ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿರುವ ಕೊನೆಯ ಬಿಗ್ ಬಾಸ್ ಸೀಸನ್ ಇದು ಎಂದು ಬಿಗ್ ಬಾಸ್ ಕನ್ನಡ ಸೀಸನ್ 11 ಅವರಿಗೆ ಕೊನೆಯ ಸೀಸನ್ ಎಂದು ಟ್ವೀಟ್ ಮಾಡುವ ಮೂಲಕ ಬಿಬಿಕೆ 11 ಭರ್ಜರಿ ಟಿಆರ್ಪಿ ಬಂದಾಗ ಟ್ವೀಟ್ ಮಾಡಿದ್ದರು. ಅಭಿಮಾನಿಗಳು ಇದರಿಂದ ಬೇಸರ ಆಗಿದ್ದಂತೂ ನಿಜ. ಆದರೆ ಸುದೀಪ್ ಅವರು ಮತ್ತೆ ಮನಸ್ಸು ಬದಲಾಯಿಸಿ, ಬಿಗ್ ಬಾಸ್ ಶೋಗೆ ವಾಪಸ್ ಬರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಸುದೀಪ್ ಅವರ ನಿರ್ಧಾರ ಬದಲಾಗಿಲಿಲ್ಲ. ಬಿಬಿಕೆ 11 ಫಿನಾಲೆಯ ಹಿಂದಿನ ದಿವಸ ಮತ್ತೊಂದು ಟ್ವೀಟ್ ಮಾಡುವ ಮೂಲಕ ಅದು ತಮ್ಮ ಕೊನೆಯ ಸೀಸನ್ ಎಂದು ಮತ್ತೆ ಸ್ಪಷ್ಟನೆ ಕೊಟ್ಟರು ಕಿಚ್ಚ. ಆಗ ಕಿಚ್ಚ ಟ್ವೀಟ್ ಮಾಡಿದ್ದು ಹೀಗಿತ್ತು..

“ಬಿಗ್ ಬಾಸ್ ಶೋ ಅನ್ನು ನಾನು ಕಳೆದ 11 ವರ್ಷಗಳಿಂದ ತುಂಬಾ ಎಂಜಾಯ್ ಮಾಡಿದ್ದೇನೆ. ನೀವೆಲ್ಲರೂ ತೋರಿಸಿರುವ ಪ್ರೀತಿಗೆ ಧನ್ಯವಾದ. ಮುಂದಿನ ವಾರದ ಫಿನಾಲೆ ನಾನು ನಿರೂಪಣೆ ಮಾಡುವ ಕೊನೆಯ ಸಂಚಿಕೆ ಆಗಿರಲಿದೆ. ನಿಮ್ಮನ್ನೆಲ್ಲ ಮನರಂಜಿಸುವುದಕ್ಕೆ ನನ್ನ ಬೆಸ್ಟ್ ಕೊಡುತ್ತೇನೆ. ಇದು ಮರೆಯಲಾಗದ ಪ್ರಯಾಣ. ನಾನು ಒಳ್ಳೇ ರೀತಿಯಲ್ಲಿ ಇದನ್ನು ನಿಭಾಯಿಸಿಕೊಂಡು ಹೋಗಿದ್ದೇನೆ ಎನ್ನುವ ಸಾರ್ಥಕತೆ ಇದೆ. ಈ ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಕಲರ್ಸ್ ಕನ್ನಡ. ನಿಮ್ಮೆಲ್ಲರಿಗೂ ನನ್ನ ಪ್ರೀತಿ ಮತ್ತು ಗೌರವ..” ಎಂದು ಬರೆದು ಟ್ವೀಟ್ ಮಾಡಿದ್ದರು ಕಿಚ್ಚ. ಸುದೀಪ್ ಅವರ ನಿರ್ಧಾರ ಅಂತೂ ಬದಲಾಗಿಲ್ಲ.
ಸುದೀಪ್ ಅವರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ಬಹಳ ಬೇಸರ ತಂದಿತ್ತು. ಕನ್ನಡದಲ್ಲಿ ಬಿಗ್ ಬಾಸ್ ಶೋ ಎಂದ ತಕ್ಷಣ ನೆನಪಿಗೆ ಬರುವುದೇ ಕಿಚ್ಚ ಸುದೀಪ್ ಅವರು.

