ನಟಿ ಕಿಯಾರಾ ಅಡ್ವಾಣಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರು ನೆನ್ನೆಯಷ್ಟೇ ತಾವು ತಾಯಿಯಾಗುತ್ತಿರುವುದಾಗಿ ತಿಳಿಸಿದ್ದರು. ಸಿಹಿ ಸುದ್ದಿ ತಿಳಿಸಿದ ನಂತರ ಕಿಯಾರಾ ಜನರ ನಡುವೆ ಕಾಣಿಸಿಕೊಂಡಿರುವುದು ಇದೇ ಮೊದಲು. ಇಂದು ಶನಿವಾರ ಮುಂಬೈನ ಅಂಧೇರಿ ಪ್ರದೇಶದ ಫಿಲ್ಮಲಯ ಸ್ಟುಡಿಯೋಸ್ ಬಳಿ ನಟಿ ಕಾಣಿಸಿಕೊಂಡಿದ್ದರು. ತನ್ನ ವ್ಯಾನಿಟಿ ವ್ಯಾನ್ ಮುಂದೆ ಪಾಪರಾಜಿಗೆ ಪೋಸ್ ನೀಡಿದರು. ಬಿಸಿಲಿನ ವಾತಾವರಣವಿರುವುದರಿಂದ ಬೇಸಿಗೆಯ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು.
ಕಿಯಾರಾ ಅಡ್ವಾಣಿ ಮತ್ತು ಅವರ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರು ಶುಕ್ರವಾರವಷ್ಟೇ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು. ಮದುವೆಯಾದ ಎರಡು ವರ್ಷಗಳ ನಂತರ ಅವರು ಗರ್ಭಿಣಿಯಾಗಿರುವುದಾಗಿ ಘೋಷಿಸಿದ್ದಾರೆ. ಸದ್ಯ ಎಲ್ಲರೂ ಅವರನ್ನು ಅಭಿನಂದಿಸುತ್ತಿದ್ದಾರೆ. ಈಗ ಈ ಘೋಷಣೆಯ ನಂತರ, ಅವರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಅಲ್ಲಿ ಎಲ್ಲರೂ ಅವರನ್ನು ನೋಡಿ ಆಶ್ಚರ್ಯಚಕಿತರಾದರು.
ಮುಂಬೈನಲ್ಲಿ ಚಿತ್ರೀಕರಣಕ್ಕೆ ಮುನ್ನ ಕಿಯಾರಾ ಅಡ್ವಾಣಿ ಅವರನ್ನು ಪಾಪರಾಜಿಗಳು ಸೆರೆಹಿಡಿದರು. ಇಲ್ಲಿ, ಅವರು ಬಿಳಿ ಶಾರ್ಟ್ಸ್ ಮತ್ತು ಅದಕ್ಕೆ ಹೊಂದಿಕೆಯಾಗುವ ಶರ್ಟ್ ಧರಿಸಿದ್ದರು. ಅಲ್ಲದೆ, ಸ್ಟೈಲಿಶ್ ಆಗಿ ಕಾಣಲು, ಅವರು ಕಪ್ಪು ಕನ್ನಡಕವನ್ನು ಧರಿಸಿದ್ದರು. ಅವರು ತನ್ನ ವ್ಯಾನಿಟಿಗೆ ಬಂದಾಗ, ಎಲ್ಲರೂ ಅಭಿನಂದಿಸಲು ಪ್ರಾರಂಭಿಸಿದರು. ಕಿಯಾರಾ ಕೂಡ ಮುಗುಳ್ನಕ್ಕು ಧನ್ಯವಾದ ಹೇಳಲು ಪ್ರಾರಂಭಿಸಿದರು.
ಕಿಯಾರಾ ಅಡ್ವಾಣಿಯವರ ಮುಖದ ಹೊಳಪನ್ನು ನೋಡಿ ಅಭಿಮಾನಿಗಳು ಕೂಡ ಸಂತೋಷಪಟ್ಟರು. “ಗರ್ಭಧಾರಣೆಯ ಸುದ್ದಿ ತಿಳಿದ ನಂತರ, ಆಕೆಯ ಮುಖ ಇನ್ನಷ್ಟು ಹೊಳೆಯಲು ಪ್ರಾರಂಭಿಸಿದೆ” ಎಂದು ಒರ್ವ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಕೆಲವರು ಕೆಂಪು ಹೃದಯ ಮತ್ತು ಬೆಂಕಿಯ ಇಮೋಜಿಗಳ ಮೂಲಕವೂ ಪ್ರೀತಿಯ ಸುರಿಮಳೆಗೈದಿದ್ದಾರೆ. ಮತ್ತೆ ಕೆಲವರು ಬೇಬಿ ಬಂಪ್ ಗಮನಿಸುತ್ತಿರುವುದು ಸಹ ಕಂಡುಬಂದಿದೆ.
