ಕಳೆದ ಒಂದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಅವರ ಬಗ್ಗೆ ಹಗೆ ಶುರುವಾಗಿದೆ. ಕಾನ್ಸರ್ಟ್ ಒಂದರಲ್ಲಿ ಅವರು ಕನ್ನಡಿಗರಿಗೆ, ಕನ್ನಡ ಭಾಷೆಗೆ ಅವಮಾನ ಮಾಡಿದರು, ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು, ಇನ್ನುಮುಂದೆ ಸೋನು ನಿಗಮ್ ಅವರಿಂದ ಕನ್ನಡ ಹಾಡುಗಳನ್ನು ಹಾಡಿಸಬಾರದು ಎನ್ನುವ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಸೋನು ನಿಗಮ್ ಅವರು ಒಂದು ವಿಡಿಯೋ ಕೂಡ ಮಾಡಿ ಪೋಸ್ಟ್ ಮಾಡಿದ್ದರು, ಅದರ ಜೊತೆಗೆ ಈಗ ಮತ್ತೊಂದು ಪೋಸ್ಟ್ ಮೂಲಕ ಕ್ಲಾರಿಟಿ ನೀಡಿದ್ದಾರೆ, ಸೋನು ನಿಗಮ್ ಅವರು ನಿಜಕ್ಕೂ ಹೇಳಿರುವುದು ಏನು ಎಂದು ನೋಡುವುದಾದರೆ..

“ನಮಸ್ಕಾರ..ನಾನು ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು, ಈ ರಾಜ್ಯ ಹಾಗೂ ಇಲ್ಲಿ ಜನರಿಗೆ ಅಪಾರವಾದ ಪ್ರೀತಿ ನೀಡಿದ್ದೇನೆ — ಕೇವಲ ನಾನು ಕರ್ನಾಟಕದಲ್ಲಿದ್ದಾಗ ಅಲ್ಲ, ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ಸಹ ಆ ಪ್ರೀತಿ ಇರುತ್ತದೆ. ನಿಜವಾಗಿ ಹೇಳಬೇಕಾದರೆ, ನಾನು ಕನ್ನಡದಲ್ಲಿ ಹಾಡಿರುವ ಹಾಡುಗಳನ್ನು ನನ್ನ ಇತರೆ ಭಾಷೆಗಳ ಹಾಡುಗಳಿಗಿಂತ (ಹಿಂದಿ ಸಹಿತ) ಹೆಚ್ಚು ಗೌರವಿಸಿದ್ದೇನೆ. ಇದಕ್ಕೆ ಸಾಕ್ಷಿಯಾಗಿ ನೂರಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ನಾನು ಕರ್ನಾಟಕದಲ್ಲಿ ಕಾನ್ಸರ್ಟ್ ಇದ್ದಾಗಲೆಲ್ಲ, ಗಂಟೆಕ್ಕಿಂತ ಹೆಚ್ಚು ಕನ್ನಡ ಹಾಡುಗಳನ್ನೇ ಹಾಡಲು ಸಿದ್ಧತೆ ಮಾಡಿಕೊಂಡಿರುತ್ತೇನೆ. ಆದರೆ, ನಾನು ಇನ್ನು ಹುಡುಗನಲ್ಲ. ಈಗ ನನಗೆ 51 ವರ್ಷ; ನನ್ನ ಜೀವನದ ಎರಡನೇ ಹಂತದಲ್ಲಿದ್ದೇನೆ.

ನನ್ನ ಮಗನಷ್ಟೇ ಕಿರಿಯವನು ಸಾವಿರಾರು ಜನರ ಮುಂದೆ ನೇರವಾಗಿ ನನಗೆ ಬೆದರಿಕೆ ಹಾಕಿದಾಗ, ನಾನು ನೋವುಪಡುವ ಹಕ್ಕು ಹೊಂದಿದ್ದೇನೆ. ಅದು ಸಹ ಭಾಷೆಯ ಹೆಸರಿನಲ್ಲಿ, ಅದು ಕೂಡ ಕನ್ನಡ ಭಾಷೆ! ಅದು ನನ್ನ ಕೆಲಸದಲ್ಲಿ ನನ್ನ ಎರಡನೇ ಭಾಷೆ. ಈ ಎಲ್ಲವನ್ನೂ ನನ್ನ ಮೊದಲ ಹಾಡಿನ ಬಳಿಕವೇ ಮಾಡಲಾಯಿತು! ಅವರು ಮತ್ತಷ್ಟು ಜನರನ್ನು ಪ್ರಚೋದಿಸಿದರು. ಅವರದೇ ಜನರು ಅವರಿಗೆ “ಸಕ್ ಮಾಡಿ” ಎಂದು ಹೇಳುತ್ತಿದ್ದರೂ, ನಾನು ಅವರಿಗೆ ಬಹಳ ಪ್ರೀತಿಯಿಂದ, ಶಾಂತವಾಗಿ ಹೇಳಿದ್ದೆ: “ಇದು ಕೇವಲ ಮೊದಲ ಹಾಡು. ನಾನು ನಿಮಗೆ ನಿರಾಸೆ ಮಾಡುವವನಲ್ಲ. ಆದರೆ ನಾನು ಹೇಗೆ ಯೋಜನೆ ಮಾಡಿದ್ದೀನೋ ಹಾಗೆಯೇ ಕಾನ್ಸರ್ಟ್ ಮುಗಿಯಲು ಅವಕಾಶ ಕೊಡಿ.” ಎಂದು ಹೇಳಿದೆ.

