.ಟ್ರಾಫಿಕ್ ಕಿರಿಕಿರಿಯಿಂದಾಗಿ ಬೆಂಗಳೂರು ನಗರಕ್ಕೆ ಬಿಗ್ ಲಾಸ್ ಆಗಿದ್ದು ಬೆಂಗಳೂರಿನ ಜನರಿಗೂ ಕೂಡ ಬಿಗ್ ಕಿರಿ ಕಿರಿ ಆಗಿದೆ. ಸಂಚಾರ ದಟ್ಟಣೆಯಿಂದಾಗಿ ವಾರ್ಷಿಕ 19 ಸಾವಿರ ಕೋಟಿ ಸಿಲಿಕಾನ್ ಸಿಟಿಯಲ್ಲಿ ನಷ್ಟ ಆಗ್ತಿದ್ಯಂತೆ. ಸದ್ಯ ಅಧ್ಯಯನದಲ್ಲಿ ಈ ವಿಚಾರ ಬಹಿರಂಗ ಆಗಿದ್ದು ಸಿಲಿಕಾನ್ ಸಿಟಿ ಮಂದಿ ಹುಬ್ಬೇರಿಸುತ್ತಿದ್ದಾರೆ. ಅಷ್ಟಕ್ಕೂ ಈ ಅಧ್ಯಯನ ನಡೆಸಿದ್ದು ಸಂಚಾರ ತಜ್ಞ ಶ್ರೀಹರಿ & ತಂಡ. ಈ ತಂಡದ ಅಧ್ಯಯನದಲ್ಲಿ ಈ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಟೆಕ್ ಉದ್ಯಮಗಳಿಗೆ ರಾಜಧಾನಿ ಬೆಂಗಳೂರು ಹೆಸರುವಾಸಿ. ಆದರೆ, ಸಂಚಾರ ದಟ್ಟಣೆ ವಿಷಯಕ್ಕೆ ಬಂದರೆ ಸಿಲಿಕಾನ್ ಸಿಟಿಯ ಪರಿಸ್ಥಿತಿಯೇ ಬೇರೆ. ಸಂಚಾರ ವಿಳಂಬ, ದಟ್ಟಣೆ, ಸಿಗ್ನಲ್ಗಳಲ್ಲಿ ನಿಲ್ಲುವುದು, ಸಮಯದ ನಷ್ಟ ಸೇರಿ ಇತರೆ ಅಂಶಗಳು ನಗರದಲ್ಲಿ ಕಾಮನ್ ಆಗಿಬಿಟ್ಟಿದೆ. ಇನ್ನು ಸದ್ಯ ಹೊರಬಿದ್ದಿರೋ ವರದಿಯೊಂದರ ಮಾಹಿತಿ ಪ್ರಕಾರ ಟ್ರಾಫಿಕ್ ಜಾಮ್ನಿಂದ ವಾರ್ಷಿಕ 19,725 ಕೋಟಿ ರೂ. ನಷ್ಟವನ್ನು ಬೆಂಗಳೂರು ಅನುಭವಿಸುತ್ತಿದೆ.
ಸಂಚಾರ ತಜ್ಞ ಎಂ ಎನ್ ಶ್ರೀಹರಿ ಮತ್ತು ಅವರ ತಂಡ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ. ರಸ್ತೆ ಯೋಜನೆ, ಮೇಲ್ಸೇತುವೆ, ಸಂಚಾರ ನಿರ್ವಹಣೆ ಮತ್ತು ಮೂಲಸೌಕರ್ಯ ಕೊರತೆಯ ಸುತ್ತಲು ಇರುವ ಸಮಸ್ಯೆಗಳನ್ನು ಪರಿಶೀಲಿಸಿರುವ ಶ್ರೀಹರಿ ಅವರ ತಂಡವು ವರದಿಯನ್ನು ಬಿಡುಗಡೆಗೊಳಿಸಿದೆ. ಇನ್ನು ಈ ಕುರಿತಂತೆ ಪರಹಾರವನ್ನೂ ಹೇಳಿರುವ ಅವರು ನಗರಕ್ಕೆ ರೇಡಿಯಲ್ ರಸ್ತೆಗಳು, ವರ್ತುಲ ರಸ್ತೆಗಳು, ಒಆರ್ಆರ್, ಪಿಆರ್ಆರ್ ಮತ್ತು ಎಸ್ಟಿಆರ್ಆರ್ ಅನ್ನು ಒಳಗೊಂಡಿರುವ ನಿರ್ದಿಷ್ಟ ರಿಂಗ್ ರೋಡ್ಗಳ ಅಗತ್ಯವಿದೆ ಅಂತಾ ಹೇಳಿದ್ದಾರೆ.
ಒಟ್ಟಿನಲ್ಲಿ ಯಾವುದೇ ಸರ್ಕಾರ ಬಂದು ಹೋದರೂ, ನಗರದ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಟ್ರಾಫಿಕ್ಗೆ ಮುಕ್ತಿ ನೀಡಲು ಆಗುತ್ತಿಲ್ಲ. ಮುಂದಾಲೋಚನೆಯಿಂದ ಸಂಚಾರ ದಟ್ಟಣೆಯನ್ನ ನಿಯಂತ್ರಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲು ಪ್ರಸ್ತುತ ಸರ್ಕಾರವಾದರೂ ಗಂಭೀರ ಚಿಂತನೆ ನಡೆಸಬೇಕಿದೆ. ಆದರೂ ನಗರದ ಟ್ರಾಫಿಕ್ ಪ್ರಾಬ್ಲಮ್ಗೆ ಸುಮಾರು 19 ಸಾವಿರ ಕೋಟಿ ನಷ್ಟವಾಗ್ತಿರೋದಂತೂ ಬೇಸರದ ವಿಚಾರವೇ.