ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 13ರ ಎಪಿಸೋಡ್ ಕಥೆ ಹೀಗಿದೆ. ಹೆಂಡತಿಯನ್ನು ಬಿಟ್ಟಿರಲಾಗದೆ ಜಯಂತ್ ಊಟ, ನಿದ್ರೆ ಮಾಡದೆ ಬೇಸರಗೊಳ್ಳುತ್ತಾನೆ. ಇವತ್ತೂ ಕೂಡಾ ಅಪ್ಪನ ಮನೆಯಲ್ಲಿ ಇರುತ್ತೇನೆ ಎಂದು ಜಾಹ್ನವಿ ಹೇಳುವ ಮೊದಲು ನಾನು ಹೋಗಿ ಅವರನ್ನು ಕರೆತರಬೇಕು ಎಂದು ಜಯಂತ್, ಮಾವನ ಮನೆಗೆ ಹೋಗುತ್ತಾನೆ. ಮನೆ ಹೊರಗೆ ನಿಂತಿರುವ ಗಂಡನನ್ನು ನೋಡಿಯೂ ನೋಡದಂತೆ ಜಾನು ಸುಮ್ಮನಾಗುತ್ತಾಳೆ. ಜಯಂತ್ ಅತ್ತೆ ಮಾವನಿಗೆ ಹೇಳಿ ಹೆಂಡತಿಯನ್ನು ಮನೆಗೆ ಕರೆತರುತ್ತಾನೆ.
ಮತ್ತೊಂದೆಡೆ ಭಾವನಾ ಹಾಗೂ ಸಿದ್ದು ಹೊರಗೆ ಹೋಗುವುದನ್ನು ನೋಡಿದ ರೇಣುಕಾ ಕೋಪಗೊಳ್ಳುತ್ತಾಳೆ. ಮೊದಲ ಬಾರಿ ನನ್ನ ಹೆಂಡತಿ ಬಳೆ ತೆಗೆದುಕೊಂಡುವಂತೆ ಕೇಳಿದ್ದಾರೆ. ಅವರಿಗೆ ಬಳೆ ಕೊಡಿಸಲು ಹೋಗುತ್ತಿದ್ದೇನೆ ಎಂದು ಸಿದ್ದು ಹೋಗುತ್ತಾನೆ. ಅಮ್ಮ ಮಗನನ್ನು ಒಂದು ಮಾಡುವ ಉದ್ದೇಶದಿಂದ ಭಾವನಾ, ಅಮ್ಮನಿಗೆ ಐಸ್ಕ್ರೀಮ್ ತೆಗೆದುಕೊಂಡು ಹೋಗುವಂತೆ ಸಲಹೆ ನೀಡುತ್ತಾಳೆ. ಮಗ ಐಸ್ಕ್ರೀಮ್ ಕೊಟ್ಟಿದಕ್ಕೆ ರೇಣುಕಾ ಮೊದಲು ಖುಷಿಯಾದರೂ, ಅದನ್ನು ಹೇಳಿದ್ದು ಭಾವನಾ ಎಂದು ತಿಳಿದು ಕೋಪಗೊಳ್ಳುತ್ತಾಳೆ.
ಇತ್ತ ಜಯಂತ್ ಹೆಂಡತಿಯನ್ನು ಮನೆಗೆ ಕರೆತರುತ್ತಾನೆ. ಕೊನೆಗೂ ನನ್ನ ಚಿನ್ನುಮರಿ ಮನೆಗೆ ಬಂದಾಯ್ತು ಎಂದು ಖುಷಿಪಡುತ್ತಾನೆ. ನೀವು ಒಂದೇ ನಿಮಿಷ ಇಲ್ಲಿ ಇರಿ ನಾನು ಬರುತ್ತೇನೆ ಎಂದು ಜಾನುವನ್ನು ಮನೆ ಹೊರಗೆ ನಿಲ್ಲಿಸಿ ಜಯಂತ್ ಒಳಗೆ ಹೋಗುತ್ತಾನೆ. ಇವರು ನನ್ನನ್ನು ಇಲ್ಲಿ ಏಕೆ ನಿಲ್ಲಿಸಿದರು? ನನಗೆ ಏನಾದರೂ ಸಮಸ್ಯೆ ಮಾಡುತ್ತಾರಾ ಎಂದು ಜಾನು, ಜಯಂತ್ ತನ್ನ ಸ್ನೇಹಿತ ಹಾಗೂ ಅಜ್ಜಿ ಮೇಲೆ ಹಲ್ಲೆ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾಳೆ. ಆದರೆ ಜಯಂತ್ ಆರತಿ ತಟ್ಟೆ ಸಹಿತ ಬರುತ್ತಾನೆ. ಇದನ್ನೆಲ್ಲಾ ಏಕೆ ಮಾಡುತ್ತಿದ್ದೀರಿ? ನಾನೇನು ಮೊದಲ ಬಾರಿ ಈ ಮನೆಗೆ ಬರುತ್ತಿಲ್ಲ ಎಂದು ಜಾನು ಹೇಳುತ್ತಾಳೆ. ನೀವು ಈ ಮನೆ ಮಹಾಲಕ್ಷ್ಮೀ, ಹೇಳದೆ ಕೇಳದೆ ಹೋಗಿದ್ದೀರಿ, ಈಗ ಮನೆಗೆ ವಾಪಸ್ ಬಂದಾಗ ನಿಮ್ಮನ್ನು ಈ ರೀತಿ ಆರತಿ ಮಾಡಿ ಮನೆಗೆ ಕರೆತರಬೇಕು ಎಂದು ಆರತಿ ಮಾಡುತ್ತಾನೆ.
