ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 7ರ ಎಪಿಸೋಡ್ ಕಥೆ ಹೀಗಿದೆ. ಅಜ್ಜಿಯನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗುವಂತೆ ಜಾಹ್ನವಿ, ಅಪ್ಪನಿಗೆ ಕರೆ ಮಾಡಿ ಹೇಳುತ್ತಾಳೆ. ಇಲ್ಲಿಗೆ ಬಂದ ನಂತರವಾದರೂ ಅಮ್ಮ ಕೋಮಾದಿಂದ ಹೊರ ಬರಬಹುದು, ಮೊದಲಿನಂತೆ ಆಗಬಹುದು ಎಂಬ ಆಸೆಯಿಂದ ಶ್ರೀನಿವಾಸ್ ಮಗಳ ಮನೆಗೆ ಬರುತ್ತಾನೆ. ಅಮ್ಮನನ್ನು ಕಳಿಸಿಕೊಡಿ ಎಂದು ಅಳಿಯ ಜಯಂತ್ ಬಳಿ ಮನವಿ ಮಾಡುತ್ತಾನೆ. ಜಯಂತ್ಗೆ ಅಜ್ಜಿ ಅಲ್ಲಿಂದ ಹೋದರೆ ತನಗೆ ಸಮಸ್ಯೆ ಎಂದು ಗೊತ್ತು. ಆದರೆ ಜಾನುಗೆ ಎಲ್ಲಾ ವಿಚಾರ ಗೊತ್ತಾಗಿರುವುದು ಅವನ ಬಾಯಿ ಕಟ್ಟಿದಂತೆ ಆಗುತ್ತದೆ.
ಸ್ವತ: ಜಾನು ಅಜ್ಜಿಯನ್ನು ಇಲ್ಲಿಂದ ಕರೆದುಕೊಂಡುಹೋಗುವಂತೆ ಹೇಳಿರುವುದು ಗೊತ್ತಾಗಿ ಜಯಂತ್, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುತ್ತಾನೆ. ಶ್ರೀನಿವಾಸ್, ಮನೆಗೆ ಅಮ್ಮನನ್ನು ವಾಪಸ್ ಕರೆತರುತ್ತಾನೆ. ಆದರೆ ಅಜ್ಜಿ ಇಲ್ಲಿಗೆ ವಾಪಸ್ ಬರುತ್ತಿದ್ದಾರೆ ಎಂದು ತಿಳಿದಾಗಿನಿಂದ ಸಂತೋಷ್ ಹಾಗೂ ಸಿಂಚನಾ ಇಬ್ಬರಿಗೂ ಹಿಂಸೆ ಆಗುತ್ತಿದೆ. ಅಜ್ಜಿ ಬಂದರೆ ಖರ್ಚು ಹೆಚ್ಚು ಎಂದು ಸಂತೋಷ್ ಯೋಚಿಸಿದರೆ, ನೆಮ್ಮದಿಯಾಗಿರಲು ಸಾಧ್ಯವಿಲ್ಲ ಎಂದು ಸಿಂಚನಾ ಯೋಚಿಸುತ್ತಾಳೆ. ಕೋಮಾದಲ್ಲಿರುವ ಅಮ್ಮನಿಗೆ ಶ್ರೀನಿವಾಸ್ ರೂಮ್ ವ್ಯವಸ್ಥೆ ಮಾಡುತ್ತಾನೆ. ಪ್ರೀತಿಪಾತ್ರರ ಜೊತೆಯಲ್ಲಿದ್ದರೆ ಅಮ್ಮನಿಗೆ ಪ್ರಜ್ಞೆ ಬರಬಹುದು ಎಂದು ಡಾಕ್ಟರ್ ಹೇಳಿದ್ದಾರೆ. ಇಷ್ಟು ದಿನ ಆದದ್ದು ಸಾಕು, ನೀವು ಕಿತ್ತಾಡುವುದನ್ನು ನಿಲ್ಲಿಸಿ, ಅಮ್ಮನಿಗೆ ಯಾವುದೇ ತೊಂದರೆ ಕೊಡಬೇಡಿ ಎಂದು ಮನವಿ ಮಾಡುತ್ತಾನೆ.
ಅಜ್ಜಿ ತನ್ನ ಭಾಗದಲ್ಲಿರುವುದನ್ನು ಸಹಿಸದ ಸಂತೋಷ್, ಅವರು ಇಲ್ಲಿ ಏಕಿರಬೇಕು, ಹರೀಶನ ಭಾಗದಲ್ಲಿರಲಿ ಎನ್ನುತ್ತಾನೆ. ಆದರೆ ಅದಕ್ಕೆ ಸಿಂಚನಾ ಒಪ್ಪುವುದಿಲ್ಲ. ನಾವು ನೆಮ್ಮದಿಯಾಗಿರುವುದು ನಿಮಗೆ ಇಷ್ಟ ಇಲ್ಲ ಅನ್ನಿಸುತ್ತೆ, ಅವರು ನಿಮ್ಮ ಭಾಗದಲ್ಲೇ ಇರಲಿ, ಇಲ್ಲಿಗೆ ಬೇಡ ಎನ್ನುತ್ತಾಳೆ. ಇಬ್ಬರೂ ಹೀಗೆ ವಾದ ಮಾಡುವುದನ್ನು ನೋಡಿದ ಶ್ರೀನಿವಾಸ್ ಸಿಟ್ಟಾಗುತ್ತಾನೆ. ನಿಮ್ಮೆಲ್ಲರಿಗೂ ಮನುಷ್ಯತ್ವ ಇಲ್ಲ, ನೀವು ಚಿಕ್ಕವರಿರುವಾಗ ಅಮ್ಮ ನಿಮ್ಮನ್ನೆಲ್ಲಾ ಎಷ್ಟು ಕಾಳಜಿ ಮಾಡಿದ್ದಾಳೆ. ನಾನೂ ಕೂಡಾ ನಿಮಗೆ ಕಷ್ಟವಾದಾಗಲೆಲ್ಲಾ ಕೈಲಾದಷ್ಟು ದುಡ್ಡು ಕೊಟ್ಟಿದ್ದೇನೆ, ಕಷ್ಟಪಟ್ಟು ಬೆಳೆಸಿದ್ದೇನೆ, ನೀವು ಸ್ವಂತ ಮನೆಯನ್ನು ಭಾಗ ಮಾಡಿಲ್ಲ, ಬಾಡಿಗೆ ಮನೆಯನ್ನು ಭಾಗ ಮಾಡಿದ್ದೀರಿ, ಹೀಗೆಲ್ಲಾ ವರ್ತಿಸುವುದನ್ನು ಬಿಡಿ, ಅಮ್ಮ ಎಲ್ಲಿರಬೇಕು ಎಂದು ನಾನು ನಿರ್ಧರಿಸುತ್ತೇನೆ.
ಅಮ್ಮ ಈಗ ಯಾವ ರೂಮ್ನಲ್ಲಿದ್ದಾರೋ, ಅದೇ ರೂಮ್ನಲ್ಲಿರಲಿ. ಈ ವಿಚಾರವಾಗಿ ನೀವೆಲ್ಲಾ ಬೇರೆ ಏನೂ ಮಾತನಾಡಬಾರದು. ಅಮ್ಮ ನಿನ್ನ ಭಾಗದಲ್ಲಿರಲು ನಿನಗೆ ಅಭ್ಯಂತರವಿದೆ, ಬಾಡಿಗೆ ಕೊಡಬೇಕು ಎಂದಾದರೆ ಹೇಳಿಬಿಡು ಸಂತೋಷ್, ಅದನ್ನೂ ಕೊಟ್ಟುಬಿಡುತ್ತೇನೆ ಎಂದು ಶ್ರೀನಿವಾಸ್ ಹೇಳುತ್ತಾನೆ. ಆದರೆ ಸಂತೋಷ್ , ನಿಮ್ಮಿಷ್ಟ ಬಂದಹಾಗೆ ಮಾಡಿಕೊಳ್ಳಿ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. ಸಿಂಚನಾ ಕೂಡಾ ಗಂಡನ ಕೈ ಎಳೆದುಕೊಂಡು ಅಲ್ಲಿಂದ ಹೋಗುತ್ತಾಳೆ. ನಾನು ಮಕ್ಕಳ ಬಳಿ ಹೀಗೆ ಮಾತನಾಡಿದ್ದು ನಿನಗೆ ತಪ್ಪುಎನಿಸಿತಾ ಎಂದು ಶ್ರೀನಿವಾಸ್, ಲಕ್ಷ್ಮೀಯನ್ನು ಕೇಳುತ್ತಾನೆ. ನಮಗೆ ಇಷ್ಟೂ ಮಾತನಾಡುವುದಕ್ಕೆ ಅಧಿಕಾರವಿದೆ, ನೀವು ತಲೆ ಕೆಡಿಸಿಕೊಳ್ಳಬೇಡಿ ಎನ್ನುತ್ತಾಳೆ.
