ನಮ್ಮ ಆರ್ಸಿಬಿ ತಂಡ 18 ವರ್ಷಗಳ ನಂತರ ಕೊನೆಗೂ ಐಪಿಎಲ್ ನಲ್ಲಿ ಕಪ್ ಗೆದ್ದು, ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಇದು 18 ವರ್ಷಗಳ ಕನಸು, ಶ್ರಮ, ದೃಢತೆ, ತಾಳ್ಮೆ ಎಲ್ಲದರ ಪರಿಶ್ರಮ. ಐಪಿಎಲ್ ಶುರುವಾಗಿ, ವಿಜಯ್ ಮಲ್ಯ ಅವರು ಒಂದು ತಂಡ ಕಟ್ಟಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರಿಟ್ಟ ಸಮಯದಿಂದ ಈ ತಂಡದ ಜೊತೆಗೆ ಇರುವುದು ಕಿಂಗ್ ಕೊಹ್ಲಿ. ಅಂದು ಯುವ ಹುಡುಗನಾಗಿದ್ದ ಕಿಂಗ್ ಕೊಹ್ಲಿ ಇಂದು 18 ವರ್ಷಗಳ ನಂತರ ಐಪಿಎಲ್ ಗೆದ್ದಿದ್ದಾರೆ. ಇದು ವಿರಾಟ್ ಕೊಹ್ಲಿ, ಎಬಿಡಿ, ಕ್ರಿಸ್ ಗೇಯ್ಲ್, ಅನಿಲ್ ಕುಂಬ್ಳೆ ಹೀಗೆ ಅನೇಕ ಆಟಗಾರರ ಕನಸು. ನಿನ್ನೆಯ ಪಂದ್ಯ ಬರೀ ಗೆಲುವಲ್ಲ, ಐತಿಹಾಸಿಕ ಗೆಲುವು. ಇಡೀ ಕರ್ನಾಟಕ ಈ ಗೆಲುವಿಗಾಗಿ, 18 ವರ್ಷಗಳಿಂದ ಕಾದು ಕುಳಿತಿತ್ತು. ಕೊನೆಗೂ ಆ ಕನಸು ನನಸಾಗಿದೆ. 18 ಸೀಸನ್ ಗಳ ಬಳಿಕ ಆರ್ಸಿಬಿ ಕಪ್ ಗೆದ್ದಿದೆ.

ಇದು 18ನೇ ಸೀಸನ್, ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್ 18, ಜೂನ್ 3, 2025 ಈ ನಂಬರ್ ಗಳನ್ನು ಕೂಡಿದರೆ 18 ಬರುತ್ತದೆ.. ಹೀಗೆ ಅಭಿಮಾನಿಗಳು ಸಾಕಷ್ಟು ಕ್ಯಾಲ್ಕ್ಯುಲೇಶನ್ ಗಳನ್ನು ಹಾಕಿಕೊಂಡಿದ್ದರು. ಎಲ್ಲರೂ ಈ ಒಂದು ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಆ ಕ್ಷಣ ನಿನ್ನೆ ರಾತ್ರಿ ಸಂಭವಿಸಿತು. ಗೆಲುವು ಖಚಿತವಾಗುತ್ತಿದ್ದ ಹಾಗೆ ವಿರಾಟ್ ಕೊಹ್ಲಿ ಅವರು ಕಣ್ಣೀರು ಹಾಕಿದ್ದು, ಮಗುವಿನಂತೆ ಇಡೀ ತಂಡದ ಜೊತೆಗೆ ಸೇರಿ ಸೆಲೆಬ್ರೇಟ್ ಮಾಡಿದ್ದು, ಇದೆಲ್ಲವೂ ಎಂಥವರನ್ನೂ ಭಾವುಕರನ್ನಾಗಿ ಮಾಡಿತು. ಎಬಿಡಿ ಮತ್ತು ಕ್ರಿಸ್ ಗೇಯ್ಲ್ ತಂಡದ ಜೊತೆಗಿದ್ದು, ಪೋಡಿಯಮ್ ಮೇಲೆ ನಿಂತು ಎಲ್ಲರ ಜೊತೆ ಕಪ್ ಸ್ವೀಕರಿಸಿದ ಆ ಕ್ಷಣ ಅವಿಸ್ಮರಣೀಯ. ಆರ್ಸಿಬಿ ತಂಡದ ಬಳಿ ಕಪ್ ಇಲ್ಲ ಎನ್ನುವ ಕೊರಗು ಎರಡನೇ ಸಾರಿ ಕೊನೆಯಾಗಿದೆ.