ಕಿಯಾರಾಗೆ ಯಾವ ಮಗು ಇಷ್ಟ?
ತಾಯಿಯಾಗುವ ಬಗ್ಗೆ, ನಟಿ 2019 ರಲ್ಲಿಯೇ ಆರೋಗ್ಯವಂತ ಮಕ್ಕಳನ್ನು ಬಯಸುವುದಾಗಿ ಹೇಳಿದ್ದರು. “ತಾಯಿಗೆ ಗಂಡು ಮಗು ಬೇಕೋ ಅಥವಾ ಹೆಣ್ಣು ಮಗು ಬೇಕೋ ಎಂಬ ಆಸೆ ಇರುವುದಿಲ್ಲ. ಆರೋಗ್ಯವಂತ ಮಕ್ಕಳನ್ನು ಮಾತ್ರ ಬಯಸುತ್ತಾಳೆ” ಎಂದು ತಿಳಿಸಿದ್ದರು. ತಮ್ಮ ಮಗು ಯಾವ ತಿಂಗಳಲ್ಲಿ ಜನಿಸುತ್ತದೆ ಎಂಬುದನ್ನು ಹೇಳಿಲ್ಲ. ಆದರೆ ಬಹುಶಃ ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳಿನಲ್ಲಿ ಅವರು ತಮ್ಮ ಮೊದಲ ಮಗುವನ್ನು ಸ್ವಾಗತಿಸಬಹುದು ಎಂದು ಮೂಲಗಳು ತಿಳಿಸಿವೆ.
ಕಿಯಾರಾ ಮತ್ತು ಸಿದ್ಧಾರ್ಥ್ 2020 ರಲ್ಲಿ ‘ಶೇರ್ಷಾ’ ಚಿತ್ರದ ಸೆಟ್ನಲ್ಲಿ ಭೇಟಿಯಾದರು ಮತ್ತು ಅಲ್ಲಿಂದ ಪ್ರೀತಿ ಶುರು ಆಯಿತು. ಇಬ್ಬರೂ ತಮ್ಮ ಡೇಟಿಂಗ್ ವದಂತಿಗಳ ಬಗ್ಗೆ ಮೌನವಾಗಿದ್ದರು. 2023 ರಲ್ಲಿ, ಕಿಯಾರಾ ಮತ್ತು ಸಿದ್ಧಾರ್ಥ್ ರಾಜಸ್ಥಾನದ ಜೈಸಲ್ಮೇರ್ನಲ್ಲಿ ಸಾಂಪ್ರದಾಯಿಕ ಹಿಂದೂ ವಿವಾಹ ಸಮಾರಂಭದಲ್ಲಿ ವಿವಾಹವಾದರು. ಅವರ ‘ಶೇರ್ಷಾ’ ಚಿತ್ರವು ಕಾರ್ಗಿಲ್ ಯುದ್ಧದ ನಾಯಕ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನವನ್ನು ಆಧರಿಸಿದೆ, ವಿಕ್ರಮ್ ಬಾತ್ರಾ ಅವರು ಆ ಯುದ್ಧದಲ್ಲಿ ಹುತಾತ್ಮರಾದರು. ಈ ಚಿತ್ರವನ್ನು ವಿಷ್ಣುವರ್ಧನ್ ನಿರ್ದೇಶಿಸಿದ್ದರು. ‘ಶೇರ್ಷಾ’ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ವಿಕ್ರಮ್ ಬಾತ್ರಾ ಮತ್ತು ಅವರ ಅವಳಿ ಸಹೋದರ ವಿಶಾಲ್ ಆಗಿ ದ್ವಿಪಾತ್ರದಲ್ಲಿ ನಟಿಸಿದ್ದರೆ, ಕಿಯಾರಾ ಅಡ್ವಾಣಿ ಅವರ ಗೆಳತಿ ಡಿಂಪಲ್ ಚೀಮಾ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಸ್ತುತ ಸಿದ್ಧಾರ್ಥ್ ಅವರ ಮುಂದಿನ ಚಿತ್ರ ಜಾನ್ವಿ ಕಪೂರ್ ಜೊತೆಗಿನ ‘ಪರಮ್ ಸುಂದರಿ’. ಇಬ್ಬರೂ ಕೇರಳದಲ್ಲಿ ಶೂಟಿಂಗ್ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ.