ಕಾಂಗ್ರೇಸ್ ಸರ್ಕಾರ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳು ಒಂದೊಂದಾಗಿ ಜಾರಿಯಾಗುತ್ತಿದೆ. ‘ಶಕ್ತಿ’ ಯೋಜನೆಗೆ ರಾಜ್ಯದಾದ್ಯಂತ ಈಗಾಗಲೇ ಮಹಿಳೆಯರಿಂದ ಭಾರೀ ಸ್ಪಂದನೆ ಸಿಗುತ್ತಿದೆ. ಇದರ ಬೆನ್ನಲ್ಲೇ ಉಳಿದ ನಾಲ್ಕು ಯೋಜನೆಗೆಳು ಜಾರಿಯ ಸನಿಹದಲ್ಲಿದೆ. ಈ ಯೋಜನೆಗೂ ಕೂಡ ಅಭೂತಪೂರ್ವ ಬೆಂಬಲ ದೊರೆಯುತ್ತಿದ್ದು, ಜನಸಾಮಾನ್ಯರು ಅರ್ಜಿ ಸಲ್ಲಿಕೆಗೆ ಮುಗಿಬೀಳುತ್ತಿದ್ದಾರೆ. ಆದರೆ ಕೆಲವು ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಇತರೆ ಕೇಂದ್ರಗಳು ಇದನ್ನೇ ಬಂಡವಾಳವಾಗಿಸಿಕೊಂಡು ಜನರಿಂದ ಮನಬಂದಂತೆ ಹಣ ವಸೂಲಿ ಮಾಡುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಡಿ.ಕೆ.ಶಿವಕುಮಾರ್ ಅಂತಹ ಕೇಂದ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅರ್ಜಿದಾದರರಿಂದ ಕೆಲವು ಅರ್ಜಿ ಸಲ್ಲಿಕಾ ಕೇಂದ್ರಗಳು ಮಿತಿಮೀರಿ ಹಣ ಪಡೆಯುತ್ತಿರುವ ಬಗ್ಗೆ ರಾಜ್ಯದಾದ್ಯಂತ ಸುದ್ದಿಯಾದ ಕೂಡಲೆ ಸುದ್ದಿಗೋಷ್ಠಿ ನಡೆಸಿದ ಮುಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಗ್ಯಾರಂಟಿಗಳಿಗೆ ಅರ್ಜಿ ಸಲ್ಲಿಸುವ ಜನರಿಂದ ಯಾರೂ ಕೂಡ ಹಣ ಪಡೆಯುವಂತಿಲ್ಲ. ಈ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಒಂದು ವೇಳೆ ನಿಯಮ ಮೀರಿ ಜನರಿಂದ ಹಣ ಪಡೆದರೆ ಅಂತಹ ಕೇಂದ್ರಗಳ ಲೈಸನ್ಸ್ ರದ್ದು ಪಡಿಸಲಾಗಿವುದು’ ಎಂದು ತಿಳಿಸಿದ್ದಾರೆ. ಇದರೊಂದಿಗೆ ಗೃಹಜ್ಯೋತಿ ಯೋಜನೆಗೆ ಸ್ಮಾರ್ಟ್ಫೋನ್ ಅಥವಾ ಲ್ಯಾಪ್ಟಾಪ್ ಗಳ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಯಾವುದೇ ದಾಖಲೆಗಳನ್ನು ಅಪ್ಲೋಡ್ ಮಾಡುವ ಅಗತ್ಯ ಇರುವುದಿಲ್ಲ. ಆದರೆ ಈ ಸೌಲಭ್ಯಗಳಿಲ್ಲದವರು ಗ್ರಾಮ ಒನ್, ಬೆಂಗಳೂರು ಒನ್ ಸೇರಿದಂತೆ ಇತರೆ ಕೇಂದ್ರಗಳಿಗೆ ತೆರಳಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು ಎಂದಿದ್ದಾರೆ. ಸರ್ಕಾರ ಅನುಮೋದನೆ ನೀಡಿರುವ ಪಂಚ ಗ್ಯಾರಂಟಿಗಳಿ ಅರ್ಜಿ ಸಲ್ಲಿಸುವುದಕ್ಕಾಗಿ ಜನ ಮುಗಿಬೀಳುತ್ತಿದ್ದಾರೆ. ಜೊತೆಗೆ ಒಂದೇ ಬಾರಿಗೆ ಸಾವಿರಾರು ಜನ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಕಾರಣದಿಂದ ಸರ್ವರ್ ಡೌನ್ ಆಗುತ್ತಿದೆ. ಇನ್ನೂ ಕೂಡ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿ ಪಡಿಸಿಲ್ಲ ಆ ಕಾರಣ ಅವಸರ ಬೇಡ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.