5-10 ರೂಪಾಯಿಗೆಲ್ಲ ಕೆಜಿ ಗಟ್ಟಲೆ ಸಿಗುತ್ತಿದ್ದ ಬಡವರ ಬಂಧು ಟೊಮ್ಯಾಟೊ ಏಕಾಏಕಿ ಗಗನಕ್ಕೇರಿದೆ. ಬಡವರು ಮಾತ್ರವಲ್ಲ ಶ್ರೀಮಂತರಿಗೂ ಟೊಮ್ಯಾಟೊ ಬೆಲೆ ಎರಿಕೆಯೆ ಬಿಸಿ ತಟ್ಟಿದೆ. ಆದರೆ ಟೊಮ್ಯಾಟೊ ಬೆಳೆದ ರೈತರಿಗೆ ಮಾತ್ರ ಬೆಲೆ ಏರಿಕೆಯಿಂದ ಶುಕ್ರ ದೆಸೆ ಆರಂಭವಾಗಿದೆ. ಟೊಮ್ಯಾಟೊ ಬೆಳೆದ ರೈತರು ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದಾರೆ. ಇಲ್ಲೊಬ್ಬರ ರೈತ ಟೊಮ್ಯಾಟೊ ಬೆಳೆದು ಕೋಟ್ಯಾಂತರ ರೂಪಾಯಿ ಆದಾಯ ಗಳಿಸಿದ್ದು, ಅವರು ಒಟ್ಟು ಆದಾಯ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ!.

ಹೌದು, ಪುಣೆ ಜಿಲ್ಲೆಯ ಟೊಮ್ಯಾಟೊ ಬೆಳೆಗಾರರಾಗಿರುವ ರೈತ ಈಶ್ವರ್ ಗಾಯ್ಕರ್ ಒಂದು ತಿಂಗಳಿನಲ್ಲಿ 17,000 ಕ್ರೇಟ್ ಟೊಮ್ಯಾಟೋ ಮಾರಾಟ ಮಾಡಿ ಸರಿಸುಮಾರು 2.8 ಕೋಟಿ ರೂ. ಆದಾಯ ಗಳಿಸಿದ್ದಾರೆ. ಅವರ ಜಮೀನಿನಲ್ಲಿ ಇನ್ನೂ ಸುಮಾರು 4,000 ಕ್ರೇಟ್ ನಷ್ಟು ಟೊಮ್ಯಾಟೋ ಇದ್ದು, ಬೆಲೆ ಏರಿಕೆ ಹೀಗೆ ಇದ್ದರೆ ಆದಾಯ 3.5 ಕೋಟಿ ರೂ.ಗೆ ಏರುವ ಸಾಧ್ಯತೆಗಳಿವೆ.
ಈ ಬಗ್ಗೆ ಮಾತನಾಡಿರುವ ರೈತ ಗಾಯ್ಕರ್ ಮಾತನಾಡಿ, ‘ನನ್ನ ಕುಟುಂಬದ ಬಳಿ ಇರುವ 18 ಎಕ್ರೆ ಜಮೀನಿನ ಪೈಕಿ 12 ಎಕ್ರೆಯಲ್ಲಿ 2017ರಿಂದಲೂ ಟೊಮ್ಯಾಟೋ ಕೃಷಿ ಮಾಡುತ್ತಿದ್ದೇನೆ. 2021ರಲ್ಲಿ ಟೊಮ್ಯಾಟೋ ಬೆಳೆದು ಸುಮಾರು 20 ಲಕ್ಷ ರೂ. ನಷ್ಟವಾಗಿತ್ತು. ಈಗ ಉತ್ತಮ ಬೆಲೆ ಲಭಿಸಿದ್ದು ಖುಷಿಯಾಗಿದೆ. ಸದ್ಯ, ಜಮೀನಿನಲ್ಲಿ ಕಟಾವಿಗೆ ಸಿದ್ದವಾಗಿರುವ ಟೊಮ್ಯಾಟೋಗೆ ಉತ್ತಮ ಬೇಡಿಕೆ ಇದೆ’ ಎಂದಿದ್ದಾರೆ.