ಭಾರತದಲ್ಲಿ ಅತ್ಯಂತ ಹೆಚ್ಚು ಇಷ್ಟಪಡುವ ಗಾಯಕಿಯಾಗಿ ಗುರುತಿಸಿಕೊಂಡಿರುವವರು ಗಾಯಕಿ ಶ್ರೇಯಾ ಘೋಷಾಲ್. ಇವರ ಸುಮಧುರ ಕಂಠ ಎಲ್ಲರಿಗೂ ಎಷ್ಟು ಇಷ್ಟ ಎಂದು ನಮಗೆಲ್ಲಾ ಗೊತ್ತೇ ಇದೆ. ಶ್ರೇಯಾ ಘೋಷಾಲ್ ಅವರು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬೆಂಗಾಲಿ ಸೇರಿದಂತೆ ಭಾರತದ ಅನೇಕ ಭಾಷೆಗಳಲ್ಲೂ ಹಾಡಿದ್ದಾರೆ. ಕನ್ನಡದಲ್ಲಿ ಶ್ರೇಯಾ ಅವರು ಹಾಡಿರುವ ಬಹುತೇಕ ಹಾಡುಗಳು ಸೂಪರ್ ಹಿಟ್. ಎಲ್ಲಾ ಕಾಲಕ್ಕೂ ಜನರು ಇಷ್ಟಪಟ್ಟು ಕೇಳುವ ಹಲವು ಹಾಡುಗಳನ್ನು ಶ್ರೇಯಾ ಅವರು ಹಾಡಿದ್ದಾರೆ. ಆದರೆ ಇದೀಗ ಶ್ರೇಯಾ ಅವರು ಕನ್ನಡ ಹಾಡುಗಳಿಂದ ದೂರ ಉಳಿದಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿಬಂದಿದೆ.

ಹೌದು, ಈ ಸುದ್ದಿ ಹರಡಿರುವುದಂತೂ ನಿಜ. ಶ್ರೇಯಾ ಅವರು ಕನ್ನಡದ ದತ್ತು ಪುತ್ರಿಯ ಹಾಗಿದ್ದಾರೆ ಎಂದು ಹೇಳಿದರೂ ತಪ್ಪಲ್ಲ. ಕನ್ನಡಿಗರಿಗೆ ಇವರ ಹಾಡುಗಳು ಅಷ್ಟು ಇಷ್ಟ, ಕನ್ನಡತಿಯೇ ಒಂದು ಹಾಡನ್ನು ಅಷ್ಟು ಸುಂದರವಾಗಿ ಹಾಡುತ್ತಿರುವ ಹಾಗೆ ಶ್ರೇಯಾ ಅವರ ಕನ್ನಡ ಹಾಡುಗಳನ್ನು ಕೇಳಿದರೆ ಸಂತೋಷವಾಗುತ್ತದೆ. ಕನ್ನಡದ ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾದಲ್ಲಿ ಶ್ರೇಯಾ ಅವರ ಹಾಡುಗಳು ಇದ್ದೇ ಇರುತ್ತಿತ್ತು. ಕನ್ನಡದ ಎಲ್ಲಾ ಸಂಗೀತ ನಿರ್ದೇಶಕರು ಇವರ ಜೊತೆಗೆ ಕೆಲಸ ಮಾಡಲು ಬಯಸುತ್ತಿದ್ದರು. ಇನ್ನು ಕನ್ನಡ ಚಿತ್ರಪ್ರೇಮಿಗಳಿಗೆ ಶ್ರೇಯಾ ಘೋಷಾಲ್ ಅವರ ಧ್ವನಿ ಮೆಚ್ಚಿನ ಧ್ವನಿ ಆಗಿದೆ.
ಕನ್ನಡಿಗರನ್ನು ಕಂಡರೆ ಶ್ರೇಯಾ ಅವರಿಗೂ ಅಷ್ಟೇ ಪ್ರೀತಿ. ಬೆಂಗಳೂರಿನಲ್ಲಿ, ಮೈಸೂರಿನ ದಸರಾದಲ್ಲಿ ಹಲವು ಬಾರಿ ಕಾನ್ಸರ್ಟ್ ನೀಡಿದ್ದಾರೆ ಶ್ರೇಯಾ ಘೋಷಾಲ್. ಕನ್ನಡದಲ್ಲಿ ಹಾಡಿದ್ದಾರೆ, ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಇಂಥ ಶ್ರೇಯಾ ಘೋಷಾಲ್ ಅವರು ಕನ್ನಡ ಹಾಡುಗಳನ್ನು ಹಾಡುವುದರಿಂದ ದೂರ ಉಳಿದಿದ್ದಾರೆ ಎನ್ನುವ ವಿಷಯವನ್ನು ಕನ್ನಡದ ಖ್ಯಾತ ನಿರ್ದೇಶಕ ನಾಗ್ ಶೇಖರ್ ಅವರು ತಿಳಿಸಿದ್ದಾರೆ. ನಾಗಶೇಖರ್ ಅವರು ಸಂಜು ವೆಡ್ಸ್ ಗೀತಾ2 ಸಿನಿಮಾ ನಿರ್ದೇಶನ ಮಾಡಿದ್ದು, ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಸಂಜು ವೆಡ್ಸ್ ಗೀತಾ ಪಾರ್ಟ್ 1 ನಲ್ಲಿ ಶ್ರೇಯಾ ಘೋಷಾಲ್ ಅವರು ಹಾಡಿದ್ದರು.