11 ವರ್ಷಗಳು, 11 ಸೀಸನ್ ಗಳಲ್ಲಿ ಸುದೀಪ್ ಅವರು ಎಷ್ಟು ಅದ್ಭುತವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗಿದ್ದಾರೆ ಎಂದು ಗೊತ್ತೇ ಇದೆ. ಸುದೀಪ್ ಅವರ ಹಾಗೆ ಈ ಕಾರ್ಯಕ್ರಮ ನಡೆಸಿಕೊಡಲು ಬೇರೆ ಕಲಾವಿದರಿಂದ ಆಗುವುದಿಲ್ಲ ಎನ್ನುವುದು ಜನರ ಅಭಿಪ್ರಾಯ. ಆದರೆ ಸುದೀಪ್ ಅವರು ಈ ಮೊದಲೇ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದರು. ಈ ಶೋನ ಬೇರೆ ಯಾರು ನಡೆಸಿಕೊಡೋಕೆ ಆಗೋದಿಲ್ಲ ಅಂತೆಲ್ಲ ಅಂದುಕೊಂಡಿಲ್ಲ ನಾನು, ಬೇರೆಯವರು ನನಗಿಂತಲೂ ಚೆನ್ನಾಗಿ ನಡೆಸಿಕೊಡಬಹುದು ಎಂದು ಹೇಳಿದ್ದರು. ಹಾಗೆಯೇ ಎಲ್ಲರನ್ನು ತಿದ್ದಿಕೊಂಡು ಇನ್ನೆಷ್ಟು ವರ್ಷ ಇರಲಿ ಎಂದು ಹೇಳಿದ್ದರು. ಆದರೂ ಎಲ್ಲೋ ಒಂದು ಕಡೆ ಸುದೀಪ್ ಅವರು ತಮ್ಮ ನಿರ್ಧಾರ ಬದಲಾಯಿಸಿ, ಮುಂದಿನ ಸೀಸನ್ ನಿರೂಪಣೆ ಮಾಡಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಹಾಗೆಯೇ ಚಾನೆಲ್ ನವರು ಸಹ ಸುದೀಪ್ ಅವರಿಲ್ಲದೇ ಬಿಗ್ ಬಾಸ್ ಶೋ ಇಲ್ಲ ಎಂದಿದ್ದರು.

ಸುದೀಪ್ ಅವರ ಮನವೊಲಿಸಿ ಮುಂದಿನ ಸೀಸನ್ ಗೆ ಅವರನ್ನು ಖಂಡಿತವಾಗಿಯೂ ಕತೆಯರುತ್ತೇವೆ ಎಂದು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ತಿಳಿಸಿದ್ದರು. ಆದರೆ ಅದ್ಯಾವುದು ವರ್ಕ್ ಆದ ಹಾಗೆ ಕಾಣುತ್ತಿಲ್ಲ. ಇದೀಗ ಬಿಗ್ ಬಾಸ್ ಶೋಗೆ ಹೊಸ ನಿರೂಪಕ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ. ಕೆಲ ತಿಂಗಳುಗಳ ಹಿಂದೆಯೇ ಸುದೀಪ್ ಅವರ ಜಾಗಕ್ಕೆ ಯಾರು ಸೂಕ್ತ ಎನ್ನುವ ಪ್ರಶ್ನೆ ಕೇಳಿಬಂದಿತ್ತು. ಆಗ ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ರಿಷಬ್ ಶೆಟ್ಟಿ ಹಾಗೂ ರಮೇಶ್ ಅರವಿಂದ್ ಅವರ ಹೆಸರುಗಳು ಕೇಳಿಬಂದಿದ್ದವು. ಇವರುಗಳ ಪೈಕಿ ಈಗ ರಮೇಶ್ ಅರವಿಂದ್ ಅವರು ಬಿಗ್ ಬಾಸ್ ಶೋ ನಿರೂಪಣೆಗೆ ಸೂಕ್ತರು ಎಂದು ಹೇಳಲಾಗುತ್ತಿದೆ. ಇವರಿಗೆ ಈಗಾಗಲೇ ವೀಕೆಂಡ್ ವಿತ್ ರಮೇಶ್ ಶೋ ನಿರೂಪಣೆ ಮಾಡಿರುವ ಅನುಭವವಿದೆ.

ವೀಕೆಂಡ್ ವಿತ್ ರಮೇಶ್ ಶೋ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಹಲವು ಸೀಸನ್ ಗಳನ್ನು ರಮೇಶ್ ಅವರು ನಡೆಸಿಕೊಟ್ಟಿದ್ದರು. ಪ್ರತಿ ಸಂಚಿಕೆ ಕೂಡ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ರಮೇಶ್ ಅವರು ಈ ಶೋ ಅನ್ನು ಬಹಳ ಕೂಲ್ ಚೆನ್ನಾಗಿ, ಮನರಂಜನೆಯ ಜೊತೆಗೆ ಜನರಿಗೆ ಇಷ್ಟ ಆಗುವ ಹಾಗೆ ನಿರೂಪಣೆ ಮಾಡುತ್ತಿದ್ದರು. ಮತ್ತೆ ಈ ಶೋ ಶುರುವಾಗುತ್ತಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಬಿಗ್ ಬಾಸ್ ಶೋ ಗೆ ಇವರೇ ಸೂಕ್ತರು ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ. ಇನ್ನು ಜನರು ಹಾಗೂ ಅಭಿಮಾನಿಗಳು ಬೇರೆಯವರು ಯಾರೇ ನಿರೂಪಣೆ ಮಾಡಿದರು ನಾವು ಶೋ ನೋಡೋದಿಲ್ಲ ಎಂದು ಹೇಳುತ್ತಿದ್ದರು. ಇದರ ಬಗ್ಗೆ ಟ್ವಿಟರ್ ನಲ್ಲಿ ಒಂದು ಕ್ಯಾಂಪೇನ್ ಸಹ ನಡೆದಿತ್ತು. ಆದರೆ ಈಗ ಜನರ ಮನಸ್ಥಿತಿ ಕೂಡ ಸ್ವಲ್ಪ ಬದಲಾಗುವ ಹಾಗೆ ತೋರುತ್ತಿದೆ.

