ನಟ ರಾಮ್ ಚರಣ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ ‘ಗೇಮ್ ಚೇಂಜರ್’ ಪ್ರಚಾರದಲ್ಲಿ ನಿರತರಾಗಿದ್ದಾರೆ ಮತ್ತು ಅವರ ಮುಂದಿನ ಪ್ರಾಜೆಕ್ಟ್ನ ಚಿತ್ರೀಕರಣಕ್ಕೂ ತಯಾರಿ ನಡೆಸುತ್ತಿದ್ದಾರೆ. ನವೆಂಬರ್ 22, 2024 ರಿಂದ ಅವರು ಮೈಸೂರಿನಲ್ಲಿ ತಮ್ಮ ಹೊಸ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಇದನ್ನು ‘ಉಪ್ಪೇನ’ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಎಆರ್ ರೆಹಮಾನ್ ಸಂಯೋಜಿಸುತ್ತಿದ್ದಾರೆ. ಅಂದಹಾಗೆ ಸೋಮವಾರ ರಾಮ್ ಚರಣ್ ಎಆರ್ ರೆಹಮಾನ್ ಗೆ ಕೊಟ್ಟ ಮಾತನ್ನು ಈಡೇರಿಸಿದ್ದಾರೆ. ಹೌದು, ರೆಹಮಾನ್ ಕಡಪ ದರ್ಗಾಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದು, ಇದೀಗ ರಾಮ್ ಚರಣ್ ಕಡಪ ದರ್ಗಾಕ್ಕೆ ಭೇಟಿ ನೀಡಿದ್ದಾರೆ .
ರಾಷ್ಟ್ರೀಯ ಮುಶೈರಾ ಗಜಲ್ ಕಾರ್ಯಕ್ರಮ
ರಾಮ್ ಚರಣ್ ದರ್ಗಾದಲ್ಲಿ ನಡೆದ 80 ನೇ ರಾಷ್ಟ್ರೀಯ ಮುಶೈರಾ ಗಜಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಮಾನ್ಯವಾಗಿ ಇಲ್ಲಿಗೆ ಎಆರ್ ರೆಹಮಾನ್ ಅವರು ಪ್ರತಿ ವರ್ಷ ನಿಯಮಿತವಾಗಿ ಭೇಟಿ ನೀಡುತ್ತಾರೆ. ಪ್ರಸ್ತುತ ಅಯ್ಯಪ್ಪ ಸ್ವಾಮಿಯ ಮಾಲೆ ಹಾಕಿರುವ ರಾಮ್ ಚರಣ್ ಬ್ಯುಸಿ ಶೆಡ್ಯೂಲ್ ನಡುವೆಯೂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ವಿಶೇಷವಾದ ಬಾಂಧವ್ಯ
“ಕಡಪ ದರ್ಗಾದೊಂದಿಗೆ ನನಗೆ ಆಳವಾದ ಸಂಪರ್ಕವಿದೆ. ‘ಮಗಧೀರ’ ಬಿಡುಗಡೆಗೆ ಒಂದು ದಿನ ಮೊದಲು ನಾನು ಈ ದರ್ಗಾಕ್ಕೆ ಭೇಟಿ ನೀಡಿದ್ದೆ. ಅದು ನನಗೆ ದೊಡ್ಡ ಯಶಸ್ಸನ್ನು ತಂದು ಕೊಟ್ಟಿತು ಮತ್ತು ನನ್ನ ವೃತ್ತಿಜೀವನದ ನಿರ್ಣಾಯಕ ಕ್ಷಣವಾಗಿದೆ. ಇಲ್ಲಿಗೆ ಬಂದಿರುವುದು ನನಗೆ ಅಪಾರ ಸಂತೋಷವನ್ನು ನೀಡುತ್ತದೆ” ಎಂದು ರಾಮ್ ಚರಣ್ ಇದೇ ಸಂದರ್ಭದಲ್ಲಿ ತಿಳಿಸಿದರು. ಅವರ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ‘ಮಗಧೀರ’ ಕೂಡ ಒಂದು. ಚಿರಂಜೀವಿ ಅವರ ಪ್ರೀತಿಯ ಮಗನಾದ ರಾಮ್ ಚರಣ್ ಈ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದರು.
ಮಾತೆಯ ದರ್ಶನ
ದರ್ಗಾಕ್ಕೆ ಹೋಗುವ ಮೊದಲು ರಾಮ್ ಚರಣ್ ದುರ್ಗಾ ಮಾತೆಯ ದೇವಸ್ಥಾನಕ್ಕೆ ಹೋಗಿ ಮಾತೆಯ ದರ್ಶನ ಪಡೆದರು. ರಾಮ್ ಚರಣ್ ಅವರ ಕುಟುಂಬ ವರ್ಗದವರೆಲ್ಲರೂ ರಾಮ ಮತ್ತು ಹನುಮನ ಭಕ್ತರು. ಆದರೆ ಅವರು ಇತರ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತಾರೆ. ಅದಕ್ಕಾಗಿಯೇ ಅವರ ಅಭಿಮಾನಿಗಳು ಧರ್ಮವನ್ನು ಲೆಕ್ಕಿಸದೆ ಅವರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ. ಅದರ ಒಂದು ಝುಲಕ್ ಕಡಪ ತಲುಪಿದಾಗ ಕಂಡುಬಂದಿತು. ಅಲ್ಲಿ ರಾಮ್ ಚರಣ್ ರನ್ನು ನೋಡಲು ಅಪಾರ ಜನಸ್ತೋಮ ಸೇರಿತ್ತು.