭೂಮಿಗೆ ಹೊಸ ಚೈತನ್ಯ ತುಂಬುವ ಉತ್ಸಾಹದಲ್ಲಿದ್ದರು.

ಸಿಂದಗಿ, ತಾಳಿಕೋಟಿ ಹಾಗೂ ಬೆಂಗಳೂರಿನಲ್ಲಿ ನಿವಾಸ ಹೊಂದಿದ್ದ ರಾಜು ತಾಳಿಕೋಟಿ ಅವರಿಗೆ ಅಪಾರವಾದ ಬಳಗವಿತ್ತು. ಅವರ ಅಂತ್ಯಸಂಸ್ಕಾರವನ್ನು ಎಲ್ಲಿ ನಡೆಸಬೇಕು ಎಂಬ ಬಗ್ಗೆ ಅವರ ಕುಟುಂಬಸ್ಥರು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.



