ಸೂಪರ್ ಸಂಗೀತ, ವೈವಿದ್ಯಮಯ ಬಣ್ಣ ಹಾಗೂ ರುಚಿಕರ ಆಹಾರಕ್ಕೆ ಹೆಸರುವಾಸಿಯೇ ಹೋಳಿ ಹಬ್ಬ. ಬಣ್ಣಗಳಲ್ಲಿ ಮಿಂದೆದ್ದು, ಪ್ರೀತಿ ಪಾತ್ರರನ್ನು ಸಹ ಹೋಳಿಯಲ್ಲಿ ಮುಳುಗಿಸಿ ಹುಚ್ಚೆದ್ದು ಕುಣಿಯುವ ಈ ಹಬ್ಬವನ್ನು ಭಾರತದ ಕೆಲವು ರಾಜ್ಯಗಳಲ್ಲಿ ಜೋರಾಗಿಯೇ ಆಚರಿಸಲಾಗುತ್ತದೆ. ನೀವು ಎಂದಾದರು ಒಮ್ಮೆ ಹೋಳಿ ಮಜಾ ತೆಗೆದುಕೊಳ್ಳಲು ಬಯಸಿದರೆ ಈ ಸ್ಥಳಗಳಿಗೆ ಭೇಟಿ ನೀಡಬಹುದು.
ಮಾರ್ಚ್ 14ರಂದು ದೇಶದಾದ್ಯಂತ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಸೂಪರ್ ಉತ್ಸಾಹಿ ಜನರು ಈಗಾಗಲೇ ಹೋಳಿ ತಯಾರಿಯಲ್ಲಿ ತೊಡಗಿದ್ದರೆ, ಇತರರು ಇನ್ನೂ ತಮ್ಮ ಪಾರ್ಟಿಯನ್ನು ಆಯೋಜಿಸಲು ಯೋಜಿಸುತ್ತಿದ್ದಾರೆ. ಇದರ ನಡುವೆ, ಬಣ್ಣಗಳ ಹಬ್ಬವನ್ನು ಭವ್ಯವಾಗಿ ಆಚರಿಸಲು ನೀವು ಎಲ್ಲಿಗೆ ಹೋಗಬಹುದೆಂದು ಯೋಚಿಸುತ್ತಿದ್ದರೆ, ಹೋಳಿ ಆಚರಣೆಗೆಂದೇ ಹೆಸರುವಾಸಿಯಾಗಿರುವ ಸ್ಥಳಗಳು ಇಲ್ಲಿವೆ ನೋಡಿ….

ಕೃಷ್ಣ ಭೂಮಿಯಲ್ಲಿ ಭರ್ಜರಿ ಆಚರಣೆ:
ಮಥುರಾ-ವೃಂದಾವನದ ಸುತ್ತಮುತ್ತಲಿನ ಪ್ರದೇಶವನ್ನು ಬ್ರಜಭೂಮಿ ಎಂದು ಕರೆಯಲಾಗುತ್ತದೆ. ಇದು ಕೃಷ್ಣನ ಜನ್ಮಭೂಮಿಯು ಹೌದು. ರಾಧಾ-ಕೃಷ್ಣರ ಸಾಂಪ್ರದಾಯಿಕ ಉತ್ಸವದಲ್ಲಿ ಭಾಗಿಯಾಗ ಬಯಸುವವರು ಬಂಕೆ ಬಿಹಾರಿ ದೇವಸ್ಥಾನ ಹಾಗೂ ಬರಸಾನಾದ ಲಾತ್ಮಾರ್ ಹೋಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಹೆಸರೇ ಸೂಚಿಸುವಂತೆ ಲಾತ್ಮಾರ್ ಹೋಳಿ ಎಂದರೆ ಹೋಳಿ ಹಬ್ಬದ ದಿನ ಮಹಿಳೆಯರು ಆಟದ ಭಾಗವಾಗಿ ಹಾಗೂ ತಮಾಷೆಗೊಸ್ಕರ ಪುರುಷರಿಗೆ ಹೊಡೆಯುತ್ತಾ ಹೋಳಿ ಆಚರಿಸುತ್ತಾರೆ.

