ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಮಾರ್ಚ್ 17ರ ಎಪಿಸೋಡ್ ಕಥೆ ಹೀಗಿದೆ. ಅಜ್ಜಿಗೆ ಪ್ರಜ್ಞೆ ಬಂದರೆ ನನಗೇ ಮೊದಲು ತಿಳಿಯಬೇಕೆಂದುಕೊಂಡಿದ್ದ ಜಯಂತನ ಪ್ಲ್ಯಾನ್ ಉಲ್ಟಾ ಆಗಿದೆ. ಅದೇ ಬೇಸರದಲ್ಲಿ ಜಯಂತ್ ಮುಂದೇನು ಮಾಡುವುದು ಎಂದು ಒದ್ದಾಡುತ್ತಿದ್ದಾನೆ. ಅಷ್ಟರಲ್ಲಿ ಮಾವನ ಮನೆಯಿಂದ ಅಜ್ಜಿಗೆ ಪ್ರಜ್ಞೆ ಬಂದಿರುವ ಸುದ್ದಿ ಬರುತ್ತದೆ. ಅದನ್ನು ಕೇಳಿ ಜಯಂತನಿಗೆ ನಡುಕ ಶುರು ಆಗುತ್ತದೆ.
ಎಚ್ಚರ ಆದಾಗಿನಿಂದ ಅಜ್ಜಿ ನಿಮ್ಮ ಹೆಸರನ್ನೇ ಕನವರಿಸುತ್ತಿದ್ದಾರೆ, ಒಮ್ಮೆ ಮನೆಗೆ ಬಂದು ಹೋಗಿ ಎಂದು ವೀಣಾ, ಜಯಂತನ ಬಳಿ ಮನವಿ ಮಾಡುತ್ತಾಳೆ. ಜಯಂತ್ ಭಯದಿಂದಲೇ ಮಾವನ ಮನೆಗೆ ಹೋಗಲು ಸಿದ್ಧನಾಗುತ್ತಾನೆ. ಅದರೆ ಅವನನ್ನು ಜಾಹ್ನವಿ ತಡೆಯುತ್ತಾಳೆ. ನೀವು ಎಲ್ಲಿಗೂ ಹೋಗುವಂತಿಲ್ಲ. ಒಂದು ವೇಳೆ ನೀವು ನನ್ನ ತವರು ಮನೆಗೆ ಹೋಗಲೇಬೇಕು ಎಂದುಕೊಂಡಿದ್ದರೆ ಅಜ್ಜಿಯ ಪರಿಸ್ಥಿತಿಗೆ, ನಾನು ಮಗು ಕಳೆದುಕೊಂಡಿದ್ದಕ್ಕೆ ನಾನೇ ಕಾರಣವೆಂದು ನಿಜ ಹೇಳಿ ನಂತರ ಅಲ್ಲಿಗೆ ಹೋಗಿ ಎಂದು ಕಂಡಿಷನ್ ಮಾಡುತ್ತಾಳೆ. ಜಾಹ್ನವಿ ನಡೆಗೆ ಜಯಂತ ಬೇಸರ ವ್ಯಕ್ತಪಡಿಸುತ್ತಾನೆ. ಒಂದು ವೇಳೆ ಅಜ್ಜಿಗೆ ಪೂರ್ತಿ ಪ್ರಜ್ಞೆ ಬಂದು ನನ್ನ ಬಗ್ಗೆ ಎಲ್ಲವನ್ನೂ ಹೇಳಿಬಿಟ್ಟರೆ ಏನು ಮಾಡುವುದು ಎಂಬ ಭಯದಿಂದಲೇ ಜಯಂತ್ ಸಮಯ ದೂಡುತ್ತಿದ್ದಾನೆ.
