ಮಳೆಗಾಲದಲ್ಲಿ ಮನೆ ಅಥವಾ ಕಟ್ಟಡಗಳು ಸೋರುತ್ತಿದೆ ಎಂದರೆ ನಂಬಬಹುದು. ಆದರೆ ಒಂದು ಬಸ್, ಅದರಲ್ಲೂ ಸರ್ಕಾರಿ ಬಸ್ ಸೋರುತ್ತಿದೆ ಚಾಲಕ ಕೊಡೆ ಹಿಡಿದುಕೊಂಡು ಡ್ರೈವಿಂಗ್ ಮಾಡುತ್ತಿದ್ದಾನೆ ಎಂದರೆ ಯಾರಾದರು ನಂಬುತ್ತಾರೆಯೇ. ಆದರೆ ನೀವು ಈ ವೈರಲ್ ವಿಡಿಯೋ ನೋಡಿದ ಮೇಲೆ ಈ ವಿಚಾರವನ್ನು ನಂಬಲೇ ಬೇಕು. ಇಲ್ಲೊಬ್ಬ ಆಸಾಮಿ ಕೊಡೆ ಹಿಡಿದುಕೊಂಡು ಸರ್ಕಾರಿ ಬಸ್ ಚಲಾಯಿಸುತ್ತಿದ್ದಾನೆ. ಈ ವರದಿ ಹಾಗೂ ವೈರಲ್ ವಿಡಿಯೋವನ್ನು ನೀವೊಮ್ಮೆ ನೋಡಿ ಬಿಡಿ.
ವೈರಲ್ ಆಗಿರುವ ವೀಡಿಯೊದಲ್ಲಿ, ಚಾಲಕನು ತನ್ನ ಎಡಗೈಯಲ್ಲಿ ಹಳದಿ ಛತ್ರಿಯನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಬಸ್ ಚಾಲನೆ ಮಾಡುತ್ತಿರುವುದು ಕಾಣಬಹುದು. ಜೊತೆಗೆ ಬಸ್ ಟಾಪ್ನಿಂದ ಮಳೆ ನೀರು ಬೀಳುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಬಸ್ಸಿನ ನಂಬರ್ ಪ್ಲೇಟ್ ಮತ್ತು ವಿಡಿಯೋದಲ್ಲಿ ಕಂಡುಬರುವ ಚಾಲಕನ ಮುಖ ಸ್ಪಷ್ಟವಾಗಿ ಗೋಚರಿಸದ ಕಾರಣ ಚಾಲಕನನ್ನು ಗುರುತಿಸುವುದು ಕಷ್ಟಕರವಾಗಿದೆ.
ಈ ಘಟನೆ ಮಹಾರಾಷ್ಟ್ರದ ಗಡ್ಜಿರೋಲಿ ಜಿಲ್ಲೆಯಲ್ಲಿ ನಡೆದಿದ್ದು, ಯಾವ ಬಸ್ ನಲ್ಲಿ ಈ ರೀತಿಯ ಸಮಸ್ಯೆ ಇದೆ, ಈ ಚಾಲಕ ಯಾರು ಎಂಬ ಬಗ್ಗೆ ತನಿಖೆಯಾಗುತ್ತಿದೆ. ಆದರೂ ಕೂಡ ಮಹಾರಾಷ್ಟ್ರ ಸರ್ಕಾರ ಈ ವಿಡಿಯೋ ವೈರಲ್ ಆದ ದಿನದಿಂದ ತರಹೆವಾರಿ ಟ್ರೋಲ್ ಅಗುತ್ತಿದೆ. ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.