ಹಾಸನಾಂಬ ದೇವಿಯ ದರ್ಶನಕ್ಕೆ ಮುಹೂರ್ತ ಪಿಕ್ಸ್ ! ದಿನಾಂಕ ಎಂದು ಗೊತ್ತೆ?
ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್.24ರಂದು ಮಧ್ಯಾಹ್ನ 12ಗಂಟೆಗೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಿದೆ. ಮೊದಲ ಮತ್ತು ಕೊನೆಯ ದಿನದಂದು ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶವಿರುವುದಿಲ್ಲ.
ಅಕ್ಟೋಬರ್.25ರಿಂದ 11 ದಿನಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ದೇವಿಯ ದರ್ಶನಕ್ಕೆ ಟಿಕೆಟ್ ಖರೀದಿಸಿಯೂ ಭಕ್ತರು ದರ್ಶನ ಮಾಡಬಹುದಾಗಿದೆ. 1000 ಹಾಗೂ 300 ರೂ ಟಿಕೆಟ್ ಖರೀದಿಸಿದವರಿಗೆ ಒಂದೊಂದು ಲಾಡು, ಪ್ರಸಾದವನ್ನು ವಿತರಿಸುವುದಾಗಿ ತಿಳಿಸಿದ್ದಾರೆ.
ಆಶ್ವಯುಜ ಮಾಸದ ಹುಣ್ಣಿಮೆ ನಂತರ ಬರುವ ಮೊದಲ ಗುರುವಾರ ( ಈ ಬಾರಿ ಅ.24) ಹಾಸನಾಂಬ ದೇಗುಲ ತೆಗೆಯಲಾಗುತ್ತದೆ. ಬಲಿಪಾಡ್ಯಮಿಯ ಮಾರನೇ ದಿನ ದೇಗುಲದ ಬಾಗಿಲು ಮುಚ್ಚುವುದು ಸಂಪ್ರದಾಯವಾಗಿದೆ. ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ಹಾಸನಾಂಬ ವೆಬ್ಸೈಟ್ ಸಹ ಅರಂಭಿಸಲಾಗಿದೆ.
ಭಕ್ತರು ಹಾಸನಾಂಬೆಯ ಪವಾಡವೆಂದು ನಂಬುವ ಹಿಂದಿನ ವರ್ಷದಲ್ಲಿ ದೇವಿಗೆ ಹಾಕಲಾದ ಹೂವುಗಳು ಬಾಡುವುದಿಲ್ಲ. ಕಳೆದ ವರ್ಷದಲ್ಲಿ ಹಚ್ಚಿದ ನಂದಾದೀಪ ಆರದೆ ಉರಿಯುತ್ತಲೇ ಇರುತ್ತದೆ. ಪ್ರಸಾದ ಹಳಸುವುದಿಲ್ಲ ಎಂಬ ಕೌತುಕದಿಂದಲೇ ಹಾಸನಾಂಬ ದೇವಿಯ ದರ್ಶನಕ್ಕೆ ರಾಜ್ಯಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವರ್ಷ 9 ದಿನ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 20 ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ.