ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 14ರ ಎಪಿಸೋಡ್ ಕಥೆ ಹೀಗಿದೆ. ಅಜ್ಜಿ ರೂಮ್ನಲ್ಲಿ ಗಂಡ ಜಯಂತ್ ಇಟ್ಟಿದ್ದ ಕ್ಯಾಮರಾವನ್ನು ಜಾಹ್ನವಿ ಮುರಿದು ಎಸೆದಿದ್ದಾಳೆ. ಅಜ್ಜಿ ಹೇಗಿದ್ದಾರೆ ನೋಡೋಣ ಎಂದು ಮೊಬೈಲ್ ನೋಡಿದ ಜಯಂತನಿಗೆ ಕ್ಯಾಮರಾ ಇಲ್ಲದಿರುವುದು ನೋಡಿ, ಖಂಡಿತ ಜಾಹ್ನವಿ ಏನೂ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ಮರುದಿನ ಜಯಂತ್ ಮಾವನ ಮನೆಗೆ ಬಂದು ಹೆಂಡತಿಯನ್ನು ಮನೆಗೆ ಕರೆತರುತ್ತಾನೆ. ಜಾನುಗೆ ಇಷ್ಟವಿಲ್ಲದಿದ್ದರೂ ಅಪ್ಪ ಅಪ್ಪ ಬೇಸರ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ವಾಪಸ್ ಹೋಗುತ್ತಾಳೆ.
ಜಯಂತ್, ಹೆಂಡತಿಗೆ ಆರತಿ ಮಾಡಿ ಮನೆ ಒಳಗೆ ಕರೆದುಕೊಳ್ಳುತ್ತಾನೆ. ಬೇಕೆಂತಲೇ ಜಾನು ಎಡಗಾಲಿಟ್ಟು ಮನೆ ಒಳಗೆ ಹೋಗುತ್ತಾಳೆ. ಎಷ್ಟು ಮಾತನಾಡಿಸಿದರೂ ಜಾನು, ಜಯಂತ್ ಜೊತೆ ಮೊದಲಿನಂತೆ ಪ್ರೀತಿಯಿಂದ ಮಾತನಾಡುವುದಿಲ್ಲ. ಇದೇ ಸಮಯಕ್ಕೆ ಮನೆಯಲ್ಲಿ ಶ್ರೀನಿವಾಸ್, ಅಮ್ಮನ ರೂಮ್ಗೆ ಹೋಗಿ ತಾನು ಆಟೋ ಓಡಿಸುವುದನ್ನು ನಿಲ್ಲಿಸಿ ಹೊಸ ಕೆಲಸ ಶುರು ಮಾಡುವುದಾಗಿ ಅಮ್ಮನ ಬಳಿ ಹೇಳುತ್ತಾನೆ. ನನಗೆ ನಿನ್ನ ಆಶೀರ್ವಾದ ಬೇಕು ಎಂದು ಅಮ್ಮನ ಕೈಗಳನ್ನು ತಲೆ ಮೇಲೆ ಇಟ್ಟುಕೊಳ್ಳುತ್ತಾನೆ. ಹಾಗೇ ಮಾತನಾಡುವಾಗ ಅಜ್ಜಿ ಕೈ ಬೆರಳು ಅಲುಗಾಡಿಸುವುದನ್ನು ನೋಡಿ ಖುಷಿಯಾಗುತ್ತಾನೆ, ವಿಚಾರವನ್ನು ಮನೆ ಮಂದಿಗೆ ತಿಳಿಸಿ ಡಾಕ್ಟರ್ಗೆ ಬರಹೇಳುತ್ತಾನೆ.
