ಡಾ. ರಾಜ್ ಕುಮಾರ್ ಅವರು ಕರ್ನಾಟಕದ ಪ್ರೀತಿಯ ಅಣ್ಣಾವ್ರು, ಇನ್ನೇನು ಎರಡೇ ದಿನಗಳಲ್ಲಿ ಅಣ್ಣಾವ್ರ ಹುಟ್ಟುಹಬ್ಬ ಬರುತ್ತಲಿದೆ. ಇದು ಅಣ್ಣಾವ್ರ 96 ನೇ ವರ್ಷದ ಹುಟ್ಟುಹಬ್ಬ. ಈ ಹುಟ್ಟುಹಬ್ಬ ಆಚರಣೆ ಮಾಡೋದಕ್ಕೆ ಅವರು ಕೂಡ ನಮ್ಮ ಜೊತೆಗೆ ಇರಬೇಕಿತ್ತು ಅನ್ನೋದು ನಮ್ಮೆಲ್ಲರ ಆಸೆ. ಅಣ್ಣಾವ್ರು ಇಂದು ನಮ್ಮ ಜೊತೆಗೆ ದೈಹಿಕವಾಗಿ ಇಲ್ಲದೇ ಇರಬಹುದು. ಆದರೆ ಅವರ ಸಿನಿಮಾಗಳು ಅವರು ನಮಗೆ ಕಲಿಸಿದ ಪಾಠಗಳು ಇದೆಲ್ಲದರ ಮೂಲಕ ಅಣ್ಣಾವ್ರು ನಮ್ಮ ಜೊತೆಗೆ ಇದ್ದಾರೆ. ಅಣ್ಣಾವ್ರ ಬಗೆಗಿನ ತೆರೆಮರೆಯ ಕಥೆಗಳು ಅದೆಷ್ಟು ಸೊಗಸಾಗಿರುತ್ತದೆ, ಅವರ ಬಗ್ಗೆ ಎಷ್ಟೆಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವ ಅವಕಾಶ ಆ ಕಥೆಗಳಿಂದ ನಮಗೆ ಸಿಗುತ್ತಿದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಅಂಥದ್ದೇ ಒಂದು ಕಥೆಯ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ…

ಅಣ್ಣಾವ್ರು ತಮ್ಮ ದೀರ್ಘ ವೃತ್ತಿಜೀವನದ ಅವಧಿಯಲ್ಲಿ 200ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಒಂದೊಂದು ಸಿನಿಮಾಗಳು ಕೂಡ ಒಂದೊಂದು ಮುತ್ತುಗಳು ಎಂದು ಹೇಳಬಹುದು. ಅಣ್ಣಾವ್ರ ಸಿನಿಮಾಗಳು ಬಿಡುಗಡೆ ಆದರೆ ಜನರು ಮಿಸ್ ಮಾಡದೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡುತ್ತಿದ್ದರು. ಒಂದು ಸಾರಿ, ಎರಡು ಸಾರಿ ಅಲ್ಲ, ಪದೇ ಪದೇ ಥಿಯೇಟರ್ ಗೆ ಹೋಗಿ ಅಣ್ಣಾವ್ರ ಸಿನಿಮಾ ನೋಡುತ್ತಿದ್ದರು, ಅಷ್ಟರ ಮಟ್ಟಿಗೆ ಅವರ ಮೇಲೆ ಇರುವ ಕ್ರೇಜ್ ಇತ್ತು. ಬಂಗಾರದ ಮನುಷ್ಯ ಸಿನಿಮಾ ಎರಡು ವರ್ಷಗಳ ಕಾಲ ಓಡಿತ್ತು ಅನ್ನೋದನ್ನ ಮರೆಯಲು ಸಾಧ್ಯವೇ. ಡಾ. ರಾಜ್ ಕುಮಾರ್ ಅವರ ಸಿನಿಮಾಗಳು ಅಂದ್ರೆ ಅದರಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಸಮಾಜಕ್ಕೆ ಒಳ್ಳೇ ಸಂದೇಶ ನೀಡುವ ಆಂಶ ಸಹ ಇರುತ್ತದೆ. ಅದೇ ಕಾರಣಕ್ಕೆ ಜನರಿಗೆ ಅಷ್ಟು ಕನೆಕ್ಟ್ ಆಗುವುದು ಅವರ ಸಿನಿಮಾಗಳು..