ರಮೇಶ್ ಅರವಿಂದ್ ಅವರು ನಿರೂಪಣೆ ಮಾಡಿದರೆ ಶೋ ನೋಡುತ್ತೇವೆ ಎಂದು ಹೇಳುವ ಒಂದು ವರ್ಗ ಕೂಡ ಇದೆ. ಹಾಗಾಗಿ ವಾಹಿನಿಯವರು ರಮೇಶ್ ಅರವಿಂದ್ ಅವರನ್ನೇ ಬಿಗ್ ಬಾಸ್ ನಿರೂಪಣೆಗೆ ಕರೆತರಬಹುದು ಎಂದು ಹೇಳಲಾಗುತ್ತಿದೆ. ಇನ್ನು ಸಂಭಾವನೆ ವಿಚಾರ ಸಹ ಭಾರಿ ಸದ್ದು ಮಾಡುತ್ತಿದೆ, ಸುದೀಪ್ ಅವರಿಗೆ ಭಾರಿ ಸಂಭಾವನೆ ಕೊಡಲಾಗುತ್ತಿತ್ತು. ಒಂದು ಸೀಸನ್ ಗೆ ಬರೋಬ್ಬರಿ 5 ಕೋಟಿ ಸಂಭಾವನೆ ಪಡೆಯುತ್ತಿದ್ದರು ಸುದೀಪ್ ಎಂದು ಮಾಹಿತಿ ಸಿಕ್ಕಿತ್ತು. ರಮೇಶ್ ಅರವಿಂದ್ ಅವರು ನಿರೂಪಕರಾದರೆ ಅವರಿಗೂ ಅಷ್ಟೇ ಸಂಭಾವನೆ ಕೊಡುತ್ತಾರಾ? ಎನ್ನುವ ಹೊಸದೊಂದು ಪ್ರಶ್ನೆ ಕೂಡ ಶುರುವಾಗುತ್ತಿದೆ. ರಮೇಶ್ ಅರವಿಂದ್ ಅವರು ಹಲವು ವರ್ಷಗಳ ಕಾಲ ಜೀಕನ್ನಡ ವಾಹಿನಿಯ ಜೊತೆಗೆ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದಾರೆ. ಈಗ ಕಲರ್ಸ್ ಗೆ ಬರುತ್ತಾರಾ ಎಂದು ಕಾದು ನೋಡಬೇಕಿದೆ.

ಹಿಂದಿ ನಂತರ ಪ್ರಾದೇಶಿಕ ಭಾಷೆಯಲ್ಲಿ ಬಿಗ್ ಬಾಸ್ ಶೋ ಶುರುವಾಗಿದ್ದು ಕನ್ನಡದಲ್ಲೇ ಮೊದಲು. ಕಿಚ್ಚ ಸುದೀಪ್ ಅವರೇ ಆರಂಭದಿಂದಲೂ ಈ ಶೋನ ಸಾರಥ್ಯ ವಹಿಸಿಕೊಂಡು ಬಂದಿದ್ದಾರೆ. 11 ಸೀಸನ್, 11 ವರ್ಷಗಳ ಕಾಲ ಇದಕ್ಕಾಗಿ ಸಮಯ ಕೊಟ್ಟಿರುವುದು ಸುಲಭದ ಮಾತಲ್ಲ. ಆದರೆ ಈಗ ಸುದೀಪ್ ಅವರು ಸಿನಿಮಾಗಳ ಬಗ್ಗೆ ಹಾಗೂ ಇನ್ನಿತರ ಹಲವು ಬೇರೆ ಬೇರೆ ಕಾರ್ಯಗಳ ಬಗ್ಗೆ ಗಮನ ಹರಿಸಬೇಕು ಎಂದುಕೊಂಡಿದ್ದು, ಶೋ ಇಂದ ಹೊರಬರುವ ನಿರ್ಧಾರ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿ ಎನ್ನುವುದೇ ಅವರ ಎಲ್ಲಾ ಅಭಿಮಾನಿಗಳ ಆಸೆ. ಮುಂದಿನ ಬಿಗ್ ಬಾಸ್ ಶುರು ಆಗುವುದಕ್ಕೆ ಇನ್ನು ಆರೇಳು ತಿಂಗಳು ಸಮಯವಿದೆ. ಅಲ್ಲಿಯವರೆಗು ನಿರೂಪಕರ ವಿಚಾರದಲ್ಲಿ ಇನ್ನು ಏನೆಲ್ಲಾ ಬದಲಾವಣೆ ಆಗುತ್ತದೆ ಎಂದು ಕಾದು ನೋಡಬೇಕಿದೆ.