ಈಗ ಬಲಗಾಲಿಟ್ಟು ಒಳಗೆ ಬನ್ನಿ ಎಂದು ಜಯಂತ್ ಹೇಳುತ್ತಾನೆ. ಆದರೆ ಜಾನು ಎಡಗಾಲಿಟ್ಟು ಒಳಗೆ ಬರುತ್ತಾಳೆ. ಆದರೂ ಜಯಂತ್ ಸುಮ್ಮನಾಗುತ್ತಾನೆ. ರೂಮ್ಗೆ ಬಂದು ಜಾನು ಪಕ್ಕ ಕುಳಿತುಕೊಳ್ಳುವ ಜಯಂತ್, ನೀವು ಹೇಳದೆ ಕೇಳದೆ ತಂದೆ ಮನೆಗೆ ಹೋಗಿದ್ದಿರಿ ಎನ್ನುತ್ತಾನೆ, ನನ್ನ ತಂದೆ ಮನೆಗೆ ನಿಮ್ಮನ್ನು ಕೇಳಿ ಹೋಗುವ ಅವಶ್ಯತೆಯಿಲ್ಲ ಎಂದು ಜಾನು ಹೇಳುತ್ತಾಳೆ. ಹೌದು ಕೇಳಬೇಕು, ಈಗ ನೀವು ನಿಮ್ಮ ತಂದೆಗೆ ಮಗಳು ಮಾತ್ರವಲ್ಲ, ನಿಮ್ಮ ಅಣ್ಣಂದಿರಿಗೆ ತಂಗಿ ಮಾತ್ರವಲ್ಲ, ನನ್ನ ಧರ್ಮಪತ್ನಿ ಕೂಡಾ, ಆದ್ದರಿಂದ ಕೇಳಿ ಹೋಗಬೇಕು ಎನ್ನುತ್ತಾನೆ. ಆ ಮಾತು ಕೇಳಿ ಜಾಹ್ನವಿ ಕೋಪಗೊಂಡು ಅಲ್ಲಿಂದ ಎದ್ದು ಹೋಗುತ್ತಾಳೆ. ಹೇಗೋ ಜಾಹ್ನವಿ ಅವರನ್ನು ಮನೆಗೆ ಕರೆತಂದಾಯಿತು. ಇನ್ಮುಂದೆ ಅವರು ಮನೆಬಿಟ್ಟು ಹೋಗದಂತೆ ನೋಡಿಕೊಳ್ಳಬೇಕಾಗಿದ್ದು ನಿಮ್ಮ ಕರ್ತವ್ಯ ಎಂದು ಗೊಂಬೆ ಬಳಿ ಮಾತನಾಡುತ್ತಾನೆ.
