ರಾಜಕೀಯ ಅಂದಮೇಲೆ ಒಮ್ಮೊಮ್ಮೆ ಶತ್ರುಗಳ ಜೊತೆಗೂ ವೇದಿಕೆ ಹಂಚಿಕೊಳ್ಳಬೇಕಾಗುತ್ತದೆ. ಅನೇಕ ಬಾರಿ ಎಲ್ಲಾ ರಾಜಕಾರಣಿಗಳು ಹೇಳೊ ಮಾತು ಅಂದ್ರೆ ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ ಯಾರೂ ಮಿತ್ರರಲ್ಲ ಅಂತ. ಅದಕ್ಕೆ ಅನೇಕ ಉದಾಹರಣೆಗಳು ಕೂಡ ಇವೆ. ತಾಜಾ ಉದಾಹರಣೆ ಎನ್ನುವಂತೆ ಸಿಪಿ ಯೋಗೇಶ್ವರ್ ನೋಡಿದ್ರೆ ಕೆಂಡ ಕಾರುತ್ತಿದ್ದ ಡಿಕೆ ಬ್ರದರ್ಸ್ ಕೊನೆಗೆ ಅವರನ್ನ ಬಿಜೆಪಿಯಿಂದ ಕರೆತಂದು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿಸಿ ಗೆಲ್ಲಿಸಿಕೊಂಡು ಬಂದರು. ಈಗ ಇಂತಹದ್ದೇ ಮತ್ತೊಂದು ಉದಾಹರಣೆ ಸಿಕ್ಕಿದೆ.
ಆರ್ ಆರ್ ನಗರದಲ್ಲಿ ಕಡು ವೈರಿಗಳಂತೆ ಬಿಂಬಿತವಾಗಿರುವವರು ಕುಸುಮಾ ಹಾಗೂ ಮುನಿರತ್ನ. ಇತ್ತ ಡಿಕೆ ಬ್ರದರ್ಸ್ ಗೆ ಮುನಿರತ್ನ ಅಂದರೆ ಸಾಕು ಉರಿದು ಬೀಳ್ತಾ ಇದ್ದಾರೆ. ಇತ್ತ ಡಿಕೆ ಬ್ರದರ್ಸ್ ನ ನೋಡಿದರೆ ಸಾಕು ಮುನಿರತ್ನ ಕೂಡ ಹೀಗೆ ಉರಿದು ಬೀಳ್ತಾ ಇದ್ದಾರೆ. ಯಾವುದೇ ಘಟನೆ ನಡೆದ್ರೆ ಸಾಕು ಆರ್ ಆರ್ ನಗರದಲ್ಲಿ ಅದಕ್ಕೆ ಡಿಕೆ ಬ್ರದರ್ಸ್ ಕಾರಣ ಅಂತ ಆರೋಪ ಮಾಡುತ್ತಲೇ ಇದ್ದಾರೆ. ಇತ್ತೀಚಿಗೆ ಅನುದಾನ ವಿಚಾರವಾಗಿಯೂ ಡಿಕೆ ಶಿವಕುಮಾರ್ ವಿರುದ್ಧ ತಿರುಗಿ ಬಿದ್ದಿದ್ದ ಮುನಿರತ್ನ ಬೆಂಗಳೂರು ನಗರಾಭಿವೃದ್ಧಿ ಸಚಿವರನ್ನ ಬದಲಾಯಿಸಿ ಅಂತ ಸಿಎಂ ಗೆ ಪತ್ರ ಬರೆದಿದ್ದರು.

ಈ ರೀತಿ ಕಡು ವೈರಿಗಳಾಗಿರೋ ಈ ನಾಯಕರು ಮುಂದೆಯೂ ಮುಖ ನೋಡೋದಿಲ್ಲ ಅನ್ನೋ ಚರ್ಚೆ ರಾಜಕೀಯ ವಲಯದಲ್ಲಿ ಇದೆ. ಈ ಮಧ್ಯೆ ಹೊಸ ಅಪ್ಡೇಟ್ ಎನ್ನುವಂತೆ ಡಿಕೆ ಶಿವಕುಮಾರ್ ಹಾಗು ಶಾಸಕ ಮುನಿರತ್ನ ಮುಖಾಮುಖಿಯಾಗಿದ್ದಾರೆ. ಇಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಪಿ ಎಂ ಉಷಾ ಯೋಜನೆಯಡಿಯಲ್ಲಿ ವಿಶ್ವವಿದ್ಯಾಲಯ ಶೈಕ್ಷಣಿಕ ಮತ್ತು ಸಂಶೋಧನಾ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿದೆ. ಈ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್, ಶಾಸಕ ಮುನಿರತ್ನ ಭಾಗಿಯಾಗಿದ್ದಾರೆ.