ನಮ್ಮ ತಂಡದ ಎರಡನೇ ಕಪ್ ಇದು. ಕಳೆದ ವರ್ಷ ವುಮನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಆರ್ಸಿಬಿ ತಂಡ ಮಹಾಲಕ್ಷ್ಮಿಯರು ಒಂದು ಕಪ್ ಅನ್ನು ಗೆದ್ದುಕೊಟ್ಟರು, ಇಂದು ಆರ್ಸಿಬಿ ಹುಡುಗರು ತಮ್ಮ ತಂಡಕ್ಕಾಗಿ ಎರಡನೇ ಕಪ್ ಅನ್ನು ಗೆದ್ದಿದ್ದಾರೆ. ಈ ವರ್ಷ ಆರ್ಸಿಬಿ ಮ್ಯಾನೇಜ್ಮೆಂಟ್ ಖರೀದಿ ಮಾಡಿದ ಆಟಗಾರರು, ಆಂಡಿ ಫ್ಲವರ್ ಮತ್ತು ಡಿಕೆ ಅವರ ಕೋಚಿಂಗ್ ಎಲ್ಲವೂ ಅದ್ಭುತವಾಗಿ ಒಗ್ಗೂಡಿತು. ಸೀಸನ್ ಶುರುವಿನಲ್ಲೇ ಈ ಸಲ ಕಪ್ ನಮ್ಮದೇ ಎನ್ನುವ ಉತ್ಸಾಹ ಇದ್ದಿದ್ದಂತೂ ನಿಜ, ಆದರೆ ಹೆಚ್ಚಿನ ನಿರೀಕ್ಷೆಯನ್ನು ಯಾರು ಕೂಡ ಇಟ್ಟುಕೊಂಡಿರಲಿಲ್ಲ. ಈ ಬಾರಿ ಆರ್ಸಿಬಿ ತಂಡ ಇದ್ದಿದ್ದು ಕೂಡ ಅದೇ ರೀತಿ, ಹೆಚ್ಚು ನಿರೀಕ್ಷೆ ಇಲ್ಲದೆಯೇ ಒಂದೊಂದೇ ಪಂದ್ಯವನ್ನು ಗೆಲ್ಲುತ್ತಾ ಹೋಗೋಣ ಎಂದು, ಒಂದೊಂದು ಪಂದ್ಯವನ್ನು ಗೆಲ್ಲುತ್ತಾ ಬಂದರೆ. ಕೊನೆಗೆ ಕಪ್ ಅನ್ನು ಗೆದ್ದರು. ನಿನ್ನೆ ಆರ್ಸಿಬಿ ಗೆದ್ದ ನಂತರ ಇಡೀ ಕರ್ನಾಟಕ ಸಂಭ್ರಮಿಸಿದೆ.
ಕರ್ನಾಟಕವಷ್ಟೇ ಅಲ್ಲ, ಪ್ರಪಂಚದ ಎಲ್ಲೆಡೆ ಇರುವ ಆರ್ಸಿಬಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇಡೀ ಬೆಂಗಳೂರಿನಲ್ಲಿ ನಿನ್ನೆ ದೀಪಾವಳಿ ಹಬ್ಬ ನಡೆಯಿತು ಎಂದರೆ ತಪ್ಪಲ್ಲ. ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಸುಯಶ್, ಟಿಮ್ ಡೇವಿಡ್, ಫಿಲ್ ಸಾಲ್ಟ್ ಹೀಗೆ ಬಲಿಷ್ಠ ತಂಡ ಕೊನೆಗೂ ಬೆಂಗಳೂರಿಗೆ ಕಪ್ ಗೆದ್ದು ಕೊಟ್ಟಿದೆ. ಈ ವರ್ಷ ಐಪಿಎಲ್ ಶುರುವಾದ ಬಳಿಕ ಆರಂಭಿಕ ಪಂದ್ಯಗಳು ನಡೆದಿದ್ದು ಹೊರಗಡೆ, ಬೆಂಗಳೂರಿನಲ್ಲಿ ನಡೆದಿದ್ದು ಸಿಎಸ್ಕೆ ವಿರುದ್ಧದ ಪಂದ್ಯ, ಈ ಪಂದ್ಯವು 52ನೇ ಪಂದ್ಯವಾಗಿದ್ದು, ಆರ್ಸಿಬಿ ತಂಡ ಸಿಎಸ್ಕೆ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು.
