ರೈಲಿನಲ್ಲಿ ಕದ್ದು ಮುಚ್ಚಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ.. ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ತುಂಬಾ ಸುಲಭ ಕೂಡಾ.. ಹೀಗಾಗೇ ಟಿಕೆಟ್ಗೆ ಹಣವಿಲ್ಲದವರು ಕಳ್ಳತನವಾಗಿ ರೈಲು ಹತ್ತಿ ಪ್ರಯಾಣ ಮಾಡುತ್ತಾರೆ.. ಕೆಲವೊಮ್ಮೆ ಸಿಕ್ಕಿಬೀಳುತ್ತಾರೆ ಕೂಡಾ.. ಆದ್ರೆ ಇಲ್ಲೊಂದು ಗ್ರಾಮ ಇದೆ.. ಈ ಗ್ರಾಮದ ಜನ ಮಾತ್ರ ಇದಕ್ಕೆ ತದ್ವಿರುದ್ಧ.. ಈ ಗ್ರಾಮಸ್ಥರು ದಿನವೂ ರೈಲ್ವೇ ಸ್ಟೇಷನ್ಗೆ ಬಂದು ಟಿಕೆಟ್ ಖರೀದಿ ಮಾಡುತ್ತಾರೆ.. ಆದ್ರೆ ಪ್ರಯಾಣ ಮಾತ್ರ ಮಾಡೋದಿಲ್ಲ.. ಯಾರಾದರೂ ರೈಲು ಹತ್ತಲು ಬಂದರೆ ಅವರಿಗೆ ಉಚಿತವಾಗಿ ಟಿಕೆಟ್ ಕೊಡುತ್ತಾರೆ.. ಅವರ ಬಳಿ ಹಣ ಹೆಚ್ಚಾಗಿ ಈ ಕೆಲಸ ಮಾಡುತ್ತಿಲ್ಲ.. ಆ ಗ್ರಾಮಸ್ಥರು ಮಾನಸಿಕ ಅಸ್ವಸ್ಥರು ಕೂಡಾ ಅಲ್ಲ.. ಬದಲಾಗಿ ಅವರು ಹೀಗೆ ನಿತ್ಯ ಟಿಕೆಟ್ ಖರೀದಿ ಮಾಡೋದಕ್ಕೆ ಒಂದು ಬಲವಾದ ಕಾರಣ ಇದೆ..
ಈ ಗ್ರಾಮ ಇರೋದು ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯಲ್ಲಿ.. ಇಲ್ಲಿನ ನರಸಂಪೇಟ ಸಮೀಪದಲ್ಲಿ ನೆಕ್ಕೊಂಡ ಎಂಬ ಸಣ್ಣ ಗ್ರಾಮವಿದೆ.. ಈ ಗ್ರಾಮದಲ್ಲಿ ರೈಲು ನಿಲ್ದಾಣ ಕೂಡಾ ಇದೆ.. ಸುತ್ತಮುತ್ತಲ ಒಂದಷ್ಟು ಗ್ರಾಮಗಳ ಜನರು ಈ ರೈಲು ನಿಲ್ದಾಣವನ್ನೇ ನಂಬಿಕೊಂಡಿದ್ದಾರೆ.. ಎಲ್ಲಾದರೂ ದೂರದ ಊರುಗಳಿಗೆ ಹೋಗಬೇಕಾದರೆ ರೈಲಿನಲ್ಲೇ ಹೋಗುತ್ತಾರೆ.. ಆದ್ರೆ ರೈಲ್ವೆ ಇಲಾಖೆ ಪ್ರಕಾರ ಒಂದು ರೈಲ್ವೆ ನಿಲ್ದಾಣದಲ್ಲಿ ದಿನಕ್ಕೆ ಇಂತಿಷ್ಟು ಟಿಕೆಟ್ ಅಂತ ಸೇಲ್ ಆಗಬೇಕು.. ಅಂದರೆ ಇಂತಿಷ್ಟು ಪ್ರಯಾಣಿಕರು ಹತ್ತಬೇಕು.. ಇಲ್ಲದಿದ್ದರೆ ಆ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ನಿಲ್ಲಿಸಲಾಗುತ್ತದೆ.. ಈ ಗ್ರಾಮಕ್ಕೂ ಕೂಡಾ ಅದೇ ಭೀತಿ.. ಹಳ್ಳಿ ಜನ ಹೆಚ್ಚಾಗಿ ನಗರಗಳಿಗೆ ಪ್ರಯಾಣ ಮಾಡೋದಿಲ್ಲ.. ಹಾಗಂತ ರೈಲು ಇಲ್ಲದಿದ್ದರೆ ಅವಶ್ಯಕವಿದ್ದ ಸಮಯದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗೋದು ಕಷ್ಟವಾಗುತ್ತದೆ.. ಹೀಗಾಗಿ, ರೈಲು ನಿಲುಗಡೆ ರದ್ದಾಗುವುದನ್ನು ತಪ್ಪಿಸೋದಕ್ಕೆ ನೆಕ್ಕೊಂಡ ಗ್ರಾಮಸ್ಥರು ತಾವೇ ಒಂದಷ್ಟು ಹಣ ಸಂಗ್ರಹಿಸಿ, ದಿನವೂ ಮಿನಿಮನ್ ಟಿಕೆಟ್ಗಳನ್ನು ಖರೀದಿ ಮಾಡುತ್ತಾರೆ.. ಯಾರೂ ಪ್ರಯಾಣ ಮಾಡದಿದ್ದರೂ ಕೂಡಾ ಟಿಕೆಟ್ ಖರೀದಿ ಅಂತೂ ನಿತ್ಯವೂ ನಡೆಯುತ್ತದೆ..

ನರಸಂಪೇಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದೊಂದೇ ರೈಲು ನಿಲ್ದಾಣ ಇರೋದು.. ತಿರುಪತಿ, ಶಿರಡಿ, ಹೈದರಾಬಾದ್, ದೆಹಲಿ ಮುಂತಾದ ಸ್ಥಳಗಳಿಗೆ ಹೋಗುವ ರೈಲುಗಳು ಈ ನಿಲ್ದಾಣ ಮೂಲಕವೇ ಹಾದುಹೋಗುತ್ತದೆ.. ಆದ್ರೆ ಕನಿಷ್ಠ ಪ್ರಯಾಣಿಕರೂ ಇಲ್ಲಿ ಹತ್ತದ ಹಿನ್ನೆಲೆಯಲ್ಲಿ ಬಹುತೇಕ ರೈಲುಗಳ ನಿಲುಗಡೆ ಇಲ್ಲಿ ನಿಲ್ಲಿಸಲಾಗಿತ್ತು.. ಇದರ ಜೊತೆ ನಿತ್ಯ ಓಡಾಡುವವರಿಗೆ ಆಸರೆಯಾಗಿದ್ದ ಪದ್ಮಾವತಿ ಎಕ್ಸ್ಪ್ರೆಸ್ ರೈಲಿನ ನಿಲುಗಡೆಯನ್ನೂ ಕ್ಯಾನ್ಸಲ್ ಮಾಡಲಾಗಿತ್ತು.. ಸಿಕಂದ್ರಾಬಾದ್ನಿಂದ ಗುಂಟೂರು ಇಂಟರ್ ಸಿಟಿ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಯನ್ನು ಕೂಡಾ ಅಧಿಕಾರಿಗಳು ರದ್ದು ಮಾಡಿದ್ದರು.. ಪ್ರಶ್ನೆ ಮಾಡಿದರೆ ಕನಿಷ್ಠ ಪ್ರಯಾಣಿಕರು ಕೂಡಾ ಈ ನಿಲ್ದಾಣದಿಂದ ಹತ್ತುತ್ತಿಲ್ಲ.. ಇದರಿಂದಾಗಿ ಇಲಾಖೆಗೆ ನಷ್ಟವಾಗುತ್ತಿದೆ ಎಂದು ಸಮಜಾಯಿಷಿ ನೀಡಿದ್ದರು.. ಕನಿಷ್ಠ ಟಿಕೆಟ್ಗಳ ಖರೀದಿಯಾದರೆ ಮಾತ್ರ ನಿಲುಗಡೆ ಮಾಡುತ್ತೇವೆ ಎಂದು ಹೇಳಿದ್ದವು.. ಹೀಗಾಗಿ ಊರಿನವರೆಲ್ಲಾ ಸೇರಿಕೊಂಡು ಸಾವಿರಾರು ರೂಪಾಯಿ ಹಣ ಸಂಗ್ರಹ ಮಾಡಿದ್ದಾರೆ.. ಜೊತೆಗೆ ತಿಂಗಳಿಗಿಷ್ಟು ದೇಣಿಗೆ ನೀಡೋದಕ್ಕೂ ಕೆಲವರು ಒಪ್ಪಿಕೊಂಡಿದ್ದಾರೆ.. ಆ ಹಣದಿಂದ ಆ ದಿನದ ಕನಿಷ್ಠ ಟಿಕೆಟ್ಗಳನ್ನು ಖರೀದಿ ಮಾಡಲಾಗುತ್ತದೆ.. ಅವಶ್ಯಕತೆ ಇದ್ದವರು ರೈಲು ಹತ್ತುತ್ತಾರೆ.. ಯಾರೂ ಹತ್ತದಿದ್ದರೂ ಕೂಡಾ ಟಿಕೆಟ್ ಖರೀದಿ ಅಂತೂ ದಿನವೂ ನಡೆಯುತ್ತದೆ.. ಯಾರಾದರೂ ಹೊರಗಿನವರು ಇಲ್ಲಿ ರೈಲು ಹತ್ತಲು ಬಂದರೆ ಅವರಿಗೆ ಉಚಿತವಾಗಿ ಟಿಕೆಟ್ ನೀಡಲಾಗುತ್ತದೆ..
ನೆಕ್ಕೊಂಡ ಟೌನ್ ರೈಲ್ವೆ ಟಿಕೆಟ್ಸ್ ಫೋರಂ ಎಂಬ ಗುಂಪು ಕಟ್ಟಿಕೊಂಡಿರುವ ಗ್ರಾಮಸ್ಥರು, ಅದಕ್ಕಾಗಿ ಒಂದು ವಾಟ್ಸ್ ಆಪ್ ಗ್ರೂಪ್ ಕೂಡಾ ಮಾಡಿಕೊಂಡಿದ್ದಾರೆ.. ಇದರಲ್ಲಿ 400 ಕ್ಕೂ ಹೆಚ್ಚು ಮಂದಿ ಸದಸ್ಯರದ್ದಾರೆ.. ಅದರಲ್ಲಿ ದಿನದಲ್ಲಿ ಎಷ್ಟು ಟಿಕೆಟ್ ಖರೀದಿ ಮಾಡಲಾಗಿದೆ, ಎಷ್ಟು ಹಣ ಸಂಗ್ರಹವಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.. ದಿನವೂ ಇಲ್ಲಿ ಸಿಕಂದ್ರಾಬಾದ್, ಹೈದರಾಬಾದ್, ಖಮ್ಮಂ ಮುಂತಾದ ಸ್ಥಳಗಳಿಗೆ ಟಿಕೆಟ್ ಖರೀದಿ ಮಾಡಲಾಗುತ್ತದೆ..



