ಏತಕಿ ಎಂಟರ್ಟೈನ್ಮೆಂಟ್ ನಡಿ ನಿರ್ಮಾಣವಾಗೊಂಡಿರುವ ‘ಚಿಕ್ಕು’ ಚಿತ್ರದ ವಿತರಣಾ ಹಕ್ಕುಗಳನ್ನು ಕರ್ನಾಟಕದ ಜನಪ್ರಿಯ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ.ಅರ್.ಜಿ. ಸ್ಟುಡಿಯೋಸ್ ಪಡೆದುಕೊಂಡಿದ್ದು, ಚಿತ್ರವನ್ನು ಸೆ. 28ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ‘ಚಿಕ್ಕು’ ಚಿತ್ರದಲ್ಲಿ ಸಿದ್ಧಾರ್ಥ್ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ವೃತ್ತಿಜೀವನದಲ್ಲೇ ಇದೊಂದು ವಿಭಿನ್ನ ಚಿತ್ರವಷ್ಟೇ ಅಲ್ಲ, ಇದೊಂದು ಮೈಲಿಗಲ್ಲು ಎಂದು ಹೇಳಲಾಗುತ್ತಿದೆ.

ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ತಮ್ಮ ಪಾತ್ರಗಳನ್ನು ಜೀವಿಸಿದ್ದು, ಪ್ರೇಕ್ಷಕರನ್ನು ತಮ್ಮ ಅಭಿನಯದ ಮೂಲಕ ಮಂತ್ರಮುಗ್ಧರನ್ನಾಗಿಸಿದ್ದಾರೆ. ಈ ಚಿತ್ರದ ಟೀಸರನ್ನು ಇತ್ತೀಚೆಗಷ್ಟೇ ‘ಅಭಿನಯ ಚಕ್ರವರ್ತಿ’ ಸುದೀಪ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಚಿಕ್ಕು’ ಚಿತ್ರವು ಕನ್ನಡದ ಮಟ್ಟಿಗೆ ವಿನೂತನವಾಗಿದ್ದು, ಒಂದು ವಿಭಿನ್ನ ಕಥೆಯನ್ನು ಹೇಳುತ್ತದೆ. ಚಿತ್ರದಲ್ಲೊಂದು ಅದ್ಭುತವಾದ ಸಂದೇಶವಿದ್ದು, ಈ ವಿಷಯವು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಲಿದೆ.
ಈ ಹಿಂದೆ ತಮಿಳಿನಲ್ಲಿ ‘ಪನ್ನೈಯಾರುಂ ಪದ್ಮಿನಿಯುಂ’ ನಂತಹ ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದ ಎಸ್.ಯು. ಅರುಣ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
‘ಚಿಕ್ಕು’ ಚಿತ್ರವು ಒಬ್ಬ ಚಿಕ್ಕಪ್ಪ ಮತ್ತು ಅವನ ಸೋದರ ಸೊಸೆಯ ಕುರಿತಾದ ಚಿತ್ರವಾಗಿದ್ದು, ಇಂಥದ್ದೊಂದು ಅಪರೂಪದ ಸಂಬಂಧದ ಕುರಿತಾಗಿ ಇದೇ ಮೊದಲ ಬಾರಿಗೆ ಚಿತ್ರವೊಂದು ನಿರ್ಮಾಣವಾಗಿದೆ. ಈಗಾಗಲೇ ಚಿತ್ರದ ಪ್ರಿವ್ಯೂ ನೋಡಿದವರೆಲ್ಲರೂ, ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದು, ‘ಚಿಕ್ಕು’ ತಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾನೆ ಎಂದು ಹೇಳಿದ್ದಾರೆ.
ಸಿದ್ಧಾರ್ಥ್, ನಿಮಿಷಾ ಸಜಯನ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ದಿಬು ನಿನಾನ್ ಥಾಮಸ್ ಸಂಗೀತ ನಿರ್ದೇಶನ ಮಾಡಿದ್ದು, ಬಾಲಾಜಿ ಸುಬ್ರಹ್ಮಣ್ಯಂ ಅವರ ಛಾಯಾಗ್ರಹಣವಿದೆ.