ಶಂಕುಸ್ಥಾಪನೆ ವೇಳೆಯೂ ಈ ನಾಯಕರು ಮುಖ ನೋಡಿಲ್ಲ. ಕಲ್ಲಿನ ಅನಾವರಣ ವೇಳೆ ಕರ್ಟನ್ ಸರಿಸಿ ಅಂತ ಡಿಕೆ ಶಿವಕುಮಾರ್ ಕಡೆ ಬಟ್ಟೆಯನ್ನ ಕೊಡಲು ಮುಂದಾಗಿದೆ. ಆದರೆ ಡಿಕೆ ಶಿವಕುಮಾರ್ ಕ್ಯಾರೇ ಅನ್ನದೆ ಪುಷ್ಪಾರ್ಚನೆಯನ್ನ ಅಡಿಗಲ್ಲಿಗೆ ಮಾಡಿದ್ದಾರೆ ಮುನಿರತ್ನ ಬೇರೆ ಮಾರ್ಗ ಇಲ್ಲದೆ ಅಡಿಗಲ್ಲಿಗೆ ಹಾಕಿದ್ದ ಕರ್ಟನ್ ಸರಿಸಿದ್ದಾರೆ. ಬಳಿಕ ಅಲ್ಲಿಂದ ಉಭಯ ನಾಯಕರು ಹೊರಟಿದ್ದಾರೆ.

ಸದ್ಯ ಈ ಬೆಳವಣಿಗೆ ಹಲವು ಚರ್ಚೆಗೆ ಕಾರಣವಾಗಿದೆ. ಮುನಿಸು ಮರೆತು ನಾಯಕರು ಒಂದಾದ್ರಾ ಅಥವಾ ಅನಿವಾರ್ಯವಾಗಿ ಮುನಿರತ್ನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಯ್ತಾ ಅನ್ನೋ ಪ್ರಶ್ನೆ ಎದ್ದಿದೆ. ಡಿಕೆ ಶಿವಕುಮಾರ್ ಸದಾ ಹಿಗ್ಗಾ ಮುಗ್ಗ ಬೈತಾ ಇದ್ದ ಮುನಿರತ್ನ ಈಗ ವೇದಿಕೆ ಹಂಚಿಕೊಂಡಿರೋದು ಹಲವು ಅರ್ಥ ಕಲ್ಪಿಸುತ್ತಿದೆ. ಇತ್ತ ಡಿಕೆ ಶಿವಕುಮಾರ್ ಕೂಡ ಆಗಿಂದಾಗ್ಲೇ ಆರ್ ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಕಿಡಿ ಕಾರುತ್ತಲೇ ಇದ್ದಾರೆ. ಈಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರೋದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಇನ್ನು ಮತ್ತೊಂದು ವಿಚಾರ ಅಂದ್ರೆ ರಾಜಕೀಯವೇ ಒಂದು ಚದುರಂಗ. ಇಲ್ಲಿ ಯಾರೂ ಶತ್ರುಗಳಲ್ಲ ಎಂಬಂತೆ ಈ ನಾಯಕರು ಒಂದಾದ್ರಾ ಅನ್ನೋದು ಕೂಡ ಚರ್ಚೆಯಾಗುತ್ತಿದೆ. ಅನುದಾನ, ಮುಂದಿನ ರಾಜಕೀಯ ಭವಿಷ್ಯಕ್ಕೆ ಸಮಸ್ಯೆ ಆಗಬಾರದು ಅಂತ ಮುನಿರತ್ನ ಡಿಕೆ ಮುಂದೆ ಮಂಡಿಯೂರಿದ್ರಾ ಅನ್ನೋ ಚರ್ಚೆ ಕೂಡ ಶುರುವಾಗಿದೆ.