ಹಿಮಾಚಲದಲ್ಲಿ ಹೋಳಿಯುತ್ಸವ:
ಹಿಮಾಚಲ ಪ್ರದೇಶದ ಸಾಂಗ್ಲಾ ಹಾಗೂ ಉತ್ತರಖಂಡದ ಕುಮಾವೂನ್ ಪರ್ವತ ಶ್ರೇಣಿಯಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಮಾವೃತಗೊಂಡಿರುವ ಪರ್ವತ ಶ್ರೇಣಿಗಳ ನಡುವೆ ಕಲರ್ಫುಲ್ ಹೋಳಿ ಆಚರುಸುವುದೇ ಇಲ್ಲಿಯ ವಿಶೇಷತೆ. ಇಲ್ಲಿ ಹೋಳಿ ಹಬ್ಬವನ್ನು ಫಗುಲಿ ಎಂದು ಕರೆಯಲಿದ್ದು, 4 ದಿನಗಳ ಕಾಲ ಆಚರಿಸಲಾಗುತ್ತದೆ. ಕಿನೌರಿ ನಾಟಿ ಜಾನಪದ ನೃತ್ಯ, ಜಾನಪದ ಗೀತೆ ಹಾಗೂ ಸಾಂಪ್ರದಾಯಿಕ ಸ್ಥಳೀಯ ತಿಂಡಿ-ತಿನಿಸುಗಳೇ ಆ ದಿನದ ವಿಶೇಷ.

ರಾಯಲ್ ಹೋಳಿಗೆ ಈ ಸ್ಥಳ ಫೇಮಸ್:
ರಾಜಮನೆತನದ ರೀತಿಯಲ್ಲಿ ಹೋಳಿ ಹಬ್ಬ ಆಚರಿಸಲು ಬಯಸುತ್ತೀರಾ….?ಹಾಗಾದರೆ, ರಾಜಸ್ಥಾನದ ಪುಷ್ಕರ್, ಜೈಪುರ್ ಹಾಗೂ ಉದಯಪುರಕ್ಕೆ ಭೇಟಿ ನೀಡಿ. ಹೋಳಿ ಹಬ್ಬದ ಅಂಗವಾಗಿ ರಾಜಮನೆತನದ ಮೆರವಣಿಗೆಗಳು, ನಗರದ ಅರಮನೆಗಳಲ್ಲಿ ಹೋಳಿಕಾ ದಹನ್, ಜಾನಪದ ನೃತ್ಯಗಳು ಹಾಗೂ ರಾಜಸ್ಥಾನದ ವಿಶೇಷ ಪಕ್ವಾನ್ಗಳಾದ ಗುಜಿಯಾ, ಮಾಲ್ಪುವಾ, ಥಂಡಾಯಿ, ಭಾಂಗ್ ಲಸ್ಸಿ, ದಾಲ್ ಬಾತಿ ಚುರ್ಮಾಗಳನ್ನು ಸವಿಯಬಹುದು.

