ಎಲ್ಲಿ ಕಾಯಬೇಕು, ಯಾವುದಕ್ಕಾಗಿ ಸೀಟ್ ಕಾಯ್ದಿರಿಸಬೇಕು ಎಂದು ಯೋಚಿಸುತ್ತಿದ್ದೀರಾ…? ಎಲ್ಲೂ ಇಲ್ಲ ಕಣ್ರೀ ಬಸವನಗುಡಿಯ ಪ್ರಸಿದ್ಧ ಹೊಟೇಲ್ವೊಂದರಲ್ಲಿ ದೋಸೆ ತಿನ್ನುವುದಕ್ಕೆ ಹೋಗಬೇಕು ಎಂದು ಬಯಸಿದ್ರೆ, ಆ ಅಂಗಡಿಯ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನೀಲಬೇಕಲ್ಲಾ ಎಂದು ಸಹ ಯೋಚಿಸುತ್ತಿದ್ರಲ್ಲಾ, ಅದೇ ವಿದ್ಯಾರ್ಥಿ ಭವನದ ಬಗ್ಗೆನೇ ಹೇಳುತ್ತಿರೋದು.
ಬೆಂಗಳೂರಿನ ಬಸವನಗುಡಿಯ ಗಾಂಧೀ ಬಜಾರಿನಲ್ಲಿರುವ ವಿದ್ಯಾರ್ಥಿ ಭವನಕ್ಕೆ ಅದರದ್ದೇ ಆದ ಇತಿಹಾಸವಿದೆ. ಬಸವನಗುಡಿಯ ಮೋಸ್ಟ್ ವಿಸಿಟಿಂಗ್ ಪ್ಲೇಸ್ಗಳಲ್ಲಿ ಒಂದಾಗಿರುವ ವಿದ್ಯಾರ್ಥಿ ಭವನದ ಮಸಾಲೆ ದೋಸೆಗೆ ಉದ್ದದ ಫ್ಯಾನ್ ಫಾಲೋಯಿಂಗ್ ಸಹ ಇದೆ. ಹಾಗೆಯೇ, ಅದರ ಅಭಿಮಾನಿಗಳಗದಂತೆ ಆ ಭವನದ ಮುಂದೆಯೂ ಒಂದು ಕ್ಯೂ ನಿಂತೇ ಇರುತ್ತದೆ. ಯಾಕೆ ಅಂತ ನಿಮ್ಮೆಲ್ಲರಿಗೂ ಗೊತ್ತಿರುವ ವಿಷಯವೇ.
ಆದರೆ, ಇನ್ನು ಮುಂದೆ ಆ ತಲೆನೋವಿರಲ್ಲ ಕಣ್ರೀ. ವಿದ್ಯಾರ್ಥಿ ಭವನದವರು ಈಗ ಹೊಸದೊಂದು ಸೇವೆ ಜಾರಿಗೊಳಿಸಿದ್ದಾರೆ. ಏನು ಅಂದ್ರೆ ವಿದ್ಯಾರ್ಥಿ ಭವನಕ್ಕೆ ಹೋಗುವ ಮುನ್ನವೇ ಟೇಬಲ್ ಬುಕ್ ಮಾಡಬಹುದು. ಈ ಮೂಲಕ ಉದ್ದುದ್ದ ಸಾಲಿನಲ್ಲಿ ನಿಂತು ಬೇಸತ್ತು ಹೋಗುವ ತೊಂದರೆಗೆ ಬಾಯ್ ಬಾಯ್ ಹೇಳಬಹುದು.

