ಕನ್ನಡ ಕಿರುತೆರೆಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಹೆಚ್ಚಿನ ನಟ ನಟಿಯರು ಮುಂದೆ ಪರಭಾಷೆಯ ಕಿರುತೆರೆಯತ್ತ ಮುಖ ಮಾಡುವುದು ತೀರಾ ಮಾಮೂಲಿಯಾದ ಸಂಗತಿ. ಇನ್ನು ಕೆಲವರು ಸೀದಾ ಸ್ಯಾಂಡಲ್ ವುಡ್ ಗೆ ಹಾರಿಬಿಡುತ್ತಾರೆ. ಅಂದ ಹಾಗೇ ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟು, ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿರುವ ಈಕೆ ಇದೀಗ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಈಕೆಯ ಹೆಸರು ಮೌನ ಗುಡ್ಡೆಮನೆ. ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಚಾರುಲತಾ ಆಲಿಯಾಸ್ ಚಾರು ಆಲಿಯಾಸ್ ಚಾರಿ! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ರಾಮಾಚಾರಿಯೂ ಒಂದು. ರಾಮಾಚಾರಿ ಧಾರಾವಾಹಿಯಲ್ಲಿ ನಾಯಕಿ ಚಾರುಲತಾ ಆಗಿ ನಟಿಸುತ್ತಿರುವ ಮೌನ ಗುಡ್ಡೆಮನೆ ಇದೀಗ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.

ಯೋಗರಾಜ್ ಸಿನಿಮಾಸ್ ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ವಿನಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ ಮೌನ ಗುಡ್ಡೆಮನೆ. ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ ಕೆ ಮತ್ತು ವಿದ್ಯಾ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಕೆ.ರಾಮ್ ನಾರಾಯಣ್ ಅವರು ನಿರ್ದೇಶನ ಮಾಡಲಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಲುಕ್ ಇರುವ ಪೋಸ್ಟರ್ ಒಂದನ್ನು ಮೌನ ಗುಡ್ಡೆಮನೆ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ “ನನ್ನ ಕನಸುಗಳು ನಿಜವಾಗಲು ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಬೇಕು. ನನ್ನ ಮೊದಲ ಸಿನಿ ಪಯಣಕ್ಕೆ ಬೆಂಬಲ ನೀಡಿ” ಎಂದು ಮೌನ ಗುಡ್ಡಮನೆ ಬರೆದುಕೊಂಡಿದ್ದಾರೆ.
ಕಿರುತೆರೆಯ ನಂತರ ಇದೀಗ ಹಿರಿತೆರೆಯಲ್ಲಿ ನಟನಾ ಛಾಪನ್ನು ಮೂಡಿಸಲಿರುವ ಮೌನ ಗುಡ್ಡಮನೆಗೆ ಏರ್ ಫೋರ್ಸ್ ಸೇರುವ ಕನಸಿತ್ತು. ಎಲ್ಲವೂ ತಾನು ಬಯಸಿದಂತೆ ಆಗಿದ್ದರೆ ಆಕೆ ಇಂದು ಆಕಾಶದಲ್ಲಿರುತ್ತಿದ್ದರು. ಆದರೆ ತನ್ನ ಕನಸಿಗೆ ತಂದೆಯ ಒಪ್ಪಿಗೆ ಸಿಗದ ಕಾರಣ ಆಕೆ ಅದರ ಬಗ್ಗೆ ಆಲೋಚಿಸುವುದನ್ನೇ ಬಿಟ್ಟು ಬಿಟ್ಟರು.

ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗ “ಮಿಸ್ ತುಳುನಾಡು” ಸ್ಪರ್ಧೆಯಲ್ಲಿ ಈಕೆ ಭಾಗವಹಿಸಿದ್ದರು. ಆ ಸ್ಪರ್ಧೆ ಆಕೆಯ ಬದುಕನ್ನೇ ಬದಲಾಯಿಸಿತು. “ಮಿಸ್ ತುಳುನಾಡು” ಸ್ಪರ್ಧೆಯ ನಂತರ ಮಾಡೆಲಿಂಗ್ ನತ್ತ ಮುಖ ಮಾಡಿದ ಈಕೆ ನಂತರ ಹಿಂತಿರುಗಿ ನೋಡಿದ್ದಿಲ್ಲ. ರಾಮಚಾರಿ ಧಾರಾವಾಹಿಯಲ್ಲಿ ನಾಯಕಿ ಚಾರುಲತಾ ಆಗಿ ಬಣ್ಣ ಹಚುತ್ತಿರುವ ಈಕೆ ನಟಿಯಾಗಲು ಅಮ್ಮನ ಆಸೆಯ ಪ್ರಮುಖ ಕಾರಣ.
ಮೌನ ಗುಡ್ಡೆಮನೆ ಅವರ ಅಮ್ಮನಿಗೆ ಮಗಳನ್ನು ನಟಿಯನ್ನಾಗಿ ನೋಡುವ ಆಸೆಯಿತ್ತು. ಅದರಂತೆ ಆಕೆ ತಮ್ಮ ಮಗಳಿಗೆ ನಟಿಯಾಗುವಂತೆ ಪ್ರೇರೇಪಿಸುತ್ತಿದ್ದರು. ಆ ಸಮಯದಲ್ಲಿ ಮೌನ ಅವರು ಓದಿನತ್ತ ಮುಖ ಮಾಡಿದ್ದರಿಂದ ನಟನೆಯತ್ತ ಮುಖ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ರಾಮಾಚಾರಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟು ಇದೀಗ ಸ್ಯಾಂಡಲ್ ವುಡ್ ನಲ್ಲಿ ನಟನಾ ಕಂಪನ್ನು ಪಸರಿಸುತ್ತಿರುವ ಮೌನ ಗುಡ್ಡೆಮನೆ ಅವರ ನಟನಾ ಜರ್ನಿ ಇನ್ನಷ್ಟು ಕಲರ್ ಫುಲ್ ಆಗಿ ಸಾಗಲಿ ಎಂಬುದೇ ನಮ್ಮ ಕನ್ನಡದ ಹಾರೈಕೆ.