ಅಣ್ಣಾವ್ರ ಸಿನಿಮಾಗಳ ಎಷ್ಟೇ ಹೇಳುತ್ತಾ ಹೋದರೂ ಕಡಿಮೆಯೇ. ಇನ್ನು ಅಣ್ಣಾವ್ರ ಹಲವು ಸಿನಿಮಾಗಳು ಅನೌನ್ಸ್ ಆಗಿ, ಶೂಟಿಂಗ್ ಶುರುವಾಗಿ ಕಾರಣಾಂತರಗಳಿಂದ ನಿಂತು ಹೋಗಿದ್ದು ಇದೆ. ಅಂಥದ್ದೊಂದು ಸಿನಿಮಾ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಇದು ನಮ್ಮ ಅಣ್ಣಾವ್ರು ಮತ್ತು ಜಯಲಲಿತಾ ಅವರು ಅಭಿನಯಿಸಬೇಕಿದ್ದ ಸಿನಿಮಾ. ಹೌದು, ಇದು ಹಲವರಿಗೆ ಗೊತ್ತಿರದ ವಿಷಯ, ಅಣ್ಣಾವ್ರು ಮತ್ತು ಜಯಲಲಿತಾ ಅವರು ಒಂದು ಸಿನಿಮಾದಲ್ಲಿ ಅಭಿನಯಿಸಬೇಕಿತ್ತು. ಆ ಸಿನಿಮಾಗೆ ಚೆಲ್ಲಿದ ರಕ್ತ ಎಂದು ಟೈಟಲ್ ಇಡಲಾಗಿತ್ತು, ಇದೊಂದು ಸೈನಿಕನ ಕಥೆ ಆಗಿತ್ತು. ಅಣ್ಣಾವ್ರು ಸೈನಿಕನ ಪಾತ್ರದಲ್ಲಿ ಅಭಿನಯಿಸಬೇಕಿತ್ತು, ಜಯಲಲಿತಾ ಅವರು ಅಣ್ಣಾವ್ರಿಗೆ ನಾಯಕಿಯಾಗಿ ಅಭಿನಯಿಸಬೇಕಿತ್ತು. ಈ ಸಿನಿಮಾದಲ್ಲಿ ಅಣ್ಣಾವ್ರಿಗೆ ನಾಯಕಿಯಾಗಲು ಜಯಲಲಿತಾ ಅವರು ಉತ್ಸುಕರಾಗಿದ್ದರು.

ಆದರೆ ಈ ಸಿನಿಮಾ ಕೇವಲ 3 ದಿನಗಳ ಕಾಲ ಚಿತ್ರೀಕರಣ ನಡೆದು ನಿಂತು ಹೋಯಿತು. ಅಷ್ಟಕ್ಕೂ ನಡೆದಿದ್ದೇನು ಎಂದು ಅಣ್ಣಾವ್ರ ಕುಟುಂಬಕ್ಕೆ ಆಪ್ತರಾಗಿರುವ ಹಾಲುಜೇನು ಮೋಹನ್ ಅವರು ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಆ ಸಿನಿಮಾವನ್ನು ಸಿದ್ದಲಿಂಗಯ್ಯ ಅವರು ನಿರ್ದೇಶನ ಮಾಡಬೇಕಿತ್ತು. ಆದರೆ ಜನರು ಜಯಲಲಿತಾ ಅವರು ನಾಯಲಿ ಆಗುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೆ ಕಾರಣ ಜಯಲಲಿತಾ ಅವರು ಹಿಂದೊಂದು ಸಾರಿ ತಾವು ಕನ್ನಡತಿ ಅಲ್ಲ ಎಂದು ಹೇಳಿದ್ದರು. ಹಾಗಾಗಿ ಅವರು ಕನ್ನಡಿಗರ ಬಳಿ ಕ್ಷಮೆ ಕೇಳಲೇಬೇಕು, ಇಲ್ಲದಿದ್ದರೆ ಅವರು ಸಿನಿಮಾದಲ್ಲಿ ನಟಿಸುವ ಹಾಗಿಲ್ಲ ಎಂದು ಗಲಾಟೆ ಮಾಡಿದರು. ಕ್ಷಮೆ ಕೇಳಬೇಕು ಎಂದಿದ್ದಕ್ಕೆ ಜಯಲಲಿತಾ ಅವರು ಒಪ್ಪಲಿಲ್ಲ. ಆ ಕಾರಣಕ್ಕೆ ಸಿನಿಮಾ ನಿಂತು ಹೋಗಿತ್ತು.

ನಂತರ ಮತ್ತೊಮ್ಮೆ ಅವರೊಡನೆ ಮಾತನಾಡಿ, ಕ್ಷಮೆ ಕೇಳುವುದಕ್ಕೆ ಒಪ್ಪಿಸಲಾಯಿತು. ಜೊತೆಗೆ ನಿರ್ದೇಶಕರು ಕೂಡ ಬದಲಾದರು, ವೈ.ಆರ್ ಸ್ವಾಮಿ ಅವರು ನಿರ್ದೇಶನದ ಜವಾಬ್ದಾರಿ ತೆಗೆದುಕೊಂಡರು, ಸಿನಿಮಾ ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿದರು. ಪೈಲೆಟ್ ಎಂದು ಹೊಸದಾಗಿ ಹೆಸರನ್ನು ಕೂಡ ಇಡಲಾಯಿತು. 70ರ ದಶಕದ ಆರಂಭದಲ್ಲಿ ಈ ಸಿನಿಮಾ ಕೆಲಸಗಳು ಶುರುವಾದದ್ದು ಭರದಿಂದ ಚಿತ್ರೀಕರಣ ನಡೆದು, ಸಿನಿಮಾ ತೆರೆಕಾಣಬೇಕಿತ್ತು. ಮೊದಲಿಗೆ ಜಯಲಲಿತಾ ಅವರು ಕ್ಷಮೆ ಕೇಳುತ್ತೇನೆ ಎಂದಿದ್ದಕ್ಕೆ ಮತ್ತೆ ಚಿತ್ರೀಕರಣ ಶುರುವಾಗಿತ್ತು, 3 ದಿನಗಳ ಕಾಲ ಅಣ್ಣಾವ್ರ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಯಿತು. ನಂತರ ಜಯಲಲಿತಾ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರು ಬರುತ್ತೇನೆ ಎಂದು ಹೇಳಿ ಬರಲೇ ಇಲ್ಲ..

ಜಯಲಲಿತಾ ಅವರಿಗೆ ಸಾಕಷ್ಟು ಸಾರಿ ಫೋನ್ ಮಾಡಿ, ಅವರನ್ನು ಸಂಪರ್ಕ ಮಾಡುವುದಕ್ಕೆ ಪ್ರಯತ್ನ ಪಟ್ಟರೂ ಸಹ ಅವರು ಸಿಗಲೇ ಇಲ್ಲ. ಐದಾರು ದಿನಗಳ ಕಾಲ ಜಯಲಲಿತಾ ಅವರಿಗಾಗಿ ಕಾದರೂ ಸಹ ಏನೂ ಪ್ರಯೋಜನ ಆಗಲಿಲ್ಲ. ಜಯಲಲಿತಾ ಅವರು ಕ್ಷಮೆ ಕೇಳುವುದಕ್ಕೆ ಇಷ್ಟವಿಲ್ಲದೇ ಬರಲಿಲ್ಲ ಎಂದು ಗೊತ್ತಾಯಿತು. ಇದರ ಜೊತೆಗೆ ಜನರು ಕೂಡ ವಿರೋಧ ವ್ಯಕ್ತಪಡಿಸಿದ್ದ ಕಾರಣ ಸಿನಿಮಾ ಮಾಡುವುದು ಬೇಡ ಎಂದು ಅಣ್ಣಾವ್ರು ಹೇಳಿದ್ದರಂತೆ. ಈ ರೀತಿಯಾಗಿ ಅಣ್ಣಾವ್ರ ಜೊತೆಗೆ ಜಯಲಲಿತಾ ಅವರು ಅಭಿನಯಿಸಬೇಕಿದ್ದ ಸಿನಿಮಾ ನಿಂತು ಹೋಯಿತು. ಈ ತೆರೆಮರೆಯ ಕಥೆಯನ್ನು ಹಾಲು ಜೇನು ಮೋಹನ್ ಅವರು ತಿಳಿಸಿದ್ದಾರೆ. ಜಯಲಲಿತಾ ಅವರ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಅವರು ಹುಟ್ಟಿದ್ದು ಮೈಸೂರಿನ ಮೇಲುಕೋಟೆಯ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ.
ಆರಂಭದಲ್ಲಿ ಬಾಲನಟಿಯಾಗಿ ಮೊದಲು ನಟಿಸಿದ್ದು ಕನ್ನಡ ಸಿನಿಮಾದಲ್ಲಿ. ಚಿನ್ನದ ಗೊಂಬೆ, ಬದುಕಿನ ದಾರಿ, ನನ್ನ ಕರ್ತವ್ಯ ಸಿನಿಮಾಗಳಲ್ಲಿ ಸಹ ನಟಿಸಿದರು. ಬಳಿಕ ಇವರು ಮದ್ರಾಸ್ ಗೆ ಹೋಗಿ ತಮಿಳು ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದರು. ತಮಿಳಿನಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದರು, ಕೀರ್ತಿ ಗಳಿಸಿದರು. ನಂತರ ರಾಜಕಾರಣಕ್ಕೆ ಬಂದು, ಅಲ್ಲಿಯೂ ಯಶಸ್ವಿಯಾಗಿ, ತಮಿಳುನಾಡಿನ ಸಿಎಂ ಸಹ ಆದರು. ತಮಿಳುನಾಡಿನ ಜನತೆ ಇವರನ್ನು ಅಮ್ಮ ಎಂದು ಕರೆದು ಗೌರವಿಸಿತು.