ಗರಿಗರಿ ದೋಸೆ ತಿನ್ನಲು ದೂರದೂರದಿಂದ ಬರುವ ಹಲವು ಮಂದಿ ಸರತಿ ಸಾಲಿನಲ್ಲಿ ನಿಂತು ಮುಖ ಕಿವುಚುತ್ತಿದ್ದರು. ಆಹಾರ ಪ್ರಿಯರಿಗೆ ಸುಲಭವಾಗಲಿ ಎಂದೇ ಹೊಟೇಲ್ ಈ ಸೇವೆ ಜಾರಿಗೆ ತಂದಿದ್ದು, ಗ್ರಾಹಕರು ಮುಂಚಿತವಾಗಿ ಟೇಬಲ್ ಬುಕ್ ಮಾಡಿಕೊಂಡು, ಸಮಯಕ್ಕೆ ಸರಿಯಾಗಿ ಹಾಜರಾಗಿ ರುಚಿಕಟ್ಟಾದ ತಿನಿಸನ್ನು ಸವೆಯಬಹುದು. ಇದರಿಂದ ಗ್ರಾಹಕರಿಗೆ ಮಾತ್ರವಲ್ಲ ಹೊಟೇಲ್ ಸಿಬ್ಬಂದಿಗೂ ತೊಂದರೆ ತಪ್ಪಿದಂತಾಗುತ್ತದೆ. ಗಡಿಬಿಡಿಯಲ್ಲಿ ಆರ್ಡರ್ ತೆಗೆದುಕೊಂಡು, ಗಡಿಬಿಡಿಯಲ್ಲಿಯೇ ಸರ್ವ್ ಮಾಡುವುದಕ್ಕಿಂತ ಮುಂಚಿತವಾಗಿಯೇ ಟೇಬಲ್ ಬುಕ್ ಆಗಿದ್ದರೆ, ಜನಸಂದಣಿಯು ಕಡಿಮೆಯಿರುತ್ತದೆ, ಭವನದಲ್ಲಿಯೂ ಕಿರಿಕಿರಿ ವಾತಾವರಣವಿರುವುದಿಲ್ಲ.
ಎಷ್ಟು ಟೇಬಲ್ಗಳ ಬುಕಿಂಗ್ಗೆ ಅವಕಾಶ:
ಈಗಷ್ಟೇ ಟೇಬಲ್ ಬುಕಿಂಗ್ ವ್ಯವಸ್ಥೆ ಜಾರಿಗೊಳಿಸಿರುವ ವಿದ್ಯಾರ್ಥಿ ಭವನ ಎಲ್ಲಾ ಟೇಬಲ್ಗಳನ್ನು ಆನ್ಲೈನ್ ಬುಕಿಂಗ್ಗೆ ತೊಡಗಿಸಿಕೊಂಡಿಲ್ಲ. ಕೇವಲ ಶೇ.50ರಷ್ಟು ಟೇಬಲ್ಗಳನ್ನು ಮಾತ್ರ ಮುಂಗಡ ಬುಕ್ಕಿಂಗ್ಗೆ ಅನುವು ಮಾಡಿಕೊಟ್ಟಿದೆ. ಇನ್ನುಳಿದಂತೆ ಶೇ.50ರಷ್ಟು ಟೇಬಲ್ಗಳು ನೇರವಾಗಿ ಹೊಟೇಲ್ಗೆ ಭೇಟಿ ನೀಡುವ ಗ್ರಾಹಕರಿಗೆ ಮೀಸಲಿರಿಸಲಾಗಿದೆ. ಹೇಗಿದ್ದರೂ ವಿದ್ಯಾರ್ಥಿ ಭವನಕ್ಕೆ ಬರುವ ಗ್ರಾಹಕರು ದುಪ್ಪಟ್ಟಿದ್ದು, ನೇರವಾಗಿ ಬರುವ ಗ್ರಾಹಕರು ಸ್ವಲ್ಪ ಸಮಯ ಕಾಯಲೇಬೇಕಾಗಬಹದು.

ಇಲ್ಲಿಗೆ ಕರೆ ಮಾಡಿ, ಟೇಬಲ್ ಬುಕ್ ಮಾಡಿ:
ವಿದ್ಯಾರ್ಥಿ ಭವನವು ತನ್ನ ಎಕ್ಸ್ ಖಾತೆಯಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, “ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದೀರಾ…? ನಿಮ್ಮ ಭೇಟಿಯ ದಿನದಂದು 080-26677588ಕ್ಕೆ ಕರೆ ಮಾಡಿ, ನಿಮ್ಮ ಆಸನಗಳನ್ನು ಮುಂಚಿತವಾಗಿ ಕಾಯ್ದಿರಿಸಿ. ಇದು ದೀರ್ಘ ಕಾಯುವಿಕೆಯನ್ನು ತಪ್ಪಿಸಲು ಮತ್ತು ನೆಚ್ಚಿನ ದೋಸೆಯನ್ನು ಆನಂದಿಸಲು ನಿಮಗೆ ಸಹಾಯ ಮಾಡುತ್ತದೆ” ಎಂದು ಬರೆದುಕೊಂಡಿದೆ.

ವಿದ್ಯಾರ್ಥಿ ಭವನದ ಪ್ರಾರಂಭ:
ದಕ್ಷಿಣ ಭಾರತದ ಪಾರಂಪರಿಕ ಸಸ್ಯಾಹಾರಿ ಹೊಟೇಲ್ ಆಗಿ ವಿದ್ಯಾರ್ಥಿ ಭವನವು 1943ರಲ್ಲಿ ಸಣ್ಣದಾದ ವಿದ್ಯಾರ್ಥಿಗಳ ಉಪಾಹಾರ ಗೃಹವಾಗಿ ಪ್ರಾರಂಭವಾಯಿತು. ಇದು ಬೆಂಗಳೂರಿನ ಪಾಕಪದ್ಧತಿಯ ಭಾಗವಾಗಿದ್ದು, ದಶಕಗಳ ಹಿಂದೆ ಹೇಗೆ ಆರಂಭಗೊಂಡಿತ್ತೋ ಹಾಗೆಯೇ, ಸಮಯಾನುಸಾರವಾಗಿ ರೂಪಾಂತರಗೊಳ್ಳುತ್ತ ಬಂದಿದೆ. ರುಚಿಯಲ್ಲಿ ಅಂದಿನಿಂದಲ್ಲೂ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.
ಒಟ್ಟಾರೆ, ಹೊಟೇಲ್ನ ಈ ನಿರ್ಣಯವನ್ನು ಗ್ರಾಹಕರು ಸ್ವಾಗತಿಸಿದ್ದು, ಇದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ಸೂಸಿದ್ದಾರೆ.