ಹಿಂದೂ ಧರ್ಮದಲ್ಲಿ ಉತ್ತರಾಖಂಡದಲ್ಲಿರುವ ಪ್ರಸಿದ್ಧ ಶಕ್ತಿಕೇಂದ್ರ ಕೇದಾರನಾಥ ದೇವಲಯವು ಮಹತ್ವದ್ದಾಗಿದೆ. ಪಂಚ ಕೇದಾರಗಳಲ್ಲಿ ಒಂದಾಗಿದ್ದು, ಶ್ರೀಮಂತ ಪರಂಪರೆ ಹಾಗೂ ಆಧ್ಯಾತ್ಮಿಕ ದಂತಕಥೆಗಳಿಗೆ ಸಾಕ್ಷಿಯಾಗಿರುವ ಈ ಪವಿತ್ರ ಕ್ಷೇತ್ರವನ್ನು ವರ್ಷದಲ್ಲಿ 6 ತಿಂಗಳು ಮಾತ್ರ ಪ್ರವೇಶಿಸಬಹುದು. ಇದರ ನಿರ್ಮಾಣದ ಹಿಂದೆಯೇ ಎರಡು ಕಥೆಗಳಿದ್ದು, ಕರಾರುವಕ್ಕಾಗಿ ಯಾವ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆ? ಯಾವುದರಿಂದ ನಿರ್ಮಿಸಲ್ಪಟ್ಟಿದೆ? ಹೀಗೆ ಇದರ ಹಿನ್ನೆಲೆ ಅರಿಯಲು ಪ್ರಯತ್ನಿಸಿದ್ದಷ್ಟು ಇತಿಹಾಸಕಾರರಿಗೆ ರಹಸ್ಯ ಭೇದಿಸುವುದು ಸುಲಭವಲ್ಲ ಎಂದು ಮನದಟ್ಟಾಗಿದೆ. ಶಿವನ ಆರಾಧಕರು ಒಮ್ಮೆಯಾದರು ಭೇಟಿ ನೀಡಬೇಕು ಎಂದು ಬಯಸುವ ಕೇದಾರನಾಥ ದೇವಾಲಯದ ಕುರಿತ ಮಾಹಿತಿ ಇಲ್ಲಿದೆ….
ಗರ್ವಾಲ್ ಹಿಮಾಲಯದಲ್ಲಿ 11,755 ಅಡಿ ಅಂದರೆ 3,583 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಕೇದಾರನಾಥ ದೇವಾಲಯವು ಲಯಕಾರ ಶಿವನಿಗೆ ಸಮರ್ಪಿತವಾಗಿದೆ. ಪಂಚ ಕೇದಾರಗಳಲ್ಲಿ ಒಂದಾಗಿರುವ ಕೇದಾರನಾಥವು ಪ್ರಮುಖವೂ ಹೌದು. ಸಂಕೀರ್ಣ ಹಾಗೂ ಬೃಹತ್ ಸ್ಮಾರಕ ರೂಪದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಈ ದೇವಾಲಯವು, ಇದರ ಹಿಂದಿನ ಸತ್ಯವರಿಯಲು ಹೊರಟವರಿಗೆ ಇನ್ನೂ ಕಗ್ಗಾಂಟಾಗಿಯೇ ಒಳಿದುಕೊಂಡಿದೆ. ವಿವಿಧ ಸಿದ್ಧಾಂತಗಳು ಏನನ್ನೇ ಹೇಳಿದರು, ಕೇದಾರನಾಥವು ತನ್ನ ಮೂಲವನ್ನು ಗೌಪ್ಯವಾಗಿಯೇ ಅಡಗಿಸಿಕೊಂಡಿರುವುದು ಆಧುನಿಕತೆ, ತಾಂತ್ರಿಕತೆಗೆ ಸವಾಲೆ ಸರಿ.