ಅಂದು ಕ್ರೇಜ್ ಯಾವ ರೀತಿ ಇತ್ತು ಎಂದರೆ, ಬೆಂಗಳೂರಿನ ಫ್ಯಾನ್ಸ್ ಫುಲ್ ಖುಷಿಯಾಗಿದ್ದರು. ಆರ್ಸಿಬಿ ತಂಡದ ಬಸ್ ಸ್ಟೇಡಿಯಂ ಇಂದ ಹೊರಗಡೆ ಬರುವ ವರೆಗು ಎಲ್ಲಾ ಫ್ಯಾನ್ಸ್ ಹೊರಗಡೆ ಕಾದಿದ್ದರು. ತಂಡಕ್ಕಾಗಿ ಚಿಯರ್ ಮಾಡುತ್ತಿದ್ದರು.

ಮಧ್ಯರಾತ್ರಿ ಆಗಿದ್ದರೂ ಎಲ್ಲಾ ಅಭಿಮಾನಿಗಳು ಅಲ್ಲೇ ಇದ್ದು, ತಂಡವನ್ನು ಚಿಯರ್ ಮಾಡುತ್ತಿದ್ದದ್ದನ್ನು ನೋಡಿ ಕೃನಾಲ್ ಪಾಂಡ್ಯ ಹಾಗೂ ಎಲ್ಲಾ ಆಟಗಾರರು ಭಾವುಕರಾಗಿದ್ದರು. ಅದರಲ್ಲೂ ಕೃನಾಲ್ ಪಾಂಡ್ಯ ಅವರು, “ಎಂಥಾ ಕ್ರೇಜ್, ಇವರಿಗೆಲ್ಲಾ ತಂಡದ ಮೇಲೆ ಎಷ್ಟು ಪ್ರೀತಿ ಇದೆ. ಇಷ್ಟು ಹೊತ್ತಾದರು ಕಾದು ನಿಂತಿದ್ದಾರೆ. ಇವರಿಗೋಸ್ಕರ ಆದರೂ ನಾವು ಕಪ್ ಗೆಲ್ಲಲೇಬೇಕು., ಇವರಿಗೆ ಕಪ್ ಗೆದ್ದು ಕೊಡಬೇಕು..” ಎಂದು ಕೃನಾಲ್ ಪಾಂಡ್ಯ ಬಸ್ ಒಳಗೆ ಕುಳಿತು ಹೇಳಿದ್ದರು, ಶಪಥವನ್ನು ಮಾಡಿದ್ದರು. ಅದನ್ನೀಗ ಕೊನೆಗೂ ನಿಜ ಮಾಡಿದ್ದಾರೆ. ಆರ್ಸಿಬಿ ಕಪ್ ಗೆಲ್ಲುವಲ್ಲಿ ಕೃನಾಲ್ ಪಾಂಡ್ಯ ಅವರ ಪಾತ್ರ ಪ್ರಮುಖವಾದದ್ದು ಎಂದು ನಮಗೆಲ್ಲ ಗೊತ್ತೇ ಇದೆ. ನಿನ್ನೆಯ ಫೈನಲ್ಸ್ ಪಂದ್ಯದಲ್ಲಿ ಮೊದಲು ಆರ್ಸಿಬಿ ತಂಡ ಬ್ಯಾಟಿಂಗ್ ಮಾಡಿ, 191 ರನ್ ಗಳ ಗುರಿಯನ್ನು ಪಂಜಾಬ್ ತಂಡಕ್ಕೆ ನೀಡಿತ್ತು.
ಪಂಜಾಬ್ ತಂಡವು ಸಹ ಆರ್ಸಿಬಿ ತಂಡದ ಹಾಗೆ ಒಳ್ಳೆಯ ಪ್ರದರ್ಶನ ಕೊಡುವ ಪ್ರಯತ್ನವನ್ನೇ ಮಾಡಿತ್ತು, ಕೆಲವು ಬಾರಿ ನಮ್ಮ ಬೌಲರ್ ಗಳು ಮಾಡಿದ ಸಣ್ಣ ಎಡವಟ್ಟಿನಿಂದ ರನ್ ಗಳು ಹೋಗಿದ್ದು ಇದೆ. ಆದರೆ ನಮ್ಮ ಬೌಲರ್ ಎಚ್ಚೆತ್ತುಕೊಂಡು ಅದ್ಭುತ ಪ್ರದರ್ಶನ ನೀಡಿದರು. ಕೃನಾಲ್ ಪಾಂಡ್ಯ ಅವರು ಬೌಲಿಂಗ್ ಮಾಡಿದ ಓವರ್ ಗಳಲ್ಲಿ ಕೇವಲ 17 ರನ್ ಗಳನ್ನು ಎದುರಾಳಿ ತಂಡಕ್ಕೆ ಕೊಟ್ಟು, 2 ವಿಕೆಟ್ ಗಳನ್ನು ಉರುಳಿಸಿದರು. ಜೋಶ್ ಇಂಗ್ಲಿಸ್ ಮತ್ತು ಪ್ರಭ್ ಸಿಮ್ರನ್ ಇವರಿಬ್ಬರ ವಿಕೆಟ್ ತೆಗೆದಿದ್ದು ಕೃನಾಲ್ ಪಾಂಡ್ಯ. ಉತ್ತಮ ಲಯ ಕಂಡುಕೊಂಡಿದ್ದ ಬ್ಯಾಟ್ಸ್ಮನ್ ಗಳು ಇವರಿಬ್ಬರು, ಇವರ ವಿಕೆಟ್ ಅನ್ನೇ ಉರುಳಿಸಿ, ಆರ್ಸಿಬಿ ತಂಡವನ್ನು ಗೆಲುವಿನ ಅಂಚಿಗೆ ಹತ್ತಿರ ಕೊಂಡು ಹೋಗುವಲ್ಲಿ ಕೃನಾಲ್ ಪಾಂಡ್ಯ ಪಾತ್ರ ಮಹತ್ವದ್ದು.
ಹೀಗೆ ಕೃನಾಲ್ ಪಾಂಡ್ಯ ತಾವು ಮಾಡಿದ ಶಪಥವನ್ನು ಉಳಿಸಿಕೊಂಡು, ಆರ್ಸಿಬಿ ತಂಡಕ್ಕೆ ಕಪ್ ಗೆದ್ದು ಕೊಟ್ಟಿದ್ದಾರೆ. ಇದರಿಂದ ಆರ್ಸಿಬಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದು, ಇಂದು ಬೆಂಗಳೂರಿನಲ್ಲಿ ವಿಜಯಯಾತ್ರೆ ನಡೆಯಲಿದೆ. ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ವರೆಗು ಆರ್ಸಿಬಿ ತಂಡದ ವಿಜಯಯಾತ್ರೆ ನಡೆಯಲಿದ್ದು, ನಂತರ ಸೆಲೆಬ್ರೇಷನ್ ಕೂಡ ನಡೆಯಲಿದೆ. ಇಷ್ಟು ವರ್ಷಗಳ ಟೀಕೆ, ಟ್ರೋಲಿಂಗ್ ಎಲ್ಲದಕ್ಕೂ ಈಗ ಬ್ರೇಕ್ ಬಿದ್ದಿದೆ, ಆರ್ಸಿಬಿ ಕಪ್ ಗೆದ್ದಿದೆ.



