ಲೋಕೇಶ್ ಫ್ಯಾಮಿಲಿ ಅಂದರೆ ಅದು ಕಲಾ ಕುಟುಂಬ ಹಿರಿಯ ನಟ ಲೋಕೇಶ್, ಅವರ ಪತ್ನಿ ಗಿರಿಜಾ ಲೋಕೇಶ್ ಹೀಗೆ ಇವರ ಮನೆಯಲ್ಲಿ ಎಲ್ಲರೂ ಸಿನಿಮಾ ನಟರೆ. ಇದೀಗ, ಲೋಕೇಶ್ ಕುಟುಂಬದ ಕನ್ನಡ ಕಿರುತೆರೆಯ ಮಾತಿನ ಮಲ್ಲ ನಟ, ನಿರೂಪಕ ಸೃಜನ್ ಲೋಕೇಶ್ ಕೆಲವೊಂದು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇದೀಗ ನಿರೂಪಣೆ ಹಾಗೂ ನಟನೆಯಿಂದ ಬ್ರೇಕ್ ಪಡೆದುಕೊಂಡು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಹಾಗಿದ್ರೆ ಸೃಜನ್ ಲೋಕೇಶ್ ನಿರ್ದೇಶನದ ಮೊದಲ ಸಿನಿಮಾ ಯಾವುದು?, ಯಾರೆಲ್ಲ ನಟಿಸಲಿದ್ದಾರೆ? ಬನ್ನಿ ನೋಡೋಣ.

ಸೃಜನ್ ಲೋಕೇಶ್ ನಿರ್ದೇಶನದ ಮೊದಲ ಚಿತ್ರಕ್ಕೆ ‘ಜಿ.ಎಸ್.ಟಿ’ ಎಂದು ಹೆಸರಿಡಲಾಗಿದೆ. ಇದೊಂದು ಹಾರರ್ ಚಿತ್ರವಾಗಿದ್ದು, ಸಿನಿಮಾವನ್ನು ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ನಿರ್ಮಿಸುತ್ತಿದೆ. ಚಿತ್ರದ ಮುಹೂರ್ತ ಇತ್ತೀಚೆಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಮೊದಲ ದೃಶ್ಯಕ್ಕೆ ಸಂದೇಶ್ ನಾಗರಾಜ್ ಆರಂಭ ಫಲಕ ತೋರಿಸಿದರು. ಕ್ಯಾಮೆರಾಗೆ ಗಿರಿಜಾ ಲೋಕೇಶ್ ಚಾಲನೆ ಮಾಡಿದರು. ಇನ್ನುಳಿದಂತೆ ಪಿ.ಶೇಷಾದ್ರಿ, ಟಿ.ಎಸ್.ನಾಗಾಭರಣ, ತಾರಾ, ಶೃತಿ, ಸುಂದರರಾಜ್, ನಿರೂಪ್ ಭಂಡಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇನ್ನು ಸೃಜನ್ ನಿರ್ದೇಶನದ ಮೊದಲ ಸಿನಿಮಾದಲ್ಲಿ ಅವರ ತಾಯಿ ಗಿರಿಜಾ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಇನ್ನುಳಿದಂತೆ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ, ರಜನಿ ಭಾರದ್ವಾಜ್, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮೊದಲಾದವರು ನಟಿಸಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.



