ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಈಗಾಗಲೇ ೫೦ ಕೋಟಿಗೂ ಅಧಿಕ ಜನ ಪುಣ್ಯ ಸ್ನಾನ ಮಾಡಿದ್ದಾರೆ. ಕೇವಲ ಸಾಮಾನ್ಯರಷ್ಟೆ ಅಲ್ಲ ಭಾರತದ ಶ್ರೀಮಂತರು, ಸಿನಿಮಾ ರಂಗದವರು, ರಾಜಕೀಯ ನಾಯಕರು ಹೀಗೆ ಲೆಕ್ಕವಿಲ್ಲದಷ್ಟು ಜನ ಪುಣ್ಯಸ್ನಾನ ಮಾಡಿದ್ದಾರೆ. ಇಲ್ಲಿ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿ ಆಗುತ್ತದೆ ಅನ್ನೋದು ನಂಬಿಕೆ. ನಮ್ಮ ರಾಜ್ಯದಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕರು ಈ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಡಿಕೆ ಶಿವಕುಮಾರ್ ಟೀಕೆಗೂ ಗುರಿಯಾಗಿದ್ದಾರೆ.
ಹೌದು, ಜನವರಿ 13 ರಿಂದ ಪ್ರಾರಂಭವಾಗಿರೋ ಮಹಾಕುಂಭಮೇಳ ಫೆಬ್ರವರಿ 26ರ ವರೆಗೆ ನಡೆಯಲಿದೆ. ಕೆಲವೇ ದಿನಗಳಲ್ಲಿ ಈ ಮಹಾಕುಂಭಮೇಳಕ್ಕೆ ಅದ್ಧೂರಿಯಾಗಿ ತೆರೆ ಬೀಳಲಿದೆ. ಈ ಕುಂಭಮೇಳಕ್ಕೆ ವಿಧಾನಸಭೆಯ ವಸತಿ ಸೌಕರ್ಯಗಳ ಸಮಿತಿಯ ಸದಸ್ಯರು ಭೇಟಿ ನೀಡಿ ಪುಣ್ಯ ಸ್ನಾನ ಮಾಡಲು ತೀರ್ಮಾನ ಮಾಡಿದ್ದರು. ಹಾಗಂತ ಇವರೇನು ತಮ್ಮ ಸ್ವಂತ ದುಡ್ಡಲ್ಲಿ ಹೋಗಲು ನಿರ್ಧಾರ ಮಾಡಿರಲಿಲ್ಲ. ಬದಲಾಗಿ ಸರ್ಕಾರದ ಹಣದಲ್ಲಿ ಹೋಗಲು ತೀರ್ಮಾನ ಮಾಡಲಾಗಿತ್ತು. ಇದಕ್ಕೆ ಬೇಕಾದ ತಯಾರಿ ಕೂಡ ಸದಸ್ಯರು ಮಾಡಿಕೊಂಡಿದ್ದರು. ಆದರೆ ಇಲ್ಲಿ ಆಗಿದ್ದೇ ಬೇರೆ.

ರಾಜ್ಯ ಸರ್ಕಾರದ ವತಿಯಿಂದ ಕುಂಭಮೇಳಕ್ಕೆ ಹೋಗುವ ಸದಸ್ಯರಿಗೆ ಯಾವುದೇ ಅಡ್ಡಿ ಆಗಿರಲಿಲ್ಲ. ಬದಲಾಗಿ ಉತ್ತರ ಪ್ರದೇಶದ ಸರ್ಕಾರವೇ ಸಮಿತಿ ಸದಸ್ಯರಿಗೆ ಬರೋದು ಬೇಡ ಅಂತ ಹೇಳಿದೆಯಂತೆ. ಪ್ರೋಟೋಕಾಲ್ ಪಾಲಿಸಲು ಅಸಾಧ್ಯ ಅಂತ ಉತ್ತರಪ್ರದೇಶ ಸರ್ಕಾರ ಹೇಳಿದೆ. ಜೊತೆಗೆ ಅಲ್ಲಿ ಅಧಿವೇಶನ ನಡೆಯುತ್ತಿರೋದ್ರಿಂದ ಪ್ರೊಟೋಕಾಲ್ ಪಾಲಿಸಲು ಆಗೋದಿಲ್ಲ ಎಂದು ಸರ್ಕಾರ ಸ್ಪಷ್ಟ ಪಡಿಸಿರೋ ಹಿನ್ನೆಲೆಯಲ್ಲಿ ಪ್ರವಾಸ ರದ್ದಾಗಿದೆ ಎನ್ನಲಾಗಿದೆ.
