ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 12ರ ಎಪಿಸೋಡ್ ಕಥೆ ಹೀಗಿದೆ. ಜಾನುಗೆ ಹೇಳದೆ ಮಾವನ ಮನೆಗೆ ಬಂದಿರುವ ಜಯಂತ್ ಅಜ್ಜಿ ರೂಮ್ನಲ್ಲಿ ಹಿಡನ್ ಕ್ಯಾಮರಾ ಇಡುತ್ತಾನೆ. ಇನ್ಮುಂದೆ ಅಜ್ಜಿ ನನ್ನ ಕಂಟ್ರೋಲ್ನಲ್ಲಿ ಇರುತ್ತಾರೆ. ಅವರಿಗೆ ಪ್ರಜ್ಞೆ ಬಂದಿರುವ ವಿಚಾರ ಮೊದಲು ನನಗೆ ಗೊತ್ತಾಗುತ್ತೆ ಎಂದು ಖುಷಿಯಾಗುತ್ತಾನೆ. ಮಾವನ ಮನೆಯಿಂದ ಜಯಂತ್ ವಾಪಸ್ ಹೋಗುತ್ತಿದ್ದಂತೆ ಅಲ್ಲಿಗೆ ಜಾನು ಬರುತ್ತಾಳೆ. ಜಯಂತ್ ಕೂಡಾ ಇಲ್ಲಿಗೆ ಬಂದು ಹೋಗಿರುವ ವಿಚಾರ ಗೊತ್ತಾಗಿ ಗಾಬರಿಯಾಗುತ್ತಾಳೆ.
ಜಾನು ಮನೆಯಲ್ಲಿ ಇಲ್ಲದ್ದನ್ನು ನೋಡಿ ಜಯಂತ್ ಗಾಬರಿಯಾಗುತ್ತಾನೆ. ಕೊನೆಗೆ ಹೆಂಡತಿ, ತವರು ಮನೆಗೆ ಹೋಗಿರುವುದು ಗೊತ್ತಾಗಿ ಕೋಪಗೊಳ್ಳುತ್ತಾನೆ. ಜಾನು ನನ್ನೊಂದಿಗೆ ಇಲ್ಲದಿದ್ದಲ್ಲಿ ನನಗೆ ಇರಲು ಆಗುವುದಿಲ್ಲ ಎಂದು ಒದ್ದಾಡುತ್ತಾನೆ. ಇತ್ತ ಜಾನು, ಅವರು ಇಲ್ಲಿಗೆ ಬಂದಿದ್ದಾರೆ ಎಂದರೆ ಖಂಡಿತ ಕ್ಯಾಮರಾ ಇಟ್ಟಿರುತ್ತಾರೆ ಎಂದು ಅಜ್ಜಿ ರೂಮ್ನಲ್ಲಿ ಕ್ಯಾಮರಾಗಾಗಿ ಹುಡುಕಾಡುತ್ತಾಳೆ. ಕೊನೆಗೆ ಹೂದಾನಿಯಲ್ಲಿ ಕ್ಯಾಮರಾ ದೊರೆಯುತ್ತದೆ. ಇಷ್ಟೆಲ್ಲಾ ನಡೆದರೂ ಇವರು ಹಳೆಯ ಬುದ್ಧಿ ಬಿಟ್ಟಿಲ್ಲ ಎಂದು ಜಾನು ಆ ಕ್ಯಾಮರಾವನ್ನು ಮುರಿದು ಎಸೆಯುತ್ತಾಳೆ.