ಕೆಲಸ ಬಿಟ್ಟ ನಂತರ ಸ್ನೇಹಿತನ ಆಟೋವನ್ನು ಓಡಿಸುತ್ತಿದ್ದ ಶ್ರೀನಿವಾಸನಿಗೆ ಈಗ ಮತ್ತೊಂದು ಕಷ್ಟ ಬಂದಿದೆ. ಇದ್ದಕ್ಕಿದ್ದಂತೆ ಆಟೋ ಕೆಟ್ಟುನಿಲ್ಲುತ್ತದೆ. ಶ್ರೀನಿವಾಸ್, ತನ್ನ ಸ್ನೇಹಿತನಿಗೆ ಕರೆ ಮಾಡುತ್ತಾನೆ. ಏನೋ ಸಮಸ್ಯೆ ಆಗಿರಬೇಕು, ನಾನು ಇದನ್ನು ರಿಪೇರಿಗೆ ಬಿಡುತ್ತೇನೆ, ಖರ್ಚು ಕೂಡಾ ನಾನೇ ಕೊಡುತ್ತೇನೆ ಎಂದು ಸ್ನೇಹಿತ ಹೇಳುತ್ತಾನೆ. ಆದರೆ ಸ್ವಾಭಿಮಾನಿ ಶ್ರೀನಿವಾಸ್ ಅದಕ್ಕೆ ಒಪ್ಪುವುದಿಲ್ಲ. ಬೇಡ ಪದೇ ಪದೆ ನಿನ್ನ ಬಳಿ ಕೈ ಚಾಚಲು ಇಷ್ಟವಿಲ್ಲ, ಹಾಗಂತ ಆಟೋ ರಿಪೇರಿಗೆ ಬೇಕಾಗಿರುವಷ್ಟು ದುಡ್ಡು ಕೂಡಾ ನನ್ನ ಬಳಿ ಇಲ್ಲ ಎಂದು ಬೇಸರಗೊಳ್ಳುತ್ತಾನೆ. ಹಾಗಾದರೆ ನೀನು ಆಟೋ ಓಡಿಸುವುದನ್ನು ಬಿಟ್ಟು ಬೇರೆ ಕೆಲಸ ಮಾಡು ಎಂದು ಸ್ನೇಹಿತ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ.
ಮನೆಗೆ ಬಂದು ಶ್ರೀನಿವಾಸ್, ಹೆಂಡತಿ ಲಕ್ಷ್ಮೀ ಬಳಿ ಆಟೋ ಸಮಸ್ಯೆ ಬಗ್ಗೆ ಹೇಳಿಕೊಳ್ಳುತ್ತಾನೆ. ಹೆದರಬೇಡಿ, ಮತ್ತೊಂದು ಕೆಲಸ ದೊರೆಯುವವರೆಗೂ ಹೇಗೋ ನಿಮ್ಮ ಪಿಎಫ್ ದುಡ್ಡಿನಿಂದ ಮನೆ ನಿಭಾಯಿಸಿದರೆ ಆಯ್ತು ಎನ್ನುತ್ತಾಳೆ. ಯಾವುದೇ ಕಾರಣಕ್ಕೂ ಆ ಪಿಎಫ್ ಹಣವನ್ನು ತೆಗೆಯುವುದು ಬೇಡ ಎಂದು ಶ್ರೀನಿವಾಸ್ ಹೇಳುತ್ತಾನೆ. ಅಮ್ಮನ ರೂಮ್ಗೆ ಹೋಗುವ ಶ್ರೀನಿವಾಸ್ ತಾನು ಅನುಭವಿಸುತ್ತಿರುವ ಕಷ್ಟಗಳನ್ನು ಅಮ್ಮನ ಬಳಿ ಹೇಳಿಕೊಳ್ಳುತ್ತಾನೆ. ನನಗೆ ನಿನ್ನ ಆಶೀರ್ವಾದ ಬೇಕು, ನೀನು ಆಶೀರ್ವಾದ ಮಾಡಿದರೆ ನನಗೆ ನೂರಾನೆ ಬಲ ಸಿಕ್ಕಿದಂತೆ, ಅದಕ್ಕಾಗಿ ನಾನು ಇಲ್ಲಿಗೆ ಬಂದಿದ್ದು ಎಂದು ಅಮ್ಮನ ಕೈಯನ್ನು ತನ್ನ ತಲೆ ಮೇಲೆ ಇಟ್ಟುಕೊಳ್ಳುತ್ತಾನೆ. ಅಜ್ಜಿಗೆ ಪ್ರಜ್ಞೆ ಬಂದು ಕೈ ಬೆರಳುಗಳನ್ನು ಅಲುಗಾಡಿಸುತ್ತಾರೆ. ಅದನ್ನು ನೋಡಿ ಶ್ರೀನಿವಾಸ್ ಖುಷಿಯಾಗುತ್ತಾನೆ. ಮನೆಯವರಿಗೆ ವಿಷಯ ತಿಳಿಸಿ ಡಾಕ್ಟರನ್ನು ಮನೆಗೆ ಬರಹೇಳುತ್ತಾನೆ.
ಅಜ್ಜಿಗೆ ಪೂರ್ತಿ ಪ್ರಜ್ಞೆ ಬಂದು ಮಾತನಾಡುತ್ತಾರಾ? ಈ ವಿಷಯ ಜಯಂತನಿಗೆ ಗೊತ್ತಾಗುವುದಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.