ಅಜ್ಜಿಗೆ ಪ್ರಜ್ಞೆ ಬಂದಿರುವ ಖುಷಿಗೆ ಜಾಹ್ನವಿ ಸಿಹಿ ಮಾಡುತ್ತಾಳೆ. ಜಯಂತನ ಅಸಲಿ ಮುಖ ತಿಳಿದಾಗಿನಿಂದ ಅವನನ್ನು ಕಂಡರೆ ಸಿಟ್ಟು ಮಾಡುತ್ತಿದ್ದ ಜಾನು, ಡೈನಿಂಗ್ ಟೇಬಲ್ ಮೇಲೆ ಸ್ವೀಟ್ ತಂದಿಟ್ಟು ರೀ ಬನ್ನಿ ಎಂದು ಕರೆಯುತ್ತಾಳೆ. ಅದನ್ನು ಕೇಳಿ ಜಯಂತನ ಮುಖ ಅರಳುತ್ತದೆ. ಜಾನು, ಜಯಂತನ ಕೈ ಹಿಡಿದು ಕೂರಿಸುತ್ತಾಳೆ. ಸಿಹಿಯನ್ನು ನೋಡಿದ ಜಯಂತ್ ಚಿನ್ನುಮರಿ ಏನಿದೆಲ್ಲಾ ಎಂದು ಕೇಳುತ್ತಾನೆ. ನಿಮ್ಮ ಬುದ್ಧಿಗೆ ಮಂಕು ಬಡಿದಿದೆ ಎಂದುಕೊಂಡಿದ್ದೆ, ಆದರೆ ಇದನ್ನು ನೋಡಿದ ನಂತರವೂ ಏನು ಎಂದು ಕೇಳುತ್ತಿದ್ದೀರಲ್ಲ, ಇದು ಸ್ವೀಟ್ ಎನ್ನುತ್ತಾಳೆ. ಇದು ಸಿಹಿ ಅಂತ ನನಗೂ ಗೊತ್ತು, ಆದರೆ ಏಕೆ ಮಾಡಿದ್ದೀರಿ ಎಂದು ಕೇಳುತ್ತಾನೆ. ಇದೇನು ಹೀಗೆ ಹೇಳುತ್ತಿದ್ದೀರಿ, ಅಜ್ಜಿಗೆ ಪ್ರಜ್ಞೆ ಬಂದಿರುವುದು ನನಗೆ ಬಹಳ ಖುಷಿಯಾಗಿದೆ ಅದಕ್ಕೆ ಸಿಹಿ ಮಾಡಿದ್ದೇನೆ ಎಂದು ಜಯಂತನಿಗೆ ತಿನ್ನಿಸಲು ಪ್ರಯತ್ನಿಸುತ್ತಾಳೆ.
ನನಗೆ ಸಿಹಿ ಬೇಡ ಎಂದು ಜಯಂತ್, ತಿನ್ನಲು ನಿರಾಕರಿಸುತ್ತಾನೆ. ಅಜ್ಜಿಗೆ ಪ್ರಜ್ಞೆ ಬಂದಿರುವುದು ನಿಮಗೆ ಖುಷಿಯಾಗುತ್ತಿಲ್ಲವೇ? ಅಜ್ಜಿ ಕೊನೆವರೆಗೂ ಕೋಮಾದಲ್ಲೇ ಇರಬೇಕು ಎಂದು ನೀವು ಆಸೆ ಪಟ್ಟಿದ್ದೀರ ತಾನೇ ಎಂದು ಜಾನು ಕೇಳುತ್ತಾಳೆ. ಜಾನು ಇತ್ತೀಚೆಗೆ ಆಡುತ್ತಿರುವ ಮಾತುಗಳನ್ನು ಕೇಳಿ ಜಯಂತನಿಗೆ ಹಿಂಸೆಯಾಗುತ್ತಿದೆ. ಮುಖ ಸಿಂಡರಿಸಿಕೊಂಡ ಜಯಂತನನ್ನು ನೋಡುವ ಜಾನು, ಹಾಗಿದ್ದರೆ ನೀವು ಸಿಹಿ ತಿನ್ನಲೇಬೇಕು ಎಂದು ಬಲವಂತವಾಗಿ ತಿನ್ನಿಸುತ್ತಾಳೆ. ಈ ವಿಚಾರವನ್ನು ನಾನು ಭಾವನಾ ಅಕ್ಕನಿಗೆ ಹೇಳುತ್ತೇನೆ ಎಂದು ಭಾವನಾಗೆ ಕರೆ ಮಾಡುತ್ತಾಳೆ. ಬಹಳ ದಿನಗಳ ನಂತರ ತಂಗಿ ಕರೆ ಮಾಡಿದ್ದನ್ನು ಕಂಡು ಭಾವನಾ ಖುಷಿಯಾಗುತ್ತಾಳೆ. ಅಜ್ಜಿಗೆ ಪ್ರಜ್ಞೆ ಬಂದಿರುವ ವಿಚಾರವನ್ನು ಜಾನು ಖುಷಿಯಿಂದ ಭಾವನಾಗೆ ಹೇಳಿಕೊಳ್ಳುತ್ತಾಳೆ. ಜಾನು ಮಾತುಗಳಲ್ಲಿ ಖುಷಿ ಎನಿಸಿದರೂ, ಏನೋ ಸಮಸ್ಯೆ ಇರುವಂತೆ ಎನಿಸುತ್ತಿದೆ ಎಂದು ಭಾವನಾ ಅನುಮಾನ ವ್ಯಕ್ತಪಡಿಸುತ್ತಾಳೆ.