ಡಾಕ್ಟರ್ ಬಂದು ಅಜ್ಜಿಯನ್ನು ಪರೀಕ್ಷಿಸಿ, ಒಳ್ಳೆ ಬೆಳವಣಿಗೆ ಹೀಗೆ ಮನೆಯವರು ಒಬ್ಬೊಬ್ಬರಾಗಿ ಅಜ್ಜಿಯನ್ನು ಮಾತನಾಡಿಸುತ್ತಿರಿ ಎನ್ನುತ್ತಾರೆ. ಜಯಂತ್ ಹಾಗೂ ಜಾನು ಇಬ್ಬರೂ ಅಜ್ಜಿಯನ್ನು ಬಹಳ ಕೇರ್ ಮಾಡಿದ್ದರು, ಅಜ್ಜಿ ಆರೋಗ್ಯ ಸುಧಾರಿಸಿದೆ ಎಂದು ಅವರಿಗೆ ತಿಳಿಸುವುದಾಗಿ ಶ್ರೀನಿವಾಸ್, ವೀಣಾಗೆ ಹೇಳುತ್ತಾನೆ. ವೀಣಾ, ಜಾಹ್ನವಿಗೆ ಕರೆ ಮಾಡುತ್ತಾಳೆ. ಜಾನು ನಂಬರಿಗೆ ಕರೆ ಬಂದಿದ್ದನ್ನು ನೋಡಿ ಜಯಂತನೇ ರಿಸೀವ್ ಮಾಡುತ್ತಾನೆ. ಅಜ್ಜಿ ಆರೋಗ್ಯ ಸುಧಾರಿಸುತ್ತಿದೆ ಎಂದು ವೀಣಾ ಹೇಳಿದಾಗ ಜಯಂತ್ ಶಾಕ್ ಆಗುತ್ತಾನೆ. ಅಷ್ಟರಲ್ಲಿ ಜಾಹ್ನವಿ ಅಲ್ಲಿಗೆ ಬರುತ್ತಾಳೆ. ನನ್ನ ಫೋನಿನಲ್ಲಿ ಯಾರ ಜೊತೆ ಮಾತನಾಡುತ್ತಿದ್ದೀರಿ ಎಂದು ಕೇಳುತ್ತಾಳೆ. ಜಯಂತ್ ವಿಚಾರ ಮುಚ್ಚಿಡಲು ಪ್ರಯತ್ನಿಸಿದರೂ ಜಾನು, ಅವನ ಕೈಯಿಂದ ಫೋನ್ ಕಸಿದುಕೊಳ್ಳುತ್ತಾಳೆ. ಅಜ್ಜಿಗೆ ಪ್ರಜ್ಞೆ ಬಂದಿರುವ ವಿಚಾರ ಕೇಳಿ ಖುಷಿಯಾಗುತ್ತಾಳೆ.
ಅಜ್ಜಿ ಎಚ್ಚರಕೊಂಡು ಜಯಂತ್ ಹೆಸರನ್ನು ಕನವರಿಸುತ್ತಾರೆ. ಅದನ್ನು ಕೇಳಿಸಿಕೊಂಡ ಡಾಕ್ಟರ್, ಜಯಂತ್ ಎಂದರೆ ನಿಮ್ಮ ಅಳಿಯ ತಾನೇ, ಅಜ್ಜಿ ಅವರ ಹೆಸರು ಹೇಳುತ್ತಿದ್ದಾರೆ, ಅವರನ್ನು ಇಲ್ಲಿಗೆ ಬರಲು ಹೇಳಿ ಎನ್ನುತ್ತಾರೆ. ವೀಣಾ ಮತ್ತೆ ಜಯಂತನ ನಂಬರ್ಗೆ ಕರೆ ಮಾಡುತ್ತಾಳೆ. ಅಜ್ಜಿಗೆ ಪ್ರಜ್ಞೆ ಬಂದಿದೆ ಎಂದು ತಿಳಿದು ಮೊದಲೇ ಗಾಬರಿಯಾಗಿದ್ದ ಜಯಂತನಿಗೆ ವೀಣಾ ಮತ್ತೆ ಕಾಲ್ ಮಾಡಿದ್ದು ಶಾಕ್ ಆಗುತ್ತದೆ. ಆದರೆ ಫೋನ್ ರಿಸೀವ್ ಮಾಡದೆ ಸುಮ್ಮನಾಗುತ್ತಾನೆ. ಅಷ್ಟರಲ್ಲಿ ಜಾನು ಅಲ್ಲಿಗೆ ಬಂದು ಆಗಿನಿಂದ ಯಾವುದೇ ಕಾಲ್ ಬರ್ತಿದೆ ಏಕೆ ಅವಾಯ್ಡ್ ಮಾಡುತ್ತಿದ್ದೀರಿ ಎಂದು ಕೇಳುತ್ತಾಳೆ. ಯಾರು ನೋಡಿ ಸುಮ್ಮನೆ ಏಕೆ ಅವಾಯ್ಡ್ ಮಾಡುತ್ತಿದ್ದೀರಿ ಎಂದು ಅವನ ಕೈಯಿಂದ ಫೋನ್ ಕಸಿದುಕೊಳ್ಳುತ್ತಾಳೆ. ನೀವು ನನ್ನ ಪರ್ಮಿಷನ್ ಇಲ್ಲದೆ ನನ್ನ ಫೋನ್ ರಿಸೀಪ್ ಮಾಡಿದ್ದಿರಿ, ಈಗ ನಾನು ಮಾಡಿದರೆ ಏನು ತಪ್ಪು ಎಂದು ಅತ್ತಿಗೆ ಕಾಲ್ ರಿಸೀವ್ ಮಾಡಿ ಲೌಡ್ ಸ್ಪೀಕರ್ ಇಟ್ಟು ಮಾತನಾಡುವಂತೆ ಜಯಂತನಿಗೆ ಹೇಳುತ್ತಾಳೆ.
ನಿಮಗೆ ಪದೇ ಪದೆ ಕಾಲ್ ಮಾಡುತ್ತಿರುವುದಕ್ಕೆ ಬೇಸರ ಮಾಡಿಕೊಳ್ಳಬೇಡಿ, ಅಜ್ಜಿ ಆಗಿನಿಂದ ನಿಮ್ಮ ಹೆಸರೇ ಕನವರಿಸುತ್ತಿದ್ದಾರೆ, ಸಾಧ್ಯವಾದರೆ ಒಮ್ಮೆ ಇಲ್ಲಿ ಬಂದು ಹೋಗಿ ಎಂದು ವೀಣಾ ಹೇಳುತ್ತಾಳೆ. ಅದನ್ನು ಕೇಳಿ ಜಯಂತ್ ಗಾಬರಿಯಾದರೆ, ಜಾನು ಖುಷಿಯಾಗುತ್ತಾಳೆ. ನಾನು ಮೀಟಿಂಗ್ನಲ್ಲಿದ್ದೀನಿ ಎಂದು ಜಯಂತ್ ಹೇಳುತ್ತಾನೆ. ದಯವಿಟ್ಟು ಮೀಟಿಂಗ್ ನಂತರ ಇಟ್ಟುಕೊಳ್ಳಿ , ನಮ್ಮೆಲ್ಲರಿಗೂ ಅಜ್ಜಿ ಆರೋಗ್ಯ ಮುಖ್ಯ ದಯವಿಟ್ಟು ಬನ್ನಿ ಎನ್ನುತ್ತಾಳೆ. ಸರಿ ಬರುವೆ ಎಂದು ಜಯಂತ್ ಹೇಳುತ್ತಾನೆ. ನಾನು ಅಜ್ಜಿ ನೋಡಲು ಹೋಗುತ್ತೇನೆ ಎಂದು ಜಯಂತ್ ಹೊರಡಲು ಸಿದ್ಧನಾಗುತ್ತಾನೆ.