1200 ವರ್ಷಗಳಿಗಿಂತ ಹಳೆಯದು ಎಂದು ಹೇಳಲ್ಪಟ್ಟರು ಯಾವ ಕಾಲಕ್ಕೆ ಸೇರಿದ್ದು ಎಂದು ದೃಢವಾಗಿ ಹೇಳಲು ಯಾವುದೇ ಪುರಾವೆಗಳಿಲ್ಲ. ಇದರ ಮೂಲದ ಕುರಿತು ಚರ್ಚಿತವಾಗುವಾಗೆಲ್ಲಾ 2 ಕಥೆಗಳು ಮಧ್ಯಪ್ರವೇಶಿಸುತ್ತವೆ. ಒಂದು ಮಹಾಭಾರತದ ಪಾಂಡವರು ನಿರ್ಮಿಸಿದ್ದೆಂದು, ಮತ್ತೊಂದು 8ನೇ ಶತಮಾನದಲ್ಲಿ ತತ್ವಜ್ಞಾನಿ, ಸಂತ ಆದಿ ಶಂಕರಾಚಾರ್ಯರು ನಿರ್ಮಿಸಿದರು ಎಂದು.
ಕುರುಕ್ಷೇತ್ರ ಮಹಾಯುದ್ಧದ ನಂತರ ಪಾಂಡವರು ಈ ದೇವಾಸ್ಥಾನವನ್ನು ನಿರ್ಮಿಸಿ ಪರಶಿವನ ಕೃಪಾರ್ಶಿವಾದ ಪಡೆಯಲು ಪ್ರಯತ್ನಿಸಿದರು. ಆಗ ಇವರಿಂದ ತಪ್ಪಿಸಿಕೊಳ್ಳಲು ಶಿವಪ್ಪನ್ನು ನಂದಿಯ ರೂಪ ಧರಿಸಿ ಭೂಮಿಗೆ ಬಂದನೆಂದು ಆ ಸಂದರ್ಭದಲ್ಲಿ ನಂದಿಯ ಗೂನು ಭಾಗ ಈ ಸ್ಥಳದಲ್ಲಿ ಪ್ರಕಟಗೊಂಡಿತು ಎಂಬ ಮಾತಿದೆ. ಆಧುನಿಕ ತಂತ್ರಜ್ಞಾನವಾದ ಕಾರ್ಬನ್ ಡೇಟಿಂಗ್ ಹಾಗೂ ಇನ್ನಿತರ ವೈಜ್ಞಾನಿಕ ತಂತ್ರಗಾರಿಕೆ ವಿಧಾನಗಳು ದೇವಸ್ಥಾನ ನಿರ್ಮಾಣದ ಸಮಯವನ್ನು ಖಚಿತಪಡಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ಅಸಫಲವಾಗಿದ್ದು ಮತ್ತಷ್ಟು ಪರಿಶೋಧನೆಗೆ ಉತ್ತೇಜನ ನೀಡುತ್ತಿರುವುದು ಸತ್ಯ.

ನೈಸರ್ಗಿಕ ವಿಕೋಪಕ್ಕೆ ಬಗ್ಗದ ವಾಸ್ತುಶೈಲಿ:
ಕೇದಾರನಾಥ ದೇವಾಲಯದ ಕಲಾತ್ಮಕ ವಾಸ್ತುಶಿಲ್ಪ ಶೈಲಿಯು ಅದ್ಭುತವಾಗಿದ್ದು, ಭೇಟಿ ನೀಡುವ ಭಕ್ತರ ಚಿತ್ತವನ್ನು ತನ್ನತ್ತ ಸೆಳೆಯುತ್ತದೆ. ಹಿಮಾಲಯದಿಂದ ತಂದಿರುವ ಕಲ್ಲುಗಳಿಂದ ನಿರ್ಮಾಣಗೊಂಡಿರುವ ದೇವಾಲಯವು, ಸಿಮೆಂಟ್ನಂತಹ ಅಂಟುವ ಅಂಶಗಳನ್ನು ಬಳಸದೆ ಕಲ್ಲುಗಳನ್ನು ಬಂಧಿಸಿಟ್ಟುಕೊಂಡಿರುವುದು ಆಶ್ಚರ್ಯಕರ ಸಂಗತಿ. ಈ ತಂತ್ರವು ನಿಸ್ಸಂದೇಹವಾಗಿ ಶತಮಾನಗಳವರೆಗೂ ದೇವಾಲಯವನ್ನು ಕಾಪಾಡಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಪ್ರಕೃತಿ ವಿಕೋಪದಂತಹ ಹಲವಾರು ಭೂಕಂಪ, ಭಾರೀ ಹಿಮಪಾತಕ್ಕೆ ಸಾಕ್ಷಿಯಾಗಿರುವ ಕೇದಾರನಾಥದ ದೇವಾಲಯವು ಅದನ್ನೆಲ್ಲ ಮೆಟ್ಟಿ ನಿಂತಿರುವುದೇ ದೇವಾಲಯ ನಿರ್ಮಾಣಕಾರರ ಸಾಮರ್ಥ್ಯದ ಅನಾವರಣ ಮಾಡಿದೆ.
ಗೋಡೆಯ ಮೇಲಿನ ಸಂಕೀರ್ಣ ಕೆತ್ತನೆಗಳು ದೇವಾಲಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದು, ಅ ಕಾಲದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹಿಡಿದ ಕೈಗನ್ನಡಿಯಾಗಿದೆ. ದೇವಾಲಯವು ಪಿರಮಿಡ್ ಆಕಾರದ ಗೋಪುರ ಹಾಗೂ ಶಿವನ ವಿಗ್ರಹವಿರುವ ಗರ್ಭಗುಡಿಯನ್ನು ಹೊಂದಿದೆ.

ಕೇದಾರನಾಥಕ್ಕೆ ಭೀಮ ಶಿಲೆಯೆಂಬ ರಕ್ಷಾಕವಚ:
2013ರಲ್ಲಿ ಸಂಭವಿಸಿದ ಮಹಾಪ್ರವಾಹದ ಸುಳಿಗೆ ಕೇದಾರನಾಥ ಪ್ರದೇಶವು ನಲುಗಿತ್ತು. ಆ ಭಾಗದ ಭೂಮಿಯನ್ನು ನಡುಗಿಸಿ, ಅಪಾರ ಸಾವು-ನೋವು ಸಂಭವಿಸಿತ್ತು. ಎಲ್ಲಾ ಮೂಲಭೂತ ಸೌಕರ್ಯಗಳು ಹೇಳ ಹೆಸರಿಲ್ಲದೆ ನೀರಿಗೆ ಆಹುತಿಯಾಗಿದ್ದವು. ಇಷ್ಟೆಲ್ಲಾ ಅವಘಡ ಸಂಭವಿಸಿದರು ಸಹ ಕೇದಾರನಾಥ ದೇವಾಲಯ ಮಾತ್ರ ಕಿಂಚಿತ್ತು ಬಿರುಕು ಬಿಡದೆ ಸ್ಥಿರವಾಗಿ ನಿಲ್ಲಲ್ಪಟ್ಟಿತ್ತು ಎಂದರೆ ನಂಬಲೇ ಬೇಕು. ಸ್ಥಳೀಯರ ಪ್ರಕಾರ, ಭೀಮ ಶಿಲೆ ಎಂಬ ದೊಡ್ಡ ಬಂಡೆಯು ದೇವಾಲಯದ ಹಿಂದೆ ಸ್ಥಾಪಿತಗೊಂಡು ಹಿಮಾಲಯದಿಂದ ಹರಿದು ಬರುತ್ತಿದ್ದ ನೀರನ್ನು ದೇವಾಲಯಕ್ಕೆ ನುಗ್ಗದಂತೆ ಪಕ್ಕಕ್ಕೆ ತಿರುಗಿಸಿ ದೇವಾಲಯ ಮುಳುಗುವುದನ್ನು ತಡೆಯಿತು ಎಂದು ಹೇಳಲಾಗುತ್ತದೆ. ಇನ್ನು ಈ ಘಟನೆಗೆ ಸಾಕ್ಷಿಯಾದ ಹಲವು ಭಕ್ತರು ಶಿವನಿಂದ ರಕ್ಷಣಾವಚನ ನೀಡಲ್ಪಟ್ಟಿದ್ದು, ಈ ಸ್ಥಳದ ಮೇಲೆ ಮತ್ತಷ್ಟು ನಂಬಿಕೆ ಬಲಗೊಂಡಿದೆ ಎನ್ನುತ್ತಾರೆ.
6 ತಿಂಗಳು ಮಾತ್ರ ತೆರೆಯಲ್ಪಡುವ ದೇವಾಲಯ:
ರಹಸ್ಯಮಯ ಹಾಗೂ ಭಕ್ತಿಗೆ ಕೇಂದ್ರಬಿಂದುವಾಗಿರುವ ಕೇದಾರನಾಥ ದೇವಾಲಯವನ್ನು ಯಾವಾಗೆಂದರೆ ಆಗೆಲ್ಲಾ ಹೋಗಿ ನೋಡಿ ಬರಲು ಸಾಧ್ಯವಿಲ್ಲ. ಹವಾಮಾನ ವೈಪರೀತ್ಯದಿಂದ ಪ್ರತಿವರ್ಷ ಏಪ್ರಿಲ್ನಿಂದ ನವೆಂಬರ್ವರೆಗೂ ಮಾತ್ರವೇ ತೆರೆಯಲಾಗುತ್ತದೆ. ಈ ಸಮಯದಲ್ಲಿ ಮಾತ್ರ ಯಾತ್ರಾರ್ಥಿಗಳು ಶಿವನ ದರ್ಶನ ಪಡೆಯಬಹುದಾಗಿದೆ. ಇನ್ನುಳಿದಂತೆ ಚಳಿಗಾಲದಲ್ಲಿ ಕೇದಾರನಾಥ ದೇವಾಲಯವು ಭಾರೀ ಹಿಮಪಾತದಿಂದ ಮುಚ್ಚಲ್ಪಟ್ಟಿರುತ್ತದೆ. ಶಿವನ ವಿಗ್ರಹವನ್ನು ಉಖಿಮಠದಲ್ಲಿರುವ ಓಂಕಾರೇಶ್ವರ ದೇವಸ್ಥಾನದಲ್ಲಿ ಸ್ಥಾಪಿಸಿ ಪೂಜಿಸಲಾಗುತ್ತದೆ.
ಒಟ್ಟಾರೆ, ಶಿವರಾಧಕರಿಗೆ ಪವಿತ್ರ ಕ್ಷೇತ್ರವಾಗಿರುವ ಕೇದಾರನಾಥವು ರಹಸ್ಯಗಳನ್ನು ತನ್ನೊಡಲಲ್ಲಿ ಅಡಿಗಿಸಿಕೊಂಡಿದ್ದು, ಪ್ರತಿ ವರ್ಷ ಲಕ್ಷಾಂತರ ಮಂದಿ ಭಕ್ತವರ್ಗವನ್ನು ತನ್ನ ದರ್ಶನಕ್ಕೆ ಕರೆಸಿಕೊಳ್ಳುತ್ತಿದೆ. ಕಾಲ ಎಷ್ಟೇ ಮುಂದುವರೆದಿದ್ದರೂ ವಿಜ್ಞಾನಕ್ಕೂ ಮೀರಿದ ಶಕ್ತಿಯೊಂದಿದೆ, ಅದನ್ನು ಊಹಿಸುವುದು ಸವಾಲಿನ ಸಂಗತಿ ಎಂಬುದಕ್ಕೆ ಕೇದಾರನಾಥ ಇಂದಿಗೂ ಸಾಕ್ಷಿಯಾಗಿದೆ.