ಇನ್ನು ಇದರ ಜೊತೆಗೆ ವಿಐಪಿ ಸಂಸ್ಕೃತಿ ರದ್ದು ಮಾಡಬೇಕು ಅನ್ನೋ ಒತ್ತಾಯ ಕೂಡ ಕೇಳಿ ಬಂದಿತ್ತು. ಹೀಗಾಗಿ ಒಂದಿಷ್ಟು ಬದಲಾವಣೆ ಪ್ರಯಾಗರಾಜ್ ನಲ್ಲಿ ಮಾಡಲಾಗಿದೆ ಎನ್ನಲಾಗುತ್ತಿದೆ. ಸಮಿತಿಯ ಅಧ್ಯಕ್ಷ ರುದ್ರಪ್ಪ ಲಮಾಣಿ, ಸದಸ್ಯರಾದ ಶಿವರಾಮ್ ಹೆಬ್ಬಾರ್, ಸಿಪಿ.ಯೋಗೇಶ್ವರ್, ಆನೇಕಲ್ ಶಿವಣ್ಣ, ಮಾಗಡಿ ಬಾಲಕೃಷ್ಣ, ಬಿ ನಾಗೇಂದ್ರ, ಚಂದ್ರು ಲಮಾಣಿ, ಧೀರಜ್ ಮುನಿರಾಜು, ಸ್ವರೂಪ್ ಪ್ರಕಾಶ್ ಸೇರಿ ಒಟ್ಟು 13 ಜನ ಸದಸ್ಯರ ತಂಡ ಅಂದಾಜು 55 ಲಕ್ಷ ಖರ್ಚಿನಲ್ಲಿ ಪ್ರಯಾಗರಾಜ್ ಪ್ರವಾಸ ಕೈಗೊಂಡಿದ್ದರು. ಆದರೆ ಈಗ ಅದೆಲ್ಲವೂ ತಲೆ ಕೆಳಗಾಗಿದೆ. ಇನ್ನು ಶಾಸಕರ ಪ್ರವಾಸಕ್ಕೆ ಸಾರ್ವಜನಿಕ ಟೀಕೆ ಸಹ ವ್ಯಕ್ತವಾಗಿತ್ತು.
ಎಲ್ಲ ಅಂದುಕೊಂಡತೆ ಆಗಿದ್ದರೆ, ಫೆ.23ರ ಭಾನುವಾರದಂದು ಉತ್ತರ ಪ್ರದೇಶಕ್ಕೆ ತೆರಳಲಿ ಮಧ್ಯಾಹ್ನ 12ಕ್ಕೆ ಉತ್ತರ ಪ್ರದೇಶ ವಿಧಾನಸಭೆಯ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಲು ತೀರ್ಮಾನ ಮಾಡಲಾಗಿತ್ತು. ಬಳಿಕ ಸಂಜೆ 7ಕ್ಕೆ ಪ್ರಯಾಗ್ ರಾಜ್ನಲ್ಲಿ ವಾಸ್ತವ್ಯ ಹೂಡಿ, ಫೆ.24ರಂದು ಬೆಳಗ್ಗೆ 7 ಗಂಟೆಗೆ ಪ್ರಯಾಗ್ ರಾಜ್ನಲ್ಲಿ ಗಂಗಾ ಸ್ನಾನ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಈಗ ಸದಸ್ಯರ ಪ್ಲ್ಯಾನ್ ಎಲ್ಲವೂ ಉಲ್ಟಾ ಆಗಿದೆ.