ಅಜ್ಜಿಯನ್ನು ನೋಡಲು ಹೋಗುತ್ತಿರುವ ಜಯಂತನನ್ನು ಜಾನು ತಡೆಯುತ್ತಾಳೆ. ನೀವು ಎಲ್ಲಿಗೂ ಹೋಗುತ್ತಿಲ್ಲ ಎನ್ನುತ್ತಾಳೆ. ನಾನು ಹೋಗದಿದ್ದರೆ ಸಮಸ್ಯೆ ಆಗಬಹುದು ಎಂದು ಜಯಂತ್ ಹೇಳುತ್ತಾನೆ, ನೀವು ಹೋಗದಿದ್ದರೆ ಸಮಸ್ಯೆ ಆಗುವುದಿಲ್ಲ, ಅಲ್ಲಿಗೆ ಹೋದರೆ ಸಮಸ್ಯೆ ಆಗುತ್ತದೆ, ನಿನ್ನ ಕೇಳದೆ ನಾನು ಎಲ್ಲೂ ಹೋಗುವುದಿಲ್ಲ ಎಂದು ಆಗಲೇ ಪ್ರಾಮಿಸ್ ಮಾಡಿದಿರಿ ತಾನೆ, ಎಲ್ಲಿ ಹೋಯ್ತು ಆ ಪ್ರಾಮಿಸ್. ನೀವು ಅಜ್ಜಿ ನೋಡಲು ಹೋಗುತ್ತಿಲ್ಲ, ನಾನೂ ಬರುತ್ತೇನೆ ಹೋಗೋಣ ಎನ್ನುತ್ತಾಳೆ. ಮೊದಲು ನಾನು ಹೋಗಿ ನೋಡಿಕೊಂಡು ಬಂದು ನಂತರ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎಂದು ಜಯಂತ್ ಹೇಳುತ್ತಾನೆ. ನಿಮಗೆ ಒಂದು ಆಯ್ಕೆ ಕೊಡುತ್ತೇನೆ, ಅಜ್ಜಿ ಈ ರೀತಿ ಆಗಲು ನಾನೇ ಕಾರಣ, ಜಾಹ್ನವಿ ಅವರ ಈ ಪರಿಸ್ಥಿತಿಗೂ ನಾನೇ ಕಾರಣ ಎಂದು ಮನೆಯವರಿಗೆ ನಿಜ ಹೇಳಿ, ನಂತರ ಹೋಗಿ ಎನ್ನುತ್ತಾಳೆ.
ನಾನು ಅವರ ಮುಂದೆ ನಿಜ ಹೇಳಿದರೆ ನನ್ನ ಪರಿಸ್ಥಿತಿ ಏನಾಗುತ್ತದೆ ಎಂದು ತಿಳಿದಿದ್ದೂ ನೀವು ಈ ರೀತಿ ಹೇಳುತ್ತಿದ್ದೀರ ಎಂದು ಜಯಂತ್ ಕೇಳುತ್ತಾನೆ. ಹೌದು ಎಲ್ಲಾ ಗೊತ್ತಿದ್ದೂ ಹೇಳುತ್ತಿದ್ದೇನೆ ಎಂದು ಜಾನು ಹೇಳುತ್ತಾಳೆ. ತನ್ನ ಹಾಗೂ ಅಜ್ಜಿ ಪರಿಸ್ಥಿತಿ ನೆನೆದು ಜಾನು ಕಣ್ಣೀರಿಡುತ್ತಾಳೆ. ಹೆಂಡತಿ ಅಳುವುದನ್ನು ನೋಡಿ ಜಯಂತ್ ಕೂಡಾ ಭಾವುಕನಾಗುತ್ತಾನೆ.
ಹೆಂಡತಿ ಹೇಳಿದಂತೆ ಜಯಂತ್ ಮಾವನ ಮನೆಗೆ ಹೋಗಿ ನಿಜ ಒಪ್ಪಿಕೊಳ್ಳುತ್ತಾನಾ? ಸೋಮವಾರದ ಸಂಚಿಕೆಯಲ್ಲಿ ತಿಳಿಯಲಿದೆ.