ಅಜ್ಜನಿಗೆ 75 ವರ್ಷ ವಯಸ್ಸು, ಆಕೆಗೆ 35 ವರ್ಷ ವಯಸ್ಸು. ಆದರೆ ಇಬ್ಬರೂ ಬಯಸುತ್ತಿರುವುದು ಆಸರೆ, ಲಾಲನೆ, ಪಾಲನೆ, ಪೋಷಣೆಯನ್ನು. ಇದೇ ಕಾರಣದಿಂದ ಸದ್ಯ, ಇವರಿಬ್ಬರೂ ದೇವಸ್ಥಾನದಲ್ಲಿ ಅದ್ದೂರಿ ಮದುವೆಯಾಗಿ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಮೇಲೂರು ಗ್ರಾಮದಲ್ಲಿ. ಈ ರೋಚಕ ಲವ್ ಸ್ಟೋರಿ ಹುಟ್ಟಿದ್ದು ಹೇಗೆ ಗೊತ್ತಾ?

ಸದ್ಯ, ವಿವಾಹವಾಗಿರುವ ಗಂಡು 75 ವರ್ಷದ ಈರಣ್ಣನಿಗೆ ಈ ಹಿಂದೆ ಮದುವೆಯಾಗಿತ್ತು. ಹೆಣ್ಣು ಮಕ್ಕಳಿಬ್ಬರನ್ನು ಶ್ರೀಮಂತ ಕುಟುಂಬಕ್ಕೆ ಮದುವೆ ಮಾಡಿ ಕೊಟ್ಟಿದ್ದಾರೆ, ಮಗ ಒಳ್ಳೆಯ ಕೆಲಸಕ್ಕೆ ಸೇರಿ ಪಟ್ಟಣ ಸೇರಿದ್ದಾನೆ. ಆದರೆ ಪತ್ನಿ ನಿಧನರಾದ ನಂತರ ಈರಣ್ಣ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ಇದೇ ಕಾರಣಕ್ಕೆ ಜೀವನದ ಸಂಧ್ಯಾ ಕಾಲದಲ್ಲಿ ಇವರು 35 ವರ್ಷದ ಅನುಶ್ರೀ ಎಂಬ ಯುವತಿಯನ್ನು ವಿವಾಹವಾಗಿದ್ದಾರೆ.
ಇನ್ನು ಈರಣ್ಣನನ್ನು ಮದುವೆಯಾಗಿರುವ ಅನುಶ್ರೀಗೆ ಅಪ್ಪ, ಅಮ್ಮ, ಬಂಧು-ಬಳಗ ಯಾರೂ ಇಲ್ಲವಂತೆ. ಆದರೆ ಪ್ರೀತಿಸಿದ ವ್ಯಕ್ತಿಯೊಬ್ಬನನ್ನು ನಂಬಿ, ಆತನ ಜೊತೆ ಪ್ರೇಮ ವಿವಾಹ ಮಾಡಿಕೊಂಡಿದ್ದಳು. ಅನುಶ್ರೀಗೆ 6 ವರ್ಷದ ಒಬ್ಬ ಮಗನಿದ್ದಾನೆ. ಆದರೆ ನಂಬಿ ಮದುವೆ ಮಾಡಿಕೊಂಡವ ಅನುಶ್ರೀಯನ್ನು ಬಿಟ್ಟು ಹೊರಟು ಹೋಗಿದ್ದಾನೆ. ಇದರಿಂದ ತಂದೆ, ತಾಯಿ, ಬಂಧು-ಬಳಗ, ಗಂಡನಿಲ್ಲದೇ ಅನಾಥಳಾಗಿದ್ದ ಅನುಶ್ರೀಗೆ ಚಿಕ್ಕಬಳ್ಳಾಪುರದ ಕೋಟೆ ನಿವಾಸಿ ನರ್ಸ್ ಒಬ್ಬರು ಆಶ್ರಯ ನೀಡಿ ಸಂತೈಸಿದ್ದಾರೆ.
ಈರಣ್ಣನಿಗೆ 1 ಎಕರೆ ಬೆಲೆಬಾಳುವ ಜಮೀನಿದ್ದು, ಮಕ್ಕಳ ಹೆಸರಿಗೆ ವಿಲ್ ಮಾಡಿದ್ದಾನೆ. ಸುಮಾರು 25 ಲಕ್ಷ ರೂಪಾಯಿಗಳನ್ನು ಮಗಳಿಗೆ ಧಾರೆ ಎರೆದಿದ್ದಾನೆ. ಆದರೂ ಮಗಳು ತಂದೆಯ ಮೇಲೆ ಗಲಾಟೆ ಮಾಡಿ, ಇರೋ ಆಸ್ತಿಯನ್ನು ತನಗೆ ಬರೆದುಕೊಡುವಂತೆ ಕಿರುಕುಳ ನೀಡಿ, ಗಲಾಟೆ ಮಾಡಿದ್ದಾಳಂತೆ. ಇನ್ನು ಈರಣ್ಣನಿಗೆ ಹೃದಯ ಸಮಸ್ಯೆ, ಬಿಪಿ, ಶುಗರ್ ಇದ್ದು, ಲಾಲನೆ, ಪಾಲನೆ, ಪೋಷಣೆ ಮಾಡಲು ಯಾರೂ ಇಲ್ಲ. ಇದರಿಂದ ಮತ್ತೊಂದು ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿ, ನಿನ್ನೆ ಅನುಶ್ರೀಯನ್ನು ಮದುವೆ ಮಾಡಿಕೊಂಡಿದ್ದಾನೆ.