ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೆಲ್ಲಾ ಪ್ರಸಿದ್ಧಿಯಾಗಿರುವ ಬೆಂಗಳೂರು ಬೇಸಿಗೆ ಪ್ರಾರಂಭಕ್ಕೂ ಮೊದಲೇ ಬಿಸಿಲಿನ ಜಳಕ್ಕೆ ತತ್ತರಿಸಿ ಹೋಗಿದೆ ಎಂದರೆ ಸುಳ್ಳಲ್ಲಾ. ೨೦ ವರ್ಷಗಳಲ್ಲಿಯೇ ಅತಿ ಹೆಚ್ಚು ತಾಪಮಾನಕ್ಕೆ ಬೆಂಗಳೂರು ಸಾಕ್ಷಿಯಾಗಿದ್ದು, ಗಮನಾರ್ಹ ಹವಾಮಾನ ಬದಲಾವಣೆಯ ದಾಖಲೆಯನ್ನು ಹೊಂದಿದೆ.
ಟೆಕ್ಹಬ್ನಲ್ಲಿ ಗರಿಷ್ಠ ತಾಪಮಾನ
ಈಗಿನ್ನೂ ಫೆಬ್ರವರಿ ತಿಂಗಳು. ತರಗೆಲೆಗಳು ಉದಿರೆ, ಚಿಗುರೆಲೆಗಳು ಮೂಡಿ ತಂಪಾದ ವಾತಾವರಣದ ಮೂಲಕ ಬೆಂಗಳೂರು ಕೂಲ್ ಸಿಟಿಯಾಗಿರಬೇಕಿತ್ತು. ಆದರೆ ಯುಗಾದಿ ಹಬ್ಬ ಆಚರಿಸುವ ಮೊದಲೇ ಬೇಸಿಗೆ ಕಾವು ಟೆಕ್ ಹಬ್ ಬೆಂಗಳೂರನ್ನು ನಲುಗಿಸುತ್ತಿದೆ. ಹವಾಮಾನ ಇಲಾಖೆ ವರದಿಯ ಪ್ರಕಾರ ಫೆಬ್ರವರಿ ೧೭ರಂದು ೩೫.೯ ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಕಂಡು ಬಂದಿದ್ದು, ೨೦ ವರ್ಷಗಳಲ್ಲೇ ಅತಿ ಹೆಚ್ಚು ಬಿಸಿಲಿನ ಪ್ರಖರತೆ ಎಂದು ದಾಖಲೆಯಾಗಿದೆ.
೨೦೦೫ರ ಬಿಸಿಲ ಜಳದ ನೆನಪು
೨೦೦೫ ಫೆಬ್ರವರಿ ೧೭ರಂದು ಸಹ ಇದೇ ರೀತಿ ಅತಿ ಹೆಚ್ಚು ತಾಪಮಾನವನ್ನು ಬೆಂಗಳೂರು ಎದುರಿಸಿತ್ತು. ಇದೀಗ ಮತ್ತೊಮ್ಮೆ ಗರಿಷ್ಠ ತಾಪಮಾನ ಕಂಡು ಬಂದಿದ್ದು, ಬೇಸಿಗೆ ಹತ್ತಿರವಾಗುತ್ತಿದ್ದಂತೆ ಸಿಲಿಕಾನ್ ಸಿಟಿ ಮತ್ತಷ್ಟು ಬಿಸಿಲಿನ ಕಾವನ್ನು ಎದುರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ರಾಷ್ಟರಾಜಧಾನಿಯನ್ನು ಹಿಂದಿಟ್ಟ ಗಾರ್ಡನ್ ಸಿಟಿ
ಇತ್ತೀಚಿನ ದಿನಗಳಲ್ಲಿ ತಾಪಮಾನ ಏರಿಕೆ ಎಂದಾಕ್ಷಣ ಎಲ್ಲರ ಚಿತ್ತ ರಾಷ್ಟç ರಾಜಧಾನಿ ದೆಹಲಿಯೆಡೆಗೆ ಬೊಟ್ಟು ಮಾಡುವಂತಾಗಿತ್ತು. ಆದರೆ ಪ್ರಸಕ್ತ ಸಾಲಿನ ಬಿಸಿಲಿನ ಜಳಕ್ಕೆ ತತ್ತರಿಸಿ ಹೋಗಿರುವ ಗಾರ್ಡನ್ ಸಿಟಿ ದೆಹಲಿಗಿಂತ ಅಧಿಕ ತಾಪಮಾನ ಎದುರಿಸುತ್ತಿರುವ ನಗರ ಎಂದು ಗುರುತಿಸಿಕೊಳ್ಳುತ್ತಿದೆ. ಮುಖ್ಯವಾಗಿ ಫೆಬ್ರವರಿ ೧೭ರಂದು ಬೆಂಗಳೂರಿನಲ್ಲಿ ದಾಖಲಾಗಿರುವ ತಾಪಮಾನ ಪ್ರಮಾಣ ದೆಹಲಿಯ ೨೭ ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹಿಂದಿಕ್ಕಿದೆ. ಈ ಮೂಲಕ ಉತ್ತರ ಭಾರತ ಅತಿ ಹೆಚ್ಚು ವ್ಯತಿರಿಕ್ತ ಹವಾಮಾನಕ್ಕೆ ಸಾಕ್ಷಿಯಾಗುತ್ತದೆ ಎಂಬುವ ವಾಡಿಕೆಯನ್ನು ಸುಳ್ಳು ಮಾಡಿದಂತಾಗಿದೆ. ಇನ್ನೂ ಕಳೆದ ವರ್ಷದ ಬೆಂಗಳೂರು ತಾಪಮಾನಕ್ಕೆ ಹೋಲಿಸಿದರೆ ಈ ವರ್ಷ ೨.೭ ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆ ಕಂಡಿದೆ.

ಬೆಳಗ್ಗೆ ಮಂಜು, ಮಧ್ಯಾಹ್ನ ಸುಡುಬಿಸಿಲು
ಹೌದು ಬೆಳಗ್ಗಿನ ಸಮಯದಲ್ಲಿ ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬಂದರೆ, ಮಧ್ಯಹ್ನದ ಹೊತ್ತಿಗೆ ಸುಡು ಬಿಸಿಲು ನೆತ್ತಿ ಸುಡುತ್ತಿರುತ್ತದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಗರಿಷ್ಠ ತಾಪಮಾನ ೩೪ ಡಿಗ್ರಿ ಇದ್ದರೆ, ಕನಿಷ್ಠ ತಾಪಮಾನ ೧೮ ಡಿಗ್ರಿ ಇರಲಿದೆ. ಮಾರ್ಚ್ನ ಮೊದಲ ವಾರದಲ್ಲಿ ಪ್ರಾರಂಭವಾಗಬೇಕಿದ್ದ ಬೇಸಿಗೆ ಫೆಬ್ರವರಿ ಮೊದಲ ವಾರದಲ್ಲಿಯೇ ಆರಂಭವಾಗಿದೆ. ಒಟ್ಟಾರೆ, ಈ ವರ್ಷ ಟೆಕ್ ಪಾರ್ಕ್ ಗರಿಷ್ಠ ತಾಪಮಾನ ದಾಖಲೆಯನ್ನು ಬರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.