ಪ್ರತಿ ಕಲಾವಿದನಿಗೂ ಒಂದು ಪಟ್ಟಿ ಇರುತ್ತದೆ — ಗಾಯಕ, ವಾದ್ಯಕಾರ ಹಾಗೂ ತಾಂತ್ರಿಕ ತಂಡ ಎಲ್ಲರೇ ಸಮ್ಮಿಲನವಾಗಿ ಕೆಲಸ ಮಾಡುತ್ತಾರೆ. ಆದರೆ ಅವರು ಗಲಾಟೆ ಮಾಡಲು ನಿಶ್ಚಯಿಸಿದ್ದಂತೆ. ಕೋಪಗೊಂಡು ನನ್ನ ಮೇಲೆ ಕಿರುಕುಳ ನೀಡಲು ಶುರುಮಾಡಿದರು.
ಹೇಳಿ, ತಪ್ಪು ಯಾರದು? ನಾನು ನಿಜವಾದ ದೇಶಭಕ್ತನಾಗಿರುವ ಕಾರಣ, ಭಾಷೆ, ಜಾತಿ, ಧರ್ಮದ ಹೆಸರಿನಲ್ಲಿ ಹಗೆ ಹರಡುವ ಯಾರನ್ನೂ ಸಹಿಸಲು ಸಾಧ್ಯವಿಲ್ಲ. ವಿಶೇಷವಾಗಿ ಪಹಲ್ಗಾಂನಲ್ಲಿ ನಡೆದ ದುರ್ಘಟನೆ ನಂತರ. ನಾನು ಅವರಿಗೆ ತಕ್ಕ ಪಾಠವನ್ನು ಕಲಿಸಬೇಕಾಯಿತು, ಕಲಿಸಿದ್ದೇನೆ. ಸಾವಿರಾರು ವಿದ್ಯಾರ್ಥಿಗಳು ಮತ್ತು ಉಪಾಧ್ಯಾಯರು ಕೈತಟ್ಟಿ ಸ್ವಾಗತಿಸಿದರು. ವಿಷಯ ಅಲ್ಲಿ ಮುಗಿಯಿತು.
ನಾನು ನಂತರ ಗಂಟೆಕ್ಕಿಂತ ಹೆಚ್ಚು ಕಾಲ ಕನ್ನಡ ಹಾಡುಗಳನ್ನು ಹಾಡಿದೆ. ಇದು ಎಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಇದೆ.
ಈ ಘಟನೆ ಬಗ್ಗೆ ತೀರ್ಪು ನೀಡಬೇಕಾದ ಜವಾಬ್ದಾರಿಯನ್ನು ನಾನು ಕರ್ನಾಟಕದ ವಿವೇಕಬುದ್ಧಿಯುತ ಜನರ ಮೇಲೆ ಬಿಡುತ್ತೇನೆ. ನಿಮ್ಮ ತೀರ್ಪು ನನಗೆ ಮಾನ್ಯ. ನಾನು ಕರ್ನಾಟಕದ ಕಾನೂನು ಸಂಸ್ಥೆಗಳು ಹಾಗೂ ಪೊಲೀಸರ ಮೇಲೆ ಸಂಪೂರ್ಣ ನಂಬಿಕೆ ಹೊಂದಿದ್ದೇನೆ ಮತ್ತು ಅವರು ಕೇಳಿದ ಎಲ್ಲದರಲ್ಲೂ ಸಹಕರಿಸುತ್ತೇನೆ.ನಾನು ಕರ್ನಾಟಕದಿಂದ ಪಡೆದ ದೈವಿಕ ಪ್ರೀತಿಯನ್ನು ಯಾವತ್ತೂ ಮನಸ್ಸಿನಲ್ಲಿ ಇಟ್ಟುಕೊಳ್ಳಲಿದ್ದೇನೆ. ನಿಮ್ಮ ತೀರ್ಪು ಏನೇ ಆಗಿರಲಿ ಯಾವುದೇ ಹಗೆ ಇಲ್ಲದೆ, ಸದಾ ಕೃತಜ್ಞತೆಯಿಂದ ಸ್ಮರಿಸುತ್ತೇನೆ..” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ ಸೋನು ನಿಗಮ್ ಅವರು.
ಸೋನು ನಿಗಮ್ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಧೋರಣೆ ವ್ಯಕ್ತವಾಗುತ್ತಿದೆ. ಇಂಥವರಿಗೆ ಕನ್ನಡದಲ್ಲಿ ಹಾಡಿ, ಪ್ರಸಿದ್ಧಿ ಪಡೆದುಕೊಳ್ಳುವುದು ಮಾತ್ರ ಬೇಕು, ಈ ರೀತಿ ಮಾತಾಡ್ತಾರೆ ಎನ್ನುವ ಹಾಗೆ ನೆಟ್ಟಿಗರು ಇವರ ಬಗ್ಗೆ ಟ್ರೋಲ್ ಮಾಡಿದರು. ಆದರೆ ಸೋನು ನಿಗಮ್ ಅವರ ಕಡೆಯಿಂದ ಸಿಕ್ಕಿರುವ ಸ್ಪಷ್ಟನೆ ಈ ರೀತಿ ಇದ್ದು, ಇನ್ನುಮುಂದೆ ನೆಟ್ಟಿಗರು ಇವರ ವಿಚಾರದಲ್ಲಿ ಏನನ್ನುತ್ತಾರೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಕನ್ನಡದ ವಿಚಾರಕ್ಕೆ ಖ್ಯಾತ ಕಲಾವಿದರು, ಗಾಯಕರು ಎಲ್ಲರೂ ಈ ರೀತಿ ನೆಗಟಿವ್ ಆಗಿ, ಕನ್ನಡಿಗರ ಕೋಪಕ್ಕೆ ಗುರಿ ಆಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಆಗಿದೆ.



