ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಶುಭ ಶುಕ್ರವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪರಸ್ಪರ ಉಂಗುರ ಬದಲಿಸಿಕೊಳ್ಳುವ ಮೂಲಕ ಬಾಳ ಬಂಧನಕ್ಕೆ ಅಡಿ ಇಡಲು ಸಜ್ಜಾಗಿದ್ದಾರೆ. ಹರಿಪ್ರಿಯಾ ನಿವಾಸದಲ್ಲಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಸರಳ ಕಾರ್ಯಕ್ರಮ ನಡೆದಿದೆ. ಕಳೆದ ಕೆಲ ದಿನಗಳಿಂದ ವಸಿಷ್ಠ ಮತ್ತು ಹರಿಪ್ರಿಯಾ ಸುದ್ದಿಯಲ್ಲಿದ್ದಾರೆ. ಈ ಜೋಡಿ ಪ್ರೀತಿಯಲ್ಲಿ ಬಿದ್ದಿದೆ. ಇನ್ನೇನು ಮದುವೆಯನ್ನೂ ಆಗಲಿದೆ ಎಂಬ ಗಾಸಿಪ್ ಹೊರಬಿದ್ದಿತ್ತು.
ಇಬ್ಬರು ಜತೆಗಿರುವ, ದುಬೈ ಸುತ್ತಾಟದ ಕೆಲ ಫೋಟೋಗಳು ವೈರಲ್ ಆಗಿದ್ದನ್ನು ಬಿಟ್ಟರೆ, ಎಲ್ಲಿಯೂ ಹೇಳಿಕೊಂಡಿಲ್ಲ. ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ವಿಚಾರವೂ ಹೊರಬಿದ್ದಿರಲಿಲ್ಲ. ಇದೀಗ ಉಂಗುರ ಬದಲಿಸಿದ ಫೋಟೋ ಹೊರಬಿದ್ದಿದೆ.
ಆಪ್ತರ ಸಮ್ಮುಖದಲ್ಲಿ ಶುಕ್ರವಾರವೇ ನಿಶ್ಚಿತಾರ್ಥ ಮಾಡಿಕೊಂಡು, ಆ ಖುಷಿಯನ್ನು ಪರೋಕ್ಷವಾಗಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು ಹರಿಪ್ರಿಯಾ. ಅಂದರೆ, ಸಿಂಹದ ಮಡಿಲಲ್ಲಿ ಮಲಗಿದ ಮಗುವಿನ ಫೋಟೋ ಹಂಚಿಕೊಂಡ ಹರಿಪ್ರಿಯಾ, “ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು” ಎಂದು ಬರೆದುಕೊಂಡಿದ್ದರು. ಹೀಗೆ ಪೋಸ್ಟ್ ಹಾಕುತ್ತಿದ್ದಂತೆ, ನೆಟ್ಟಿಗರು ಈ ಜೋಡಿಗೆ ಅಭಿನಂದನೆ ಸಲ್ಲಿಸಿದ್ದರು.
ಸದ್ಯದ ಮಾಹಿತಿ ಪ್ರಕಾರ, ಇಬ್ಬರೂ ಹಲವು ಪ್ರಾಜೆಕ್ಟ್ಗಳಲ್ಲಿ ಬಿಜಿಯಾಗಿದ್ದಾರೆ. ಆ ಕೆಲಸ ಮುಗಿಯುತ್ತಿದ್ದಂತೆ, ಮದುವೆಯ ಕಡೆಗೆ ಗಮನ ಹರಿಸಲಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ ಎನ್ನಲಾಗುತ್ತಿದೆ.



