ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಸರ್ಕಾರ ಹಾಗೂ ಸಚಿವರುಗಳ ವಿರುದ್ಧ ಒಂದಿಲ್ಲೊಂದು ಆರೋಪ ಮಾಡಿಕೊಂಡೇ ಬರ್ತಾ ಇರುವ ಕುಮಾರಸ್ವಾಮಿ ವಿರುದ್ಧ ಸರ್ಕಾರಕ್ಕೆ ಒಂದು ಅಸ್ತ್ರ ಸಿಗುವಂತೆ ಕಾಣ್ತಾ ಇದೆ. ಇಲ್ಲಿಯವರೆಗೂ ಸರ್ಕಾರದ ಪ್ರತಿಯೊಂದು ನಡೆ ಕುರತು ಟೀಕಾ ಪ್ರಹಾರ ಮಾಡ್ತಾ ಇದ್ದ ಕೇಂದ್ರ ಸಚಿವ ಕುಮಾರಸ್ವಾಮಿ ತಮಗೆ ತಾವೇ ಕೆಡ್ಡಾ ತೋಡಿಕೊಂಡಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ.
ಇದೇನಪ್ಪಾ ಕುಮಾರಸ್ವಾಮಿ ಅಸ್ತ್ರವೊಂದು ಸರ್ಕಾರದ ಕೈಗೆ ಸಿಕ್ಕಿ ಬಿಡ್ತಾ ಅನ್ನೋ ಪ್ರಶ್ನೆ ಜೆಡಿಎಸ್ ವಲಯದಲ್ಲಿ ಚರ್ಚೆ ಆಗ್ತಾ ಇದೆ. ಇಷ್ಟು ದಿನ ನಾನು ಸರಿ ಇದ್ದೇನೆ, ಯಾವುದೇ ರೀತಿಯ ಭ್ರಷ್ಟಾಚಾರ ಮಾಡಿಲ್ಲ, ಯಾರ ಜಮೀನನ್ನೂ ಅಕ್ರಮವಾಗಿ ವಶಪಡಿಸಿಕೊಂಡಿಲ್ಲ ಎನ್ನುತ್ತಿದ್ದ ಕುಮಾರಸ್ವಾಮಿಯವರಿಗೆ ಈಗ ಭೂ ಕಂಟಕ ಎದುರಾಗಿದೆ. ಬಿಡದಿಯ ಕೇತಗಾನಹಳ್ಳಿಯಲ್ಲಿ ಇರುವ ತೋಟದ ಮನೆಯ ಬಳಿ ಸುಮಾರು ೧೪ ಎಕರೆ ಸರ್ಕಾರಿ ಜಾಗ ಹೊತ್ತುವರಿ ಮಾಡಿದ್ದಾರೆಂಬ ಆರೋಪ ಇತ್ತು. ಇದಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ್ದ ಕೋರ್ಟ್ ಅಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಸರ್ವೇ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದರು.
ಇದೀಗ ಕೇತಗಾನಹಳ್ಳಿ ತೋಟದ ಸುತ್ತ ಸರ್ವೆ ಆರಂಭ ಆಗಿದೆ. ಸರ್ವೇ ಕಾರ್ಯ ಆರಂಭದ ಬಳಿಕ ಕುಮಾರಸ್ವಾಮಿಗೆ ಆತಂಕವಂತೂ ಹೆಚ್ಚಾಗಿದೆ. ಹೊಸ ವಿಚಾರ ಏನಪ್ಪ ಅಂದ್ರೆ ಈ ವರದಿಯಲ್ಲಿ ಒತ್ತುವರಿ ಆಗಿದೆ ಅಂದ್ರೆ ಕಾನೂನು ಸಂಕಷ್ಟದ ಜೊತೆಗೆ ರಾಜಕೀಯ ಸಂಕಷ್ಟವೂ ಎದುರಾಗಲಿದೆ. ಯಾಕಂದ್ರೆ ಪದೇ ಪದೇ ಸರ್ಕಾರದ ವಿರುದ್ಧ ಟೀಕೆ ಮಾಡ್ತಾ ಇದ್ದ ಕುಮಾರಸ್ವಾಮಿ ಅವರನ್ನ ಕಟ್ಟಿ ಹಾಕೋದಕ್ಕೆ ಈ ಸರ್ವೇ ವರದಿ ಸಹಾಯ ಆಗಲಿದೆ ಅನ್ನೋ ಚರ್ಚೆ ಶುರುವಾಗಿದೆ.
