ಹೆಣ್ಣು ಜನ್ಮ ನೀಡುವುದು ಗಂಡು ಜನ್ಮಕ್ಕೆ ಕಾರಣವಾಗುವುದು ಇದು ಜೀವ ಸಂಕುಲದ ಜನ್ಮ ರಹಸ್ಯ. ಆದರೆ ಗಂಡಸೊಬ್ಬನ ಹೊಟ್ಟೆಯೊಳಗೆ ಅವಳಿ ಭ್ರೂಣ ಪತ್ತೆಯಾಗಿದೆ ಎಂದರೆ ಯಾರಾದರೂ ನಂಬುತ್ತಾರಾ. ಆದರೆ ಈ ಕೌತುಕವನ್ನು ನೀವು ನಂಬಲೇ ಬೇಕು. ಹೊಟ್ಟೆಯೊಳಗೆ ಗಡ್ಡೆಯಾಗಿದೆ ಅಂತ ಊದಿಕೊಂಡಿದ್ದ ಹೊಟ್ಟೆಯನ್ನು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಇಂತಹದ್ದೊಂದು ಅಪರೂಪದ ಹಾಗೂ ಅಚ್ಚರಿ ಪತ್ತೆಯಾಗಿದೆ.ಈ ವಿಚಿತ್ರವನ್ನು ಕಂಡು ವೈದ್ಯಕೀಯ ಲೋಕವೇ ನಿಬ್ಬೆರಗಾಗಿದೆ.

ವೈದ್ಯಕೀಯ ಲೋಕದಲ್ಲಿ ಆಗೊಮ್ಮೆ ಈಗೊಮ್ಮೆ ನಂಬಲಾಗದ ಕೌತುಕಗಳು, ಅಚ್ಚರಿಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಸದ್ಯ, ಗಂಡಸಿನ ಹೊಟ್ಟೆಯೊಳಗೆ ಕಂಡು ಬಂದಿರುವ ಅವಳಿ ಭ್ರೂಣಗಳನ್ನು ಕಂಡು ವೈದ್ಯರು ಹಾಗೂ ಇದನ್ನು ತಿಳಿದ ಜನರೆಲ್ಲ ಅಚ್ಚರಿಯಿಂದ ಮೂಗಿಗೆ ಬೆರಳಿಟ್ಟಿದ್ದಾರೆ. ಈ ಘಟನೆ ನಡದ್ದೂ ಬೇರೆಲ್ಲೋ ಅಲ್ಲ ನಮ್ಮದೇ ಭಾರತ ದೇಶದ ನಾಗ್ಪುರದಲ್ಲಿ. ಈ ಘಟನೆ ನಡೆದು ಹತ್ತಾರು ವರ್ಷಗಳೇ ಕಳೆದಿದ್ದರೂ ಕೂಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ವೈದ್ಯಕೀಯ ವರದಿಗಳ ಪ್ರಕಾರ ನಾಗ್ಪುರಲ್ಲಿ ಈ ಘಟನೆ 1999ರಲ್ಲಿ ನಡೆದಿದೆ. ಅಲ್ಲಿನ ಸಂಜು ಭಗತ್ ಎಂಬ ವ್ಯಕ್ತಿಗೆ ಬಾಲ್ಯದಿಂದಲೂ ಹೊಟ್ಟೆ ಅಸಹಜವಾಗಿ ಉಬ್ಬುಕೊಂಡಿತ್ತು. ಗೆಳೆಯರೆಲ್ಲ ಇದನ್ನು ಕಂಡು ಗೇಲಿ ಮಾಡುತಿದ್ದರಂತೆ. ಆದರೆ ಇದರ ಬಗ್ಗೆ ಸಂಜು ಅಥವಾ ಆತನ ಕುಟುಂಬ ಗಂಭಿರವಾಗಿ ಯೋಚಿಸಿರಲಿಲ್ಲ. ಆದರೆ 1999ರ ಹೊತ್ತಿಗೆ ಅಂದರೆ ಸಂಜು ಭಗತ್ 36ನೇ ವರ್ಷಕ್ಕೆ ಕಾಲಿಡುವ ಹೊತ್ತಿಗೆ ಆತನ ಹೊಟ್ಟೆ ಗರ್ಭಿಣಿಯಂತೆ ಊದಿಕೊಂಡಿತು ಮತ್ತು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು.
ಹೊಟ್ಟೆ ನೋವು ಕಾಣಿಸಿಕೊಂಡು ಸಂಜುನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಊದಿದ ಹೊಟ್ಟೆಯನ್ನು ಕಂಡ ವೈದ್ಯರು ಹೊಟ್ಟೆಯೊಳಗೆ ಗಡ್ಡೆಯಾಗಿರಬಹುದು ಎಂದು ಶಸ್ತ್ರಚಿಕಿತ್ಸೆಗೆ ಮುಂದಾದರು. ಆದರೆ ಶಸ್ತ್ರಚಿಕಿತ್ಸೆ ನಡೆದ ಬಳಿಕ ಹೊಟ್ಟೆಯೊಳಗೆ ಗಡ್ಡೆಯ ಬದಲು ಅವಳಿ ಭ್ರೂಣ ಪತ್ತೆಯಾಗಿದ್ದನ್ನು ಕಂಡು ವೈದ್ಯರು ಅಚ್ಚರಿಗೆ ಒಳಗಾಗಿದ್ದಾರೆ. ಇದರೊಂದಿಗೆ ಅವಳಿ ಭ್ರೂಣದ ಅಂಗಾಂಗಗಳಾದ ಕೈಕಾಲುಗಳು ಕೂಡ ಪತ್ತೆಯಾಗಿದೆ. ಅಂದು ಶಸ್ತ್ರಚಿಕಿತ್ಸೆ ಯಶಸ್ವಿಯಾದ ಕಾರಣ ಸಂಜು ಇಂದು ನೆಮ್ಮದಿಯಿಂದ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರಂತೆ.
ಈ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿರುವ ವೈದ್ಯರು, ‘ಇದೊಂದು ಅಪರೂಪದ ಪ್ರಕರಣ ಕೆಲವೊಮ್ಮೆ ತಾಯಿಯ ಹೊಟ್ಟೆಯಲ್ಲಿ ಹೆಚ್ಚು ಭ್ರೂಣ ಬೆಳೆದರೆ ಅದು ಇನ್ನೊಂದು ಮಗುವಿನ ದೇಹ ಸೇರುವ ಸಾಧ್ಯತೆಗಳಿರುತ್ತವೆ. ಇಲ್ಲೂ ಕೂಡ ಹಾಗೆಯೇ ಆಗಿದೆ. ಇಂತಹ ಪ್ರಕರಣಗಳು ಲಕ್ಷಕ್ಕೆ ಒಂದರಂತೆ ಮಾತ್ರ ಕಂಡು ಬರುತ್ತದೆ’. ಎಂದಿದ್ದಾರೆ.