ಬೇಸಿಗೆ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಬಾರಿಯ ಬೇಸಿಗೆ ತಾಪ ಇನ್ನೆಷ್ಟು ಸುಡಲಿದೆ ಎಂಬ ಟೆನ್ಷನ್ ಜನರ ಕಾಡುತ್ತಲಿದೆ. ಇದಕ್ಕೆ ಉತ್ತರವಾಗಿ ಕೆಲವು ರಾಜ್ಯಗಳಲ್ಲಿ ತಾಪಮಾನ ಏರಿಕೆಯಾಗಲಿದ್ದು, ಇನ್ನೂ ಕೆಲವು ರಾಜ್ಯಗಳಲ್ಲಿ ಮಳೆಯೂ ಸಹ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ 4 ದಿನ ಗುಡುಗು ಸಹಿತ ಮಳೆ:
ಮಾರ್ಚ್ 11ರಿಂದ ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗುವ ಮೂಲಕ ಮುಂಗಾರು ಪೂರ್ವ ಮಳೆಯ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಸೂಚಿಸಿದೆ. ಫೆಬ್ರವರಿಯಿಂದಲೇ ಬಿಸಿಲ ಝಳ ರಾಜ್ಯದಲ್ಲಿ ಹೆಚ್ಚಾಗಿದ್ದು, ಈಗಾಗಲೇ ಸೂರ್ಯನ ತಾಪಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇದೀಗ ತಾಪಮಾನ ಹಿನ್ನೆಲೆ ಮಾ.11ರಿಂದ 14ರ ವರೆಗೂ ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ ಸಿಕ್ಕಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆಯಿದೆ. ಹಾಗೆಯೇ, ಮುಂದಿನ 3 ತಿಂಗಳು ಹಿಂದೆಗಿಂತಲೂ ಹೆಚ್ಚಿನ ಬಿಸಿಲಿನ ತಾಪ ಝಳಪಿಸುವ ಸಾಧ್ಯತೆ ಇದ್ದು, ಮಧ್ಯಮಧ್ಯದಲ್ಲಿ ಮಳೆಯು ತಂಪೆರೆಯಬಹುದು ಎಂದು ಐಎಂಡಿ ಹೇಳಿದೆ.
ಇದ್ದಿಷ್ಟು ರಾಜ್ಯದ ಕುರಿತು ಹವಾಮಾನ ಇಲಾಖೆಯ ಸೂಚನೆಯಾಗಿದ್ದರೆ, ಇನ್ನುಳಿದಂತೆ ದೇಶದ ಇತರ ಭಾಗಗಳಲ್ಲಿ ತಾಪಮಾನ ಹೇಗಿರಲಿದೆ, ಎಲ್ಲೆಲ್ಲಿ ಮಳೆಯಾಗಲಿದೆ, ಎಲ್ಲಿ ಹಿಮಪಾತವಾಗುವ ಸಾಧ್ಯತೆ ಎಂಬುದರ ವರದಿ ಇಲ್ಲಿದೆ…..

ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತ:
ಹವಾಮಾನ ವೈಪರೀತ್ಯ ಮುಂದುವರೆದಿದ್ದು, ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತದ ಬಗ್ಗೆ ಐಎಂಡಿ ಮುನ್ನೆಚ್ಚರಿಕೆ ನೀಡಿದೆ. ಪಶ್ಚಿಮ ಹಿಮಾಲಯ ಸೇರಿದಂತೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಮತ್ತಷ್ಟೂ ಅವಾಂತರಗಳು ಸೃಷ್ಟಿಯಾಗಲಿದೆ. ಹಾಗೆಯೇ, ಬಯಲು ಪ್ರದೇಶದಲ್ಲಿ ಬೀಸುತ್ತಿರುವ ಅತಿವೇಗದ ಗಾಳಿ ನಿಲ್ಲಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಭಾರತ ರಾಜ್ಯಗಳಲ್ಲಿ ಮಳೆ ಸಾಧ್ಯತೆ:
ಉತ್ತರ ಭಾರತದ ರಾಜ್ಯಗಳಾದ ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಹಾಗೂ ಬಿಹಾರ್ನಲ್ಲಿ ಗಾಳಿಯ ವೇಗ ಇಳಿಮುಖವಾಗಲಿದ್ದು, ಉಷ್ಣಾಂಶದ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ. ಈ ರಾಜ್ಯಗಳಲ್ಲಿ ಭೂಮಿ ತಾಪಮಾನ ಏರಿಕೆಯಾಗಲಿದ್ದು, ಇಂದಿನಿಂದ ಬಯಲು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂಬುದು ಹವಾಮಾನ ಇಲಾಖೆಯ ಎಚ್ಚರಿಕೆ. ಅರುಣಾಚಲ ಪ್ರದೇಶ, ಅಸ್ಸಾಂ ಹಾಗೂ ಮೇಘಾಲಯದಲ್ಲಿ ಮಳೆಯಾಗಲಿದ್ದು, ಡಾರ್ಜಲಿಂಗ್ನಲ್ಲಿ ಮಳೆ ಕಡಿಮೆಯಾಗುವ ಸಂಭವವಿದೆ ಎಂದು ಐಎಂಡಿ ಹೇಳಿದೆ.
ದೆಹಲಿ ಸೇರಿದಂತೆ ಬಿಹಾರದವರೆಗೂ ತಾಪಮಾನ ಹೆಚ್ಚಾಗಲಿದ್ದರೆ, ಕರಾವಳಿ ಪ್ರದೇಶಗಳಾದ ಕೊಂಕಣ, ಗೋವಾ, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ತಾಪಮಾನದಿಂದಾಗಿ ಆರ್ದ್ರತೆ ಹೆಚ್ಚಲಿದೆ.

ಗಂಗಾ ಬಯಲು ಪ್ರದೇಶ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್ಗಳಲ್ಲಿ ಗಾಳಿಯ ವೇಗ ಹೆಚ್ಚಾಗಿದ್ದರಿಂದ ತಾಪಮಾನದಲ್ಲಿ ಇಳಿಕೆ ಕಂಡು ಬಂದಿತ್ತು. ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಹಗುರವಾಗಿ ಮಳೆಯಾಗಿದ್ದರೆ, ಕೆಲವೆಡೆ ಭಾರೀ ಹಿಮಪಾತ, ಪರ್ವತಗಳಲ್ಲಿ ಮಳೆಯಾಗಿದೆ. ಆದರೆ, ಮುಂಬರುವ ದಿನಗಳಲ್ಲಿ ಜಮ್ಮು-ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶ, ಉತ್ತರಖಂಡಗಳಲ್ಲಿ ಭಾರೀ ಹಿಮಪಾತದೊಂದಿಗೆ, ಮಳೆಯಾಗಿಲಿದೆ.
ಹಾಗೆಯೇ, ದೆಹಲಿ, ಪಂಜಾಬ್, ಉತ್ತರ ಪ್ರದೇಶ, ಬಿಹಾರದಲ್ಲಿ ಲಘು ಮಳೆಯಾಗಲಿದ್ದು, ತಾಪಾನದಲ್ಲಿ ಯಾವುದೇ ಇಳಿಕೆ ಕಂಡುಬರುವುದಿಲ್ಲ. ಬದಲಾಗಿ 2-3 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳವಾಗಬಹುದು. ಗಾಳಿಯ ವೇಗ ನಿಂತ ತಕ್ಷಣ ತಾಪಮಾನದಲ್ಲಿ ಏರಿಕೆಯಾಗಲಿದೆ. ಆದ್ದರಿಂದ ಈ ಪ್ರದೇಶಗಳಲ್ಲಿ 10 ಡಿಗ್ರಿ ಸೆಲ್ಸಿಯಸ್ ಇರುವ ತಾಪಮಾನ 13-15 ಡಿಗ್ರಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಜೊತೆಗೆ ಮಾರ್ಚ್ 15-16ರಂದು ಹಿಮಪಾತವಾಗಲಿದ್ದರೆ, ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಹೋಳಿ ಹಬ್ಬದಂದು ಹಗುರವಾಗಿ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.