ಬಸಂತ ಉತ್ಸವ ನೋಡಲು ಇಚ್ಛಿಸಿದರೆ ಇಲ್ಲಿಗೆ ಹೋಗಿ:
ನೀವು ರವೀಂದ್ರನಾಥ ಟ್ಯಾಗೋರ್ ಅವರ ಹಾಡು, ಬರಹಕ್ಕೆ ಅಭಿಮಾನಿಯಾಗಿದ್ದರೆ ಒಮ್ಮೆಯಾದರು ಹೋಳಿ ಹಬ್ಬದಂದು ಶಾಂತಿನಿಕೇತನಕ್ಕೆ ಭೇಟಿ ನೀಡಿ. ಪಶ್ಚಿಮ ಬಂಗಾಳದಲ್ಲಿರುವ ಶಾಂತಿನಿಕೇತನದಲ್ಲಿ ಹೋಳಿ ಹಬ್ಬದಂದು ಬಸಂತ್ ಉತ್ಸವ ಅಂದರೆ ವಸಂತ ಹಬ್ಬವನ್ನು ಆಚರಿಸಲಾಗುತ್ತದೆ. ಮಹಾನ್ ಕವಿ, ಸಂಗೀತಗಾರ ಹಾಗೂ ಕಲಾವಿದರನ್ನು ಸ್ಫೂರ್ತಿಯಾಗಿಸಿಕೊಂಡು ಈ ದಿನದಂದು ಹಮ್ಮಿಕೊಳ್ಳುವ ನೃತ್ಯ, ಸಂಗೀತ ಹಾಗೂ ಕಾವ್ಯಸುಧೆಯನ್ನು ಮನಸಾರೆ ಅನುಭವಿಸಬಹುದು.

ಹೋಳಿ ಹಬ್ಬವನ್ನು ಹೀಗೂ ಆಚರಿಸಿ:
ಪ್ರತಿವರ್ಷ ಹೋಳಿ ಹಬ್ಬದಂದು ಬಣ್ಣ ಹಚ್ಚಿ ಹಾಗೂ ಹಚ್ಚಿಸಿಕೊಂಡು ಎಂಜಾಯ್ ಮಾಡಿರುತ್ತೀರಾ. ಆದರೆ, ಒಮ್ಮೆಯಾದರೂ ಬಣ್ಣದ ಹಬ್ಬದ ದಿನ ಸಮರ ಕಲೆಯನ್ನು ವೀಕ್ಷಿಸುವ ಮೂಲಕ ರೋಮಾಂಚನಗೊಳ್ಳಲು ಬಯಸಿದರೆ ಪಂಜಾಬ್ನ ಹೋಲಾ ಮೊಹಲ್ಲಾ ಆಚರಣೆಗೆ ಹಾಜರಿ ಹಾಕಿ. ಹೋಳಿ ಹಬ್ಬದ ಪ್ರಯುಕ್ತ ಇಲ್ಲಿ ಮೂರು ದಿನಗಳ ಕಾಲ ಸಮರ ಕೌಶಲ್ಯ, ಕುದುರೆ ಸವಾರಿ ಸೇರಿದಂತೆ ಆಧ್ಯಾತ್ಮಿಕ ಕಾವ್ಯಗೋಷ್ಠಿಯು ನಡೆಯುತ್ತದೆ. ಪ್ರಮುಖವಾಗಿ ಆನಂದಪುರ್ ಸಾಹಿಬ್ ಎಂಬಲ್ಲಿಗೆ ಭೇಟಿ ನೀಡಿದರೆ ಸಿಖ್ ಯೋಧರು ಸಮರ ಕಲೆಯನ್ನು ಪ್ರದರ್ಶಿಸುವ ರೋಮಾಂಚನಕಾರಿ ಪ್ರದರ್ಶನಕ್ಕೆ ಸಾಕ್ಷಿಯಾಗಬಹುದು.
ಇಷ್ಟೇ ಅಲ್ಲದೆ, ದೆಹಲಿಯ ಹೋಳಿ ಮೋ ಉತ್ಸವ, ಗೋವದಲ್ಲಿ ಬೀಚ್ ಪಾರ್ಟಿಗಳು ಹಾಗೂ ಮುಂಬೈನಲ್ಲಿಯೂ ಸಹ ಹೋಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಮೇಲೆ ತಿಳಿಸಿರುವ ಸ್ಥಳಗಳಿಗೆ ಭೇಟಿ ನೀಡಿ ವಿವಿಧ ಸ್ಥಳಗಳಲ್ಲಿ ಆಚರಿಸುವ ಸಾಂಪ್ರದಾಯಿಕ ಹೋಳಿ ಆಚರಣೆಯನ್ನು ಅನುಭವಿಸಿ ನೋಡಿ.