ಅಜ್ಜಿ ಹೇಗಿದ್ದಾರೆ ನೋಡೋಣ ಎಂದು ಜಯಂತ್ ಮೊಬೈಲ್ನಲ್ಲಿ ಗಮನಿಸಿದಾಗ ಕ್ಯಾಮರಾ ಕೆಲಸ ಮಾಡದೆ ಇರುವುದು ಗೊತ್ತಾಗುತ್ತದೆ. ಬಹುಶ: ಜಾಹ್ನವಿ ಅವರಿಗೆ ನಾನು ಕ್ಯಾಮರಾ ಇಟ್ಟಿರುವುದು ಗೊತ್ತಾಗಿ ಅವರು ಈ ಕೆಲಸ ಮಾಡಿದ್ದಾರೆ. ಜಾನು ಅವರೇ ತಪ್ಪು ಮಾಡಿಬಿಟ್ರಿ, ಬೇರೆ ಯಾರಾದರೂ ಹೀಗೆ ಮಾಡಿದ್ದರೆ ಇಷ್ಟೊತ್ತಿಗೆ ಏನಾದರೂ ಒಂದು ಆಗುತ್ತಿತ್ತು ಎನ್ನುತ್ತಾನೆ, ಇಲ್ಲ ನಾನು ನಿಮಗೇನು ಮಾಡುವುದಿಲ್ಲ ಹೆದರಬೇಡ ಎಂದು ತನ್ನಷ್ಟಕ್ಕೆ ತಾನೇ ಮಾತನಾಡುತ್ತಾನೆ. ಇದು ಹೀಗೇ ಮುಂದುವರೆದರೆ ಸರಿ ಇರುವುದಿಲ್ಲ ಜಾಹ್ನವಿ ಫೋನ್ ಮಾಡಿ ಇಂದೂ ಕೂಡಾ ಇಲ್ಲೇ ಇರುತ್ತೇನೆ ಎಂದು ಹೇಳುವ ಮುನ್ನವೇ ನಾನು ಅಲ್ಲಿಗೆ ಹೋಗಿ ಅವರನ್ನು ಮನೆಗೆ ಕರೆತರಬೇಕು ಎಂದುಕೊಂಡು ಮಾವನ ಮನೆಗೆ ಹೋಗುತ್ತಾನೆ.
ಬೆಳ್ಳಂಬೆಳಗ್ಗೆ ಮಾವನ ಮನೆಗೆ ಬರುವ ಜಯಂತ, ಜಾಹ್ನವಿ ನನ್ನ ಅನುಮತಿ ಇಲ್ಲದೆ ಇಲ್ಲಿಗೆ ಬಂದಿದ್ದಾರೆ. ಅವರೇ ಹೊರಗೆ ಬರಲಿ ಆಗ ಕರೆದುಕೊಂಡು ಹೋಗುತ್ತೇನೆ ಎಂದು ಹೊರಗೆ ನಿಲ್ಲುತ್ತಾನೆ. ಆದರೆ ಮತ್ತೆ ಮನಸ್ಸು ಬದಲಿಸುವ ಜಯಂತ್, ಜಾನು ತಪ್ಪು ಮಾಡಿದ್ದರೂ ಅವರನ್ನು ಕ್ಷಮಿಸಬೇಕು ಒಳಗೆ ಹೋಗಿ ಕರೆಯುತ್ತೇನೆ ಎಂದುಕೊಳ್ಳುತ್ತಾನೆ. ಆದರೆ ಇಲ್ಲ, ಎಷ್ಟು ಬಾರಿ ಅವರಿಗೆ ಸಾರಿ ಕೇಳಬೇಕು, ಅವರಾಗೇ ಹೊರಗೆ ಬರಲಿ ಎಂದು ಮನೆ ಹೊರಗೆ ಕಾದು ನಿಲ್ಲುತ್ತಾನೆ. ಅಷ್ಟರಲ್ಲಿ ಜಾನು ತುಳಸಿಗಿಡಕ್ಕೆ ಪೂಜೆ ಮಾಡಲು ಹೊರಗೆ ಬರುತ್ತಾಳೆ. ಗಂಡನನ್ನು ನೋಡಿಯೂ ನೋಡದಂತೆ ಪೂಜೆ ಮುಗಿಸಿ ಒಳಗೆ ಹೋಗುತ್ತಾಳೆ. ಜಯಂತ್, ಜಾಹ್ನವಿಯನ್ನು ಮಾತನಾಡಿಸಿ ಚಿನ್ನುಮರಿ ನೀವು ಮಾಡುತ್ತಿರುವುದು ಸರೀನಾ ಎಂದು ಕೇಳುತ್ತಾನೆ.
ನೀವು ಹೇಳದೆ ಇಲ್ಲಿಗೆ ಏಕೆ ಬಂದಿರಿ ಎನ್ನುತ್ತಾನೆ. ನೀವು ಕೂಡಾ ಹೇಳದೆ ಬಂದಿದ್ದೀರಿ ತಾನೆ ಎಂದು ಜಾನು ಉತ್ತರಿಸುತ್ತಾಳೆ. ನಾನು ಅಜ್ಜಿಯನ್ನು ನೋಡುವ ಆತುರದಲ್ಲಿ ಬಂದುಬಿಟ್ಟೆ ಎಂದು ಜಯಂತ್ ಸುಳ್ಳು ಹೇಳುತ್ತಾನೆ. ಅಜ್ಜಿ ನೋಡುವ ಆತುರದಲ್ಲಿ ಅಲ್ಲ, ಅವರ ರೂಮ್ನಲ್ಲಿ ಕ್ಯಾಮರಾ ಇಡುವ ಆತುರದಲ್ಲಿ ಬಂದ್ರಿ ಎಂದು ಜಾನು ಹೇಳುತ್ತಾಳೆ. ನೋಡಿ ಹೀಗೆ ಮಾತಿಗೆ ಮಾತು ಬೆಳೆಸಬೇಡಿ, ನನ್ನನ್ನ ಪ್ರಶ್ನೆ ಮಾಡಬೇಡಿ, ಬನ್ನಿ ಹೋಗೋಣ ಎನ್ನುತ್ತಾನೆ. ಜಾನುಗೆ ಜಯಂತ್ ಜೊತೆ ಹೋಗಲು ಇಷ್ಟವಿಲ್ಲದಿದ್ದರೂ ತಂದೆ ತಾಯಿಗೆ ಯಾವುದೇ ವಿಚಾರ ಗೊತ್ತಾಗಬಾರದು ಎಂಬ ಕಾರಣಕ್ಕೆ ಅವನ ಜೊತೆ ಹೋಗಲು ಒಪ್ಪುತ್ತಾಳೆ.
ಇತ್ತ ಭಾವನಾ ಹಾಗೂ ಸಿದ್ದೇಗೌಡನ ನಡುವೆ ನಿಧಾನವಾಗಿ ಪ್ರೀತಿ ಚಿಗುರುತ್ತಿದೆ. ತಾನೇ ಶ್ರೀಕಾಂತ್ ಹಾಗೂ ಅವರಮ್ಮ ಇದ್ದ ಕಾರಿಗೆ ಆಕ್ಸಿಡೆಂಟ್ ಮಾಡಿದ್ದು ಎಂಬ ವಿಚಾರವನ್ನು ಭಾವನಾ ಬಳಿ ಹೇಳಲು ಪ್ರಯತ್ನಿಸಿದರೂ ಅಣ್ಣ ಮರೀಗೌಡ ಹಾಗೂ ತಂದೆ ಜವರೇಗೌಡನ ಮಾತಿಗೆ ಕಟ್ಟುಬಿದ್ದು ಮನಸ್ಸು ಬದಲಿಸುತ್ತಾನೆ. ಬೇಸರದಲ್ಲಿದ್ದ ಸಿದ್ದು ಬಳಿ ಬರುವ ಭಾವನಾ, ತನಗೆ ಬಳೆ ಕೊಡಿಸುವಂತೆ ಕೇಳುತ್ತಾಳೆ. ಮೊದಲ ಬಾರಿಗೆ ಹೆಂಡತಿ ಬಳೆ ತೆಗೆದುಕೊಡುವಂತೆ ಕೇಳುತ್ತಿದ್ದಾಳೆ ಎಂದು ಖುಷಿಯಾಗಿ ಅವಳ ಜೊತೆ ಹೊರಡುತ್ತಾನೆ. ಅಷ್ಟರಲ್ಲಿ ರೇಣುಕಾ ಬಂದು ಎಲ್ಲಿಗೆ ಹೋಗುತ್ತಿದ್ದೀಯ ಎಂದು ಮಗನನ್ನು ಕೇಳುತ್ತಾಳೆ. ಸಿದ್ದು ಇರುವ ವಿಚಾರವನ್ನು ಅಮ್ಮನ ಬಳಿ ಹೇಳುತ್ತಾನೆ. ಅದನ್ನು ಕೇಳಿ ರೇಣುಕಾ ಸಿಟ್ಟಾಗುತ್ತಾಳೆ.