ಎಸ್, ಕುಮಾರಸ್ವಾಮಿ ಕಟ್ಟಿ ಹಾಕಲು ವರದಿಯನ್ನ ಕಾಯ್ದಾ ಇದ್ದಾರಂತೆ ಕಾಂಗ್ರೆಸ್ ನಾಯಕರು. ವರದಿಯಲ್ಲಿ ಒತ್ತುವರಿ ಆಗಿರೋದು ಸಾಬೀತಾದ್ರೆ ನಿಜಕ್ಕೂ ಕಾಂಗ್ರೆಸ್ ನಾಯಕರು ಇದನ್ನ ದೊಡ್ಡ ಮಟ್ಟಿಗೆ ತೆಗೆದುಕೊಂಡು ಹೋಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಸಿಎಂರ ಮುಡಾ ವಿಚಾರವಾಗಿ ದೊಡ್ಡ ಮಟ್ಟಿನಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಈಗ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎಂದಾದರೆ ನಿಜಕ್ಕೂ ಕುಮಾರಸ್ವಾಮಿ ಅಡ್ಡಕತ್ತರಿಯಲ್ಲಿ ಸಿಕ್ಕಾಕಿಕೊಳ್ಳೋದು ಗ್ಯಾರಂಟಿ.
ಇದು ಕೇವಲ ಟೀಕಾಸ್ತ್ರಕ್ಕೆ ಮಾತ್ರ ಸೀಮಿತ ಆಗೋದಿಲ್ಲ. ಬದಲಾಗಿ ಕೇಂದ್ರ ಖಾತೆ ಮೇಲೂ ಪರಿಣಾಮ ಬೀರಬಹುದು. ಇಷ್ಟು ದಿನ ಸ್ವಚ್ಚ ಕೈ ಅಂತಿದ್ದ ಕುಮಾರಸ್ವಾಮಿ ವಿರುದ್ಧ ಮಣ್ಣಿನ ಸಂಕಷ್ಟ ಅಂಟಿದೆ ಎಂಬುದು ಕೇಂದ್ರ ಸಂಪುಟಕ್ಕೆ ಗೊತ್ತಾದ ಬಳಿಕ ಸಂಕಷ್ಟ ಗ್ಯಾರಂಟಿ ಎನ್ನಲಾಗುತ್ತಿದೆ. ವರದಿಯಲ್ಲಿ ಒತ್ತುವರಿ ಸಾಬೀತಾದ್ರೆ ಕುಮಾರಸ್ವಾಮಿಗೆ ಮುಜುಗರ ಮಾಡಬೇಕು, ಆ ಮೂಲಕ ಅವರನ್ನ ಕಟ್ಟಿ ಹಾಕಬಹುದು ಅನ್ನೋ ಲೆಕ್ಕಾಚಾರ ಕೂಡ ಇದೆ ಎನ್ನಲಾಗಿದೆ. ಅಷ್ಟೆ ಅಲ್ಲ ಈ ವಿಚಾರವನ್ನ ರಾಷ್ಟ್ರಮಟ್ಟದಲ್ಲಿ ತೆಗೆದುಕೊಂಡು ಹೋಗೋದಕ್ಕೂ ರಾಜ್ಯ ಕಾಂಗ್ರೆಸ್ ನಾಯಕರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಅದೇನೆ ಇರಲಿ ಸರ್ವೇ ಕಾರ್ಯವೇನೋ ಆರಂಭ ಆಗಿದೆ. ಅದರಲ್ಲಿ ಒತ್ತುವರಿ ಆಗಿದೆಯೋ ಇಲ್ವೋ ಅನ್ನೋದು ಒಂದು ಕಡೆಯಾದ್ರೆ, ಒತ್ತುವರಿಯಾಗಿದ್ರೆ ಕಾನೂನು ಕುಣಿಕೆ ಯಾವ ರೀತಿಯಾಗಿರುತ್ತದೆ ಕೇಂದ್ರ ಸಚಿವರಿಗೆ ಅನ್ನೋದು ಸದ್ಯದ ಕುತೂಹಲ.