ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 6ರ ಎಪಿಸೋಡ್ ಕಥೆ ಹೀಗಿದೆ. ತನ್ನ ಎಲ್ಲಾ ವಿಚಾರವನ್ನು ಎಲ್ಲಿ ಅಜ್ಜಿ ಎಲ್ಲರ ಮುಂದೆ ಬಾಯಿ ಬಿಡುವರೋ ಎಂಬ ಕಾರಣಕ್ಕೆ ಜಯಂತ್ ಹಿಂದೊಮ್ಮೆ ಅಜ್ಜಿ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿರುತ್ತಾನೆ. ಆದರೆ ಅಜ್ಜಿ ಆ ಭಯಕ್ಕೆ ಪ್ರಜ್ಞೆ ತಪ್ಪಿ ಕೋಮಾಗೆ ಜಾರಿರುತ್ತಾರೆ. ಅಜ್ಜಿಗೆ ಮತ್ತೆ ಪ್ರಜ್ಞೆ ಬಂದರೆ ನನಗೆ ಕಷ್ಟ ಎಂದು ಜಯಂತ್, ತನ್ನ ಮನೆಯಲ್ಲೇ ಇರಿಸಿಕೊಂಡಿರುತ್ತಾನೆ. ಆದರೆ ಜಾಹ್ನವಿಗೆ ಗಂಡನ ಎಲ್ಲಾ ವಿಚಾರ ತಿಳಿದುಹೋಗಿದೆ. ಸಿಸಿಟಿವಿ ನೋಡಿ , ಗಂಡನೇ ಅಜ್ಜಿ ಕೋಮಾಗೆ ಜಾರಲು ಕಾರಣ ಎಂಬ ನಿಜ ತಿಳಿದ ಶಾಕ್ನಲ್ಲಿ ಮಗುವನ್ನೂ ಕಳೆದುಕೊಂಡಿದ್ದಾಳೆ.
ಜಾನು, ತಾನು ಮಗು ಕಳೆದುಕೊಂಡ ವಿಚಾರವನ್ನು ಇನ್ನೂ ಅಪ್ಪ-ಅಮ್ಮನ ಬಳಿ ಕೂಡಾ ಹೇಳಿಲ್ಲ. ಅಜ್ಜಿ ಇಲ್ಲೇ ಇದ್ದರೆ ಅಪಾಯ ಎಂದು ಅರಿತ ಜಾನು, ಅಪ್ಪನಿಗೆ ಕರೆ ಮಾಡಿ ಅಜ್ಜಿಯನ್ನು ಮನೆಗೆ ವಾಪಸ್ ಕರೆದೊಯ್ಯುವಂತೆ ಮನವಿ ಮಾಡುತ್ತಾಳೆ. ಇಷ್ಟು ದಿನ ಅಜ್ಜಿ ಇಲ್ಲೇ ಇರಲಿ ಎಂದು ಹೇಳುತ್ತಿದ್ದ ಮಗಳು ಇದ್ದಕ್ಕಿದ್ದಂತೆ ವಾಪಸ್ ಕರೆದೊಯ್ಯಲು ಹೇಳುತ್ತಿರುವುದಕ್ಕೆ ಶ್ರೀನಿವಾಸ್ ಗಾಬರಿ ಆಗುತ್ತಾನೆ. ಏನಾದರೂ ಸಮಸ್ಯೆ ಆಯ್ತಾ ಎಂದು ಕೇಳುತ್ತಾನೆ. ಇಲ್ಲ ಅಪ್ಪ, ಅಜ್ಜಿಗೆ ಇಷ್ಟು ದಿನಗಳಾದರೂ ಪ್ರಜ್ಞೆ ಬಂದಿಲ್ಲ, ಅವರು ಮನೆಯಲ್ಲಿದ್ದರೆ ಇಷ್ಟಪಟ್ಟವರ ದನಿ ಕೇಳಿ ಪ್ರಜ್ಞೆ ಬರಬಹುದು ಎಂದು ಡಾಕ್ಟರ್ ಹೇಳಿದ್ದಾರೆ ಎಂದು ಜಾನು ಸುಳ್ಳು ಹೇಳುತ್ತಾಳೆ. ಹಾಗಾದರೆ ಇಂದೇ ನಾನು ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಶ್ರೀನಿವಾಸ್, ಮಗಳ ಮನೆಗೆ ಬರುತ್ತಾನೆ.
