ಸದ್ಯ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಮುಂದುವರೆದಿದ್ದಾರೆ. ಆದರೆ ಒಬ್ಬರಿಗೆ ಒಂದು ಹುದ್ದೆ ಅನ್ನೋ ನಿಟ್ಟಿನಲ್ಲಿ ಡಿಕೆಶಿ ಬದಲಾಯಿಸಬೇಕು ಅಂತ ಬಹಳ ಹಿಂದಿನಿಂದಲೂ ಒತ್ತಾಯ ಕೇಳಿ ಬರುತ್ತಿದೆ. ಈಗಾಗಲೇ ಅನೇಕ ಸಚಿವರು ಇದನ್ನ ಬಹಿರಂಗವಾಗಿಯೇ ಹೇಳಿದ್ದಾರೆ. ಅಷ್ಟೆ ಅಲ್ಲ ಇದು ಹೈ ಕಮಾಂಡ್ ಮಟ್ಟದಲ್ಲೂ ಚರ್ಚೆಯಾಗಿದೆ. ಆದರೆ ಇನ್ನೂ ಕೂಡ ಅಧ್ಯಕ್ಷ ಗಾದಿ ಬದಲಾವಣೆ ಆಗಿಲ್ಲ.
ಇಷ್ಟು ದಿನ ತಣ್ಣಗಾಗಿದ್ದ ಈ ವಿಚಾರ ಈಗ ಮತ್ತೆ ಮುನ್ನಲೆಗೆ ಬಂದಿದೆ. ಆರ್ಸಿಬಿ ಕಾಲ್ತುಳಿತದ ಪ್ರಕರಣದ ಬೆನ್ನಲ್ಲೇ ದೆಹಲಿಗೆ ತೆರಳಿರೋ ಸಿಎಂ ಡಿಸಿಎಂ ರಾಹುಲ್ ಗಾಂಧಿ ಜೊತೆ ಸುಧೀರ್ಘ ಚರ್ಚೆ ಮಾಡಿದ್ದಾರೆ. ಈ ವೇಳೆ ಜಾತಿಗಣತಿ ವಿಚಾರ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ, ಹಾಗೂ ಎಮ್ ಎಲ್ ಸಿ ಆಯ್ಕೆ ಕುರಿತು ಮಾತುಕತೆಯಾಗಿದೆ ಎನ್ನಲಾಗಿದೆ.

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೇರೆ ಬೇರೆ ಬೆಳವಣಿಗೆಗಳು ನಡೆಯುತ್ತಿವೆ. ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವೂ ಅನೇಕ ಕುತೂಹಲಕ್ಕೆ ಕಾರಣವಾಗಿದೆ. ತುರ್ತು ಬುಲಾವ್ ಎಂಬಂತೆ ಹೈ ಕಮಾಂಡ್ ಸಿಎಂ ಡಿಸಿಎಂ ರನ್ನ ದೆಹಲಿಗೆ ಕರೆಸಿಕೊಂಡಿತ್ತು. ಆರ್ಸಿಬಿ ಕಾಲ್ತುಳಿತದ ವಿಚಾರದ ಚರ್ಚೆ ನಡುವೆ ಮತ್ತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವೂ ಚರ್ಚೆಗೆ ಬಂದಿದೆ ಎನ್ನಲಾಗುತ್ತಿದೆ.
ಹಲವಾರು ದಿನಗಳಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಬೇಕು. ಪೂರ್ಣ ಪ್ರಮಾಣದ ಅಧ್ಯಕ್ಷ ಬೇಕು ಕೆಪಿಸಿಸಿಗೆ ಅನ್ನೋ ಮಾತುಗಳು ಕೇಳಿ ಬರುತ್ತಲೇ ಇತ್ತು. ಆದರೆ ಅದಕ್ಕೆ ಸಮಯ ಕೈಗೂಡಿರಲಿಲ್ಲ. ಮೂಲಗಳ ಮಾಹಿತಿ ಪ್ರಕಾರ ಈಗಾಗಲೇ ಈಶ್ವರ್ ಖಂಡ್ರೆ ಹೆಸರು ಫೈನಲ್ ಆಗಿದೆ ಅಂತ ಹೇಳಲಾಗಿತ್ತಾದರೂ ಅದಕ್ಕೆ ಸ್ಪಷ್ಟತೆ ಸಿಕ್ಕಿರಲಿಲ್ಲ. ಆದರೆ ಇಂದು ಸಿಎಂ ಡಿಸಿಎಂ ತುರ್ತು ಬುಲಾವ್ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿದೆಯಂತೆ. ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವ ಕುರಿತು ರಾಹುಲ್ ಗಾಂಧಿ ಮುಂದೆ ಪ್ರಸ್ತಾಪನೆ ಬಂದಿದೆ ಎನ್ನಲಾಗುತ್ತಿದೆ.

ಇನ್ನು ಸಿಎಂ ಡಿಸಿಎಂ ಇದ್ದ ಈ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಕೂಡ ಭಾಗಿಯಾಗಿದ್ದರು. ಇದು ಕೂಡ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೂಡ ಚರ್ಚೆಗೆ ಬಂದಿದ್ದು, ಸಿಎಂ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಹಾಗೂ ಈಶ್ವರ್ ಖಂಡ್ರೆ ಹೆಸರು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಹೀಗಾಗಿ ಸಿಎಂ ಕೂಡ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪ ಮಾಡಿದ್ದಾರೆ ಅಂತಿವೆ ಮೂಲಗಳು.
ಇನ್ನೂ ಈ ವೇಳೆ ಅನೇಕ ವಿಚಾರಗಳು ಚರ್ಚೆಗೆ ಬಂದಿವೆ ಎನ್ನಲಾಗಿದೆ. ಜಾತಿ ಗಣತಿ ವಿಚಾರ, ಎಮ್ ಎಲ್ ಸಿ ಆಯ್ಕೆ ವಿಚಾರ ಪ್ರಸ್ತಾಪ ಆಗಿವೆಯಂತೆ.
ಒಟ್ನಲ್ಲಿ ಇಂದು ನಡೆದ ಸಭೆಯಲ್ಲಿ ಕಾಲ್ತುಳಿತದ ಕುರಿತು ಗಂಭೀರವಾಗಿ ಚರ್ಚೆ ನಡೆದಿದೆ. ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಮಾಡಿರೋದು ಹಲವಾರು ಕುತೂಹಲಗಳಿಗೆ ಕಾರಣವಾಗಿದೆ. ಬಹುತೇಕ ಅಧ್ಯಕ್ಷ ಸ್ಥಾನ ಕೂಡ ಬದಲಾಗೋದು ದಟ್ಟವಾಗ್ತಾ ಇದೆ. ಕೆಪಿಸಿಸಿ ಪಟ್ಟಕ್ಕೆ ಈಗಾಗಲೇ ಈಶ್ವರ್ ಖಂಡ್ರೆ ಹೆಸರು ಕೇಳಿ ಬಂದಿದೆ. ಈ ಮಧ್ಯೆ ಸತೀಶ್ ಜಾರಕಿಹೊಳಿ ಹೆಸರು ಕೂಡ ಮುನ್ನಲೆಗೆ ಬಂದಿದೆ.



