90ರ ದಶಕದಲ್ಲಿ ತಮ್ಮ ಸೌಂದರ್ಯ ಮತ್ತು ನಟನೆಯಿಂದ ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಾಯಕಿ ರಂಭಾ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಮಿಂಚಲು ಸಿದ್ಧರಾಗುತ್ತಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸ್ಟಾರ್ ಹೀರೋಯಿನ್ ಆಗಿ ಹೊರಹೊಮ್ಮಿದ್ದ ರಂಭಾ, ಮದುವೆಯ ನಂತರ ಸಿನಿಮಾಗಳಿಂದ ದೂರ ಉಳಿದಿದ್ದರು. ರಂಭಾ ಇಂದಿಗೂ ಅನೇಕರಿಗೆ ನೆಚ್ಚಿನ ನಾಯಕಿ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಇದೀಗ ರಂಭಾ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧರಾಗುತ್ತಿದ್ದಾರೆ. ಹೌದು, ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಸಿನಿರಂಗ ಮರುಪ್ರವೇಶಕ್ಕೆ ರೆಡಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ರಂಭಾ ಹೇಳಿದ್ದೇನು?
ಅನೇಕ ಹಿರಿಯ ನಟಿಯರು ಈಗ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ನಾಯಕಿಯರಾಗಿ ಮಿಂಚಿದ್ದವರು ಕೂಡ ಈಗ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಒಕ್ಕಟಿ ಅಡಕ್ಕು ಚಿತ್ರದ ಮೂಲಕ ನಾಯಕಿಯಾಗಿ ಪರಿಚಯವಾದ ರಂಭಾ ಕೂಡ ಅವರಲ್ಲಿ ಒಬ್ಬರು. ರಂಭಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಟಾಲಿವುಡ್ ನ ಇವಿವಿ ಸತ್ಯನಾರಾಯಣ ಅವರ ನಿರ್ದೇಶನದ ‘ಆ ಒಕ್ಕಟಿ ಅಡಕ್ಕು’ ಎಂಬ ಬ್ಲಾಕ್ಬಸ್ಟರ್ ಚಿತ್ರದ ಮೂಲಕ. ಮೊದಲ ಸಿನಿಮಾ ಹಿಟ್ ಆದ ನಂತರ, ಸಾಲು ಸಾಲು ಅವಕಾಶಗಳು ಅರಸಿ ಬಂದವು. ಅದಾದ ನಂತರ ಈ ನಟಿ ಅನೇಕ ಸ್ಟಾರ್ ಹೀರೋಗಳ ಜೊತೆ ನಟಿಸಿದರು. ಅಲ್ಲಾರಿ ಪ್ರೇಮಿಕುಡು, ಅಲ್ಲುಡ ಮಜಾಕ, ಬಾಂಬೆ ಪ್ರಿಯುಡು, ಮತ್ತು ಬಾವಗರು ಬಾಗುನ್ನಾರ ಮುಂತಾದ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ನಟಿಸಿದ ನಂತರ ಅವರು ಸ್ಟಾರ್ ನಾಯಕಿಯಾದರು. ರಂಭಾ ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿಯೂ ಚಿತ್ರಗಳನ್ನು ಮಾಡಿದ್ದಾರೆ. ಅವರು ಎಲ್ಲಾ ಭಾಷೆಗಳಲ್ಲಿ ಸೇರಿ 50 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ.

ರಂಭಾ ಕನ್ನಡದಲ್ಲಿ ಸರ್ವರ್ ಸೋಮಣ್ಣ, ಕೆಂಪಯ್ಯ ಐಪಿಎಸ್, ಓ ಪ್ರೇಮವೇ, ಪಾಂಚಾಲಿ, ಭಾವ ಭಾಮೈದ, ಸಾಹುಕಾರ, ಪಾಂಡು ರಂಗ ವಿಠ್ಠಲ, ಗಂಡುಗಲಿ ಕುಮಾರ ರಾಮ, ಅನಾಥರು ಚಿತ್ರದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.
ಕೆಲವು ವರ್ಷಗಳ ನಂತರ, ಅವರು ಐಟಂ ಹಾಡುಗಳನ್ನು ಮಾಡಲು ಹಿಂಜರಿಯಲಿಲ್ಲ. ಅದರ ಭಾಗವಾಗಿ, ಅವರು ದೇಶಮುದುರು ಮತ್ತು ಯಮಡೊಂಗದಂತಹ ಚಲನಚಿತ್ರಗಳಲ್ಲಿ ವಿಶೇಷ ಗೀತೆಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದರು. ತಮ್ಮ ಗ್ಲಾಮರ್, ನಟನೆ ಮತ್ತು ಆಕರ್ಷಕ ಡಾನ್ಸ್ನಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದ ಈ ನಟಿ ಈಗ ತಮ್ಮ ಎರಡನೇ ಇನ್ನಿಂಗ್ಸ್ಗೆ ತಯಾರಿ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡುತ್ತಾ, ರಂಭಾ ತಮ್ಮ ಅಭಿಮಾನಿಗಳಿಗೆ, “ನಾನು ಈಗ ಯಾವುದೇ ಸವಾಲಿನ ಪಾತ್ರಗಳನ್ನು ಮಾಡಲು ಸಿದ್ಧ. ನನ್ನ ಮೊದಲ ಆಯ್ಕೆ ಸಿನಿಮಾ. ಈಗ ಮತ್ತೆ ನಟಿಸಲು ಸರಿಯಾದ ಸಮಯ ಇದು ಎಂದು ನಾನು ಭಾವಿಸುತ್ತೇನೆ. ಹೊಸ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಮತ್ತೆ ಪ್ರೇಕ್ಷಕರನ್ನು ಮೆಚ್ಚಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ನಟಿಯಾಗಿ ತಮ್ಮ ವೃತ್ತಿಜೀವನದಲ್ಲಿ ಮರೆಯಲಾಗದ ಹಲವು ಕ್ಲಾಸಿಕ್ ಚಿತ್ರಗಳನ್ನು ನೀಡಿದ ರಂಭಾ, ಕೆಲವು ಸಮಯದಿಂದ ಚಿತ್ರಗಳಿಂದ ದೂರವಿದ್ದಾರೆ ಎಂದು ತಿಳಿದಿದೆ. ಈಗ ಅವರು ಮತ್ತೊಮ್ಮೆ ತೆರೆಯ ಮೇಲೆ ಸದ್ದು ಮಾಡಲು ಸಿದ್ಧರಾಗಿರುವುದಾಗಿ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಅವರ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ಅಲ್ಲದೆ, ಅವರು ಮತ್ತೆ ಸಿನಿಮಾ ಪ್ರವೇಶಿಸಿದಾಗ ಯಾವ ರೀತಿಯ ಸಿನಿಮಾಗಳನ್ನು ಮಾಡುತ್ತಾರೆ? ಎಂದು ಕಾತುರದಿಂದ ಕಾಯುತ್ತಿದ್ದಾರೆ.
‘ವಡೋಸ್ತಾಡು’ ಚಿತ್ರದಲ್ಲಿ ನಟಿಸಿದ ನಂತರ ರಂಭಾ, ಮಲೇಷ್ಯಾದ ಉದ್ಯಮಿಯೊಬ್ಬರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಇತ್ತೀಚೆಗೆ ರಂಭಾ ಅವರ ಮಕ್ಕಳು ತಮಿಳು ತಾರೆ ದಳಪತಿ ವಿಜಯ್ ಅವರೊಂದಿಗೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದು ತಿಳಿದಿದೆ. ಅದರಲ್ಲಿ ರಂಭಾ ಮತ್ತು ಅವರ ಮಕ್ಕಳು ಮುದ್ದಾಗಿ ಕಾಣುತ್ತಿದ್ದರು.