ಆ ಹಾಡುಗಳು ಸೂಪರ್ ಹಿಟ್ ಆಗಿದ್ದವು, ಈಗಲೂ ಎಲ್ಲರಿಗೂ ತುಂಬಾ ಇಷ್ಟ. ಅದೇ ರೀತಿ ಸಂಜು ವೆಡ್ಸ್ ಗೀತಾ2 ಸಿನಿಮಾದಲ್ಲಿ ಸಹ ಅವರೇ ಹಾಡಿದರೆ ಚೆನ್ನಾಗಿರುತ್ತದೆ ಎಂದು ನಾಗಶೇಖರ್ ಅವರು ಕಾಲ್ ಮಾಡಿದಾಗ, ಶ್ರೇಯಾ ಅವರು ಹಾಡುವುದಿಲ್ಲ ಎಂದು ಹೇಳಿದರಂತೆ. ಆದರೆ ಅದಕ್ಕೆ ಕಾರಣ ಏನು ಅಂತ ಗೊತ್ತಿಲ್ಲ, ಅದನ್ನ ನಾನು ಕೆದಕೋಕೆ ಹೋಗಿಲ್ಲ ಎಂದು ನಿರ್ದೇಶಕ ನಾಗಶೇಖರ್ ಅವರು ಹೇಳಿದ್ದಾರೆ. ಇತ್ತೀಚೆಗೆ ಶ್ರೇಯಾ ಘೋಷಾಲ್ ಅವರು ಕನ್ನಡ ಹಾಡುಗಳನ್ನು ಹಾಡುವುದರಿಂದ ದೂರ ಉಳಿದಿದ್ದಾರೆ ಎನ್ನುವುದಂತೂ ಸತ್ಯವಾಗಿದೆ. ಈ ರೀತಿಯ ನಿರ್ಧಾರ ಯಾಕೆ ತೆಗೆದುಕೊಂಡಿದ್ದಾರೆ ಇನ್ಮುಂದೆ ಶ್ರೇಯಾ ಅವರು ಹಾಡೋದಿಲ್ವಾ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.
ಈ ರೀತಿ ಆದಾಗ ನಾಗಶೇಖರ್ ಅವರಿಗೆ ನಮ್ಮಲ್ಲಿ ಕೂಡ ಒಬ್ಬ ನಮ್ಮ ಶ್ರೇಯಾ ಘೋಷಾಲ್ ಇರಬೇಕು ಎಂದು ಅನ್ನಿಸಿತಂತೆ. ಈ ಸಿನಿಮಾದ ಹಾಡುಗಳನ್ನ ಕೇಳಿದವರು, ಶ್ರೇಯಾ ಘೋಷಾಲ್ ಹಾಡಿದ್ದಾರಾ ಎಂದು ಕೇಳಿದರಂತೆ. ಆದರೆ ಈ ಹಾಡುಗಳನ್ನು ಕನ್ನಡದ ಮತ್ತೊಂದು ಪ್ರತಿಭೆ ಹಾಡಿದ್ದಾರೆ. ಕನ್ನಡದ ಪ್ರತಿಭೆಗಳನ್ನು ನಾವು ಗುರುತಿಸಿ ಅವರಿಗೆ ಸಹ ಅವಕಾಶ ಕೊಡಬೇಕು ಎಂದು ನಾಗಶೇಖರ್ ಅವರು ತಿಳಿಸಿದ್ದಾರೆ. ಅಷ್ಟಕ್ಕೂ ನಿಜಕ್ಕೂ ಶ್ರೇಯಾ ಘೋಷಾಲ್ ಅವರು ಇನ್ಮುಂದೆ ಯಾವುದೇ ಕನ್ನಡ ಸಿನಿಮಾದಲ್ಲಿ ಹಾಡೋದಿಲ್ವಾ ಎನ್ನುವುದನ್ನು ಕಾದು ನೋಡಬೇಕಿದೆ.