ಇತ್ತ ಜಯಂತ್, ಅಜ್ಜಿಯನ್ನು ಕಳಿಸಿಕೊಟ್ಟು ಭಯಪಡುತ್ತಿದ್ದಾನೆ. ಇಷ್ಟು ದಿನ ನಾನು ಸೇಫ್ ಇದ್ದೆ, ಆದರೆ ಈಗ ಅಜ್ಜಿಯನ್ನು ಮಾವ ಮನೆಗೆ ವಾಪಸ್ ಕರೆದುಕೊಂಡು ಹೋಗುತ್ತಿದ್ದಾರೆ. ಅಲ್ಲೇನಾದರೂ ಅಜ್ಜಿಗೆ ಪ್ರಜ್ಞೆ ಬಂದರೆ ಏನು ಮಾಡುವುದು ಎಂದು ಯೋಚಿಸುತ್ತಾನೆ. ಅದೇ ಸಮಯಕ್ಕೆ ಜಾನು ಕೂಡಾ ಇವರು ಖಂಡಿತ ಅಜ್ಜಿಗೆ ಏನಾದರೂ ಸಮಸ್ಯೆ ಮಾಡುತ್ತಾರೆ. ಅದನ್ನು ಹೇಗೆ ತಡೆಯುವುದು ಎಂದು ಯೋಚಿಸುತ್ತಾಳೆ. ಅಜ್ಜಿ ಅವರ ಮನೆಯಲ್ಲಿದ್ದರೂ ಸರಿ ನಾನು ಅವರನ್ನು ಕಂಟ್ರೋಲ್ಗೆ ತೆಗೆದುಕೊಳ್ಳಲೇಬೇಕು ಎಂದು ಜಯಂತ್ ನಿರ್ಧರಿಸುತ್ತಾನೆ. ಮಾರನೆ ದಿನ ಜಯಂತ್ ರೆಡಿಯಾಗಿ ಆಫೀಸಿಗೆ ಹೊರಡುತ್ತಾನೆ.ಜಾನು ಬಳಿ ಬಂದು ನಾನು ಆಫೀಸಿಗೆ ಹೊರಡುತ್ತಿದ್ದೇನೆ ಎನ್ನುತ್ತಾನೆ, ಆದರೆ ಜಾನು ಅವನ ಮಾತಿಗೆ ಪ್ರತಿಕ್ರಿಯಿಸುವುದಿಲ್ಲ.
ನಾನು ತಪ್ಪು ಮಾಡಿದ್ದೇನೆ ಅದನ್ನು ಒಪ್ಪಿಕೊಂಡಿದ್ದೇನೆ, ಆದರೂ ನಿಮಗೆ ನನ್ನ ಮೇಲೆ ಇಷ್ಟು ಕೋಪವೇಕೆ, ನಾನು ಆಫೀಸಿಗೆ ಹೋಗುವುದು ಬೇಡ ಎಂದರೆ ಬಿಡಿ ಇಲ್ಲೇ ಇದ್ದುಬಿಡುತ್ತೇನೆ ಎನ್ನುತ್ತಾನೆ. ನೀವು ಆಫೀಸಿಗೆ ಹೋದರೆ ನನಗೆ ನೆಮ್ಮದಿ ಎಂದು ಜಾನು ಹೇಳುತ್ತಾಳೆ. ಅದನ್ನು ಕೇಳಿ ಜಯಂತ್ ಬೇಸರಗೊಳ್ಳುತ್ತಾನೆ. ಆಯ್ತು ನಿಮಗೆ ನೆಮ್ಮದಿ ಸಿಕ್ಕರೆ ನಾನು ಹೋಗುತ್ತೇನೆ ಎಂದು ಅಲ್ಲಿಂದ ಹೊರಡುತ್ತಾನೆ. ಆದರೆ ಜಯಂತ್, ಆಫೀಸಿಗೆ ಹೋಗುವ ನೆಪದಲ್ಲಿ ಮಾವನ ಮನೆಗೆ ಹೋಗಿ ಅಜ್ಜಿ ರೂಮ್ನಲ್ಲಿ ಹಿಡನ್ ಕ್ಯಾಮರಾ ಇಡಲು ಪ್ಲ್ಯಾನ್ ಮಾಡುತ್ತಾನೆ. ಜಯಂತ್ ಹೊರಗೆ ಹೋದ ನಂತರ ಜಾನು ಕೂಡಾ ಅಪ್ಪನ ಮನೆಗೆ ಹೋಗಿ ಅಜ್ಜಿಯನ್ನು ನೋಡಲು ಹೋಗಬೇಕು ಎಂದುಕೊಳ್ಳುತ್ತಾಳೆ.
ಜಾಹ್ನವಿ, ಮಗುವನ್ನು ಕಳೆದುಕೊಂಡು ದುಃಖ ಪಡುತ್ತಿದ್ದಾಳೆ ಎಂದು ತಿಳಿದಾಗಿನಿಂದ ವಿಶ್ವನ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಅವತ್ತು ಅಸ್ಪತ್ರೆಯಲ್ಲಿ ಜಾನುವನ್ನು ಮಾತನಾಡಿಲು ಹೋದಾಗ ಅವಳ ಗಂಡ ಜಯಂತ್ ಬಂದರು, ಆದ್ದರಿಂದ ಅವಳನ್ನು ಸರಿಯಾಗಿ ವಿಚಾರಿಸಿಕೊಳ್ಳಲು ಆಗಲಿಲ್ಲ. ಈಗಲಾದರೂ ಅವಳ ಮನೆಗೆ ಹೋಗಿಬರಬೇಕು ಎಂದು, ಜಾನುವನ್ನು ನೋಡಲು ಹೋಗುತ್ತಾನೆ.
ಜಯಂತ್, ಮಾವನ ಮನೆಗೆ ಹೋದಾಗ ಜಾನೂ ಕೂಡಾ ಅಲ್ಲಿಗೆ ಬರುತ್ತಾಳಾ? ವಿಶ್ವ, ಜಾನು ಮನೆಗೆ ಬಂದು ಅವಳನ್ನು ಭೇಟಿ ಮಾಡುತ್ತಾನಾ? ಸೋಮವಾರದ ಎಪಿಸೋಡ್ನಲ್ಲಿ ತಿಳಿಯಲಿದೆ.