ಮನೆಗೆ ಬರುವಾಗ ಅಮ್ಮನಿಗೆ ಐಸ್ಕ್ರೀಮ್ ತರುತ್ತಾನೆ. ಅದನ್ನು ನೋಡಿ ರೇಣುಕಾ ಖುಷಿಯಾಗುತ್ತಾಳೆ. ಏನು ವಿಶೇಷ? ಇವತ್ತು ನನಗಾಗಿ ಐಸ್ಕ್ರೀಮ್ ತಂದು ತಿನ್ನೋಕೆ ಕೊಡ್ತಿದ್ಯಾ, ಇಷ್ಟು ದಿನ ಆದ ನಂತರ ಅಮ್ಮನ ಮೇಲೆ ಪ್ರೀತಿ ಬಂತಾ ಎಂದು ರೇಣುಕಾ ಕೇಳುತ್ತಾಳೆ. ಅವರು ಹೇಳಿದಂತೆ ಮಾಡಿದೆ, ನೋಡು ಎಷ್ಟು ಖುಷಿಯಾಗಿದ್ದೀಯ ಎಂದು ಸಿದ್ದು ಹೇಳುತ್ತಾನೆ. ಯಾರು, ಏನು ಹೇಳಿದರು ಎಂದು ರೇಣುಕಾ ಕೇಳುತ್ತಾಳೆ. ನಿನಗೆ ಐಸ್ಕ್ರೀಂ ತಂದುಕೊಟ್ಟರೆ ಖುಷಿಯಾಗುತ್ತೀಯ ಎಂದು ಮೇಡಂ ಹೇಳಿದರು ಅದಕ್ಕೆ ತಂದುಕೊಟ್ಟೆ ಎಂದು ಸಿದ್ದು ನಿಜ ಹೇಳುತ್ತಾನೆ. ಅದನ್ನು ಕೇಳಿ ರೇಣುಕಾ ಕೋಪಗೊಳ್ಳುತ್ತಾಳೆ. ನೀನು ಪ್ರೀತಿಯಿಂದ ತಂದೆ ಎಂದುಕೊಂಡೆ , ಆದರೆ ಅವಳು ಹೇಳಿದ್ದಕ್ಕೆ ತಂದುಕೊಟ್ಟಿದ್ದಾ ಇದನ್ನು ನೀನೇ ತಿನ್ನು ಎಂದು ಕೋಪದಿಂದ ಎದ್ದು ಹೋಗುತ್ತಾಳೆ. ಅಮ್ಮ-ಮಗನನ್ನು ಒಂದು ಮಾಡಬೇಕು ಎಂದುಕೊಂಡಿದ್ದ ಭಾವನಾ, ಸಿದ್ದು ದಡ್ಡತನ ಕಂಡು ಹಣೆಗೆ ಚಚ್ಚಿಕೊಳ್ಳುತ್ತಾಳೆ.