ಸೋಷಿಯಲ್ ಮೀಡಿಯಾ ಅಂದ್ರೆ ಹಾಗೇ. ಇಲ್ಲಿ ಯಾರಾದರೂ ರಾತ್ರೋ ರಾತ್ರಿ ಸ್ಟಾರ್ ಆಗಿಬಿಡಬಹುದು. ಅದಕ್ಕೆ ಓದು, ಬರಹ ಬೇಕು, ವಿದ್ಯಾವಂತರಾಗಿರಬೇಕು, ಹಾಗಿರಬೇಕು, ಹೀಗಿರಬೇಕು ಅಂಥ ನಿಯಮವೇನೂ ಇಲ್ಲ. ನೀವು ಅಪ್ಲೋಡ್ ಮಾಡುವ ಕಂಟೆಂಟನ್ನು ಒಂದಷ್ಟು ಜನರು ನೋಡಿ ಕಾಮೆಂಟ್ ಮಾಡಿದರೆ ಮುಗಿಯಿತು, ನಿಮಗೆ ಗುರುತು ಸಿಕ್ಕಂತೆ. ಇಂತಹ ಎಷ್ಟೋ ಜನರು ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಸ್ಟಾರ್ ಆಗಿದ್ದಾರೆ. ಸಿನಿಮಾ, ಕಿರುತೆರೆ, ರಿಯಾಲಿಟಿ ಶೋಗಳಲ್ಲಿ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ ಕೆಲವರು ಟ್ರೋಲ್ ಆಗುತ್ತಾ ಬಂದಿದ್ದಾರೆ. ಅವರಲ್ಲಿ ರೇಷ್ಮಾ ಹಾಗೂ ನವೀನ್ ಕೂಡಾ ಒಬ್ಬರು.
ಆರಂಭದಲ್ಲಿ ರೇಷ್ಮಾ ಎಂಬ ಮಹಿಳೆ reshma_of_queen ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾ ಬಂದರು. ಬೆಳಗಿನಿಂದ ಸಂಜೆವರೆಗೆ ಎಲ್ಲಿ ಹೋದೆ, ಏನು ಮಾಡಿದೆ, ಏನು ತಿಂದೆ ಹೀಗೆ ನಾನಾ ರೀತಿಯ ವಿಡಿಯೋಗಳು ಅವರ ಖಾತೆಯಲ್ಲಿ ಕಾಣಸಿಗುತ್ತಿತ್ತು. ಕೆಲವೊಮ್ಮೆ ಪತಿಯೊಂದಿಗೆ ಜಗಳ ಮಾಡುವ, ಆತನಿಂದ ಹೊಡೆಸಿಕೊಳ್ಳುವ, ಅತ್ತು ಗೋಳಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಕೆಲವರು ರೇಷ್ಮಾ ಪರಿಸ್ಥಿತಿ ನೋಡಿ ಮರುಗಿದರೆ, ಕೆಲವರು ಅವರ ಕಾಲೆಳೆದರು. ಈ ರೀತಿಯ ವಿಡಿಯೋಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸುತ್ತಿದ್ದರು. ಆದರೆ ರೇಷ್ಮಾ ಮಾತ್ರ ಇದ್ಯಾವುದಕ್ಕೂ ಕ್ಯಾರೆ ಎನ್ನಲಿಲ್ಲ.
ಹೀಗೇ ಇರುವಾಗ ಒಮ್ಮೆ ರೇಷ್ಮಾಗೆ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಕ್ಕೆ ಆಹ್ವಾನ ಬಂತು. ಅದರಲ್ಲಿ ಕೂಡಾ ರೇಷ್ಮಾ ಭಾಗವಹಿಸಿದರು. ಅನೇಕ ಸ್ಕಿಟ್ಗಳಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಅವರು ಇನ್ನೂ ಫೇಮಸ್ ಆದರು. ಮೊದಲೆಲ್ಲಾ ಒಬ್ಬರೇ ರೀಲ್ಸ್ ಮಾಡುತ್ತಿದ್ದ ರೇಷ್ಮಾ ಇದ್ದಕ್ಕಿದ್ದಂತೆ ನವೀನ್ ಎಂಬ ವ್ಯಕ್ತಿಯೊಂದಿಗೆ ರೀಲ್ಸ್ ಮಾಡಲು ಆರಂಭಿಸಿದರು. ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ನೆಟಿಜನ್ಸ್ ಅವರಿಬ್ಬರಿಗೂ ಬುದ್ಧಿ ಹೇಳಿ ಕಾಮೆಂಟ್ ಮಾಡುತ್ತಿದ್ದರು. ಕೆಲವರು ಅವರಿಬ್ಬರ ನಡುವೆ ಏನೋ ಇದೆ ಎಂದು ಗುಸು ಗುಸು ಮಾತನಾಡಿಕೊಂಡರು. ಜನರ ಮಾತುಗಳಿಗೆ ಪ್ರತಿಕ್ರಿಯಿಸಿದ ರೇಷ್ಮಾ, ನಾವಿಬ್ಬರೂ ಅಕ್ಕ ತಮ್ಮ ಇದ್ದಂತೆ ಎಂದು ಸ್ಪಷ್ಟನೆ ನೀಡಿದ್ದರು. ಮತ್ತೊಮ್ಮೆ ನಾವಿಬ್ಬರೂ ಒಳ್ಳೆ ಫ್ರೆಂಡ್ಸ್, ನಾವು ಕಲಾವಿದರು, ನಮ್ಮ ಕೆಲಸ ಮಾಡುತ್ತಿದ್ದೇವೆ. ನಮ್ಮ ಪತಿಗೂ ನಮ್ಮ ಫ್ರೆಂಡ್ಶಿಪ್ ಬಗ್ಗೆ ಗೊತ್ತು, ಹೆಣ್ಣು ಮಕ್ಕಳು ಬೆಳೆಯುತ್ತಿದ್ದಾರೆ ಎಂದರೆ ಪುರುಷರು ಅವರನ್ನು ಬೆಳೆಸಬೇಕು, ಕೆಟ್ಟ ಕಾಮೆಂಟ್ ಮಾಡಬಾರದು ಎಂದು ಗುಡುಗಿದ್ದರು. ಆದರೆ ಇತ್ತೀಚೆಗೆ ಇವರು ಮಾಡುತ್ತಿರುವ ವಿಡಿಯೋಗಳನ್ನು ನೋಡಿದರೆ ಅಕ್ಕ-ತಮ್ಮ ಮಾಡಬಹುದಾದ ವಿಡಿಯೋಗಳಾ ಇವು ಅಂತ ಯಾರಿಗಾದರೂ ಪ್ರಶ್ನೆ ಎದುರಾಗೋದು ಸಹಜ.
ಮೊದಲೆಲ್ಲಾ ಕುರ್ತಾ, ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ರೇಷ್ಮಾ ಕೆಲವು ದಿನಗಳಿಂದ ಯಾವ ಹಿರೋಯಿನ್ಗಳಿಗೂ ಕಡಿಮೆ ಇಲ್ಲ ಎನ್ನುವಂತೆ ಫುಲ್ ಮಾಡ್ರನ್ ಲುಕ್ನಲ್ಲಿ ಮಿಂಚುತ್ತಿದ್ದಾರೆ. ನವೀನ್ ಜೊತೆ ಡ್ಯೂಯೆಟ್ ಹಾಡುಗಳಿಗೆ ರೀಲ್ಸ್ ಮಾಡುತ್ತಿದ್ದಾರೆ. ರೀಲ್ಸ್ ಮಾಡುವ ರೀತಿ ಬದಲಾದಂತೆ ರೇಷ್ಮಾ ಫುಲ್ ಫೇಮಸ್ ಆಗುತ್ತಿದ್ದಾರೆ. ಒಡವೆ ಅಂಗಡಿ, ಬಟ್ಟೆ ಅಂಗಡಿ ಓಪನಿಂಗ್ಗೆ ಅತಿಥಿಗಳಾಗಿ ಇವರಿಗೆ ಆಹ್ವಾನ ಬರುತ್ತಿದೆ. ಸೆಲಬ್ರಿಟಿಗಳ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದಾರೆ. ಇಬ್ಬರೂ ಜೊತೆ ಸೇರಿ ಸೇಬು ಕಚ್ಚುವುದು, ಎದೆ ಮೇಲೆ ರೋಸ್ ಎಸೆಯುವುದು, ದ್ರಾಕ್ಷಿ ತಿನ್ನಿಸುವುದು…ಹೀಗೆ ಇತ್ತೀಚೆಗಿನ ಕೆಲವೊಂದು ರೀಲ್ಸ್ಗಳಲ್ಲಂತೂ ಇವರಿಬ್ಬರ ರೊಮ್ಯಾನ್ಸ್ ದೃಶ್ಯಗಳನ್ನು ನೋಡಿದವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅಕ್ಕ ತಮ್ಮ ಎಂದು ಹೇಳಿಕೊಂಡು ಈ ರೀತಿಯ ರೀಲ್ಸ್ಗಳನ್ನು ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕೆಲವರು ಪ್ರಶ್ನಿಸಿದರೆ, ಈ ನವೀನ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಮೀರಿಸೋದು ಪಕ್ಕಾ ಎಂದು ಜನರು ಹೇಳುತ್ತಿದ್ದಾರೆ. ದಯವಿಟ್ಟು ರೀಲ್ಸ್ ಮಾಡುವುದನ್ನು ನಿಲ್ಲಿಸಿ ನೋಡಲಾಗುತ್ತಿಲ್ಲ ಎಂದು ಮನವಿ ಮಾಡುತ್ತಿದ್ದಾರೆ. ಈಗಲಾದರೂ ರೇಷ್ಮಾ ಹಾಗೂ ನವೀನ್ ಇಂಥಹ ರೀಲ್ಸ್ ಮಾಡೋದನ್ನು ನಿಲ್ಲಿಸುತ್ತಾರಾ ನೋಡಬೇಕು.