ಮೊಬೈಲ್ನಲ್ಲಿ ಗೇಮ್ ಆಡಿಕೊಂಡು ಟೈಮ್ ಪಾಸ್ ಮಾಡುತ್ತಿರುವ ಹರೀಶನನ್ನು ಗಮನಿಸುವ ವೀಣಾ, ಮೈದುನನಿಗೆ ಬುದ್ಧಿಮಾತು ಹೇಳುತ್ತಾಳೆ. ನೀನು ದೊಡ್ಡಮನೆ ಹುಡುಗಿಯನ್ನು ಮದುವೆ ಆಗಿದ್ದೀಯ, ನಿನಗೆ ಬಹಳ ಜವಾಬ್ದಾರಿಗಳಿವೆ, ಅವಳು ನಿನ್ನನ್ನೇ ನಂಬಿಕೊಂಡು ಬಂದಿದ್ದಾಳೆ. ಸ್ವಲ್ಪ ಜವಾಬ್ದಾರಿಯಿಂದ ನಡೆದುಕೋ , ಇಲ್ಲಿ ಕಾಲಹರಣ ಮಾಡುವ ಬದಲಿಗೆ ರೂಮ್ಗೆ ಹೋಗಿ ಅಜ್ಜಿ ಜೊತೆ ಮಾತನಾಡು, ಅವರಿಗೆ ಪೂರ್ತಿ ಪ್ರಜ್ಞೆ ಬಂದು ಗುಣಮುಖರಾಗಬಹುದು ಎನ್ನುತ್ತಾಳೆ. ಹರೀಶ ಅಜ್ಜಿ ರೂಮ್ಗೆ ಬಂದು ಅವರೊಂದಿಗೆ ಮಾತನಾಡಲು ಆರಂಭಿಸುತ್ತಾನೆ. ಬುಸ್ನೆಸ್ ಮ್ಯಾನ್ ಆಗಬೇಕು ಅನ್ನೋದು ನನ್ನ ಕನಸು, ಅದು ಯಾವಾಗ ನೆರವೇರುವುದೋ ಗೊತ್ತಿಲ್ಲ, ನಿಮಗೆ ಬರುತ್ತಿದ್ದ ಪೆನ್ಷನ್ ಹಣವನ್ನು ಎಲ್ಲಿಟ್ಟಿದ್ದೀರ ಎಂದು ಹರೀಶ್ ಅಜ್ಜಿಗೆ ಕೇಳುತ್ತಾನೆ. ಮೊಮ್ಮಗನ ಮಾತಿಗೆ ಪ್ರತಿಕ್ರಿಯಿಸಿದ ಅಜ್ಜಿ, ಟ್ರಂಕ್…ಟ್ರಂಕ್ ಎಂದು ಕನವರಿಸುತ್ತಾರೆ.
ಈ ವಿಚಾರವನ್ನು ಹರೀಶ , ಶ್ರೀನಿವಾಸನಿಗೆ ತಿಳಿಸುತ್ತಾನೆ. ಕೂಡಲೇ ಶ್ರೀನಿವಾಸ್ ಅಮ್ಮನ ಟ್ರಂಕನ್ನು ರೂಮ್ಗೆ ತಂದು, ಇದೇ ಟ್ರಂಕಾ ಅಮ್ಮ ನೀನು ಹೇಳಿದ್ದು, ನೋಡು ಸರಿಯಾಗಿ ಎನ್ನುತ್ತಾನೆ. ಅಜ್ಜಿಯನ್ನು ಮಾತನಾಡಲು ಯತ್ನಿಸಿ, ಆದರೆ ಬಲವಂತ ಮಾಡಬೇಡಿ ಎಂದು ಡಾಕ್ಟರ್ ಹೇಳಿದ್ದನ್ನು ವೀಣಾ, ಮಾವನಿಗೆ ನೆನಪಿಸುತ್ತಾಳೆ. ಅದು ಸರಿ ಎನಿಸಿ ಶ್ರೀನಿವಾಸ್ ಸುಮ್ಮನಾಗುತ್ತಾನೆ. ಟ್ರಂಕ್ ವಿಚಾರವನ್ನು ಹರೀಶ, ಅಣ್ಣ ಸಂತೋಷನಿಗೆ ತಿಳಿಸುತ್ತಾನೆ. ಅದರಲ್ಲಿ ದುಡ್ಡು ಇರಬಹುದು ಎಂದು ಸಂತೋಷ್ ಕೂಡಾ ಆಸೆ ಪಡುತ್ತಾನೆ, ನನಗೆ ಬೀಗ ಹಾಕಿದ ಆ ಟ್ರಂಕ್ ತಂದುಕೊಡು ಸಾಕು ಮುಂದಿನದನ್ನು ನೋಡಿಕೊಳ್ಳುತ್ತೇನೆ ಎನ್ನುತ್ತಾನೆ.
ಅಜ್ಜಿಯ ಟ್ರಂಕ್ನಲ್ಲಿ ಏನಿದೆ? ಹರೀಶ-ಸಂತೋಷ ಅಂದುಕೊಂಡಂತೆ ದುಡ್ಡು ಇದೆಯಾ ಅಥವಾ ಜಯಂತ್-ವೆಂಕಿಗೆ ಸಂಬಂಧಿಸಿದ್ದು ಏನಾದರೂ ಇರಬಹುದಾ? ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.