ಮಾವ ಇದ್ದಕ್ಕಿದ್ದಂತೆ ಮನೆಗೆ ಬಂದಿದ್ದನ್ನು ನೋಡಿ ಜಯಂತ್ ಗಾಬರಿಯಾಗುತ್ತಾನೆ. ನಾನೇ ಅಪ್ಪನನ್ನು ಬರಲು ಹೇಳಿದ್ದು ಎಂದು ಜಾನು ಹೇಳುತ್ತಾಳೆ. ಅದನ್ನು ಕೇಳಿ ಜಯಂತ್ಗೆ ಭಯವಾಗುತ್ತದೆ. ಎಲ್ಲಿ ಜಾನು ಎಲ್ಲಾ ವಿಚಾರವನ್ನು ಅಪ್ಪನ ಬಳಿ ಹೇಳಿಬಿಡುತ್ತಾಳೋ ಎಂದು ಆತಂಕಕ್ಕೆ ಒಳಗಾಗುತ್ತಾನೆ. ಜಾನು ಹಾಗೂ ಶ್ರೀನಿವಾಸ್ ಮಾತನಾಡಲು ಅಜ್ಜಿ ರೂಮ್ಗೆ ಹೋಗುತ್ತಾರೆ. ಅಲ್ಲಿ ಅವರು ಮಾತನಾಡುತ್ತಿದ್ದರೆ ಇಲ್ಲಿ ಜಯಂತನಿಗೆ ಒಳಗೊಳಗೇ ಭಯ, ಅವರಿಬ್ಬರೂ ಏನು ಮಾತನಾಡುತ್ತಿರಬಹುದು. ಜಾನು ಎಲ್ಲಾ ವಿಚಾರವನ್ನು ಹೇಳಿಬಿಟ್ರಾ ಹೇಗೆ ಎಂದು ಯೋಚಿಸುತ್ತಾನೆ. ಅಷ್ಟರಲ್ಲಿ ಶ್ರೀನಿವಾಸ್ ಬಂದು ಅಮ್ಮನನ್ನು ಮನೆಗೆ ಕರೆದೊಯ್ಯುತ್ತೇನೆ ಎನ್ನುತ್ತಾನೆ. ಇನ್ನು ಅವರನ್ನು ತಡೆದರೂ ಪ್ರಯೋಜನವಿಲ್ಲ ಎಂದುಕೊಳ್ಳುವ ಜಯಂತ್, ಸರಿ ನಾನು ಆಂಬುಲೆನ್ಸ್ ಅರೇಂಜ್ ಮಾಡುತ್ತೇನೆ ಎಂದು ಹೇಳುತ್ತಾನೆ. ಶ್ರೀನಿವಾಸ್, ಅಮ್ಮನನ್ನು ಮನೆಗೆ ವಾಪಸ್ ಕರೆತರುತ್ತಾನೆ.
ಇತ್ತ ಸಿದ್ದು, ಭಾವನಾ ಕಷ್ಟ ನೋಡಲಾಗದೆ ಆಕ್ಸಿಡೆಂಟ್ ಮಾಡಿದ್ದು ನಾನೇ ಎಂದು ನಿಜ ಹೇಳಲು ನಿರ್ಧರಿಸುತ್ತಾನೆ. ಭಾವನಾಗೆ ಕರೆ ಮಾಡಿ, ನಿಮ್ಮ ವ್ರತಕ್ಕೆ ದೇವರು ಫಲ ಕೊಟ್ಟಿದ್ದಾನೆ. ಖುಷಿ ತಂದೆ, ಅಜ್ಜಿಗೆ ಆಕ್ಸಿಡೆಂಟ್ ಮಾಡಿದವನು ಸಿಕ್ಕಿದ್ದಾನೆ, ನಾನು ಅಲ್ಲಿಗೆ ಹೋಗುತ್ತಿದ್ದೇನೆ, ನೀವೂ ಪೊಲೀಸ್ ಸ್ಟೇಷನ್ ಕಡೆ ಬಂದುಬಿಡಿ ಎನ್ನುತ್ತಾನೆ. ಸಿದ್ದು ಪೊಲೀಸರಿಗೆ ಸರಂಡರ್ ಆಗಲು ನಿರ್ಧರಿಸಿರುತ್ತಾನೆ. ಭಾವನಾ ಒಬ್ಬಳೇ ದೇವಸ್ಥಾನದಿಂದ ವಾಪಸ್ ಬಂದಿದ್ದನ್ನು ನೋಡಿ ಮರೀಗೌಡ ಸಿದ್ದು ಬಗ್ಗೆ ವಿಚಾರಿಸುತ್ತಾನೆ. ಭಾವನಾ ಸಿದ್ದು ಹೇಳಿದ್ದನ್ನು ಅವನಿಗೆ ಹೇಳುತ್ತಾಳೆ. ಅದನ್ನು ಕೇಳಿ ಮರೀಗೌಡ ಶಾಕ್ ಆಗುತ್ತಾನೆ. ನಾವು ಇವನನ್ನು ಉಳಿಸಬೇಕು ಎಂದುಕೊಂಡಿದ್ದರೆ ಇವನು ಪೊಲೀಸರಿಗೆ ಸರಂಡರ್ ಆಗಲು ಹೊರಟಿದ್ದಾನೆ ಹೇಗಾದರೂ ಮಾಡಿ ತಡೆಯಬೇಕು ಎಂದುಕೊಳ್ಳುತ್ತಾನೆ.
ಸಿದ್ದು ಹೇಳಿದಂತೆ ಭಾವನಾ ಪೊಲೀಸ್ ಸ್ಟೇಷನ್ಗೆ ಹೋಗುತ್ತಾಳೆ. ಆದರೆ ಅಲ್ಲಿ ಸಿದ್ದು, ಇನ್ಸ್ಪೆಕ್ಟರ್ ಭೇಟಿ ಆಗಲು ಬಿಡುವಂತೆ ಕಾನ್ಸ್ಟೆಬಲ್ ಬಳಿ ಜಗಳವಾಡುತ್ತಿರುತ್ತಾನೆ. ಅದನ್ನು ಕಂಡು ಭಾವನಾ ಅವನನ್ನು ಪಕ್ಕಕ್ಕೆ ಕರೆದೊಯ್ದು ಅವರ ಜೊತೆ ಏಕೆ ಜಗಳ ಮಾಡುತ್ತಿದ್ದೀರಿ? ಆಕ್ಸಿಡೆಂಟ್ ಮಾಡಿದವನು ಎಲ್ಲಿದ್ದಾನೆ ಎಂದು ಕೇಳುತ್ತಾಳೆ. ಸಿದ್ದು ಎಲ್ಲವನ್ನೂ ಹೇಳಲು ಬಾಯಿ ಬಿಡಬೇಕು ಎನ್ನುವಷ್ಟರಲ್ಲಿ ಮರೀಗೌಡ ಬಂದು ತಡೆಯುತ್ತಾನೆ. ಆಕ್ಸಿಡೆಂಟ್ ಮಾಡಿದವನು ಇನ್ನೂ ಸಿಕ್ಕಿಲ್ಲ, ಪೊಲೀಸರು ಕನ್ಫ್ಯೂಸ್ ಮಾಡಿಕೊಂಡು ಆ ರೀತಿ ಹೇಳಿದ್ದಾರೆ, ನೀವು ಇಲ್ಲಿಂದ ಬನ್ನಿ ಎನ್ನುತ್ತಾನೆ. ಭಾವನಾ ದೂರ ಹೋಗುತ್ತಿದ್ದಂತೆ ಮರೀಗೌಡ ಸಿದ್ದುವಿಗೆ ಬೈಯ್ಯುತ್ತಾನೆ. ನಾನು ಎಲ್ಲವನ್ನೂ ಸರಿ ಮಾಡಲು ಪ್ರಯತ್ನಿಸುತ್ತಿದ್ದರೆ ನೀನು ಎಲ್ಲವನ್ನೂ ಹಾಳು ಮಾಡುತ್ತಿದ್ದೀಯ ಮನೆಗೆ ಬಾ ಎಂದು ಕರೆದೊಯ್ಯುತ್ತಾನೆ.
ಬೇಸರಗೊಂಡಿದ್ದ ಸಿದ್ದುವನ್ನು ಭಾವನಾ ಸಮಾಧಾನ ಮಾಡುತ್ತಾಳೆ. ಸಿದ್ದು ಮನಸ್ಸಿನಲ್ಲಿ ಇರುವ ವಿಚಾರವೇ ಬೇರೆ, ಆದರೆ ಆಕ್ಸಿಡೆಂಟ್ ಮಾಡಿದವನು ಸಿಗದಿದ್ದಕ್ಕೆ ಸಿದ್ದು ಬೇಸರ ಮಾಡಿಕೊಂಡಿದ್ದಾನೆ ಎಂದುಕೊಳ್ಳುತ್ತಾಳೆ. ಅವನು ಪೊಲೀಸರ ಕೈಗೆ ಸಿಗುತ್ತಾನೋ ಇಲ್ಲವೋ, ಆದರೆ ದೇವರಿಂದ ಎಂದಿಗೂ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಾಳೆ.